‘ಯಕ್ಷಗಾನ ಕ್ಷೇತ್ರದ ಸುಧೀರ್ಘವಾದ ತನ್ನ ಯಾತ್ರೆಯಲ್ಲಿ ಸಾವಿರಾರು ಮಾನ ಸಮ್ಮಾನಗಳು ಲಭಿಸಿವೆ. ಇದು 1023ನೇ ಸನ್ಮಾನ. ದೇಹದ ಕಸುವು ಕಡಿಮೆಯಾದರೂ ರಂಗಸ್ಥಳದಲ್ಲಿ ಅದು ಅರಿವಿಗೆ ಬರುವುದಿಲ್ಲ. ಕಾರಣ ರಂಗದ ಒಳಗೂ ಹೊರಗೂ ನಮಗೆ ಅಭಿಮಾನಿಗಳ ರಕ್ಷೆ ಇದೆ’ ಎಂದು ರಾಜ್ಯ ಪ್ರಶಸ್ತಿ ಪುರಸ್ಕೃತ ಹಿರಿಯ ಕಲಾವಿದ ಅರುವ ಕೊರಗಪ್ಪ ಶೆಟ್ಟಿ ಹೇಳಿದ್ದಾರೆ. ಯಕ್ಷಾಂಗಣ ಮಂಗಳೂರು, ಯಕ್ಷಗಾನ ಚಿಂತನ ಮಂಥನ ಮತ್ತು ಪ್ರದರ್ಶನ ವೇದಿಕೆ ಹಾಗೂ ಕರ್ನಾಟಕ ಯಕ್ಷ ಭಾರತಿ ಪುತ್ತೂರು ಆಶ್ರಯದಲ್ಲಿ ಕನ್ನಡ ರಾಜ್ಯೋತ್ಸವ ಕಲಾ ಸಂಭ್ರಮವಾಗಿ ಕದ್ರಿ ಶ್ರೀ ಮಂಜುನಾಥ ದೇವಾಲಯದ ರಾಜಾಂಗಣದಲ್ಲಿ ನಡೆಯುತ್ತಿರುವ 12ನೇ ವರ್ಷದ ನುಡಿ ಹಬ್ಬ ‘ಯಕ್ಷಗಾನ ತಾಳಮದ್ದಳೆ ಸಪ್ತಾಹ – 2024’ ಅಂಗವಾಗಿ ನ.12ರಂದು ಜರಗಿದ ದಿ. ಬೆಟ್ಟಂಪಾಡಿ ಬಾಳಪ್ಪ ಶೆಟ್ಟಿ ಸಂಸ್ಮರಣಾ ಸಮಾರಂಭದಲ್ಲಿ ‘ಬಾಳಪ್ಪ ಶೆಟ್ಟಿ ಪ್ರಶಸ್ತಿ’ ಸ್ವೀಕರಿಸಿ ಅವರು ಮಾತನಾಡಿದರು.
‘ಕುಂಡಾವು ಮೇಳದಲ್ಲಿ ಬಾಳಪ್ಪ ಶೆಟ್ಟರು ಜೊತೆಗಿದ್ದಾಗ ಅವರ ಪ್ರಬುದ್ಧ ಹಾಸ್ಯವನ್ನು ಹತ್ತಿರದಿಂದ ಕಂಡಿದ್ದೆ. ಅವರು ಯಾವತ್ತೂ ರಂಗದಲ್ಲಿ ಅಸಂಬದ್ಧವಾಗಿ ಅಪಹಾಸ್ಯವಾಗುವ ರೀತಿಯಲ್ಲಿ ನಡೆದುಕೊಂಡಿರಲಿಲ್ಲ’ ಎಂದು ಅವರೊಂದಿಗಿನ ಒಡನಾಟವನ್ನು ಸ್ಮರಿಸಿಕೊಂಡರು.
ಸಂಸ್ಮರಣ ಜ್ಯೋತಿ ಬೆಳಗಿದ ಮೂಡುಬಿದಿರೆ ಶ್ರೀ ಧನಲಕ್ಷ್ಮಿ ಕ್ಯಾಶ್ಯೂ ಇಂಡಸ್ಟ್ರೀಸ್ ಮಾಲಕ ಶ್ರೀಪತಿ ಭಟ್ ಮಾತನಾಡಿ ‘ಯಕ್ಷಗಾನವಿಂದು ವಿದ್ಯಾವಂತರ ವಲಯದಲ್ಲೂ ಜನಪ್ರಿಯತೆ ಪಡೆದಿದೆ. ಅನೇಕ ಯುವಕರು,ಮಕ್ಕಳು ಹಾಗೂ ಮಹಿಳೆಯರು ಈ ಕ್ಷೇತ್ರದಲ್ಲಿ ಒಳ್ಳೆಯ ಸಾಧನೆ ತೋರುತ್ತಿದ್ದಾರೆ. ಇದಕ್ಕೆ ಕಾರಣ ಯಕ್ಷಗಾನವನ್ನು ಕಟ್ಟಿ ಬೆಳೆಸಿ ಗತಿಸಿ ಹೋದ ಹಿರಿಯ ಕಲಾವಿದರ ಆದರ್ಶ’ ಎಂದು ನುಡಿದರು. ಪ್ರಶಸ್ತಿ ಪ್ರದಾನ ಮಾಡಿ ಮಾತನಾಡಿದ ಹಿರಿಯ ನಾಟಕಕಾರ ಡಾ.ಸಂಜೀವ ದಂಡಕೇರಿ ಅವರು ‘ರಾಷ್ಟ್ರ, ಅಂತಾರಾಷ್ಟ್ರೀಯ ಮಟ್ಟದಲ್ಲಿ ಹೆಸರು ಮಾಡಿದ ಅನೇಕ ಕಲಾವಿದರು ಕದ್ರಿ ಕ್ಷೇತ್ರಕ್ಕೆ ಸೇರಿದ್ದಾರೆ. ಇಲ್ಲಿ ಅರುವ ಕೊರಗಪ್ಪ ಶೆಟ್ಟರಂತಹ ಹಿರಿಯರನ್ನು ಪ್ರಶಸ್ತಿ ನೀಡಿ ಗೌರವಿಸಿರುವುದು ಯಕ್ಷಾಂಗಣದ ಶ್ರೇಷ್ಠ ಕಾರ್ಯ’ ಎಂದು ಶ್ಲಾಘಿಸಿದರು.
ದಿ.ಬೆಟ್ಟಂಪಾಡಿ ಬಾಳಪ್ಪ ಶೆಟ್ಟಿ ಯಕ್ಷ ಪ್ರತಿಷ್ಠಾನದ ಅಧ್ಯಕ್ಷ ಎಂ. ಸುಂದರ ಶೆಟ್ಟಿ ಬೆಟ್ಟಂಪಾಡಿ ಪ್ರಾಸ್ತಾವಿಕವಾಗಿ ಮಾತನಾಡಿ ತಂದೆಯವರೊಂದಿಗಿನ ತನ್ನ ಬಾಲ್ಯದ ದಿನಗಳನ್ನು ಸ್ಮರಿಸಿದರು. ಶ್ಯಾಮಲಾ ಪದ್ಮನಾಭ ಶೆಟ್ಟಿ ಸನ್ಮಾನ ಫಲಕ ವಾಚಿಸಿದರು. ಮುಖ್ಯ ಅತಿಥಿಯಾಗಿ ಭಾಗವಹಿಸಿದ ಖ್ಯಾತ ವಕೀಲ ಮತ್ತು ಪುಳಿಂಚ ಪ್ರತಿಷ್ಠಾನದ ಅಧ್ಯಕ್ಷ ಪುಳಿಂಚ ಶ್ರೀಧರ ಶೆಟ್ಟಿ ಅವರು ಮಾತನಾಡುತ್ತಾ ‘ತಮ್ಮ ತಂದೆಯವರಾದ ಪುಳಿಂಚ ರಾಮಯ್ಯ ಶೆಟ್ಟಿ ಮತ್ತು ಅರುವ ಕೊರಗಪ್ಪ ಶೆಟ್ಟರದ್ದು ಅಪೂರ್ವ ಜೋಡಿ. ಕಾಡಮಲ್ಲಿಗೆಯಂಥ ತುಳು ಪ್ರಸಂಗಗಳಲ್ಲಿ ಅವರೀರ್ವರು ಊರು ಮತ್ತು ಮುಂಬಯಿಗಳಲ್ಲಿ ಕಲಾಭಿಮಾನಿಗಳನ್ನು ಹುಚ್ಚೆಬ್ಬಿಸಿದ್ದಾರೆ’ ಎಂದರು.
ಸಮಾರಂಭದಲ್ಲಿ ಮಂಗಳೂರು ಮಹಾನಗರ ಪಾಲಿಕೆ ಸದಸ್ಯೆ ಶಕೀಲಾ ಕಾವ ಮತ್ತು ಹಿರಿಯ ಅರ್ಥಧಾರಿ ಎನ್. ಸಂಜೀವ ರೈ ಬೆಟ್ಟಂಪಾಡಿ ಅತಿಥಿಗಳಾಗಿದ್ದರು. ಯಕ್ಷಾಂಗಣದ ಕಾರ್ಯಾಧ್ಯಕ್ಷ ಪ್ರೊ. ಭಾಸ್ಕರ ರೈ ಕುಕ್ಕುವಳ್ಳಿ ಸ್ವಾಗತಿಸಿದರು. ಸಂಚಾಲಕ ರವೀಂದ್ರರೈ ಕಲ್ಲಿಮಾರು ಕಾರ್ಯಕ್ರಮ ನಿರೂಪಿಸಿ ಕರುಣಾಕರ ಶೆಟ್ಟಿ ಪಣಿಯೂರು ವಂದಿಸಿದರು. ಪ್ರಧಾನ ಕಾರ್ಯದರ್ಶಿ ತೋನ್ಸೆ ಪುಷ್ಕಳ ಕುಮಾರ್, ಸಂಚಾಲಕಿ ನಿವೇದಿತಾ ಎನ್. ಶೆಟ್ಟಿ, ಕಾರ್ಯದರ್ಶಿಗಳಾದ ಕೆ. ಲಕ್ಷ್ಮೀನಾರಾಯಣ ರೈ ಹರೇಕಳ, ಸುಮಾ ಪ್ರಸಾದ್ ಹಾಗೂ ಬಾಳಪ್ಪ ಶೆಟ್ಟಿ ಪ್ರತಿಷ್ಠಾನದ ಬೆಟ್ಟಂಪಾಡಿ ಪದ್ಮನಾಭ ಶೆಟ್ಟಿ ಮತ್ತು ಡಾ.ಸೂರಜ್ ಶೆಟ್ಟಿ ಉಪಸ್ಥಿತರಿದ್ದರು.
ಸಪ್ತಾಹದ ಎರಡನೇ ದಿನ ಶ್ರೀ ಮಹಾಲಿಂಗೇಶ್ವರ ಯಕ್ಷಗಾನ ಕಲಾಸಂಘ ಬೆಟ್ಟಂಪಾಡಿ, ಪುತ್ತೂರು ಇವರಿಂದ ‘ಕಚ-ದೇವಯಾನಿ’ ಯಕ್ಷಗಾನ ತಾಳಮದ್ದಳೆ ಜರಗಿತು.