ಅರಬ್ ಸಂಯುಕ್ತ ಸಂಸ್ಥಾನದ ವಾಣಿಜ್ಯ ನಗರಿ ದುಬಾಯಿಯಲ್ಲಿ ಪ್ರಥಮ ಬಾರಿಗೆ ದಸರಾ ನವರಾತ್ರಿ ಉತ್ಸವದಲ್ಲಿ 2024 ಅಕ್ಟೋಬರ್ 11ನೇ ತಾರೀಕು ಶುಕ್ರವಾರ ಸಂಜೆ 4.00 ಗಂಟೆಯಿಂದ ದುಬಾಯಿ ಅಲ್ ಸಫಾದಲ್ಲಿರುವ ಜೆ. ಎಸ್. ಎಸ್. ಪ್ರವೈಟ್ ಸ್ಕೂಲ್ ಸಭಾಂಗಣದಲ್ಲಿ ಅತ್ಯಂತ ಭಕ್ತಿ ಭಾವದಿಂದ ನೆರವೇರಿತು.


ದುಬಾಯಿಯಲ್ಲಿ ಪ್ರಥಮ ಬಾರಿಗೆ ದುರ್ಗಾ ಮಾತೆಯ ವಿಗ್ರಹವನ್ನು ಪ್ರತಿಷ್ಠಾಪಿಸಿ ಕೊಲ್ಲೂರಿನಿಂದ ಪುರೋಹಿತರಾದ ಪಂಡಿತ್ ಶ್ರೀ ಶೇಷಗಿರಿ ಭಟ್ ಮತ್ತು ಶ್ರೀ ಸಂಜೀವ ಹೆಗ್ಡೆ ಮತ್ತು ಕಿರಣ್ ಕುಮಾರ್ ಭಟ್ ರವರ ಪೌರೋಹಿತ್ಯದಲ್ಲಿ ಗುರುವಂದನೆ, ಶಾಂತಿ ಮಂತ್ರ, ಗಣಪತಿ ಪೂಜೆ ಮಹಾ ಸಂಕಲ್ಪ, ದೀಪಾ ಪ್ರತಿಷ್ಠಾಪನೆ ಅಹ್ವಾನ ಪೂಜೆ, ಲಲಿತಾ ಸಹಸ್ರನಾಮ ಪಠಣ, ಕುಂಕುಮಾರ್ಚನೆ, ಆರತಿ ಮತ್ತು ದುರ್ಗಾ ನಮಸ್ಕಾರ, ನವ ದುರ್ಗಾ ಪ್ರಾರ್ಥನೆ ಮತ್ತು ರಾಜೋಪಚಾರ, ಸಂಗೀತ ಸೇವೆ, ನೃತ್ಯ ಸೇವೆ, ಮಹಾ ಮಂಗಳಾರತಿ, ಕನ್ನಿಕಾ ಪೂಜೆ, ಸುಮಂಗಲಿ ಪೂಜೆ, ಮತ್ತು ಸಾಮೂಹಿಕ ಪ್ರಾರ್ಥನೆ, ತೀರ್ಥ ಪ್ರಸಾದ ಮತ್ತು ಮಹಾ ಪ್ರಸಾದವನ್ನು ಭಕ್ತಾದಿಗಳು ಸ್ವೀಕರಿಸಿದರು.


ದುರ್ಗಾ ಮಾತೆಯ ನಿರ್ಮಾಣ ಮಾಡಿರುವ ವಿಗ್ರಹ ಶಿಲ್ಪಿ ಶ್ರೀ ಬಿ. ಕೆ. ಗಣೇಶ್ ರೈ ದಂಪತಿಗಳನ್ನು ಸನ್ಮಾನಿಸಿ ಗೌರವಿಸಲಾಯಿತು.



ದುಬಾಯಿಯಲ್ಲಿ ಪ್ರಥಮ ಬಾರಿಗೆ ಸಾಮೂಹಿಕವಾಗಿ ದಸರಾ ನವರಾತ್ರಿ ಉತ್ಸವದಲ್ಲಿ ಭಾರತದ ಎಲ್ಲಾ ಭಾಷಿಗರು ಭಾಗವಹಿಸಿದ್ದರು. ಶ್ರೀಯುತ ನವೀನ್ ಸುವರ್ಣ, ಶ್ರೀ ಪದ್ಮರಾಜ್ ಎಕ್ಕಾರ್ ಮತ್ತು ಶ್ರೀ ಸದನ್ ದಾಸ್ ಒಗ್ಗೂಡಿ ಆಯೋಜಿಸಿದ ಪೂಜೆಯಲ್ಲಿ ಸುಮಂಗಲೆಯರ ತಂಡ ಮತ್ತು ಯುವಕರ ತಂಡ ಸಂಪೂರ್ಣ ಸಹಕಾರದೊಂದಿಗೆ ಶಾಸ್ತ್ರೋಕ್ತವಾಗಿ ನಡೆದ ಪೂಜೆಯಲ್ಲಿ ಪಾಲ್ಗೊಂಡಿರುವ ಭಕ್ತಾದಿಗಳು ಪುನೀತರಾದರು. ದುಬಾಯಿಯಲ್ಲಿ ಭಾರತೀಯ ಧಾರ್ಮಿಕ ಆಚರಣೆಯನ್ನು ಆಚರಿಸಲು ಅವಕಾಶ ಕಲ್ಪಿಸಿ ಕೊಟ್ಟಿರುವ ದುಬಾಯಿ ಆಡಳಿತ ಸರ್ಕಾರ ಮತ್ತು ಶೇಕ್ ದೊರೆಗಳು ಸಾರ್ವಕಾಲಿಕ ಮಾನ್ಯರು.
ಬಿ. ಕೆ. ಗಣೇಶ್ ರೈ
ದುಬಾಯಿ








































































































