ವಿದ್ಯಾಗಿರಿ : ದೇಶದಲ್ಲಿ ಪ್ರಸ್ತುತ ಬಾಧಿಸುತ್ತಿರುವ ಕ್ಯಾನ್ಸರ್ ಗಳ ಪಟ್ಟಿಯಲ್ಲಿ ಗರ್ಭಕಂಠದ ಕ್ಯಾನ್ಸರ್ ಎರಡನೇ ಸ್ಥಾನದಲ್ಲಿದ್ದು, ಪ್ರತಿ 8 ನಿಮಿಷಕ್ಕೆ ಒಬ್ಬ ಮಹಿಳೆ ಬಲಿಯಾಗುತ್ತಿದ್ದಾಳೆ ಎಂದು ಎ.ಜೆ. ವೈದ್ಯಕೀಯ ವಿಜ್ಞಾನಗಳ ಸಂಸ್ಥೆ ಮತ್ತು ಸಂಶೋಧನಾ ಕೇಂದ್ರದ ಸಮುದಾಯ ವೈದ್ಯಕೀಯ ವಿಭಾಗದ ಪ್ರಾಧ್ಯಾಪಕಿ ಡಾ. ಮರಿಯಾ ನೆಲ್ಲಿಯನಿಲ್ ಹೇಳಿದರು.
ಆಳ್ವಾಸ್ ಶಿಕ್ಷಣ ಪ್ರತಿಷ್ಠಾನ(ರಿ)ವು ವಿದ್ಯಾಗಿರಿಯ ಡಾ. ವಿ.ಎಸ್ ಆಚಾರ್ಯ ಸಭಾಂಗಣದಲ್ಲಿ ಮೂಡುಬಿದಿರೆ ರೋಟರಿ ಕ್ಲಬ್ ಸಹಯೋಗದಲ್ಲಿ ಹಮ್ಮಿಕೊಂಡ ‘ಗರ್ಭಕಂಠದ ಕ್ಯಾನ್ಸರ್ ಮತ್ತು ಎಚ್ಪಿವಿ (ಹ್ಯೂಮನ್ ಪ್ಯಾಪಿಲೋಮ ವೈರಸ್) ಲಸಿಕೆ ಬಗ್ಗೆ ಅರಿವು’ ಕಾರ್ಯಕ್ರಮದಲ್ಲಿ ಅವರು ಮಾತನಾಡಿದರು. ಎಚ್ಪಿವಿ ಸೋಂಕು ನಿಯಂತ್ರಣಕ್ಕಾಗಿ ದೇಶದಲ್ಲಿ ಶೇಕಡಾ 1 ರಷ್ಟು ಜನ ಲಸಿಕೆ ಪಡೆದುಕೊಳ್ಳುತ್ತಿದ್ದು, ಶೇಕಡಾ 2 ರಷ್ಟು ಜನ ಸ್ಕ್ರೀನಿಂಗ್ ಗೆ ಒಳಪಟ್ಟಿದ್ದಾರೆ ಎಂದರು.
ಎಚ್ಪಿವಿ ಸೋಂಕು ಮಾತ್ರವಲ್ಲದೇ ಧೂಮಪಾನ, ಅಸುರಕ್ಷಿತ ಲೈಂಗಿಕ ಕ್ರಿಯೆ, ಬಹು ಗರ್ಭಧಾರಣೆ ಇನ್ನಿತರ ಅಂಶಗಳು ಗರ್ಭಕಂಠದ ಕ್ಯಾನ್ಸರ್ಗೆ ಕಾರಣವಾಗುವ ಅಂಶಗಳೆಂದು ಹೇಳಲಾಗುತ್ತದೆ ಎಂದು ವಿಶ್ಲೇಷಿಸಿದರು. ಎಚ್ಪಿವಿ ಲಸಿಕೆಯಿಂದ ಮುಂಜಾಗ್ರತೆ ಹಾಗೂ ರಕ್ಷಣೆ ಸಿಗುತ್ತದೆ ಎಂದರು.
25 ರಿಂದ 64 ವರ್ಷದ ಮಹಿಳೆಯರಲ್ಲಿ ನಿಯಮಿತ ಪ್ಯಾಪ್ಸ್ಮಿ ಯರ್ ಪರೀಕ್ಷೆ (Pಚಿಠಿ Smeಚಿಡಿ ಖಿesಣ) ಅಥವಾ ಎಚ್ಪಿವಿ ಪರೀಕ್ಷೆ (ಊPಗಿ ಖಿesಣiಟಿg) ಮೂಲಕ ಮಾತ್ರ ರೋಗ ಲಕ್ಷಣಗಳನ್ನು ಗುರುತಿಸಿ ಚಿಕಿತ್ಸೆ ನೀಡಬಹುದು. 12ರಿಂದ 13ವರ್ಷ ವಯಸ್ಸಿನಲ್ಲಿ ಮಕ್ಕಳಿಗೆ ಎಚ್ಪಿವಿ ಲಸಿಕೆ ನೀಡುವ ಮೂಲಕ ಎಚ್ಪಿವಿಯ ಕ್ಯಾನ್ಸರ್ ವಿರುದ್ಧ ಹೋರಾಡಲು ಸಾಧ್ಯವಾಗುತ್ತದೆ ಎಂದರು.
ಕಾಲೇಜಿನ ಡಾ ಶಿವರಾಮ ಕಾರಂತ ವೇದಿಕೆಯಲ್ಲಿ ನಡೆದ ಕಾರ್ಯಕ್ರಮದಲ್ಲಿ ಎ.ಜೆ. ವೈದ್ಯಕೀಯ ವಿಜ್ಞಾನಗಳ ಸಂಸ್ಥೆ ಮತ್ತು ಸಂಶೋಧನಾ ಕೇಂದ್ರದ ಸಮುದಾಯ ವೈದ್ಯಕೀಯ ವಿಭಾಗದ ಸಹ ಪ್ರಾಧ್ಯಾಪಕಿ ಡಾ ಸುಶಾಂತ ಪೆರ್ಡೂರು ಮಾತನಾಡಿ, ಎಚ್ಪಿವಿ ಸೋಂಕಿಗೆ ಒಳಪ್ಪಟ್ಟ ಮಹಿಳೆ ಲಸಿಕೆಯನ್ನು ಪಡೆಯುವುದರ ಜೊತೆಗೆ ಸ್ಕ್ರೀನಿಂಗ್ಗೆ ಒಳಪಡಲು ವೈದ್ಯರು ಸಲಹೆ ನೀಡುತ್ತಾರೆ. ಈ ಲಸಿಕೆಯು ಸುರಕ್ಷಿತ, ಪರಿಣಾಮಕಾರಿ ಮತ್ತು ಗರ್ಭಕಂಠದ ಕ್ಯಾನ್ಸರ್ ಅನ್ನು ತಡೆಗಟ್ಟುವಲ್ಲಿ ಪ್ರಮುಖ ಪಾತ್ರವನ್ನು ವಹಿಸುತ್ತದೆ ಎಂದರು. ಕ್ಯಾನ್ಸರ್ ಉಂಟಾಗುವ ಮುನ್ನ ಗರ್ಭಕಂಠದಲ್ಲಿ ಆಗುವ ಬದಲಾವಣೆಗಳನ್ನು ಸ್ಕ್ರೀನಿಂಗ್ ಮೂಲಕವೇ ಪತ್ತೆಹಚ್ಚಲು ಸಾಧ್ಯ. ಗರ್ಭಕಂಠದ ಕ್ಯಾನ್ಸರ್ ಆರಂಭದಲ್ಲಿ ಯಾವುದೇ ರೋಗ ಲಕ್ಷಣಗಳನ್ನು ಹೊಂದಿರುವುದಿಲ್ಲ. ಕ್ರಮೇಣವಾಗಿ ಲಕ್ಷಣಗಳು ಕಂಡುಬರುತ್ತವೆ. ಕ್ಯಾನ್ಸರ್ ತೀವ್ರತೆಯು ಗಾತ್ರ, ಹರಡುವಿಕೆ ಮತ್ತು ಒಟ್ಟಾರೆ ಆರೋಗ್ಯದಂತಹ ಅಂಶಗಳ ಮೇಲೆ ಅವಲಂಬಿತವಾಗಿರುತ್ತದೆ ಎಂದರು.
6 ವರ್ಷದಿಂದ ಮೇಲ್ಪಟ್ಟ ಹೆಣ್ಣು ಈ ಲಸಿಕೆಯನ್ನು ಪಡೆಯಲು ಅರ್ಹರಾಗಿರುತ್ತಾಳೆ. ಗರ್ಭ ಕಂಠದ ಕ್ಯಾನ್ಸರ್ ಸಾಮಾನ್ಯವಾಗಿ 25 ರಿಂದ 40 ವರ್ಷದೊಳಗಿನ ಮಹಿಳೆಯರಲ್ಲಿ ಕಂಡುಬರುತ್ತದೆ. ಸೂಕ್ತ ಸಮಯದಲ್ಲಿ ವೈದ್ಯರನ್ನು ಸಂಪರ್ಕಿಸಿ ಚಿಕಿತ್ಸೆ ತೆಗೆದುಕೊಂಡರೆ ಸಮಸ್ಯೆಯನ್ನು ಹತೋಟಿಗೆ ತರಬಹುದು. ಆದರೆ ಲಸಿಕೆ ಪಡೆಯಲು ಯಾವುದೇ ಲಿಂಗ ತಾರತಮ್ಯವಿಲ್ಲ ಎಂದು ಅವರು ಹೇಳಿದರು.
ಆಳ್ವಾಸ್ ಆರೋಗ್ಯ ಕೇಂದ್ರದ ಸ್ತ್ರೀರೋಗತಜ್ಞೆ ಡಾ ಹನಾ ಶೆಟ್ಟಿ ಮಾತನಾಡಿ, ರಾಜ್ಯದಲ್ಲಿ ಗರ್ಭಕಂಠದ ಕ್ಯಾನ್ಸರ್ ನಿಯಂತ್ರಿಸುವ ಎಚ್ಪಿವಿ ಲಸಿಕೆಗೆ ಸುಮಾರು 1,700 ರೂಪಾಯಿ ಬೆಲೆ ಇದೆ. ಮೂಡುಬಿದಿರೆ ರೋಟರಿ ಕ್ಲಬ್ನ ಸಹಯೋಗದಲ್ಲಿ ಆಳ್ವಾಸ್ ಶಿಕ್ಷಣ ಪ್ರತಿಷ್ಠಾನದ ಎಲ್ಲಾ ವಿದ್ಯಾರ್ಥಿನಿಯರಿಗೆ ಕೇವಲ 500 ರೂಪಾಯಿಗೆ ಲಸಿಕೆಯನ್ನು ಪಡೆಯುವ ಸದಾವಕಾಶವಿದೆ ಎಂದರು. ಎಜೆ, ಕೆಎಂಸಿ ಅತ್ತಾವರ ಹಾಗೂ ಅಥೆನಾ ಆಸ್ಪತ್ರೆಯ ವೈದ್ಯರುಗಳ ತಂಡದಿಂದ ಅಕ್ಟೋಬರ್ 15 ರಿಂದ 22 ವರೆಗೆ ಆಳ್ವಾಸ್ ಸಂಸ್ಥೆಯ ವಿವಿಧ ಕಾಲೇಜುಗಳ ವಿದ್ಯಾರ್ಥಿನಿಯರಿಗೆ ಉಪನ್ಯಾಸ ಕರ್ಯಕ್ರಮ ಹಮ್ಮಿಕೊಳ್ಳಲಾಗಿದೆ ಎಂದರು. ಹೆಚ್ಚಿನ ಸಂಖ್ಯೆಯಲ್ಲಿ ಸಂಸ್ಥೆಯ ವಿದ್ಯಾರ್ಥಿನಿಯರು ಲಸಿಕೆಯನ್ನು ಪಡೆದುಕೊಳ್ಳಲು ಮುಂಬರಬೇಕು, ಸ್ಥಳೀಯರಲ್ಲಿ ಗರ್ಭಕಂಠದ ಕ್ಯಾನ್ಸರ್ ಮತ್ತು ಲಸಿಕೆ ಬಗ್ಗೆ ಅರಿವು ಮೂಡಿಸುವ ಕಾರ್ಯವನ್ನು ಮಾಡಬೇಕು ಎಂದು ಅವರು ಸಲಹೆ ನೀಡಿದರು.
ಮೂಡುಬಿದಿರೆ ರೋಟರಿ ಕ್ಲಬ್ನ ಕರ್ಯದರ್ಶಿ ರತ್ನಾಕರ್ ಜೈನ್ ಇದ್ದರು. ಸ್ನಾತಕೋತ್ತರ ಇಂಗ್ಲಿಷ್ ವಿಭಾಗದ ಸಹಾಯಕ ಪ್ರಾಧ್ಯಾಪಕಿ ಐಶ್ವರ್ಯ ಎಂ ಎನ್ ಮತ್ತು ಸಮನ್ ಸೈಯ್ಯದ್ ಕಾರ್ಯಕ್ರಮ ನಿರೂಪಿಸಿದರು..