ಪ್ರತಿಯೊಬ್ಬ ಭಕ್ತನೂ ಅನಾದಿ ಕಾಲದಿಂದಲೂ ತನ್ನ ನಿತ್ಯ ಜೀವನದ ಜಂಜಾಟದ ತನುಮನ ನೆಮ್ಮದಿಗಾಗಿ ಆಶ್ರಯಿಸುವ ತಾಣವೇ ದೇವಾಲಯ. ಅಲ್ಲಿನ ಪ್ರಶಾಂತತೆ, ಗರ್ಭಗುಡಿಯಲ್ಲಿರುವ ಚೈತನ್ಯ ಮೂರ್ತಿಯನ್ನು ಕಾಣುವುದರಿಂದ ಧನ್ಯತಾಭಾವ ಸಿಗುತ್ತದೆ. ಅದಕ್ಕಾಗಿ ಎಷ್ಟೇ ಕಷ್ಟ, ನಷ್ಟ, ತ್ಯಾಗವನ್ನು ಸಹಿಸಿಕೊಂಡು ಜೀವನದಲ್ಲಿ ಒಮ್ಮೆಯಾದರೂ ಪ್ರಮುಖ ದೇಗುಲಗಳಿಗೆ ಹೋಗಬೇಕು ಎಂದು ಬಯಸುವುದು ಸಹಜ. ಇತ್ತೀಚೆಗೆ ಕೆಲವು ದೇವಾಲಯಗಳ ಸಂಪತ್ತು ಬೆಳೆದು ಶ್ರೀಮಂತಿಕೆಯ ಶಿಖರ ಏರುತ್ತಿರುವುದು ಸಂತೋಷ. ಆದರೆ ದೇವರು, ದೇವಾಲಯಗಳು ಅಭಿವೃದ್ಧಿಯಾದಂತೆ ಅಲ್ಲಿ ಬಡವ ಬಲ್ಲಿದ ತಾರತಮ್ಯವನ್ನು ಗಮನಿಸುವಾಗ ದೇವರು ಕೂಡ ಬಡ ಭಕ್ತನನ್ನು ಅವಾಗಣಿಸುತ್ತಿದ್ದಾನೆಯೇ ಎಂಬ ಪ್ರಶ್ನೆ ಮೂಡುವುದು ಸಹಜ. ಕಾರಣ ಆ ಪುಣ್ಯ ಕ್ಷೇತ್ರಗಳಲ್ಲಿ ದೇವರನ್ನು ನೋಡಲು ಹಣ ಕೊಡಬೇಕಾಗಿದೆ. ಹಣವಂತಿಗೆ ವಿಐಪಿ ದರ್ಶನ ಎಂಬ ಹೆಸರಲ್ಲಿ ಶೀಘ್ರ ದರ್ಶನಕ್ಕಾಗಿ ಟಿಕೆಟ್ ವ್ಯವಸ್ಥೆ ಮಾಡಲಾಗುತ್ತಿದೆ. ದಾರಿ ಖರ್ಚಿಗೆ ಮಾತ್ರ ಹಣ ಇಟ್ಟುಕೊಂಡು ಇಂಥ ದೇಗುಲಕ್ಕೆ ಹೋಗುವ ಬಡ ಭಕ್ತರು ಧರ್ಮದರ್ಶನ ಮಾಡಲು 2-3 ದಿನ ಸರತಿ ಸಾಲಿನಲ್ಲಿ ನಿಲ್ಲಬೇಕಾಗುತ್ತದೆ. ದೇವರು ಈ ಅಸಮಾನತೆಯನ್ನು ಸಹಿಸದಿದ್ದರೂ ದೈವಜ್ಞರು, ಆಡಳಿತ ಮಂಡಳಿಯವರು ಸೇರಿ ದೇವರಿಗೆ ಮಂಕುಬೂದಿ ಎರಚುತ್ತಿರಬೇಕು ಎಂದೆನ್ನಿಸುತ್ತಿದೆ. ಈ ಪರಿಸ್ಥಿತಿ ಈಗ ನಮ್ಮ ದಕ್ಷಿಣ ಭಾರತಕ್ಕೂ ಕಾಲಿಟ್ಟಿರುವುದು ಖೇದದ ಸಂಗತಿ.
ಭೂ ಕೈಲಾಸ ಖ್ಯಾತಿಯ ತಿರುಪತಿ ತಿಮ್ಮಪ್ಪನನ್ನು ಹಳ್ಳಿಯ ಬಡ ಭಕ್ತರು ತಮ್ಮ ಕುಟುಂಬದ ಮುಡಿಪು ಹೊತ್ತುಕೊಂಡು ಧರ್ಮದರ್ಶನದ ಸಾಲಿನಲ್ಲಿ ನಿಂತರೆ ದೇವರ ದರ್ಶನ ಆಗಲು ಕನಿಷ್ಠ 72 ಗಂಟೆ ಬೇಕಾಗುತ್ತದೆ. ದಿನನಿತ್ಯ ದೇಶದ ವಿವಿಧ ಭಾಗಗಳಿಂದ ಸರಕಾರಿ ಖರ್ಚಿನಲ್ಲಿ ಬರುವ ರಾಜಕಾರಣಿಗಳು, ಹಿರಿಯ ಅಧಿಕಾರಿಗಳಿಗೆ ಮಾತ್ರ ಇಲ್ಲಿ ನೇರ ಪ್ರವೇಶ ಸಿಗುತ್ತದೆ. ಅದರಲ್ಲೂ ಮಂತ್ರಿಗಳು ಮತ್ತು ಉದ್ಯಮಿಗಳಿಗೆ ದೇವರ ಮುಂಭಾಗದಲ್ಲಿ ಶಾಲು ಹೊದೆಸಿ ದೇವರಿಗೆ ಪರಿಚಯ ಮಾಡಿಸಿ, ಮಂತ್ರಾಕ್ಷತೆಯನ್ನು ನೀಡುವ ಹೊತ್ತಿನಲ್ಲಿ ಧರ್ಮದರ್ಶನದ ಸಾಲಲ್ಲಿ ನಿಂತಿರುವ ಕನಿಷ್ಠ 500 ಮಂದಿಯನ್ನು ದರ್ಶನಕ್ಕೆ ಬಿಡಬಹುದು. ಈ ಕೆಲವು ಮಹಾತ್ಮರು ಪ್ರತಿ ತಿಂಗಳಿಗೊಮ್ಮೆ ಇಲ್ಲಿಗೆ ಭೇಟಿ ನೀಡುತ್ತಿರುತ್ತಾರೆ. ಇದನ್ನು ನೋಡುವಾಗ ನೀನಾರಿಗಾದೆಯೋ ಎಲೆ ಮಾನವ ಎನ್ನಿಸುವುದಿಲ್ಲವೇ?
ಸಾವಿರಾರು ಜನರು ಸೇರುವ ಕ್ರಿಶ್ಚಿಯನ್, ಮುಸ್ಲಿಂ ಆರಾಧನಾಲಯಗಳಲ್ಲಿ ಮಂತ್ರಿ ಮಾಗಧರಿಗೆ ಪ್ರತ್ಯೇಕ ಗೌರವ ಇಲ್ಲ. ಯಾರು ಮೊದಲು ಬರುತ್ತಾರೋ ಅವರು ಮುಂದಿನ ಸಾಲಿನಲ್ಲಿ ಕೂರಬೇಕು. ಶ್ರೀಮಂತಿಕೆಗೆ ಮಣೆ ಹಾಕುವ ಒಂದೇ ಒಂದು ಧರ್ಮ ನಮ್ಮದು. ಒಮ್ಮೆ ಕೊಡೆತ್ತೂರಿನ 86 ವರ್ಷದ ಹಿರಿಯ ನಾಗರಿಕ ಮಿತ್ರರೊಬ್ಬರು ನನ್ನನ್ನು ಕರೆದು, ಆರೇಳು ದಶಕದ ಹಿಂದೆ ನಮ್ಮ ತಾಯಿ ಹಿಡಿಅಕ್ಕಿ (ಊಟಕ್ಕೆ ಹಾಕಿದ ಅಕ್ಕಿಯಿಂದ ಒಂದು ಹಿಡಿ ಅಕ್ಕಿ) ಬೇರೊಂದು ಪಾತ್ರೆಗೆ ಹಾಕಿ ತಿಂಗಳಿಗೊಮ್ಮೆ ಕಟೀಲು ದೇವಸ್ಥಾನದ ನಿತ್ಯ ಖರ್ಚಿಗಾಗಿ ನೀಡುತ್ತಿದ್ದರು. ಹೀಗೆ ಸುತ್ತಲಿನ ಗ್ರಾಮಸ್ಥರಿಂದ ಸಲ್ಲಿಕೆಯಾಗುತ್ತಿದ್ದ ಕಾಲವನ್ನು ನೆನೆದರೆ ಈಗ ನನಗೂ ಟಿಕೆಟ್ ಪಡೆದು ದೇವರ ದರ್ಶನ ಪಡೆಯಬೇಕಾದ ಸ್ಥಿತಿ ನಿರ್ಮಾಣವಾಗಿದೆ ಎಂದು ಮರುಗಿದರು. ಇತ್ತೀಚೆಗೆ ಉತ್ತರ ಕರ್ನಾಟಕದ ಮತ್ತು ಮಹಾರಾಷ್ಟ್ರದ ಪುಣ್ಯಕ್ಷೇತ್ರಗಳಿಗೆ ಹೋಗಿದ್ದೆವು. ಅದರಲ್ಲಿ ಶ್ರೀ ಪಂಡರಾಪುರ, ಪಂಚವಟಿ ಮತ್ತು ಕೊಲ್ಲಾಪುರ ಕ್ಷೇತ್ರಗಳ ರಾಜಬೀದಿ ಹಾಗೂ ಪರಿಸರಗಳಲ್ಲಿ ಕಸದ ರಾಶಿಯಲ್ಲೇ ಸಾಗಿ ಶ್ರೀ ಕ್ಷೇತ್ರವನ್ನು ಪ್ರವೇಶಿಸಬೇಕಾದ ಸ್ಥಿತಿ. ಆದರೆ ಶಿವನ ದ್ವಾದಶ ಜ್ಯೋತಿರ್ಲಿಂಗ ಕ್ಷೇತ್ರಗಳಲ್ಲಿ ಒಂದಾದ ತ್ರ್ಯಂಬಕೇಶ್ವರ ಕ್ಷೇತ್ರ ಪ್ರವೇಶಕ್ಕೆ 3 ಗಂಟೆ ಸಾಲಲ್ಲಿ ಸಾಗುವ ಸ್ಥಳ ಧೂಳು, ಕಸವನ್ನಾದರೂ ಸಹಿಸಿ ಮುಂದೆ ಹೋದಂತೆ ತೆರೆದ ಚರಂಡಿಯ ಬದಿಯಲ್ಲಿ ದುರ್ಗಂಧ ಮೂಗಿಗೆ ರಾಚುತ್ತಿತ್ತು. ಜತೆಗೆ ಸೊಳ್ಳೆಗಳ ಕಾಟ. ಅಂತೂ ಒಳಗೆ ಪ್ರವೇಶಿಸಿದಾಗ ಕಾಲಿಗೆ ನೀರು ಹಾಕಲು ಕೂಡಾ ವ್ಯವಸ್ಥೆ ಇರಲಿಲ್ಲ. ಉತ್ತರ ಭಾರತದ ದೊಡ್ಡ ದೊಡ್ಡ ದೇವಸ್ಥಾನಗಳಿಗೆ ಸಾವಿರಾರು ಕೋಟಿ ಸುರಿಯುತ್ತಿರುವಾಗ ದಕ್ಷಿಣದ ಕ್ಷೇತ್ರಗಳಿಗೆ ಬರುವ ಭಕ್ತರಿಗೆ ಅನುಕೂಲ ಆಗುವಂತೆ ಕುಡಿಯುವ ನೀರು, ಶೌಚಾಲಯ ವ್ಯವಸ್ಥೆ ಕೂಡ ಕಲ್ಪಿಸದಿರುವುದು ದುರಂತವೇ ಸರಿ.
ವಿಚಿತ್ರ ತೀರ್ಮಾನ
ತಿರುಪತಿ ದೇವಾಲಯ ಟ್ರಸ್ಟ್ ವತಿಯಿಂದ ಆಂಧ್ರಪ್ರದೇಶದ ಗುಡ್ಡಗಾಡು ಆದಿವಾಸಿ ಹಿಂದುಳಿದ ಹಿಂದೂಗಳು ಕ್ರಿಶ್ಚಿಯನ್ ಧರ್ಮಕ್ಕೆ ಮತಾಂತರವಾಗುವುದನ್ನು ತಡೆಯಲು ಆ ಜಿಲ್ಲೆಯ ಪ್ರತಿ ಗ್ರಾಮಗಳಲ್ಲಿ 500 ಕ್ಕಿಂತಲೂ ಹೆಚ್ಚು ಹಿಂದೂ ದೇವಾಲಯಗಳನ್ನು ನಿರ್ಮಿಸಲು ತೀರ್ಮಾನಿಸಿ ಅದಕ್ಕಾಗಿ ಸಾವಿರಾರು ಕೋಟಿ ರೂ. ತೆಗೆದಿಡಲಾಗಿದೆ ಎಂದು ಟಿವಿಯಲ್ಲಿ ಸುದ್ದಿಯಾಗಿದೆ. ಇಲ್ಲಿ ಚಿಂತಿಸಬೇಕಾದ ಸಂಗತಿ ಅಲ್ಲಿರುವ ಕಡು ಬಡತನದ ಜನಾಂಗಕ್ಕೆ ಬದುಕಲು ಬೇಕಾದ ಮೂಲಭೂತ ಸೌಕರ್ಯಗಳಾದ ಆಹಾರ, ಮನೆ, ಶಾಲೆ, ಕುಡಿಯುವ ನೀರು, ಆಸ್ಪತ್ರೆಗಳನ್ನು ಕಟ್ಟಿಸಿ ಅವರನ್ನು ನಾಗರಿಕತೆಗೆ ತಂದು ಉದ್ಯೋಗ ಕಲ್ಪಿಸಿ ಕೊಟ್ಟಲ್ಲಿ ಅವರೇ ದೇವಾಲಯ ನಿರ್ಮಿಸುವುದಿಲ್ಲವೇ? ಸರಿ ಸುಮಾರು ಅರ್ಧ ಶತಮಾನದ ಹಿಂದೆ ನಮ್ಮ ಮಂಜೇಶ್ವರದ ಗೋಂಕುದ ಕಟ್ಟೆ ಎಂಬಲ್ಲಿ ನೂರಾರು ಕೊರಗ ಜನಾಂಗದವರು ಹೊಟ್ಟೆಗೆ ತುತ್ತಿಲ್ಲದೆ ತಲೆಗೆ ಸೂರಿಲ್ಲದಿರುವಾಗ ಮಂಗಳೂರಿನ ಕ್ರಿಶ್ಚನ್ ಮಿಷನರಿಯವರು ಬಂದು ಅವರಿಗೆ ಮೂಲಭೂತ ಸೌಕರ್ಯ ಕಲ್ಪಿಸಿ ಮನೆ, ಶಾಲೆ ತೆರೆದು ಅವರನ್ನು ಸಾಮೂಹಿಕ ಮತಾಂತರಿಸಿ ಡಾನ್ ಬಾಸ್ಕೋ ಇಗರ್ಜಿಯನ್ನು ನಿರ್ಮಿಸಿದಾಗ ಸವರ್ಣೀಯರಿಗೆ ಜ್ಞಾನೋದಯವಾಗುವಾಗ ಗೊತ್ತಾನಗ ಪೊರ್ತಾಂಡ್ ಎಂಬಂತಾಗಿತ್ತು. ಇಲ್ಲಿ ತಿರುಪತಿಯವರಿಗೆ ಬಡ ಜನರಲ್ಲಿ ಕರುಣೆ ಇದ್ದರೆ ನಮ್ಮ ಧರ್ಮಸ್ಥಳದ ಧರ್ಮಾಧಿಕಾರಿಗಳಂತೆ ಆ ಜಿಲ್ಲೆಯ ಆದಿವಾಸಿ ಜನಾಂಗಗಳನ್ನು ದತ್ತು ಪಡೆದು ಅಭಿವೃದ್ಧಿಗೊಳಿಸಿ ಕ್ಷೇತ್ರದ ಕೀರ್ತಿ ಬೆಳಗಿಸಲಿ.
ಮಹಾಕ್ಷೇತ್ರದ ಸಮಿತಿಯವರಲ್ಲಿ ವಿನಂತಿ. ಈ 4 ಅಂಶಗಳ ಸೂತ್ರಗಳು ಜಾರಿಯಾಗಲಿ.
1. ಪ್ರತಿನಿತ್ಯ 10 ಸಾವಿರಕ್ಕಿಂತ ಹೆಚ್ಚು ಭಕ್ತರು ಬರುವ ಕ್ಷೇತ್ರಗಳಲ್ಲಿ ಕನಿಷ್ಠ 5 ವರ್ಷಕೊಮ್ಮೆ ಮಾತ್ರ ದೇವರ ದರ್ಶನಕ್ಕೆ ಅನುಮತಿ. ಅದಕ್ಕಾಗಿ ಆಧಾರ್ ಕಾರ್ಡ್ ಲಿಂಕ್ ಆಗಿರಬೇಕು.
2. ವಿಶೇಷ (ವಿಐಪಿ) ಪ್ರವೇಶ ರಾಷ್ಟ್ರಪತಿ, ಪ್ರಧಾನಿ, ರಾಜ್ಯಪಾಲರು ಮತ್ತು ಮುಖ್ಯಮಂತ್ರಿಗಳಿಗೆ ಸೀಮಿತವಾಗಿ ಇರಲಿ.
3. ಸರಕಾರಿ ಖರ್ಚಿನಿಂದ ಕ್ಷೇತ್ರ ಸಂದರ್ಶನ ಇಲ್ಲವೆಂದು ಕಾನೂನು ತರುವಂತಾಗಬೇಕು.
4. ಎಷ್ಟೇ ಪ್ರಭಾವಿಗಳು ಬಂದರೂ ಗರ್ಭಗುಡಿಯ ಸಮೀಪದಲ್ಲಿ ಶಾಲು ಹೊದೆಸಿ ಸತ್ಕರಿಸಬಾರದು.
ಈ ಮೇಲಿನ ನಾಲ್ಕು ಅಂಶಗಳು ಜಾರಿಯಾದರೆ ಯಾವ ಕ್ಷೇತ್ರದಲ್ಲೂ ಯಾವುದೇ ತಡೆ ಇಲ್ಲದೇ ದೇವರ ದರ್ಶನ ಆಗಲಿದೆ. ಇದು ಜಾರಿಯಾದಲ್ಲಿ ಪ್ರತಿ ವಾರ, ತಿಂಗಳು ಉಚಿತವಾಗಿ ದೇವರ ದರ್ಶನಕ್ಕೆ ಹೋಗುವವರು ಕಡಿಮೆಯಾದಾರು ಹಾಗೂ ಅವರು ಕೂಡ ಸಾಮಾನ್ಯ ಭಕ್ತನಂತೆ ಹೋಗಿ ಪುಣ್ಯ ಸಂಪಾದಿಸಿಕೊಳ್ಳಲಿ.
ಕಡಾರು ವಿಶ್ವನಾಥ ರೈ