ಹೆಣ್ಣು ಅಬಲೆ ಅವಳ ರಕ್ಷಣೆಗಾಗಿ ಗಂಡು ಜೊತೆಗಿರಲಿ ಎಂಬ ವಾದ ಎಷ್ಟರ ಮಟ್ಟಿಗೆ ಸರಿ ಎನ್ನುವುದು ನನಗಿನ್ನೂ ಅರ್ಥ ಆಗಲಿಲ್ಲ. ಪುರಾಣದ ಪುಟಗಳನ್ನು ತೆರೆದಂತೆ ಜಗತ್ತಿನ ಬಲಶಾಲಿ ಯೋಧರ ಸಾಲಿನಲ್ಲಿ ನನಗೆ ಹೆಚ್ಚಾಗಿ ಕಾಣುವುದು ಹೆಣ್ಣೇ. ಅದೆಷ್ಟೋ ಧರ್ಮ ಯುದ್ಧಗಳಿಗೆ ಪಾಂಚಜನ್ಯ ಆಗಿರುವುದು ಕೂಡ ಹೆಣ್ಣೇ. ಧರ್ಮ ಕಾರ್ಯದ ಆರಂಭ ಕೊನೆ ಎಲ್ಲವೂ ಒಂದಲ್ಲ ಒಂದು ರೀತಿಯಲ್ಲಿ ಹೆಣ್ಣೇ. ಮಂಥರೆಯ ಕುತಂತ್ರಕ್ಕೆ ರಾಮಾಯಣ ಶುರುವಾದರೆ, ಶೂರ್ಪನಖಿಯ ಸೇಡು, ಕೈಕೇಯಿಯ ಕೇಡು, ಸೀತೆಯ ಪಾಡು, ಇದುವೇ ಅಲ್ವಾ ರಾಮಾಯಣದ ಯುದ್ಧಕ್ಕೆ ಜಾಡು. ಇನ್ನು ಮಹಾಭಾರತ ನಡೆದದ್ದೇ ಜಾರಿದ ಹೆಣ್ಣಿನ ಸೆರಗಿನಿಂದ ಅಂದರೆ ತಪ್ಪಲ್ಲ. ಮಹಾಭಾರತದಲ್ಲೂ ಹೆಣ್ಣಿನದ್ದೇ ಮೇಲುಗೈ. ಕುಂತಿಯ ಕುತೂಹಲ, ದ್ರೌಪದಿಯ ಸೇಡು, ಗಾಂಧಾರಿಯ ಕಣ್ಕಟ್ಟು, ಇವೆಲ್ಲಾ ಧರ್ಮಕಾರ್ಯಕ್ಕೆ ಹೆಣ್ಣುತೆತ್ತ ಬೆಲೆ, ತ್ಯಾಗ ಇರಬಹುದೇನೋ. ಧರ್ಮ ರಕ್ಷಣೆಯ ಅದೆಷ್ಟೋ ಸಂದರ್ಭದಲ್ಲಿ, ಸಾವನ್ನು ಗೆದ್ದೇ ಎಂದು ಮೆರೆಯುತ್ತಿದ್ದ ಅದೆಷ್ಟೋ ರಾಕ್ಷಸ ಸಂಹಾರ ಹೆಣ್ಣಿನಿಂದಲೇ ಆಗಿದೆ. ಹುಟ್ಟಿಸಿ ಜೀವ ನೀಡುವ ತಾಯಿ ಒಡಲ ಬಸಿದು ಕೊಲ್ಲುವ ಧರ್ಮ ರಕ್ಷಕಿ ಕೂಡ ಹೌದು.
ರಾಕ್ಷಸ ಸಂಹಾರ ಕಷ್ಟ ಆದಾಗ ಆದಿಮಾಯೆಯ ಮೊರೆ ಹೋಗುವ ದೇವತೆಗಳು, ಭಸ್ಮಾಸುರನನ್ನು ಹಿಡಿ ಭಸ್ಮದಲ್ಲಿ ಸುಟ್ಟ ಮೋಹಿನಿ, ಮಹಿಷಾಸುರನ ಸೀಳಿದ ಮಹಿಷ ಮರ್ದಿನಿ, ರಕ್ತಬೀಜರ ಹುಟ್ಟಡಗಿಸಿದ ಚಂಡ ಮುಂಡರ ರುಂಡವ ಚೆಂಡಾಡಿದವಳು ಹೆಣ್ಣೇ. ಹೆಣ್ಣು ಒಲಿದರೆ ನಾರಿ ಮುನಿದರೆ ಮಾರಿ ಎಂಬ ಮಾತು ಸತ್ಯ. ಹಾಗಾದರೆ ಅಂದಿನ ಆ ಶಕ್ತಿ ಈಗ ಎಲ್ಲಿ ಅಡಗಿದೆ. ಗರ್ಭಗುಡಿಯನ್ನೇ ಹೊತ್ತು ತಿರುಗುವ ಆಕೆ ಯಾವ ದಿಗ್ಬಂಧನದ ಭಯದಲ್ಲಿದ್ದಾಳೆ?
ಬೆಳಕ ರೂವಾರಿ ಯಾಕೆ ಕತ್ತಲೆಗೆ ಹೆದರುತ್ತಿದ್ದಾಳೆ? ಈಗ ರಾಕ್ಷಸರಿಗಿಂತ ಭಯ ಮಾನವನದ್ದೇ ಏನೋ, ಹಾಗಾದರೆ ಅಷ್ಟು ಭಯಂಕರವಾಯಿತಾ ಬದುಕು. ಕಳೆದುಕೊಂಡದ್ದು ಶಕ್ತಿಯೊ? ನಂಬಿಕೆಯೋ? ಹಾಗಾದರೆ ಮತ್ತೆ ಹುಟ್ಟುಬಹುದೇ ನಮ್ಮ ಒಳಗೆ ಅವಿತಿರೋ ಆದಿಮಾಯೆ? ಮತ್ತೆ ಬರೆಯಬಲ್ಲೆವಾ ನಾವು ಒಂದು ಧರ್ಮ ಕಾರ್ಯದ ಹೊಸ ಅಧ್ಯಾಯ? ಮತ್ತೆ ಮರಳುವುದೇ ಒಡಲ ಕಡಲಲಿ ಧೈರ್ಯದ ಅಲೆ. ಗರ್ಭಗುಡಿಯಲ್ಲಿ ಬೆಳಕ ಹೆರುವ ಹೆಣ್ಣು, ಅಧರ್ಮವಾದಾಗ ಊರ ಸುಡುವ ಬೆಂಕಿಯೂ ಆಗಬಹುದು ಎನ್ನುವ ಮಾತು ಹೆಣ್ಣು ಅರಿಯುವುದು ಯಾವಾಗ? ಯಾವಾಗ ಪ್ರಪಂಚ ಅರಿಯುವುದು?
ಯಾವಾಗ…?!
ಲೇಖಕರು : ತೇಜಸ್ವಿನಿ