ಪುಣೆ ಬಂಟರ ಸಂಘದ ಉಪಾಧ್ಯಕ್ಷ, ತುಳುಕೂಟ ಪುಣೆಯ ಬೆಳ್ಳಿ ಹಬ್ಬ ಸಂಭ್ರಮದ ಗೌರವಾಧ್ಯಕ್ಷ, ಬಂಟ್ಸ್ ನೌ ಮಾಧ್ಯಮ ಸಂಸ್ಥೆಯ ಮಹಾಪೋಷಕ, ಉಡುಪಿ ಜಿಲ್ಲಾ ರಾಜ್ಯೋತ್ಸವ ಪ್ರಶಸ್ತಿ ಪುರಸ್ಕೃತ, 2024 ರ ಸಾಲಿನ ಬಂಟರತ್ನ ಪ್ರಶಸ್ತಿ ಪುರಸ್ಕೃತ, ಆರ್ಯಭಟ ಪ್ರಶಸ್ತಿ ಪುರಸ್ಕೃತ ಪುಣೆಯ ಉದ್ಯಮಿ ಸಮಾಜಸೇವಕ ಪ್ರವೀಣ್ ಶೆಟ್ಟಿ ಪುತ್ತೂರು ದಂಪತಿಗಳನ್ನು ತುಳುಕೂಟ ಪುಣೆಯ ಬೆಳ್ಳಿಹಬ್ಬದ ಸಂಭ್ರಮದಲ್ಲಿ ಎಂ ಆರ್ ಜಿ ಗ್ರೂಪ್ ನ ಸಿಎಂಡಿ ಡಾ| ಕೆ ಪ್ರಕಾಶ್ ಶೆಟ್ಟಿ, ಜಾಗತಿಕ ಬಂಟರ ಸಂಘಗಳ ಒಕ್ಕೂಟದ ಅಧ್ಯಕ್ಷ ಐಕಳ ಹರೀಶ್ ಶೆಟ್ಟಿ, ಪುಣೆ ಬಂಟರ ಸಂಘದ ಅಧ್ಯಕ್ಷ ಸಂತೋಷ್ ಶೆಟ್ಟಿ ಇನ್ನ ಕುರ್ಕಿಲ್ ಬೆಟ್ಟು ಬಾಳಿಕೆ, ತುಳುಕೂಟದ ಅಧ್ಯಕ್ಷ ದಿನೇಶ್ ಶೆಟ್ಟಿ ಕಳತ್ತೂರು, ಕಾರ್ಯದರ್ಶಿ ರೋಹಿತ್ ಶೆಟ್ಟಿ ನಗ್ರಿಗುತ್ತು ಇವರುಗಳು ಗೌರವಿಸಿ ಸನ್ಮಾನಿಸಿದರು. ಈ ಸಂಧರ್ಭ ಮುಂಬಯಿ ಬಂಟರ ಸಂಘದ ಅಧ್ಯಕ್ಷ ಪ್ರವೀಣ್ ಭೋಜ ಶೆಟ್ಟಿ, ದ.ಕ ಸಂಸದ ಬ್ರಜೇಶ್ ಚೌಟ, ಮತ್ತಿತರ ಗಣ್ಯರು ಉಪಸ್ಥಿತರಿದ್ದರು.
ಪ್ರವೀಣ್ ಶೆಟ್ಟಿ ಪುತ್ತೂರು ಇವರ ಸಾಧನೆಯ ಒಳನೋಟ :
ಜೀವನ ಅಂದರೆ ಕೇವಲ ತನಗೆ ಹಾಗು ತನ್ನವರಿಗಾಗಿ ಅಂದುಕೊಂಡರೆ ಅದು ತಪ್ಪು. ದೇಹ ದೇವರಲ್ಲಿಗೆ ಹೋಗುವ ಮೊದಲು ದೇಶಕ್ಕಾಗಿ ಜೀವಿಸಿ, ಸಮಾಜಕ್ಕೆ ಗಂಧದ ಕೊರಡಾಗಿ ತೇದುತ್ತಾ, ಸಮಾಜ ಮುಖಿಯಾಗಿರುವವರ ಸಂಖ್ಯೆ ಬಹು ವಿರಳವಾಗಿರುವ ಪ್ರಸ್ತುತ ಸಮಯದಲ್ಲಿ ಸಮಾಜ ಸೇವೆ, ಶೈಕ್ಷಣಿಕ ಸೇವೆ, ಕಲಾಸೇವೆಯೊಂದಿಗೆ ಬದುಕುವ ಅಪರೂಪದಲ್ಲಿಯೇ ಅಪರೂಪದ ಸಾಮಾಜದ ಹಿತೈಷಿ, ಸಮಾಜ ಸೇವಕ ಅಂದರೆ ಅದು ಪುಣೆ ಪರಿಸರದ ತುಳು ಕನ್ನಡಿಗರ ಹಾಗೂ ಇತರ ಭಾಷಿಗರ ಮನದಲ್ಲಿ ಮನೆ ಮಾಡಿದವರು ಪ್ರವೀಣ್ ಶೆಟ್ಟಿ ಪುತ್ತೂರುರವರು. ಹೌದು… ಅವರದ್ದು ಮಗುವಿನಂತ ಮನಸ್ಸು, ಸಂಸ್ಕ್ರತಿ ಸಂಸ್ಕಾರದ ಖನಿಜ ಅವರಲ್ಲಿ ಧಾರಾಳ. ಪರರ ನೋವಿಗೆ ಶೀಘ್ರವಾಗಿ ಸ್ಪಂಧಿಸುವ ಗುಣ ಅವರಿಗೆ ಪರಮಾತ್ಮನ ಕೊಡುಗೆ. ದುಡಿದು ಗಳಿಸುವುದು ತನ್ನ ಕಾಯಕವಾದರೆ, ದುಡಿದುದರಲ್ಲಿ ಒಂದಷ್ಟು ಪಾಲು ಸಮಾಜಕ್ಕೆ ಬಚ್ಚಿಡಬೇಕು ಎಂಬ ಪ್ರಜ್ಞೆ ಅವರಲ್ಲಿ ಬಹಳ. ಸುಮ್ಮನೆ ಅವಮಾನ, ಅಪಶಬ್ದ, ಅಪಸ್ವರಗಳಿಗೆ ಕಿವಿಯಾದವರಲ್ಲ ಎಂದಲ್ಲ. ಆದರೆ ನನ್ನ ಅಂತಿಮ ತೀರ್ಮಾನ ನಾನು ಮಾತ್ರ ಯಾರನ್ನೂ ಯಾವತ್ತಿಗೂ ನೋಯಿಸಲಾರೆ, ಯಾರೊಂದಿಗೂ ವೈರತ್ವ ಕಟ್ಟಿಕೊಳ್ಳಲಾರೆ ಎಂಬ ಮೃದು ವ್ಯಕ್ತಿತ್ವ ಅವರದ್ದು. ಸಂತನಿಗಿರುವ ಸಜ್ಜನಿಕೆ ಪ್ರವೀಣ್ ಶೆಟ್ಟಿಯವರದ್ದು.
ಕರಾವಳಿಯ ಹೆಚ್ಚಿನ ಜನರು ತಮ್ಮ ಭವ್ಯ ಭವಿತವ್ಯಕ್ಕಾಗಿ ಪುಣೆ ಮಹಾನಗರವನ್ನು ಆಯ್ಕೆಯಾಗಿಸಿಕೊಂಡಂತೆ ತಾನೂ ಸಹ ಈ ನಗರದ ಸಖ್ಯ ಬೆಳೆಸಿಕೊಂಡರು. ಹೊಟ್ಟೆಗೆ ಬಟ್ಟೆಗೆ ಮಾತ್ರ ಸಾಕಾಗುವಷ್ಟು ಸಂಬಳದ ಕೆಲಸ ಶೆಟ್ಟಿಯವರಿಗೆ ಒಗ್ಗಿ ಬರಲಿಲ್ಲ. ಈ ಸಣ್ಣ ನೌಕರಿಯಿಂದ ನಾನು ಏನು ಸಾಧಿಸಬಹುದು? ಸಾಧನೆಯ ಶಿಖರ ಏರಬೇಕಾದರೆ ಉದ್ಯಮಿಯಾಗಬೇಕು. ಉದ್ಯಮದಿಂದ ಒಂದಷ್ಟು ಸಂಸಾರಗಳಿಗೆ ನಾನು ಆಸರೆಯಾಗಬೇಕು ಎಂಬ ಮಹತ್ತರವಾದ ಅಭಿಲಾಷೆ ಅವರದ್ದಾಗಿತ್ತು. ಅವರದ್ದು ಯಾವತ್ತೂ ಬತ್ತದ ಜೀವನೋತ್ಸಾಹ. ಆದದ್ದಾಗಲಿ ಎಂಬ ಹಿಡಿ ಮುಷ್ಟಿ ಧೈರ್ಯದೊಂದಿಗೆ ಇದ್ದ ನೌಕರಿಯನ್ನು ಬಿಟ್ಟು ವ್ಯಾಪಾರದತ್ತ ಕತ್ತು ಸರಿಸಿದರು. ಕರಾವಳಿ ಕನ್ನಡಿಗರಿಗೆ ರಕ್ತಗತವಾಗಿ ಬಂದಿದ್ದ ಕ್ಯಾಂಟೀನ್ ಹೋಟೆಲು ಉದ್ಯಮದತ್ತ ಮನ ಮಾಡಿದರು. ಆರ್ ಬಿ ಐ ಕ್ಯಾಂಟೀನ್ ನಡೆಸುವ ಮೂಲಕ ಯಶಸ್ಸಿನ ಏಣಿಯ ಮೊದಲ ಮೆಟ್ಟಿಲು ಹತ್ತಿದರು. ಯಶಸ್ಸಿನ ಏಣಿಗೆ ಮೆಟ್ಟಿಲಿವೆಯೇ ಹೊರತು ಅಂತ್ಯವಿಲ್ಲ ಎಂಬ ಅಮೃತ ನುಡಿಯೊಂದಿಗೆ ನಡುಗೆ ಪ್ರಾರಂಬಿಸಿದರು. ಬದುಕು ಬದಲಾವಣೆಯತ್ತಾ ಸಾಗಿತ್ತು. ಗುರಿ ನೆಟ್ಟಗಿದ್ದಲ್ಲಿ ಗೋಲು ಹೊಡೆಯುವುದು ಅಸಾಧ್ಯದ ಮಾತಲ್ಲ ಎಂಬಂತೆ ಒಂದಷ್ಟು ಸಮಯದಲ್ಲಿಯೇ ಪುಣೆಯ ಪ್ರತಿಷ್ಠಿತ ಕಂಪನಿಗಳ ಕ್ಯಾಂಟೀನು ಪ್ರವೀಣ್ ಶೆಟ್ಟಿಯವರ ಪಾಲಾಯಿತು. ಕ್ಯಾಂಟೀನ್ ಉದ್ಯಮವನ್ನು ಬೃಹತ್ ಮಟ್ಟದಲ್ಲಿ ಬೆಳೆಸಿದರು. ನೂರಾರು ಜನರ ಕುಟುಂಬಕ್ಕೆ ಆಶಾ ದೀಪವಾದರು.
ಕೆರೆಯ ನೀರನು ಕೆರೆಗೆ ಚೆಲ್ಲಿ ಎಂಬ ದಾಸರ ನುಡಿಯಂತೆ ಸಮಾಜದಿಂದ ಪಡೆದ ಸಂಪತ್ತನ್ನು ಸಮಾಜಕ್ಕೆ ಹಿಂತಿರುಗಿಸುವ ನಿಟ್ಟಿನಲ್ಲಿ ಶೆಟ್ಟಿಯವರು ಒಂದು ಹೆಜ್ಜೆ ಮುಂದೆ ಎಂದು ಹೇಳಿದರೆ ಅದು ಕೇವಲ ಹೊಗಳಿಕೆಯ ಮಾತಲ್ಲ. ತನ್ನೊಂದಿಗೆ ದುಡಿಯುವ ಮಂದಿಗೆ ಮನೆಯ ಮಕ್ಕಳಿಗೆ ಕೊಡುವ ಪ್ರೀತಿ ಬಸಿದವರು. ತನ್ನ ಕಾರ್ಮಿಕರ ಕಷ್ಟಗಳಿಗೆ ಹೆಗಲು ಕೊಟ್ಟು ಅವರೊಂದಿಗೆ ಮನೆಯ ಸದಸ್ಯನಂತೆ ವರ್ತಿಸಿ ಹಿರಿಯನಾಗಿ ಸಲಹೆ ಸಹಕಾರವನ್ನು ನೀಡುತ್ತಾ ಅವರುಗಳ ಮನದಲ್ಲಿ ನೆಲೆಯಾದರು. ತನ್ನವರ ನೋವು ನೀಗಿಸುತ್ತಾ ಅವರ ಬದುಕು ಹಸನು ಮಾಡುವುದಕ್ಕೆ ಮೊದಲ ಪ್ರಾಧಾನ್ಯತೆಯನ್ನು ಕೊಟ್ಟರು. ಅಪ್ಪಿ ತಪ್ಪಿ ತನ್ನ ಕಾರ್ಮಿಕ ವರ್ಗದವರನ್ನು ಗದರಿಸಿದವರಲ್ಲ ಬೆದರಿಸಿದವರಲ್ಲ. ಹಿತ ಮಿತದ ಮಾತಿನೊಂದಿಗೆ ಅವರನ್ನು ಆಪ್ತ ಗೆಳೆಯರಂತೆ ಬಂದುತ್ವದ ಪ್ರೀತಿಯೆಂಬಂತೆ ನೋಡಿಕೊಂಡರು. ದೇವರು ನಿನಗೆ ಧನ ಕೊಟ್ಟಾಗ ದೇವರಂತಿರುವ ಬಡವನಿಗೆ ನೀನು ಕೊಡು ಎಂಬ ಸರ್ವಜ್ಞನ ವಚನವನ್ನು ಕಾರ್ಯರೂಪಕ್ಕೆ ತಂದರು.
ತನ್ನ ಹುಟ್ಟೂರು ಉಡುಪಿ ಪರಿಸರದ ಕಲಿಯುವ ಮಕ್ಕಳು ಶಿಕ್ಷಣದಿಂದ ವಂಚಿತರಾಗದ ಹಾಗೆ ಅವರಿಗೆ ಕಲಿಯಲು ಬೇಕಾದ ಪುಸ್ತಕ ಇನ್ನಿತರ ವಸ್ತುಗಳನ್ನು ಕೊಟ್ಟು ಬಡವರ ಮಕ್ಕಳ ಬದುಕಿಗೆ ದಾರಿದೀಪವಾದರು. ಅವರುಗಳು ಶಿಕ್ಷಣದಿಂದ ವಂಚಿತರಾಗದಂತೆ ನೋಡಿಕೊಂಡ ಪುಣ್ಯಾತ್ಮ ಎಂದರೆ ದೊಡ್ಡ ಮಾತಲ್ಲ. ಯಾವುದೇ ಶಿಕ್ಷಣ ಸಂಸ್ಥೆಗಳು ಇನ್ನಿತರ ಸಂಘಟನೆಗಳು ತಮ್ಮ ಸಂಸ್ಥೆಗಳಿಗೆ ಸಹಾಯ ಯಾಚಿಸಿದಲ್ಲಿ ಉದಾರ ಮನಸ್ಸಿನಿಂದ ಸಹಾಯ ಮಾಡಿದರು. ಕಲೆಯ ಮೇಲೆ ಅಪಾರ ಪ್ರೀತಿ ಅವರಿಗೆ. ನಗರದಲ್ಲಿ ಎಲ್ಲೇ ಯಕ್ಷಗಾನ, ತಾಳ ಮದ್ದಳೆಗಳಾದರೂ ಅಲ್ಲಿಗೆ ತನ್ನ ಧರ್ಮಪತ್ನಿಯೊಂದಿಗೆ ತೆರಳಿ ಯೋಗ್ಯ ಕಲಾವಿದರಿಗೆ ಸಿಕ್ಕಿ ಅವರಿಗೆ ಅಗತ್ಯ ಅಂತ ಕಂಡು ಬಂದರೆ ಒಂದಷ್ಟು ಮುಷ್ಟಿ ಸಹಾಯವನ್ನು ಅವರಿಗಿತ್ತು ಅವರಲ್ಲಿನ ಕಲೆಯನ್ನು ಪೋಷಿಸುವ ಅಪ್ಪಟ ಕಲಾ ಪ್ರೇಮಿ.
ಯಾವುದೇ ಪತ್ರಿಕೆ, ಕೃತಿ ಹಾಗೂ ಸಾಮಾಜಿಕ ಜಾಲ ತಾಣದಲ್ಲಿ ತನಗಿಷ್ಟವಾದ ಬರಹವನ್ನು ಓದಿದ ತಕ್ಷಣ ಆ ಲೇಖಕರಿಗೆ ಕರೆ ಮಾಡಿ ಅವರನ್ನು ಅಭಿನಂದಿಸುವುದು ಇವರ ದೊಡ್ಡ ಗುಣ. ತುಳುನಾಡು ಮತ್ತು ಅಲ್ಲಿನ ಸಂಸ್ಕ್ರತಿಯನ್ನು ಅಪಾರವಾಗಿ ಪ್ರೀತಿಸುವ ಪ್ರವೀಣ್ ಶೆಟ್ಟಿಯವರು ತನ್ನೂರಿನ ದೈವ ದೇವರ ಕೆಲಸಗಳನ್ನು ಯಾವತ್ತೂ ತಪ್ಪಿಸಿಕೊಂಡವರಲ್ಲ. ಪುಣೆಯಲ್ಲಿ ಉದ್ಯಮಿಯಾಗಿ ಗೆದ್ದು ಬಂದ ಶೆಟ್ಟಿಯವರು ತುಳುನಾಡಿನಲ್ಲಿಯೂ ಉದ್ಯಮಿಯಾಗಿಯೂ ಹೆಜ್ಜೆಯೂರಿದ್ದಾರೆ. ಅವರ ಹೆಜ್ಜೆಗೆ ಗೆಜ್ಜೆಯ ನಿನಾದ ಎಂಬಂತೆ ಅಲ್ಲೂ ಜಯಶೀಲರಾಗಿದ್ದಾರೆ. ತನ್ನೂರಿಗಾಗಿ ಏನಾದರೂ ಸೇವೆ ಸಲ್ಲಿಸಬೇಕು, ಅಲ್ಲಿನ ಸಾಮಾನ್ಯರು ಹಾಗೂ ಬಡವರಿಗೆ ತನ್ನಿಂದ ಅಲ್ಪ ಮಟ್ಟದ ಸಹಾಯ ಆಗಬೇಕು ಎಂಬುದು ಇವರ ಮಹದಾಸೆ. ಹೌದು ವರ್ತಮಾನದ ಸಮಾಜದಲ್ಲಿ ಸ್ವಾರ್ಥ ಸಾಧನೆಗಾಗಿ ಬದುಕುವ ಒಂದಷ್ಟು ಜನರ ನಡುವೆ ಪ್ರವೀಣ್ ಶೆಟ್ಟಿಯವರಂತಹ ಸರಳ ಸಜ್ಜನರು ವಿರಳ ಅಂದರೆ ಕೇವಲ ಹೊಗಳಿಕೆಯ ಮಾತಾಗಲಾರದು. ಪ್ರವೀಣ್ ಶೆಟ್ಟಿಯವರಂತಹ ಸರಳ ಸಜ್ಜನಿಕೆಯ ಸಮಾಜ ಸೇವಕರ ಪಟ್ಟಿ ಈ ಸಮಾಜದಲ್ಲಿ ಲಕ್ಷ ಲಕ್ಷ ಆಗಬೇಕು. ಇವರ ಸಮಾಜಮುಖಿ ಸೇವೆಯ ಉತ್ಸಾಹ ಯಾವತ್ತೂ ಕುಂದಬಾರದು ನಂದಬಾರದು. ಭಗವಂತ ಇವರಿಗೆ ಶತಮಾನ ತುಂಬಿದ ಆರೋಗ್ಯದ ಬದುಕನ್ನು ಕರುಣಿಸಬೇಕು.