ಮೂಡುಬಿದಿರೆ: ‘ಹಾಸ್ಯ ಬದುಕನ್ನು ಹಗುರವಾಗಿಸುತ್ತದೆ. ಸೈಬರ್ ಹಾಸ್ಯವು ನಗು ಮತ್ತು ಅರಿವಿನ ಕಾರ್ಯಕ್ರಮವಾಗಿದೆ’ ಎಂದು ಆಳ್ವಾಸ್ ಶಿಕ್ಷಣ ಪ್ರತಿಷ್ಠಾನದ ಅಧ್ಯಕ್ಷ ಡಾ. ಎಂ. ಮೋಹನ ಆಳ್ವ ಹೇಳಿದರು. ಆಳ್ವಾಸ್ ಶಿಕ್ಷಣ ಪ್ರತಿಷ್ಠಾನದ ಆಳ್ವಾಸ್ಎಂ ಜಿನಿಯರಿಂಗ್ ಮತ್ತು ತಂತ್ರಜ್ಞಾನ ಕಾಲೇಜು, ಆಳ್ವಾಸ್ ಪದವಿ ಕಾಲೇಜು, ಆಳ್ವಾಸ್ ಹೋಮಿಯೋಪತಿ ಕಾಲೇಜುಗಳ ಕನ್ನಡ ಸಂಘ ಹಾಗೂ ಕರ್ನಾಟಕ ರಾಜ್ಯ ವಿಜ್ಞಾನ ಮತ್ತು ತಂತ್ರಜ್ಞಾನ ಮಂಡಳಿ(ಕೆಎಸ್ಸಿಎಸ್ಟಿ) ಹಾಗೂ ಸೈಸೆಕ್ ಸಹಯೋಗದಲ್ಲಿ ಭಾನುವಾರ ಸಂಜೆ ಕಾಲೇಜು ಆಡಿಟೋರಿಯಂನಲ್ಲಿ ನಡೆದ ‘ಸೈಬರ್ ಹಾಸ್ಯ ಸಂಜೆ’ ಕಾರ್ಯಕ್ರಮವನ್ನು ಉದ್ಘಾಟಿಸಿ ಅವರು ಮಾತನಾಡಿದರು.
‘ಸಾಮಾಜಿಕ ಮಾಧ್ಯಮಕ್ಕೆ ಸಮಾಜ ಕಟ್ಟುವ ಹೊಣೆಗಾರಿಕೆ ಇದೆ. ಆದರೆ, ಕೆಲವೊಮ್ಮೆ ಹಾಲಿಗೆ ಹುಳಿ ಹಿಂಡುವ ಕೆಲಸ ನಡೆಯುವುದೇ ಹೆಚ್ಚು’ ಎಂದು ಅಭಿಪ್ರಾಯಪಟ್ಟ ಅವರು, ‘ಕೆಎಸ್ಸಿಎಸ್ಟಿ ಹಾಗೂ ಸೈಸೆಕ್ ಸಹಯೋಗದಲ್ಲಿ ಆಳ್ವಾಸ್ ಎಂಜಿನಿಯರಿಂಗ್ ಕಾಲೇಜಿನಲ್ಲಿ ಕಾರ್ಯಕ್ರಮ ನಡೆದಿರುವುದು ಸಂತಸ ನೀಡಿದೆ’ ಎಂದರು.
ಸಾಮಾಜಿಕ ಜಾಲತಾಣಗಳಲ್ಲಿ ಹೆಚ್ಚಾಗಿ ಸುಳ್ಳು ರಾರಾಜಿಸುತ್ತಿದ್ದು, ಇಂತಹ ಸುದ್ದಿಗೆ ವಿದ್ಯಾರ್ಥಿಗಳು ಬಲಿಪಶು ಆಗಬಾರದು. ಎಚ್ಚರಿಕೆ ಅವಶ್ಯ ಎಂದರು. ಹಾಸ್ಯ ಲೇಖಕ ಎಂ.ಎಸ್. ನರಸಿಂಹಮೂರ್ತಿ ಮಾತನಾಡಿ, ನಿಮಗೆ ದುಡ್ಡು ಕೊಡುವಾಗ ಯಾರೂ ಪಿನ್ ಕೇಳುವುದಿಲ್ಲ.
ಯಾರಾದರೂ ನಿಮ್ಮ ಪಿನ್ ಕೇಳುತ್ತಿದ್ದಾರೆ ಎಂದರೆ ದುಡ್ಡು ತೆಗೆಯಲು ಎಂಬುದನ್ನು ನೆನಪಿಡಿ ಎಂದು ಎಚ್ಚರಿಸಿದರು.
ಪೌಚ್ಗಳಲ್ಲಿ ಪಿನ್ಗಳನ್ನು ಬರೆದಿಡಬೇಡಿ. ಸುಲಭದ ಪಾಸ್ವರ್ಡಗಳನ್ನು ಇಡಬೇಡಿ. ನಿಮ್ಮ ಜನ್ಮ ದಿನಾಂಕವನ್ನು
ಪಾಸ್ವರ್ಡ ಆಗಿ ಇಡುವ ಬದಲು ತಾಯಿಯ ಹುಟ್ಟಿದ ವರ್ಷ ಇಟ್ಟುಕೊಳ್ಳುವುದು ಉತ್ತಮ. ಹಾಸ್ಯ ಕಲಾವಿದ ಬಸವರಾಜ್ ಮಹಾಮನಿ ಮಾತನಾಡಿ, ಬಳಸುವ ಭಾಷೆಗಿಂತ ಭಾವನೆ ಬಹುಮುಖ್ಯ ಎಂದರು. ನಂತರ ಹಾಸ್ಯ ಚಟಾಕಿ ಮೂಲಕ ಸಭಿಕರನ್ನು ನಗೆಗಡಲಲ್ಲಿ ತೇಲಿಸಿಬಿಟ್ಟರು.
ಚುಟುಕು ಕವಿ ಡುಂಡಿರಾಜ್ ಮಾತನಾಡಿ, ‘ ಸೈಬರ್ ವಿಚಾರದಲ್ಲಿ ಯಾವುದೇ ಮಾಹಿತಿಯು ಸುಳ್ಳು ಎಂಬ ಸಂಶಯ
ಬಂದಾಗಲೇ ವ್ಯವಹಾರ ನಿಲ್ಲಿಸಿಬಿಡಬೇಕು. ಸೈಬರ್ ಪೊಲೀಸರಿಗೆ ದೂರು ನೀಡಬೇಕು’ ಎಂದರು. ಹಾಸ್ಯ ಕಲಾವಿದ
ವೈ.ವಿ.ಗುಂಡೂರಾವ್ ‘ದೂರದಿಂದ ಕದಿಯುವಂತ ಸೈಬರ್ ಕಳ್ಳ ಜಾಣ’ ಎಂಬ ಪದ್ಯದ ಮೂಲಕ ರಂಜಿಸಿದರು.
ಹಾಸ್ಯ ಕಲಾವಿದ ಗಂಗಾವತಿ ಪ್ರಾಣೇಶ್ ಮಾತನಾಡಿ, ‘ಶಿಕ್ಷೆ ಮೂಲಕ ಪರಿವರ್ತನೆ ಕಷ್ಟ. ಆದರೆ ನೈತಿಕ ಶಿಕ್ಷಣದ
ಮೂಲಕ ಬದಲಾಯಿಸಬಹುದು. ಯಾವುದೇ ವಸ್ತುಗಳನ್ನು ಕಳ್ಳನಿಗೆ ಸಿಗುವಂತೆ ಇಡುವುದೇ ತಪ್ಪು. ಸೈಬರ್ ವ್ಯವಹಾರದ ಸೂಕ್ಷ್ಮ ಮಾಹಿತಿಗಳೂ ಹಾಗೆ ಎಂದರು.
ಕರ್ನಾಟಕ ರಾಜ್ಯ ವಿಜ್ಞಾನ ಮತ್ತು ತಂತ್ರಜ್ಞಾನ ಮಂಡಳಿ(ಕೆಎಸ್ಸಿಎಸ್ಟಿ) ಹಾಗೂ ಸೈಸೆಕ್ನ ವನಜಾಕ್ಷಿ ಸೈಬರ್ ಅಪರಾಧಗಳನ್ನು ತಡೆಗಟ್ಟುವ ಮಾರ್ಗಸೂಚಿಗಳನ್ನು ತಿಳಿಸಿದರು. ಪ್ರಾಂಶುಪಾಲ ಡಾ.ಪೀಟರ್ ಫೆನಾರ್ಂಡಿಸ್, ಕಾರ್ಯಕ್ರಮ ಸಂಯೋಜಕರಾದ ಡಾ ದತ್ತಾತ್ರೇಯ, ಡಾ ಗುರುಶಾಂತ್ ವಗ್ಗರ್ ಇದ್ದರು. ಡಾ ಯೋಗೀಶ್ ಕೈರೋಡಿ ಕಾರ್ಯಕ್ರಮ ನಿರೂಪಿಸಿದರು.