2024 ರ ಸಾಲಿನ ಬಂಟ ವಿಭೂಷಣ ಪ್ರಶಸ್ತಿ ಪುರಸ್ಕೃತರಾದ ಉಮೇಶ್ ಶೆಟ್ಟಿ ಮಂದಾರ್ತಿ ಸಾರಥ್ಯದ ಅಭಯ ಸೇವಾ ಫೌಂಡೇಶನ್ ವತಿಯಿಂದ ಲೋಕ ಕಲ್ಯಾಣಕ್ಕಾಗಿ ಸೇವಾ ಸಂಕಲ್ಪ ಕಾರ್ಯಕ್ರಮವನ್ನು ರಾಜಾಜಿನಗರ ಶ್ರೀರಾಮ ಮಂದಿರ ಆಟದ ಮೈದಾನದಲ್ಲಿ ಕಾರ್ಯಕ್ರಮದ ಉದ್ಘಾಟನೆಯನ್ನು ಪರಮಪೂಜ್ಯ ಶ್ರೀ ಶ್ರೀ ಶ್ರೀ ರಾಜಶೇಖರಾನಂದ ಸ್ವಾಮೀಜಿ, ಎಂ.ಆರ್.ಜಿ ಗ್ರೂಪ್ ಸಂಸ್ಥಾಪಕ ಡಾ| ಕೆ ಪ್ರಕಾಶ್ ಶೆಟ್ಟಿ, ವಿಧಾನ ಪರಿಷತ್ ವಿರೋಧ ಪಕ್ಷದ ನಾಯಕ ಛಲವಾದಿ ನಾರಾಯಣಸ್ವಾಮಿ, ಯುನಿವರ್ಸಲ್ ಗ್ರೂಪ್ ಆಫ್ ಇನ್ಸ್ಟಿಟ್ಯೂಷನ್ ವ್ಯವಸ್ಥಾಪಕ ನಿರ್ದೇಶಕ ಆರ್. ಉಪೇಂದ್ರ ಶೆಟ್ಟಿ, ಸ್ವಾತಿ ಗ್ರೂಪ್ ನ ನಿರ್ದೇಶಕ ಮಧುಕರ್ ಶೆಟ್ಟಿ, ಡಾ. ಅಂಜನಪ್ಪ, ಡಾ. ಪದ್ಮಿನಿ ಪ್ರಸಾದ್, ರಾಜಕೀಯ ಮುಖಂಡರಾದ ಆರ್.ವಿ. ಹರೀಶ್, ಡಿ.ಸಿ.ಪಿ. ಸೈಮುಲ್ಲಾ ಅದಾಲತ್, ನಿವೃತ್ತ ಕರ್ನಲ್ ಪಿ.ವಿ ಹರಿ, ವಿಶ್ವ ಹಿಂದೂ ಪರಿಷತ್ತು ಪ್ರಾಂತ್ಯ ಕಾರ್ಯದರ್ಶಿಗಳಾದ ಜಗನ್ನಾಥ ಶಾಸ್ತ್ರೀರವರು ದೀಪ ಬೆಳಗಿಸಿ ಉದ್ಘಾಟನೆ ಮಾಡಿದರು.
ಶ್ರೀ ಶ್ರೀ ಶ್ರೀ ರಾಜಶೇಖರಾನಂದ ಸ್ವಾಮೀಜಿಯವರು ಮಾತನಾಡಿ, ಸಂಸ್ಕೃತಿ ಸಂಪ್ರದಾಯ ಉಳಿಯಬೇಕು ಎಂದರೆ ನಾವೆಲ್ಲರೂ ಹೋರಾಟ ಮಾಡಬೇಕು. ಸಮಾಜ ಕಟ್ಟುವ ಕೆಲಸ ಮಾಡುವವರಿಗೆ ಹಾಗೂ ಸಮಾಜಮುಖಿ ಕಾರ್ಯಗಳಿಗೆ ಜನರು ಸಹಕಾರ ಕೊಡಬೇಕು. ಸಮಾಜ ಅಭಿವೃದ್ಧಿಗೆ ಮಾಧ್ಯಮದವರು ಸಹಕಾರ ಕೊಡಬೇಕು. ಪ್ರತಿಯೊಬ್ಬರು ಆರೋಗ್ಯದ ಕಡೆ ಗಮನ ಹರಿಸಬೇಕು. ಪ್ರಕೃತಿ ಜೊತೆಗೆ ನಮ್ಮ ಒಡನಾಟ ಉತ್ತಮವಾಗಿರಬೇಕು. ಆಗ ಆರೋಗ್ಯ ಉತ್ತಮವಾಗಿರುತ್ತದೆ. ನಾವು ಮನುಷ್ಯನಾಗಿ ಹುಟ್ಟಿರಬಹುದು ಆದರೆ ಸಮಾಜಕ್ಕೆ ನಮ್ಮ ಕೊಡುಗೆ ಏನು ಎಂದು ಚಿಂತಿಸಬೇಕು. ನಮ್ಮ ಹಿಂದೂ ಧರ್ಮ ಸಂಸ್ಕೃತಿ ಯುವಕರಿಗೆ ಅರಿವು ಮೂಡಿಸಬೇಕು. ಆರೋಗ್ಯವಂತರಾಗಿ ನಾವು ಬದುಕಿದರೆ ಮಾತ್ರ ನಾವು ಸಾಧನೆ ಮಾಡಲು ಸಾಧ್ಯ ಎಂದು ಹೇಳಿದರು.
ಕಾರ್ಯಕ್ರಮ ಸಂಘಟಕ, ಅಭಯ ಸೇವಾ ಫೌಂಡೇಶನ್ ಸಂಸ್ಥಾಪಕ ಎಂ.ಬಿ ಉಮೇಶ್ ಶೆಟ್ಟಿ ಅವರು ಮಾತನಾಡಿ, ದೇಶ ಶ್ರೀಮಂತವಾಗಲು, ಸಂಸ್ಕೃತಿ ಭರಿತವಾಗಲು ಸಾಧು, ಸಂತರು ನೀಡಿದ ಕೊಡುಗೆಯಿಂದ ಸಾಧ್ಯವಾಗಿದೆ. ನಾನು ಎಂಬುದು ಅಹಂಕಾರ, ನಾವೆಲ್ಲರೂ ಎಂಬುದು ಉತ್ತಮ. ಸಮಾಜದಲ್ಲಿ ಆರ್ಥಿಕವಾಗಿ ಹಿಂದುಳಿದವರು ಸಮಾಜದ ಮುಖ್ಯವಾಹಿನಿಗೆ ತರಲು ಅಭಯ ಸೇವಾ ಫೌಂಡೇಶನ್ ದಿಟ್ಟ ಹೆಜ್ಜೆ ಇಟ್ಟಿದೆ. ದೇಶದಲ್ಲಿ ಯುವ ಸಮುದಾಯ ಸರಿಯಾದ ಮಾರ್ಗದರ್ಶನದಲ್ಲಿ ಸಾಗಿದರೆ ದೇಶ ಅಭಿವೃದ್ಧಿಯಾಗುತ್ತದೆ. ಆದ್ದರಿಂದ ಸ್ವಾಮೀಜಿಗಳ ದಿವ್ಯ ಸಾನಿಧ್ಯದಲ್ಲಿ ಯುವ ಸಮುದಾಯದ ಸಂಘಟನೆ ಮೂಲಕ ಸಮಾಜ ಸೇವೆ ಮಾಡಲಾಗುತ್ತಿದೆ. ಯುವಕರು ಬನ್ನಿ ನಮ್ಮ ಜೊತೆ ಕೈಜೋಡಿಸಿ ಎಂದು ಕರೆ ನೀಡಿದರು.
ಸಮಾಜದಲ್ಲಿ ಯಕ್ಷಗಾನ ಕ್ಷೇತ್ರದಲ್ಲಿ ಸಾಧನೆ ಮಾಡಿದ ಸಾಂಸ್ಕೃತಿಕ ಚಿಂತಕರಾದ ಡಾ| ದೀಪಕ್ ಶೆಟ್ಟಿ ಬಾರ್ಕೂರು, ರಿಪಬ್ಲಿಕ್ ಕನ್ನಡ ಉಪಸಂಪಾದಕರಾದ ಜಯಪ್ರಕಾಶ್ ಶೆಟ್ಟಿ ಉಪ್ಪಳ ಮತ್ತು ಸಮಾಜ ಸೇವಕರಾದ ರವಿ ಕಟಪಾಡಿರವರಿಗೆ ಸನ್ಮಾನಿಸಲಾಯಿತು. ರಕ್ತದಾನ ಶಿಬಿರ, ಉಚಿತ ಆರೋಗ್ಯ ತಪಾಸಣೆ ಶಿಬಿರ ಮತ್ತು ವಿವಿಧ ಸಾಂಸ್ಕೃತಿಕ ಕಾರ್ಯಕ್ರಮ ಹಮ್ಮಿಕೊಳ್ಳಲಾಗಿತ್ತು.