ಪ್ಯಾನ್ ಇಂಡಿಯಾ ಸಿನಿಮಾ ಎಂದರೆ ಏನು..? ಕಾಂತಾರ ಕೊಟ್ಟಿರುವ ಮೆಸೇಜ್ ನೋಡಿದರೆ.. ಪ್ಯಾನ್ ಇಂಡಿಯಾ ಕಲ್ಪನೆಯ ಮೂಲವನ್ನೇ ಗುಡಿಸಿ ಹಾಕಿದೆ. ಇತ್ತೀಚೆಗೆ ಪ್ಯಾನ್ ಇಂಡಿಯಾ ಎಂದರೆ ಒಂದು ವಿಚಿತ್ರ ನಂಬಿಕೆ ಇದೆ. ಒಂದೊಂದು ಚಿತ್ರರಂಗದಿಂದ ಒಬ್ಬೊಬ್ಬ ಸ್ಟಾರ್ ಬಂದ್ರೆ ಸಾಕು, ಪ್ಯಾನ್ ಇಂಡಿಯಾ ಆಗಿಬಿಡುತ್ತೆ ಎನ್ನುವ ನಂಬಿಕೆ. ಆ ನಂಬಿಕೆಯೇ ಸುಳ್ಳು ಎನ್ನುವ ಸಂದೇಶ ಕೊಟ್ಟಿದ್ದು ಕಾಂತಾರ. ಆಕ್ಚುವಲಿ, ಇಂತಹ ಒಂದು ಕೆಟ್ಟ ನಂಬಿಕೆ ಶುರುವಾಗಿದ್ದು ಕೂಡಾ ಹಿಂದಿ ಚಿತ್ರರಂಗದಿಂದಲೇ. ಸೋತು ಸುಣ್ಣವಾಗಿದ್ದ ಶಾರುಕ್ ಖಾನ್, ತಮ್ಮ ಚಿತ್ರದಲ್ಲಿ ರಜನಿಕಾಂತ್ ಅವರಿಗೆ ಪುಟ್ಟ ಪಾತ್ರ ಕೊಟ್ಟರು. ರಜನಿಕಾಂತ್ ಇದ್ದಾರೆ ಎಂಬ ಕಾರಣಕ್ಕೆ ಸಿನಿಮಾಗೆ ದೊಡ್ಡ ಹೈಪ್ ಸಿಕ್ಕಿತು. ಆ ಹೈಪ್ ಸೃಷ್ಟಿಸಿ ನಿರ್ಮಾಪಕ ಲಾಭ ಮಾಡಿಕೊಂಡರು. ಆದರೆ.. ಇಂಡಸ್ಟ್ರಿಗೆ ಲಾಭವಾಗಲಿಲ್ಲ. ಸಿನಿಮಾ ನೆನಪಾಯ್ತಾ.. ರಾ ಒನ್.

ಆದರೆ ಆ ಕಾನ್ಸೆಪ್ಟ್ ವರ್ಕೌಟ್ ಆಗಿದ್ದು ಕೆಜಿಎಫ್ ಚಿತ್ರದಲ್ಲಿ. ಕೆಜಿಎಫ್ ಚಿತ್ರದಲ್ಲಿ ಕಥೆಗಿಂತ ಪ್ರೆಸೆಂಟೇಷನ್ ವಿಭಿನ್ನವಾಗಿತ್ತು. ಕಥೆಗಿಂತ ಪಾತ್ರಗಳ ನಿರೂಪಣೆ ವಿಶೇಷವಾಗಿತ್ತು. ಅದಕ್ಕೆ ತಕ್ಕಂತೆ ಸಂಜಯ್ ದತ್, ರವೀನಾ ಟಂಡನ್ ಆ ಪಾತ್ರಗಳಿಗೆ ಬೇಕಿದ್ದ ತಾಕತ್ತನ್ನು ಅಭಿನಯದಲ್ಲಿ ಕೊಟ್ಟರು. ಸಿನಿಮಾ ಗೆದ್ದಿತು. ಅದೂ ಅಷ್ಟೇ. ಕೇವಲ ಸ್ಟಾರ್ ಇದ್ದರೆಂಬ ಕಾರಣಕ್ಕೆ ಲಾಭವಾಗಲಿಲ್ಲ. ಕಂಟೆಂಟ್ ಮತ್ತು ಟ್ರೀಟ್ಮೆಂಟ್ ಚೆನ್ನಾಗಿತ್ತು. ಆದರೆ ಬಹುತೇಕರು ಅದನ್ನು ಬೇರೆಯದೇ ರೀತಿಯಲ್ಲಿ ಅರ್ಥ ಮಾಡಿಕೊಂಡರು. ಆ ನಟರಿದ್ದ ಕಾರಣಕ್ಕೇ ಚಿತ್ರ ಗೆದ್ದಿತು ಎಂಬ ಭ್ರಮೆಗೆ ಬಿದ್ದರು. ಹೀಗಾಗಿ ರಜನಿಕಾಂತ್, ಅಮೀರ್ ಖಾನ್, ನಾಗಾರ್ಜುನ, ಉಪೇಂದ್ರ, ಶಿವರಾಜ್ ಕುಮಾರ್, ದುನಿಯಾ ವಿಜಯ್, ಮೋಹನ್ ಲಾಲ್, ಸೈಫ್ ಅಲಿ ಖಾನ್, ಜೂ. ಎನ್ಟಿಆರ್ ಮೊದಲಾದವರೆಲ್ಲ ಇದ್ದಕ್ಕಿದ್ದಂತೆ ಪ್ಯಾನ್ ಇಂಡಿಯಾ ಸ್ಟಾರ್ ಆದರು. ಜೈಲರ್ ಚಿತ್ರಕ್ಕೆ ಶಿವಣ್ಣ ಬಂದು ಹೋಗಿದ್ದು ಕೆಲವೇ ನಿಮಿಷ ಆದರೂ, ಚಿತ್ರದ ಕಂಟೆಂಟ್ ಮತ್ತು ಪಾತ್ರದ ಗಟ್ಟಿತನದಿಂದಾಗಿ ಜೈಲರ್ ಗೆದ್ದಿತು. ಆದರೆ, ಅದೇ ಮ್ಯಾಜಿಕ್ ಕೂಲಿಯಲ್ಲಿ ಆಗಲಿಲ್ಲ. ಕಾರಣ ಕಂಟೆಂಟ್ ವೀಕ್ ಇತ್ತು. ತೆಲುಗಿನ ದೇವರ ಚಿತ್ರಕ್ಕೆ ಸೈಫ್ ಅಲಿ ಖಾನ್ ಬಂದರು. ಸಿನಿಮಾ ತೋಪಾಯ್ತು. ಶಾರೂಕ್ ಖಾನ್ʻರ ಜವಾನ್ ಸಿನಿಮಾದಲ್ಲಿ ಸಲ್ಮಾನ್ ಖಾನ್ ಬಂದರು. ಜವಾನ್ ಸಿನಿಮಾ ದುಡ್ಡು ಮಾಡಿತಾದರೂ.. ನಂತರ ಬಂದ ಡುಮ್ಕಿ ಚಿತ್ರಕ್ಕೆ ಕಂಟೆಂಟ್ ಇದ್ದರೂ ಜವಾನ್ ಎಫೆಕ್ಟ್ ಹೊಡೀತು. ಲೆಕ್ಕ ಹಾಕುತ್ತಾ ಹೋದರೆ ಇಂತಹ ಲೆಕ್ಕವಿಲ್ಲದಷ್ಟು ಸಿನಿಮಾಗಳು ಸಿಗುತ್ತವೆ.
ಕಾಂತಾರದಲ್ಲೇ ನೋಡಿ. ಇಲ್ಲಿ ಪರಭಾಷೆಯ ಕಲಾವಿದರೇ ಇಲ್ಲ ಎಂದಲ್ಲ. ರಿಷಬ್ ಶೆಟ್ಟಿಯವರೇ ಹೇಳಿಕೊಂಡಿರುವಂತೆ ಜಯರಾಂ, ಮಲಯಾಳಂ ನಟರಾದರೂ ಆ ಪಾತ್ರಕ್ಕೆ ಅವರೇ ದಿ ಬೆಸ್ಟ್ ಎನಿಸುತ್ತಾರೆ. ಗುಲ್ಷನ್ ದೇವಯ್ಯ ಮೂಲತಃ ಕನ್ನಡಿಗರಾದರೂ ಅವರೂ ಕನ್ನಡಿಗರೇ ಎಂದು ಬಹುತೇಕರಿಗೆ ಗೊತ್ತಾಗಿದ್ದು ಕಾಂತಾರ ಚಾಪ್ಟರ್ 01 ನಂತರವೇ. ರುಕ್ಮಿಣಿ ವಸಂತ್, ಇನ್ನೂ ಉದಯೋನ್ಮುಖ ಕಲಾವಿದೆ. ಆದರೆ ಕಂಟೆಂಟ್ ಗಟ್ಟಿ ಇತ್ತು. ಸಿನಿಮಾ ಗೆದ್ದಿತು. ಇದೇ ಸಾಧನೆಯನ್ನು ತೆಲುಗಿನಲ್ಲಿ ರಾಜಮೌಳಿ ಕೂಡಾ ಮಾಡಿದ್ದಾರೆ. ರಾಜಮೌಳಿಯವರ ಬಾಹುಬಲಿಯೇ ಆಗಲಿ, ಅದಾದ ನಂತರ ಬಂದ RRR ಚಿತ್ರವೇ ಆಗಲಿ ಅವರು ಬಹುತೇಕ ಬಳಸಿದ್ದು ಅಲ್ಲಿನ ಕಲಾವಿದರನ್ನೇ. ಕಾಂತಾರದ ಗೆಲುವು ಮತ್ತೊಮ್ಮೆ ಆ ನಂಬಿಕೆಯನ್ನು ಸುಳ್ಳು ಮಾಡಿದೆ. ಬೇರೆ ಬೇರೆ ಭಾಷೆಯ ನಟರನ್ನು ಹಾಕಿಕೊಂಡರೆ ಪ್ಯಾನ್ ಇಂಡಿಯಾ ಆಗುವುದಿಲ್ಲ. ಕಂಟೆಂಟ್ ಮುಖ್ಯ ಎಂಬ ಮೆಸೇಜ್ ಕೊಟ್ಟಿದೆ.
ಲೇಖನ : ಕೆ ಎಂ ವೀರೇಶ್