ಅಂದೊಂದು ಕಾಲವಿತ್ತು. ಸಂಜೆ ಹೊತ್ತಿಗೆ, ದೇವರಿಗೆ ದೀಪವಿಟ್ಟು ಮನೆ ಮನೆಯಲ್ಲಿ ಹಿರಿಯರು ಕುಳಿತು ಭಜನೆ ಮಾಡುತ್ತಿದ್ದರು. ಅವರ ಪಕ್ಕದಲ್ಲಿ ಅಂಬೆಗಾಲಿಡೋ ಮಗುವಿನಿಂದ ಹಿಡಿದು ಕಾಲೇಜು ಓದೋ ಮಕ್ಕಳು ಕುಳಿತಿರುತ್ತಿದ್ದರು. ಅದರ ಜೊತೆಗೆ ತಾಳ ತಟ್ಟುವ ಆ ಕಲೆ ಯಾವ ಸಂಗೀತ ತರಗತಿಯಲ್ಲೂ ಕಲಿತಿದ್ದಲ್ಲ. ಸಾಲು ಸಾಲು ಭಜನೆಗಳು ದೊಡ್ಡವರ ಬಾಯಿಂದ ಮಕ್ಕಳ ಬಾಯಲ್ಲಿ ಸರಾಗವಾಗಿ ಹರಿದು ಬರುತ್ತಿತ್ತು. ಯಾರೂ ಕೂತು ಒಂದೊಂದೇ ಪದಗಳನ್ನು ಕಲಿಸುತ್ತಿರಲಿಲ್ಲ. ಮೊಬೈಲ್, ಆಡಿಯೋ, ವಿಡಿಯೋಗಳಿರಲಿಲ್ಲ. ರೇಡಿಯೋ ಆನ್ ಮಾಡಿದ್ರೆ ಬೆಳಿಗ್ಗೆ ಶುರುವಾಗುವ ಅದೇ ಭಕ್ತಿ ಹಾಡುಗಳು ಕಿವಿಗೆ ಮನಸ್ಸಿಗೆ ತಲುಪುತ್ತಿತ್ತು. ಆದರೆ ಈಗ ಕಾಲ ಬದಲಾಯಿತು. ನಾವು ಬದಲಾದ ಕೆಲಸ, ಅನಿವಾರ್ಯತೆಯು ಬದುಕಿನ ಅಗತ್ಯತೆಗಳು ಬಿಟ್ಟು ಹೊರಗೆ ಹೊರಟ ನಾವುಗಳು ಈ ಸ್ವರ್ಧಾತ್ಮಕ ಬದುಕಿನ ನಾಗಲೋಟದಲ್ಲಿ ನಾ ಮುಂದು ತಾ ಮುಂದು ಎಂದು ಓಡುತ್ತಿದ್ದೇವೆ. ಜೊತೆಗೆ ನಮ್ಮ ಮಕ್ಕಳನ್ನು ಯಾಂತ್ರಿಕ ಬದುಕಿಗೆ ತಳ್ಳುತ್ತಿದ್ದೇವೆ.
ಹಳ್ಳಿಗಳಲ್ಲಿ ಅವಿಭಕ್ತ ಕುಟುಂಬವಿತ್ತು. ಅದಲ್ಲದಿದ್ದರೂ ವಿಭಕ್ತ ಕುಟುಂಬದಲ್ಲಿ ಅಜ್ಜ, ಅಜ್ಜಿ, ಅಕ್ಕ, ತಂಗಿ, ಅಣ್ಣ, ತಮ್ಮ ಹೀಗೆ ಮನೆಯಲ್ಲಿ ಕಡಿಮೆ ಅಂದರೂ 10 ಜನಕ್ಕೇನೂ ಕಮ್ಮಿ ಇರಲಿಲ್ಲ. ಆಗ ಪ್ರತೀ ದಿನ ಸಂಜೆ ದೇವರಿಗೆ ಪೂಜೆ ಮಾಡಿ, ತುಳಸಿ ಕಟ್ಟೆಗೆ ದೀಪವಿಟ್ಟು ಪದ್ಮಾಸನ ಹಾಕಿ ಕೂತು ಶುಕ್ಲಾಂ ಭರಧರಂ ಪ್ರಸನ್ನ ವದನಂ, ವಂದಿಪೆ ನಿನಗೆ ಗಣನಾಥ, ಎಂದು ಶ್ರೀ ಗಣೇಶ ಸ್ತುತಿಯೊಂದಿಗೆ ಶುರುವಾಗುವ ಭಜನೆ ಸಾಲು ಸಾಲಾಗಿ ಗೌರಿಯ ಭಜನೆ, ಲಕ್ಷ್ಮೀ ಭಜನೆ, ದಾಸರ ಪದಗಳು, ಅಯ್ಯಪ್ಪ ಭಜನೆ, ರಾಮ, ಕೃಷ್ಣರಾಯರ ಭಜನೆಗಳು ಹೀಗೆ ಸಾಗಿ ಮಂಗಳಂ ಜಯ ಮಂಗಳಂ ಶುಭ ಮಂಗಳಂ ನಿತ್ಯ ಮಂಗಳ ಎನ್ನುವುದರೊಂದಿಗೆ ಪ್ರತಿದಿನ ಪ್ರತಿ ಮನೆಯಲ್ಲೂ ಭಕ್ತಿ ಸಂಕೀರ್ತನೆಯೂ ತುಂಬಿ, ಧನಾತ್ಮಕ ಶಕ್ತಿ ಸಂಚಾರವಾಗುತ್ತಿತ್ತು. ಈಗ ಮನೆ ತುಂಬಾ ಮಕ್ಕಳಿಲ್ಲ. ಇರುವ ಒಂದು ಮಗುವಿಗೆ ಮೊಬೈಲ್, ಟಿ.ವಿ. ನೇ ಎಲ್ಲಾ. ಭಜನೆ ಎನ್ನುವ ಪದಕ್ಕೆ ಅದ್ಭುತವಾದ ಅರ್ಥವಿದೆ. ಭ ಎಂದರೆ ಭಕ್ತಿ, ಜ ಎಂದರೆ ಜನ್ಮಾಂತರ, ನೆ ಎಂದರೆ ನೆನೆಯುವುದು ಜನ್ಮಾಂತರದ ಪಾಪಗಳು ಭಕ್ತಿಯಿಂದ ಭಗವಂತನ ನೆನೆದರೆ ಪರಿಹಾರವಾಗುವುದು ಎನ್ನುವುದು ಇದರ ಅರ್ಥ. ಭಜನೆ ಮಾಡುವುದರಿಂದ ಆರೋಗ್ಯ, ಉಚ್ಚಾರ, ಏಕಾಗ್ರತೆ, ಶಿಸ್ತು, ಸಂಯಮ ಹೀಗೆ ಅನೇಕ ಉತ್ತಮ ಉಪಯೋಗಗಳಿವೆ.
ಇಷ್ಟೆಲ್ಲಾ ತಿಳಿದೂ ನಮ್ಮ ಮಕ್ಕಳನ್ನು ಒಂದು ಕಡೆ ಕೂರಿಸಿ ಭಜನೆ ಹೇಳಿ ಕೊಡೋಣ ಅಂದ್ರೆ ಅದು ಅಷ್ಟು ಸುಲಭದ ಮಾತಲ್ಲ. ಮೊದಲಿನ ಹಾಗೆ ಮನೆಯಲ್ಲಿ ಮೊದಲಾಗಿ ಅಜ್ಜ, ಅಜ್ಜಿ ಇಲ್ಲ ಜೊತೆಗೆ ಮಕ್ಕಳ ಜೊತೆ ಕುಳಿತುಕೊಳ್ಳಲು ಇನ್ನೊಂದು ಮಗು ಇಲ್ಲ, ಏನಿಲ್ಲದಿದ್ದರೂ ನಾವೇ ಕೂರಿಸಿ ಹೇಳಿಸೋಣವೆಂದರೆ ಅಷ್ಟು ವ್ಯವಧಾನ, ಪುರುಸೊತ್ತು ಇಲ್ಲ.
ಬೆಂಗಳೂರಿನ ಈ ಮಹಾನಗರಿಯಲ್ಲಿ ನಮ್ಮ ಮಕ್ಕಳೂ ಕುಳಿತು ಪುಟ್ಟ ಕೈಯಲ್ಲಿ ತಾಳ ಹಾಕುತ್ತಾ ದೇವರ ನಾಮಸ್ವರಣೆ ಮಾಡುವ ಈ ಸುಂದರ ಘಳಿಗೆಯೊಂದು ಸೃಷ್ಟಿಯಾಗಿದ್ದು ಬಂಟರ ಸಂಘ ಬೆಂಗಳೂರು ಶ್ರೀ ವರಸಿದ್ಧಿ ವಿನಾಯಕ ಪ್ರಾರ್ಥನಾ ಮಂದಿರ ಸಮಿತಿಯವರ ಪ್ರಯತ್ನದಿಂದ ಈ ವರ್ಷದ ‘ರಜತ ಮಹೋತ್ಸವ’ದಲ್ಲಿ ಮಕ್ಕಳ ಬಾಯಿಯಿಂದ ಭಜನೆ ಹೇಳಿಸಿ ಸಂಭ್ರಮಿಸುವ ಯೋಜನೆ ರೂಪಿಸಿದ ಸಮಿತಿಯವರಿಗೆ ನಾವೆಲ್ಲ ಆಭಾರಿ. ಕೇವಲ ಎರಡು ತಿಂಗಳೊಳಗೆ ಶುರುವಾದ ಈ ಒಂದು ಪ್ರಯತ್ನದಲ್ಲಿ ಸುಮಾರು 70 ಮಕ್ಕಳ ಬಾಯಿಯಲ್ಲಿ 10 ಭಜನೆಗಳನ್ನು ಹಾಡಿಸುವ ಅವರ ಶ್ರಮ ಮೆಚ್ಚಲೇಬೇಕು.
ನಗರದಲ್ಲಿ ಓದಿದ ಮಕ್ಕಳಿಗೆ ಇಂಗ್ಲಿಷ್ ಬಿಟ್ಟು ಬೇರೇನು ಗೊತ್ತು ಎನ್ನುವವರ ಬಾಯಿಗೆ ಬೀಗ ಹಾಕುವ ತೆರದಿ ಕುಳಿತು ಭಜನೆ ಮಾಡಿಸುವದಷ್ಟೇ ಅಲ್ಲದೇ, ಕುಣಿತ ಭಜನೆಗೂ ಸೈ ಎನ್ನಿಸಲು ಭಕ್ತಿಯಿಂದ ಒಗ್ಗೂಡಿ ದೇವರಂತ ಮುಗ್ಧ ಮನಸ್ಸಿನ ಮಕ್ಕಳಿಂದ ದೇವರಿಗೆ ಸೇವೆ ಸಲ್ಲಿಸುವ ಈ ತಂಡದವರ ಸರ್ವ ಪ್ರಯತ್ನಕ್ಕೂ ವಿಘ್ನೇಶ್ವರನ ಆಶೀರ್ವಾದ ಇರಲೆಂಬುದು ನಮ್ಮ ಕೋರಿಕೆ, ಭಜನೆಯಿಂದ ಭಗವಂತನೆಡೆಗೆ.
ಬರಹ : ಸುಪ್ರೀತಾ ಶೆಟ್ಟಿ