ಅಡ್ಯಾರ್ ಸಹ್ಯಾದ್ರಿ ಕ್ರೀಡಾಂಗಣದಲ್ಲಿ ಫೆಬ್ರವರಿ 7,8,9 ರಂದು ನಡೆಯಲಿರುವ ಯುವ ಬಂಟರ ಸಂಘ ಮಂಗಳೂರು ಇದರ ವತಿಯಿಂದ ನಡೆಯಲಿರುವ ಬಂಟ್ಸ್ ಪ್ರೀಮಿಯರ್ ಲೀಗ್ -2025 ಸೀಸನ್ 2 ಟಿ-10 ಮಾದರಿಯ ಕ್ರಿಕೆಟ್ ಪಂದ್ಯಾವಳಿಯ ಬ್ರೋಷರನ್ನು ನಗರದ ವುಡ್ ಲ್ಯಾಂಡ್ ಸಭಾಂಗಣದಲ್ಲಿ ಇತ್ತೀಚೆಗೆ ಮಂಗಳೂರು ತಾಲೂಕು ಬಂಟರ ಸಂಘದ ಅಧ್ಯಕ್ಷ ರವಿರಾಜ ಶೆಟ್ಟಿಯವರು ಬಿಡುಗಡೆಗೊಳಿಸಿ ಶುಭ ಹಾರೈಸಿದರು.
ಈ ಸಂದರ್ಭದಲ್ಲಿ ಬಿಪಿಎಲ್ ಟೂರ್ನಿಯ ಸಲಹೆಗಾರರಾದ ರಾಜ್ ಗೋಪಾಲ ರೈ ಮಾತನಾಡುತ್ತಾ, ಬಂಟ್ಸ್ ಪ್ರೀಮಿಯರ್ ಲೀಗ್ ಮೂಲಕ ಯುವ ಬಂಟರ ಜೊತೆ ಬಂಟ ಸಮಾಜದ ಸಂಘಟನೆ ಕ್ರೀಡೆಗೆ ಸಹಕಾರಿಯಾಗಲಿ. ಬಂಟ ಸಮಾಜ ತಮ್ಮ ಸಮಾಜದ ಅಭಿವೃದ್ಧಿಯ ಜೊತೆ ಇತರ ಸಮಾಜದ ಅಭಿವೃದ್ಧಿಗೆ ಶ್ರಮಿಸುತ್ತಾ ಬಂದ ಸಮಾಜ. ನಾವು ಬೆಳೆಯುತ್ತಾ ಇತರರನ್ನು ಬೆಳೆಸೋಣ ಎಂದರು. ಕಾವೂರು ಬಂಟರ ಸಂಘದ ಅಧ್ಯಕ್ಷ ಹಾಗೂ ಕ್ರೀಡಾ ಪಟು ಆನಂದ ಶೆಟ್ಟಿಯವರು ಮಾತನಾಡುತ್ತಾ, ಕುಟುಂಬ ಬಾಂಧವ್ಯ ಸಂಬಂಧ ಶಿಥಿಲವಾಗುತ್ತಿರುವ ಈ ಕಾಲಘಟ್ಟದಲ್ಲಿ ಕ್ರೀಡೆ ನಮ್ಮೆಲ್ಲರನ್ನು ಒಂದುಗೂಡಿಸುವ ನಿಟ್ಟಿನಲ್ಲಿ ಮತ್ತು ದೈಹಿಕ, ಮಾನಸಿಕ, ಆರೋಗ್ಯ ದೃಷ್ಟಿಯಿಂದಲೂ ಕ್ರೀಡೆ ಒಂದು ಸಾಧನ ಎಂದರು. ಹಿರಿಯ ಪತ್ರಕರ್ತರಾದ ಭಾಸ್ಕರ ರೈ ಕಟ್ಟ, ಪುಷ್ಪರಾಜ್ ಬಿ.ಎನ್ ಶುಭ ಹಾರೈಸಿದರು. ರಾಜೇಶ್ ದಡ್ಡಂಗಡಿ ಉಪಸ್ಥಿತರಿದ್ದರು. ಬಿಪಿಎಲ್ ಟೂರ್ನಿಯ ಸಂಘಟಕರಾದ ಸಚಿನ್ ರೈ ಸ್ವಾಗತಿಸಿ, ಪ್ರಸಾದ್ ಶೆಟ್ಟಿ ಬಿಪಿಎಲ್ ಟೂರ್ನಿಯ ಮಾಹಿತಿ ನೀಡಿ ವಂದಿಸಿದರು.