ಅನಾದಿ ಕಾಲದಲ್ಲಿ ವ್ಯಕ್ತಿ ಕೌಶಲತೆಯ ಆಧಾರದಲ್ಲಿ ಜನರನ್ನು ನಾಲ್ಕು ವಿಭಾಗ ವರ್ಣವಾಗಿ ವಿಂಗಡಿಸಲಾಗಿತ್ತು. ಅದೇ ಮುಂದೆ ಮಾನವತೆಗೆ ಶಾಪವಾದ ಉಚ್ಚ, ನೀಚ ಜಾತಿ ಪದ್ಧತಿ ಕಾರಣವಾಯಿತು. ಅದರೊಂದಿಗೆ ಮೇಲು ಕೀಳು ಅಸ್ಪಶ್ಯತೆಯು ಅಂಟಿಕೊಂಡಿತು. ಅದರ ಆಧಾರದಲ್ಲಿಯೇ ಕಲಕಸುಬು ಹಂಚಲಾಯಿತು. ಸ್ವಾತಂತ್ರ್ಯ ನಂತರದ ಭಾರತದಲ್ಲಿ ಕಲಕಸುಬುಗಳು ಜಾತಿವರ್ಣಗಳಿಂದ ಹೊರಬಂದು ವ್ಯಕ್ತಿಗೆ (ಕೆಲಸ) ಬುದ್ಧಿ ಕೌಶಲ್ಯವೇ ಮಾನದಂಡವಾಯಿತು. ಮುಂದುವರಿದ ರಾಷ್ಟ್ರಗಳಲ್ಲಿ ಮಕ್ಕಳಿಗೆ 15 ವರ್ಷ ಪ್ರಾಯವಾಗುವಾಗಲೇ ಅವನ ಇಚ್ಛೆಯನ್ನು ಅರಿತು ಅವರಿಗೆ ಐಚ್ಚಿಕ ಶಿಕ್ಷಣ ಕೊಡುತ್ತಿದ್ದಾರೆ. ಪೌರೋಹಿತ್ಯ, ಕರಕುಶಲ, ಬಡಗಿ, ಅಕ್ಕಸಾಲಿಗ, ಕಮ್ಮಾರ, ಮಡಿಕೆ ತಯಾರಿ, ಬುಟ್ಟಿ, ಚಾಪೆ ತಯಾರಿ ಕಲ್ಲು ಕಟ್ಟುವ, ಮೀನು ಹಿಡಿಯುವುದು ಇತ್ಯಾದಿಯಾಗಿ ಎಲ್ಲವೂ ಜಾತಿ ಆಧಾರಿತವಾಗಿತ್ತು. ಪ್ರಸ್ತುತ ಶಾಸ್ತ್ರ ಕಲಿತರೆ ಪುರೋಹಿತ್ಯವನ್ನು ದಲಿತನು ಮಾಡಬಹುದಾಗಿದೆ. ಮೇಲಿನ ಯಾವ ಕಸುಬುಗಳು ಇಂದು ಜಾತಿ ಆಧಾರಿತವಾಗಿಲ್ಲ.
ಆದರೆ ತೌಳವ ಮೂಲದ ಪ್ರಕೃತಿ ಶಕ್ತಿಗಳಾದ ದೈವರಾದನೆ ಮಾತ್ರ ಇಂದೂ ಕೂಡ ಜಾತಿ ಸೀಮಿತವಾಗಿಯೇ ನೆಲೆ ನಿಂತಿರುವುದು ಅಚ್ಚರಿಯಾದರೂ ಇದು ಅಪ್ಪಟ ಸತ್ಯ. ಇತ್ತೀಚೆಗೆ ಬಹಳ ಚರ್ಚೆಯಾಗುತ್ತಿರುವ ಸುದ್ದಿ ಎಂದರೆ ಭೂತಾರಾಧನೆಗಳನ್ನು ಯಕ್ಷಗಾನ, ನಾಟಕ, ಸಿನಿಮಾಗಳಲ್ಲಿ ಎಲ್ಲಾ ಜಾತಿಯವರು ಅಭಿನಯಿಸುತ್ತಾರೆ. ಹಾಗಿರುವಾಗ ತುಳುನಾಡಿನ ಕೊಡಿಯಡಿಯಲ್ಲಿ ಯಾಕೆ ಆಸಕ್ತಿ ಇದ್ದವರೆಲ್ಲ ಕಟ್ಟಬಾರದು? ಇತ್ಯಾದಿ ಚರ್ಚೆ ಸ್ವಾಭಾವಿಕ. ಒಂದು ಹಂತದಲ್ಲಿ ಕೊಡಿಯಡಿ ಮುಂದಿನ ದೈವ ನರ್ತಕರನ್ನು ಮೀರಿಸುವ ಅಬ್ಬರದ ದೈವಗಳನ್ನು ಕಲಾ ರಂಗದಲ್ಲಿ ಕಾಣಲು ಸಾಧ್ಯವಾಗಬಹುದು. ಆದರೆ ಚಿಂತಿಸಬೇಕಾದ ಪ್ರಧಾನ ಅಂಶವೆಂದರೆ ದೈವಾರಧಕನಿಗೆ ಅದರದೇ ಆದ ಮೂಲ ನಂಬಿಕೆ ಕಟ್ಟಲೆಗಳಿದ್ದು, ಕೊಡಿ ಅಡಿಯ ಮುಂದೆ ಊರ ಹತ್ತು ಸಮಸ್ತರನ್ನು ಮುಂದಿಟ್ಟು ಕುಟುಂಬದ ಹಿರಿಯ ವ್ಯಕ್ತಿ ಕಟ್ಟಿದ ಮಾಣಿಯಲ್ಲಿ ದೈವ ಆವೇಶ ಆಗಲೆಂದು ಪ್ರಾರ್ಥಿಸಿ, ಪೂವರಿ ಹಾಕಿದರೆ ಮಾತ್ರ ದೈವ ನರ್ತಕನ ಶರೀರಕ್ಕೆ ದೈವಶಕ್ತಿ ಪ್ರವೇಶವಾದರೆ ಮಾತ್ರ ಅದು ದೈವ ಆಗುತ್ತದೆ. ಅದೇ ದೈವ ನರ್ತಕನು ಎಣ್ಣೆಬೂಲ್ಯ ಪಡೆಯುವ ಮೊದಲು ದೂರ ನಿಂತು ಯಜಮಾನನ ಪಾದಕ್ಕೆ ಶಿರಬಾಗುತ್ತಾನೆ. ಆದರೆ ಅದೇ ಮಾಣಿ ಆನಂತರದಲ್ಲಿ ಯಜಮಾನರು ಇತರೆ ಎಲ್ಲರನ್ನೂ ಏಕವಚನದಲ್ಲಿ ಕರೆದು ಹೆಚ್ಚು ಕಮ್ಮಿ ಲೋಪ ದೋಷಗಳು ಇದ್ದರೆ ನ್ಯಾಯಾಧೀಶನ ಸ್ಥಾನದಲ್ಲಿ ದೈವ ನುಡಿಯುವಾಗ ಆಗಿ ಹೋದ ತಪ್ಪಿಗೆ ಕ್ಷಮೆ ಕೋರಿ ತಲೆ ತಗ್ಗಿಸಿ ಕಣ್ಣೀರು ಹಾಕಿಸುವ ಮಾಯಾಶಕ್ತಿಯು ರಂಗ ಕಲೆಯಲ್ಲಿ ಬರಲು ಸಾಧ್ಯವೇ?
ಅಪೇಕ್ಷೆ ಧಗ ಧಗ ಉರಿಯುತ್ತಿರುವ ಜ್ವಾಲಾಗ್ನಿಗೆ ಹಾಕುತ್ತಿರುವ ವಿಷ್ಣುಮೂರ್ತಿ, ಮೂಕಾಂಬಿಕ ಗುಳಿಗ, ಕಲ್ಲುಟ್ಟಿ, ಲೆಕ್ಕೆಸಿರಿ ಅಗ್ನಿ ಗುಳಿಗ ದೈವಗಳನ್ನು ಕಟ್ಟಿ ರಂಗಭೂಮಿ ಕಲಾವಿದ ಶೆಟ್ರಿಗೆ ಅಗ್ನಿಪವೇಶ ಸಾಧ್ಯವೇ? ದೈವಗಳೊಂದಿಗೆ ದೈವದ ಪರಿಚಾಲಕರು ಖಡ್ಗ ಝಳಪಿಸಿ ಎದೆಗೆ ಕಡಿಯಲು ಯಾವ ರಂಗ ಕಲಾವಿದರು ಮುಂದೆ ಬಂದಾರು? ಖಂಡಿತ ಇದೆಲ್ಲ ಅಸಾಧ್ಯ ಮಾತು. ಅದಕ್ಕಾಗಿ ತುಳುನಾಡಿನಲ್ಲಿ ದೀರ್ಘಕಾಲ ರಾಜ್ಯಭಾರ ಮಾಡಿದ ಆಲೂಪ ಅರಸರ ಕಾಲದಲ್ಲಿಯೇ ದೈವ ನರ್ತಕರಾಗಿ ನಲ್ಕೆದಾಯ, ಪರವ, ಪಂಬದ, ಪಣಿಕ್ಕರ್, ವಣ್ಣನ್, ನೆಕ್ಕಾರರು ಮುಂತಾದ ಜನಾಂಗಗಳನ್ನು ಆರಿಸಲಾಗಿದೆ. ಅಂತೆಯೇ ದೈವದ 16 ಕಟ್ಟಲೆಗಳಿಗೆ ವಿವಿಧ ಚಾಕರಿ ವರ್ಗಗಳನ್ನು ನೇಮಿಸಲಾಗಿದೆ. ದೈವ ನರ್ತಕರಿಗೆ ಪರಂಪರಾಗತ ಅಜಲು ಪದ್ದತಿಗಳನ್ನು ಸೀಮೆ ಅರಸರ ಕಾಲದಲ್ಲಿ ವಿಂಗಡಿಸಿ ಕೊಟ್ಟಿರುತ್ತಾರೆ. ಇಂದು ಕೂಡ ಪೂರ್ವದಲ್ಲಿ ವಿಧಿಸಿದ ಗಡಿ ದಾಟಿ ದೈವ ನರ್ತನ ಮಾಡುವಂತಿಲ್ಲ. ಇಂದು ಆ ವರ್ಗದವರು ವಿದ್ಯೆ ಕಲಿತು ಬೇರೆ ಸ್ಥಿರ ಉದ್ಯೋಗದಲ್ಲಿದ್ದರೂ ದೈವ ಚಾಕರಿಗೆ ರಜೆ ಹಾಕಿ ಬಂದು ನಿಷ್ಠೆಯಿಂದ ಸೇವೆ ಮಾಡುವುದನ್ನು ಕಾಣುತ್ತಿದ್ದೇವೆ. ಯಕ್ಷಗಾನ, ನಾಟಕ, ಸಿನಿಮಾಗಳಲ್ಲಿ ಪುರಾಣದ ರಾಮಾಯಣ, ಮಹಾಭಾರತ, ದೇವಿ ಚರಿತ್ರೆಗಳಲ್ಲಿ ಬರುವ ದೇವಾನುದೇವತೆಗಳಿಗೆ ರೂಪ, ಭಾವ, ಪರಾಕ್ರಮ ತುಂಬಿಸಿ ಹೆಚ್ಚು ಹೆಚ್ಚು ಜೀವಂತಿಕೆ ತುಂಬಿಸಿರಬಹುದು. ಆದರೆ ತುಳುನಾಡಿನ ದೈವ, ದೈವರಾಧನೆ ಕಾಲಾತೀತವೂ ಮತ್ತು ಅಲಿಖಿತವೂ ಆದ ತೌಳವ ಮಣ್ಣಿನ ನೆಲೆಯ ಕಲೆ. ಅದೆಷ್ಟು ವಿದೇಶಿಗಳು ಈ ದೇಶವನ್ನು ಆಕ್ರಮಿಸಿ ಆಳಿದರೂ, ತೌಳವ ನೆಲದ ದೈವ ಶಕ್ತಿಗಳಿಗೆ ಯಾವುದೇ ಚ್ಯುತಿ ಮಾಡದೆ ಗೌರವ ಸಲ್ಲಿಸಿದ್ದು ಮಾತ್ರವಲ್ಲ ದೈವರಾಧನೆಯ ಮೂಲ ಸಂಧಿ ಪಾರ್ದನಗಳನ್ನು ಕೇಳಿ, ಕಲಿತು ಅವರ ಭಾಷೆಗಳಲ್ಲಿ ದಾಖಲಿಸಿರುತ್ತಾರೆ. ಕಾಲಗತಿಯಲ್ಲಿ ಎಷ್ಟೇ ಏರುಪೇರು ಸಂಭವಿಸಿದರೂ ಈ ತೌಳವ ನೆಲದಲ್ಲಿ ದೈವಾರಾದನೇ ಶಾಶ್ವತ ಇರಲಿದೆ.
ಕಡಾರು ವಿಶ್ವನಾಥ್ ರೈ