ಒಂದೂರಿನಲ್ಲಿ ಯುವ ಭಿಕ್ಷುಕನೊಬ್ಬ ಪಾಳು ಬಿದ್ದ ಗೋಡೆಯೊಂದರ ಬಳಿ ವಾಸಿಸುತ್ತಿದ್ದ. ಅಲ್ಲಿ ಇಲ್ಲಿ ಭಿಕ್ಷೆ ಬೇಡಿ ಜೀವನ ನಡೆಸುತ್ತಿದ್ದ. ಸ್ವಲ್ಪ ದಿನಗಳಿಂದ ಅವನು ಬೇಡಿ ತಂದ ಭಿಕ್ಷಾನ್ನವೆಲ್ಲಾ, ಅವನು ತಂದಿಟ್ಟ ಸ್ವಲ್ಪ ಹೊತ್ತಿನಲ್ಲಿ ಮಾಯವಾಗುತಿತ್ತು. ಇದು ಯಾವುದೋ ಇಲಿ ಮಾಡುತ್ತಿರುವ ಕೆಲಸವೆಂದು ಕಂಡುಹಿಡಿಯಲು ಅವನಿಗೆ ಹೆಚ್ಚು ಸಮಯ ಬೇಕಾಗಲಿಲ್ಲ. ಒಂದು ದಿನ ಭಿಕ್ಷೆಯನ್ನು ತಂದಿಟ್ಟು ನೋಡೋಣವೆಂದು ಕಾಯುತ್ತಿದ್ದಾಗ ಅಲ್ಲಿಗೆ ಇಲಿಯೊಂದು ಬಂದಿತು. ಆಗ ಅವನು ನನ್ನ ಆಹಾರವನ್ನೇ ಏಕೆ ಕದಿಯುತ್ತಿರುವೆ? ಪಟ್ಟಣದಲ್ಲಿ ಎಷ್ಟೊಂದು ಜನ ಶ್ರೀಮಂತರಿದ್ದಾರೆ. ಅವರ ಮನೆಗಳಿಗೆ ಹೋದರೆ ನಿನಗೆ ಸಮೃದ್ಧವಾದ ಮೃಷ್ಟಾನ್ನ ಭೋಜನ ಸಿಗುವುದಿಲ್ಲವೇ? ಎಂದು ಇಲಿಯನ್ನು ಕೇಳಿದ.

ಇದು ನಿನ್ನ ಹಣೆಬರಹ! ನಿನ್ನದು ಎಂಬುದನ್ನು ನೀನು ಎಂದೂ ಹೊಂದಲಾರೆ ಎಂದು ಹೇಳಿತು ಇಲಿ. ಯಾಕೆ ಹೀಗೆ ಹೇಳುವೆ, ಎಂದು ಭಿಕಾರಿ ಪ್ರಶ್ನಿಸಿದ. ಅದು ನನಗೆ ತಿಳಿಯದು, ಬೇಕಾದರೆ ಬುದ್ಧನ ಬಳಿ ಕೇಳು ಎಂದಿತು ಇಲಿ. ಮರುದಿನವೇ ಯುವ ಭಿಕ್ಷುಕ ಬುದ್ಧನನ್ನು ಹುಡುಕಿಕೊಂಡು ಹೊರಟ. ಕಾಡು ಮೇಡುಗಳನ್ನು ದಾಟಿ ಹೋಗುತ್ತಿರುವಾಗ ಕತ್ತಲಾಯಿತು. ರಾತ್ರಿ ಎಲ್ಲಾದರೂ ಉಳಿದುಕೊಳ್ಳಬೇಕೆಂದು ಯೋಚಿಸಿ ಹತ್ತಿರದಲ್ಲಿ ಕಂಡ ಒಬ್ಬ ಶ್ರೀಮಂತನ ಮನೆಯ ಬಾಗಿಲು ತಟ್ಟಿದ. ಮನೆಯ ಯಜಮಾನ ಬಂದು ಬಾಗಿಲು ತೆರೆದು, ಈತ ಬಂದ ಕಾರಣವನ್ನು ಕೇಳಿದ. ತಾನು ಬುದ್ದನ ಬಳಿಗೆ ಹೋಗಿ ಅವರಿಂದ ತನ್ನ ಒಂದು ಪ್ರಶ್ನೆಗೆ ಉತ್ತರವನ್ನು ಪಡೆಯಬೇಕಾಗಿದೆ. ಕತ್ತಲಾಗಿದ್ದರಿಂದ ರಾತ್ರಿ ತಂಗಲೆಂದು ಬಂದೆ. ಬೆಳಗ್ಗೆ ಮುಂಚೆ ಎದ್ದು ಹೊರಡುವೆ. ಒಂದು ರಾತ್ರಿ ಇರಲು ದಯವಿಟ್ಟು ಅವಕಾಶ ಮಾಡಿಕೊಡಿ ಎಂದು ಕೇಳಿದ. ಶ್ರೀಮಂತ ತನ್ನ ಮನೆಯಲ್ಲಿ ಅವನಿಗೆ ರಾತ್ರಿ ಉಳಿದುಕೊಳ್ಳಲು ಅವಕಾಶ ಮಾಡಿಕೊಟ್ಟ. ಭಿಕ್ಷುಕ ಮುಂಜಾನೆಯಲ್ಲಿ ಎದ್ದು ಹೊರಟಾಗ, ಆ ಮನೆಯ ಯಜಮಾನ, ಬುದ್ಧರಲ್ಲಿ ನನ್ನದೂ ಒಂದು ಪ್ರಶ್ನೆ ಇದೆ. “ಹದಿನಾರರ ಹರೆಯದ ಸುಂದರಿಯಾದ, ನನ್ನ ಒಬ್ಬಳೇ ಮಗಳು ಮೂಕಿಯಾಗಿದ್ದಾಳೆ. ಅವಳಿಗೆ ಮಾತು ಬರಲು ಏನು ಮಾಡಬೇಕೆಂದು ಬುದ್ಧರಲ್ಲಿ ಕೇಳಿ” ಎಂದ. ಹಾಗೆ ಆಗಲಿ ಎಂದು ಭಿಕ್ಷುಕ ಅವನಿಗೆ ವಂದಿಸಿ ಅಲ್ಲಿಂದ ಹೊರಟ.
ಮುಂದಿನ ಹಾದಿ ಇನ್ನೂ ಕಷ್ಟಕರವಾಗಿತ್ತು. ದೊಡ್ಡ ದೊಡ್ಡ ಪರ್ವತ ಶ್ರೇಣಿ, ಶಿಖರಗಳು ಕಂಡವು. ಒಂದು ಶಿಖರವನ್ನು ಹತ್ತಿ ಇಳಿಯುವಷ್ಟರಲ್ಲೇ ಬಹಳ ದಣಿದು ಹೋದ. ಅಷ್ಟರಲ್ಲಿ ಒಬ್ಬ ವಯಸ್ಸಾದ ಸಂತ ಕಾಣಿಸಿಕೊಂಡ. ಅವನ ಕೈಯಲ್ಲಿ ಒಂದು ಮಂತ್ರ ದಂಡವಿತ್ತು. ಆತ ಪರ್ವತಗಳನ್ನು ದಾಟುವ ಸಾಹಸವನ್ನು ಮಾಡಿ ಎಲ್ಲಿಗೆ ಹೊರಟಿರುವೆ ಎಂದು ಇವನನ್ನು ಕೇಳಿದ. ನಾನು ಬುದ್ಧನನ್ನು ಕಾಣಲು ಹೊರಟಿರುವೆ ಎಂದ ಈ ಯುವ ಭಿಕ್ಷುಕ. ಹಾಗಾದರೆ ಈ ಮಂತ್ರ ದಂಡದ ಸಹಾಯದಿಂದ ನಾನು ನಿನ್ನನ್ನು ಪರ್ವತಗಳ ಆಚೆಗೆ ಸುಲಭವಾಗಿ ದಾಟಿಸುತ್ತೇನೆ. ಆದರೆ ಬುದ್ಧರಲ್ಲಿ ಕೇಳಲು ನನ್ನದೂ ಒಂದು ಪ್ರಶ್ನೆ ಇದೆ. “ಒಂದು ಸಾವಿರ ವರ್ಷಗಳಿಂದಲೂ ನಾನು ನಂಬಿರುವ ಉಪದೇಶಗಳಿಗೆ ಬದ್ಧನಾಗಿ ಜೀವಿಸುತ್ತಿದ್ದೇನೆ. ಇನ್ನೂ ನನಗೆ ಸ್ವರ್ಗಕ್ಕೆ ಹೋಗಲು ಸಾಧ್ಯವಾಗಿಲ್ಲ. ನಾನು ಸ್ವರ್ಗಕ್ಕೆ ಹೋಗಬೇಕೆಂದರೆ ಏನು ಮಾಡಬೇಕು” ಎಂದು ಬುದ್ದರಲ್ಲಿ ಕೇಳಿಕೊಂಡು ಬಾ ಎಂದರು ಸಂತರು. ಆಗಲಿ ಎಂದ ಭಿಕ್ಷುಕ. ಸಂತ ಇವನನ್ನು ತನ್ನ ದಂಡದ ಸಹಾಯದಿಂದ ಪರ್ವತಗಳ ಆಚೆ ದಾಟಿಸಿದ. ಇವನು ಅಲ್ಲಿಂದ ಮುಂದಕ್ಕೆ ಹೊರಟ.
ಹೀಗೆ ಸಾಗುತ್ತಿರುವಾಗ ದೊಡ್ಡದೊಂದು ನದಿ ಎದುರಾಯಿತು. ಈ ನದಿಯನ್ನು ದಾಟಲು ಸಾಧ್ಯವೇ ಇಲ್ಲ ಎಂದುಕೊಂಡು, ಒಂದು ಕಡೆ ತಲೆ ಮೇಲೆ ಕೈ ಹೊತ್ತು ಕುಳಿತ. ಆಗ ದೊಡ್ಡ ಗಾತ್ರದ ಆಮೆಯೊಂದು ಇವನ ಬಳಿ ಬಂದು ಯುವಕನೇ ಎಲ್ಲಿಗೆ ಹೊರಟಿರುವೆ. ಯಾಕೆ ಚಿಂತಿಸುತ್ತಿರುವೆ ಎಂದು ಕೇಳಿತು. ನಾನು ಬುದ್ಧರಲ್ಲಿ ನನ್ನ ಹಣೆ ಬರಹದ ಬಗ್ಗೆ ಪ್ರಶ್ನೆ ಕೇಳಬೇಕಾಗಿತ್ತು ಅದಕ್ಕಾಗಿ ಹೊರಟಿರುವೆ. ಈ ದೊಡ್ಡ ನದಿಯನ್ನು ನೋಡಿದರೆ, ಇದನ್ನು ದಾಟಲು ನನಗೆ ಸಾಧ್ಯವಿಲ್ಲವೆನಿಸುತ್ತಿದೆ ಎಂದ. ನೀನು ನನ್ನ ಬೆನ್ನ ಮೇಲೆ ಕುಳಿತುಕೋ. ನಾನು ನಿನ್ನನ್ನು ಆಚೆ ದಾಟಿಸುತ್ತೇನೆ. ಆದರೆ ನೀನು ನನ್ನದೊಂದು ಪ್ರಶ್ನೆಯನ್ನು ಬುದ್ದರಲ್ಲಿ ಕೇಳಬೇಕು ಎಂದಿತು ಆಮೆ.
ನಿನ್ನ ಪ್ರಶ್ನೆ ಏನಿದೆ ಹೇಳು, ಎಂದ ಭಿಕ್ಷುಕ. “ನಾನು ಕಳೆದ ಐನೂರು ವರ್ಷಗಳಿಂದ, ಈ ನದಿಯಲ್ಲಿ ವಾಸ ಮಾಡುತ್ತಿದ್ದೇನೆ, ನಾನು ನಂಬಿರುವ ಉಪದೇಶಗಳಿಗೆ ನಿಷ್ಠೆಯಿಂದ ಜೀವಿಸುತ್ತಿದ್ದೇನೆ, ಆದರೆ ನನಗೆ ಡ್ರ್ಯಾಗನ್ ಆಗಬೇಕು ಎಂಬ ಆಸೆ ಇದೆ, ಡ್ರ್ಯಾಗನ್ ಆಗಲು ನಾನು ಏನು ಮಾಡಬೇಕು” ಎಂದು ಬುದ್ದರಲ್ಲಿ ಕೇಳಿಕೊಂಡು ಬಾ ಎಂದು ಹೇಳಿತು ಆಮೆ. ಆಗಲಿ ಎಂದು ಹೇಳಿದ ಭಿಕ್ಷುಕ, ಆಮೆಯ ಮೇಲೆ ಕುಳಿತು ನದಿ ದಾಟಿದ. ಅಂತೂ ಇಂತೂ ಕೊನೆಗೂ ಬುದ್ಧರ ಬಳಿಗೆ ಬಂದ ಭಿಕ್ಷುಕ. ಇವನ ಹಾಗೆ ಪ್ರಶ್ನೆಯನ್ನು ಕೇಳಲು ಹಲವಾರು ಜನ ಸೇರಿದ್ದರು. ಬುದ್ಧನಲ್ಲಿ ಎಲ್ಲರಿಗೂ ಮೂರು ಪ್ರಶ್ನೆಗಳನ್ನು ಮಾತ್ರ ಕೇಳಲು ಅವಕಾಶ ಇತ್ತು. ಈಗ ಯುವಕನಿಗೆ ಚಿಂತೆಯಾಯಿತು. ಇವನ ಬಳಿ ನಾಲ್ಕು ಪ್ರಶ್ನೆಗಳಿದ್ದವು. ಏನು ಮಾಡುವುದೆಂದು ಯೋಚಿಸುತ್ತಿರುವಾಗ, ಬೇರೆಯವರ ಪ್ರಶ್ನೆಗಳಿಗಿಂತ, ತನ್ನ ಪ್ರಶ್ನೆ ಅಷ್ಟೇನೂ ದೊಡ್ಡದಲ್ಲ ಎನಿಸಿತು. ನಾನು ಹೇಗಿದ್ದರೂ ಭಿಕಾರಿ, ಊರಿಗೆ ಮರಳಿದ ಮೇಲೆ ಮತ್ತೆ ಭಿಕ್ಷೆ ಬೇಡಿದರಾಯ್ತು. ದಾರಿಯಲ್ಲಿ ನನಗೆ ಸಹಾಯ ಮಾಡಿದವರ ಮೂರು ಪ್ರಶ್ನೆಗಳನ್ನು ಕೇಳುತ್ತೇನೆ ಎಂದು ನಿರ್ಧರಿಸಿದ.
ಬುದ್ಧರು ನಿರ್ಗತಿಕ ಭಿಕಾರಿಯ ಮೂರು ಪ್ರಶ್ನೆಗಳಿಗೂ ಶಾಂತ ಚಿತ್ತದಿಂದ ಉತ್ತರಿಸಿದರು. “ಆಮೆಯು ತನ್ನ ಕವಚದಿಂದ ಹೊರ ಬರುವವರೆಗೂ ಅದರ ಡ್ರ್ಯಾಗನ್ ಆಗುವ ಆಸೆ ನೆರವೇರುವುದಿಲ್ಲ”. “ವೃದ್ಧ ಸಂತನು ತನ್ನ ಮಂತ್ರ ದಂಡವನ್ನು ತೊರೆಯುವವರೆಗೂ ಸ್ವರ್ಗಕ್ಕೆ ಹೋಗಲಾರ”. “ಆ ಹದಿನಾರರ ಯುವತಿಗೆ, ಅವಳ ಆತ್ಮ ಸಂಗಾತಿ ದೊರಕಿದ ಕೂಡಲೇ ಮಾತನಾಡಲು ಕಲಿಯುತ್ತಾಳೆ”. ಯುವ ಭಿಕ್ಷುಕನಿಗೆ ಬಹಳ ಆನಂದವಾಯಿತು. ತನಗೆ ಸಹಾಯ ಮಾಡಿದವರ ಪ್ರಶ್ನೆಗೆ ಉತ್ತರ ದೊರಕಿತಲ್ಲಾ ಎಂದು. ಅವನು ಬಂದ ದಾರಿಯಲ್ಲೇ ಹಿಂದಿರುಗಿದ.
ಮೊದಲು ಆಮೆಯನ್ನು ಭೇಟಿ ಮಾಡಿ, ನಿನ್ನ ಆಸೆ ನೆರವೇರಬೇಕಾದರೆ, ನಿನ್ನ ಕವಚದಿಂದ ಹೊರಗೆ ಬಾ ಎಂದು ಹೇಳಿದ. ಆಮೆ ನಿಧಾನವಾಗಿ ತನ್ನ ಶರೀರವನ್ನು ಸಡಿಲಿಸಿಕೊಂಡು ಕವಚದಿಂದ ಹೊರಬರುತ್ತಲೇ, ಡ್ರ್ಯಾಗನ್ ರೂಪ ತಾಳಿತು. ಅದರ ಕವಚದಲ್ಲಿ, ಶೇಖರವಾಗಿದ್ದ ಮುತ್ತುರತ್ನಗಳು ಹೊರ ಸುರಿಯತೊಡಗಿದವು. ನನಗೆ ಅದರ ಅಗತ್ಯವಿಲ್ಲ, ಅದನ್ನೆಲ್ಲ ನೀನೆ ಇಟ್ಟುಕೋ ಎಂದು ಭಿಕ್ಷುಕನಿಗೆ ಕೊಟ್ಟು, ಹಾರಿ ಹೋಯಿತು. ನಂತರ ಯುವಕ ಸಂತನ ಬಳಿಗೆ ಬಂದು, ನೀವು ನಿಮ್ಮ ಮಂತ್ರದಂಡವನ್ನು ಬಿಡಬೇಕು, ಅದನ್ನು ಅಂಟಿಕೊಂಡೇ ಇದ್ದರೆ, ಸ್ವರ್ಗಕ್ಕೆ ಹೋಗಲು ಸಾಧ್ಯವಿಲ್ಲ ಎಂದು ಹೇಳಿದ. ವೃದ್ಧ ಸಂತರು, ತಮ್ಮ ಮಂತ್ರ ದಂಡವನ್ನು ಭಿಕ್ಷುಕನ ಕೈಗೆ ಕೊಟ್ಟು ಇದನ್ನು ನೀನೇ ಇಟ್ಟುಕೊ. ಇದರಿಂದ ನಿನಗೆ ಅನುಕೂಲವಾಗಬಹುದು. ನಾನು ಈಗಲೇ ಸ್ವರ್ಗಕ್ಕೆ ಹೊರಡುತ್ತೇನೆ ಎಂದು ಹೊರಟೇ ಬಿಟ್ಟರು. ಈಗ ಐಶ್ವರ್ಯ ಅಧಿಕಾರ ಎರಡೂ ಭಿಕ್ಷುಕನ ಪಾಲಾದವು. ಕೊನೆಯದಾಗಿ ತನಗೆ ಆಶ್ರಯ ನೀಡಿದ ಶ್ರೀಮಂತನ ಮನೆಗೆ ಬಂದು, ನಿಮ್ಮ ಮಗಳಿಗೆ ಒಬ್ಬ ಆತ್ಮ ಸಂಗಾತಿ ಸಿಕ್ಕ ಕೂಡಲೇ ಮಾತನಾಡುತ್ತಾಳೆ ಎಂದು ಬುದ್ಧ ಹೇಳಿದ ಮಾತನ್ನು ಹೇಳಿದ. ಅಷ್ಟರಲ್ಲಿ ಯುವತಿ ಮಹಡಿಯಿಂದ ಕೆಳಕ್ಕೆ ಇಳಿದು ಬರುತ್ತಿದ್ದಳು. ನೀನು ಕಳೆದ ವಾರ ನಮ್ಮ ಮನೆಯಲ್ಲಿ ಉಳಿದಿದ್ದೆ ಅಲ್ಲವೇ? ಎಂದಳು. ಮಗಳು ಮಾತಾಡಿದ್ದನ್ನು ಕೇಳಿ ತಂದೆ, ತಾಯಿ ಇಬ್ಬರಿಗೂ ಆಶ್ಚರ್ಯ, ಆನಂದ ಎರಡೂ ಒಟ್ಟಿಗೆ ಆಯಿತು. ಯುವ ಭಿಕ್ಷುಕ, ಯುವತಿ ಇಬ್ಬರೂ ಆತ್ಮ ಸಂಗಾತಿಗಳಾದರು.