ಒಮ್ಮೆ ಗಣೇಶ ಇಲಿಯ ಮೇಲೆ ಸಂಚಾರ ಮಾಡುತ್ತಾ ಚಂದ್ರಲೋಕಕ್ಕೆ ಬರುತ್ತಾನೆ. ಚಂದ್ರನೋ ಸರ್ವಾಂಗ ಸುಂದರ. ಅವನಿಗೆ ತನ್ನ ಸೌಂದರ್ಯದ ಮೇಲೆ ಅಪಾರ ಮಮತೆ. ವಿಕಟ ರೂಪನಾದ ಗಣಪನನ್ನು ಕಂಡು ಅಪಹಾಸ್ಯ ಮಾಡುತ್ತಾನೆ. ಜೋರಾಗಿ ನಗುತ್ತಾನೆ. ಗಣಪನಿಗೆ ಅಪಮಾನವಾಗುತ್ತದೆ. ಚಂದ್ರನಿಗೆ ಹೀಗೆ ಶಾಪ ನೀಡುತ್ತಾನೆ, ಎಲೈ ಚಂದ್ರ ನೀನು ಸೌಂದರ್ಯ ಮದದಿಂದ ಬೀಗುತ್ತಿದ್ದೀಯಾ ಮೂರ್ಖ ಅದಕ್ಕೆ ತಕ್ಕ ಫಲವನ್ನು ಅನುಭವಿಸು ನೀನೆಲ್ಲಾ ಗರ್ವ, ಅಜ್ಞಾನಕ್ಕೆ ಕಾರಣವಾದ ಸೌಂದರ್ಯ ಕುಂದಿ ಹೋಗಲಿ. ‘ಭಾದ್ರಪದ ಶುದ್ಧ ಚೌತಿಯಂದು ನಿನ್ನನ್ನು ನೋಡುವವರು ಅಪವಾದಕ್ಕೆ ಗುರಿಯಾಗಲಿ’ ಎಂದು ಶಪಿಸುತ್ತಾನೆ. ಶಾಪಗ್ರಸ್ತನಾದ ಕೂಡಲೇ ಚಂದ್ರನ ಅಹಂಕಾರ ಇಳಿದು ಹೋಗುತ್ತದೆ. ಅವನಿಗೆ ತನ್ನ ತಪ್ಪಿನ ಅರಿವಾಗುತ್ತದೆ. ಗಣೇಶನ ಮುಂದೆ ಭಯ ಭಕ್ತಿಗಳಿಂದ ಕೈ ಮುಗಿದು ನಿಂತು ‘ಸ್ವಾಮಿ, ನನ್ನ ಅಜ್ಞಾನವನ್ನು ಕ್ಷಮಿಸಿ ಬಿಡು ನನಗೆ ಕೊಟ್ಟ ಶಾಪವನ್ನು ಹಿಂತೆಗೆದುಕೊಂಡು ಉತ್ತರಿಸು ಎಂದು ಬೇಡಿಕೊಳ್ಳುತ್ತಾನೆ.

ಗಣೇಶ ಚಂದ್ರನನ್ನು ಕ್ಷಮಿಸಿ, ‘ಚೌತಿಯ ದಿನ ನಿನ್ನನ್ನು ನೋಡಿ ಮಿಥ್ಯಾಪವಾದಕ್ಕೆ ಗುರಿಯಾದವರು ಶುದ್ಧ ಬಿದಿಗೆಯ ದಿನ ನಿನ್ನ ದರ್ಶನ ಮಾಡಿದರೆ ಅಥವಾ ಸೃಮಂತಕ ಮಣಿಯ ಕಥೆಯನ್ನು ಕೇಳಿದರೆ ಅಂಥವರು ಅಪವಾದದಿಂದ ಮುಕ್ತರಾಗಲಿ ಎಂದು ಹೇಳುತ್ತಾನೆ.