ಸಹಬಾಳ್ವೆ ಸಮಾನತೆ ನಮ್ಮದಾಗಬೇಕೆಂಬ ಸದಾಶಯದ ಸಂದೇಶವನ್ನು ದೀಪಾವಳಿ ಸಾರುತ್ತದೆ. ನೀವು ನಾವು ಜೊತೆಗಿರಬೇಕು. ಸಂತೋಷವನ್ನು ಪರಸ್ಪರ ಹಂಚಿಕೊಳ್ಳಬೇಕೆನ್ನುವ ಸದುದ್ದೇಶದೊಂದಿಗೆ ಪ್ರೀತಿಯ ಉಡುಗೊರೆಯನ್ನು ಸಿಟಿ ಪ್ರಾದೇಶಿಕ ಸಮಿತಿ ವತಿಯಿಂದ ಕಾರ್ಯಾಧ್ಯಕ್ಷರು ಮತ್ತು ಅವರ ಬಳಗ ನೀಡುತ್ತಿದ್ದಾರೆ. ಕಷ್ಟಗಳೆಂಬ ಕತ್ತಲೆ ದೂರವಾಗಲಿ ಸುಖ ಸಂತೋಷ ಆರೋಗ್ಯದೊಂದಿಗೆ ಕಷ್ಟಗಳೆಂಬ ಕತ್ತಲೆ ದೂರವಾಗಲಿ ಸುಖ ಸಂತೋಷ ಆರೋಗ್ಯದೊಂದಿಗಿನ ಹರ್ಷದ ದಿನಗಳು ಬರಲಿ ಎಂದು ದೀಪಾವಳಿಯ ಶುಭವಸರದಲ್ಲಿ ಪ್ರಾರ್ಥಿಸೋಣ ಎಂದು ಬಂಟರ ಸಂಘ ಮುಂಬೈಯ ಅಧ್ಯಕ್ಷ ಪ್ರವೀಣ್ ಭೋಜ ಶೆಟ್ಟಿ ಹೇಳಿದರು. ಸಿಟಿ ಪ್ರಾದೇಶಿಕ ಸಮಿತಿ ವತಿಯಿಂದ ಬಂಟರ ಸಂಘ ಮುಂಬೈ ಇದರ ರಂಜನಿ ಸುಧಾಕರ ಹೆಗ್ಡೆ ಸಮಾಜ ಕಲ್ಯಾಣ ಎನೆಕ್ಸ್ ಕಟ್ಟಡದ ಮೂರನೇ ಮಹಡಿಯ ಸಭಾಗೃಹದಲ್ಲಿ ಅಕ್ಟೋಬರ್ 19 ರಂದು ಸಂಜೆ ನಡೆದ ‘ಪರ್ಬದ ತುಡರ್ ಅರ್ಲಡ್ ಇಲ್ಲಿಲ್ಲಲ್’ ಸಂಭ್ರಮದಲ್ಲಿ ಅವರು ಅಧ್ಯಕ್ಷತೆ ವಹಿಸಿ ಮಾತನಾಡಿ, ಸಂಘವು ಸದಸ್ಯರ ಕಷ್ಟ ಕಾರ್ಪಣ್ಯಗಳಿಗೆ ಸದಾ ಸಕಾರಾತ್ಮಕವಾಗಿ ಸ್ಪಂದಿಸುತ್ತಿದೆ. ನಮ್ಮ ಸಿಟಿ ಪ್ರಾದೇಶಿಕ ಸಮಿತಿ ಸದಾ ಹೊಸ ಹೊಸ ವಿಷಯಗಳ ಆವಿಷ್ಕಾರ ಮಾಡುತ್ತಿದೆ. ಅಶೋಕ್ ಪಕ್ಕಳ ಅವರು ಸಕಲಕಲಾ ವಲ್ಲಭರೆಂದು ಮತ್ತೊಮ್ಮೆ ತೋರಿಸಿಕೊಟ್ಟಿದ್ದಾರೆ. ಹೂವಿನ ರಂಗೋಲಿ ಮೇಲೆ ಹಣತೆ ಹಚ್ಚಿ ದೀಪಾವಳಿಯ ಹೊಸ ಬೆಳಕನ್ನು ಬೆಳಗಿ ಹೊಸ ಹರುಷ ತರಲೆಂದು ಹಾರೈಸೋಣ ಎಂದರು.


ಬಂಟರ ಸಂಘ ಮುಂಬೈಯ ಉಪಾಧ್ಯಕ್ಷ ಮಹೇಶ್ ಎಸ್ ಶೆಟ್ಟಿ ಮಾತನಾಡಿ, ಸಂಘದ ಪ್ರಗತಿಗೆ ಪೂರಕವಾಗಿ ಸೇವೆ ಸಲ್ಲಿಸುತ್ತಿರುವ ಪ್ರಾದೇಶಿಕ ಸಮಿತಿಗಳ ಕಾರ್ಯಕ್ರಮಗಳಿಗೆ ನಮ್ಮ ಬೆಂಬಲ ಸದಾ ಇದೆ. ಸಿಟಿ ಪ್ರಾದೇಶಿಕ ಸಮಿತಿಯ ಈ ವಿನೂತನ ಹಬ್ಬದ ಆಚರಣೆ ಶ್ಲಾಘನೀಯ. ಸಿಟಿ ಪ್ರಾದೇಶಿಕ ಸಮಿತಿಯೊಂದಿಗೆ ಪ್ರತ್ಯಕ್ಷ ಪರೋಕ್ಷವಾಗಿ ಸದಾ ಸಹಕರಿಸುತ್ತೇನೆ. ಎಲ್ಲರಿಗೂ ದೀಪಾವಳಿಯ ಶುಭಾಶಯಗಳು ಎಂದರು. ಗೌರವ ಪ್ರಧಾನ ಕಾರ್ಯದರ್ಶಿ ಡಾ| ಆರ್ ಕೆ ಶೆಟ್ಟಿ ಮಾತನಾಡಿ, ದೀಪದಿಂದ ದೀಪವನ್ನು ಹಚ್ಚುವಂತೆ ಇನ್ನೊಬ್ಬರ ಸಂಕಷ್ಟಗಳನ್ನು ಕೇಳಿ ತಿಳಿದು ಪರಿಹರಿಸುವ ಪ್ರಾಮಾಣಿಕ ಪ್ರಯತ್ನ ಮಾಡೋಣ. ಬೆಳಕಿನ ಹಬ್ಬ ದೀಪಾವಳಿಯಂದು ಹೊಸತನದ ಸ್ಪೂರ್ತಿಯೊಂದಿಗೆ ಬದುಕು ಕಟ್ಟಿಕೊಳ್ಳೋಣ. ಎಲ್ಲರಿಗೂ ದೀಪಾವಳಿಯ ಹಾರ್ದಿಕ ಶುಭಾಶಯಗಳು ಎಂದರು.
ಸಿಟಿ ಪ್ರಾದೇಶಿಕ ಸಮಿತಿಯ ಕಾರ್ಯಾಧ್ಯಕ್ಷ ಅಶೋಕ್ ಪಕ್ಕಳ ಸ್ವಾಗತಿಸಿ ಪ್ರಾಸ್ತಾವಿಸಿ ಅಖಂಡ ಭರತ ಖಂಡವನ್ನಾಲಿದ ಬಲಿ ಚಕ್ರವರ್ತಿಯನ್ನು ಪಾತಾಳಕ್ಕೆ ತಳ್ಳಿದ ಶ್ರೀ ಮನ್ನಾರಾಯಣರ ಅನತಿಯಂತೆ ಪ್ರಜೆಗಳನ್ನು ನೋಡಲು ಬರುವ ಬಲಿಚಕ್ರವರ್ತಿಯನ್ನು ಸ್ವಾಗತಿಸಲು 14 ವರ್ಷ ವನವಾಸದಿಂದ ಅಯೋಧ್ಯೆಗೆ ಹಿಂದಿರುಗಿ ಬಂದ ಶ್ರೀರಾಮನನ್ನು ಸ್ವಾಗತಿಸುವುದಕ್ಕೆ ಶ್ರೀ ಕೃಷ್ಣ ನರಕಾಸುರನನ್ನು ಸಂಹರಿಸಿ 16000 ಕನ್ಯೆಯರನ್ನು ಸೆರೆಯಿಂದ ಬಿಡಿಸಿದ ಸಂತೋಷವನ್ನು ಆಚರಿಸಲು ದೇಶದಾದ್ಯಂತ ನಾವು ದೀಪ ಬೆಳಗಿಸಿ ಈ ಹಬ್ಬವನ್ನು ಸಂಭ್ರಮಿಸೋಣ ಎಂದರು. ಸಂಘದ ಅಧ್ಯಕ್ಷ ಪ್ರವೀಣ್ ಭೋಜ ಶೆಟ್ಟಿ, ಉಪಾಧ್ಯಕ್ಷ ಮಹೇಶ್ ಎಸ್ ಶೆಟ್ಟಿ, ಗೌರವ ಪ್ರಧಾನ ಕಾರ್ಯದರ್ಶಿ ಡಾ| ಆರ್ ಕೆ ಶೆಟ್ಟಿ ಮತ್ತು ಮಹಿಳಾ ವಿಭಾಗದ ಕಾರ್ಯದರ್ಶಿ ಆಶಾ ಸುಧೀರ್ ಶೆಟ್ಟಿಯವರನ್ನು ಗೌರವಿಸಲಾಯಿತು.
ಸಿಟಿ ಪ್ರಾದೇಶಿಕ ಸಮಿತಿಯ 49 ಕುಟುಂಬಗಳಿಗೆ ಉಡುಗೊರೆಯ ಚೆಕ್, ಹಣತೆ, ಸಿಹಿ ತಿಂಡಿ ವಿತರಿಸಲಾಯಿತು. ಸಮಿತಿಯ ಪದಾಧಿಕಾರಿಗಳಾದ ಪದ್ಮನಾಭ ಎಸ್ ಶೆಟ್ಟಿ, ಸುರೇಂದ್ರ ಶೆಟ್ಟಿ ಮಾರ್ನಾಡ್, ನಿತೀಶ್ ಶೆಟ್ಟಿ, ಕೇಶವ ಶೆಟ್ಟಿ, ಮಹಿಳಾ ವಿಭಾಗದ ಕಾರ್ಯಾಧ್ಯಕ್ಷೆ ಜ್ಯೋತಿ ಎಸ್ ಶೆಟ್ಟಿ ಉಪಸ್ಥಿತರಿದ್ದರು. ಮಾಜಿ ಕಾರ್ಯಾಧ್ಯಕ್ಷ ಕೃಷ್ಣ ವಿ ಶೆಟ್ಟಿ, ಭುಜಂಗ ಶೆಟ್ಟಿ ದೊಡ್ಡಗುತ್ತು, ಮಹಿಳಾ ವಿಭಾಗದ ಮಾಜಿ ಕಾರ್ಯಾಧ್ಯಕ್ಷೆ ಸುಜಯ ಆರ್ ಶೆಟ್ಟಿ, ಕಲ್ಪನಾ ಕೆ ಶೆಟ್ಟಿ, ಬಂಟರ ಸಂಘ ಮುಂಬೈ ಮಹಿಳಾ ವಿಭಾಗದ ಮಾಜಿ ಕಾರ್ಯಾಧ್ಯಕ್ಷೆ ಲತಾ ಪ್ರಭಾಕರ ಶೆಟ್ಟಿ, ಪ್ರಸಾದ್ ಶೆಟ್ಟಿ ಅಂಗಡಿಗುತ್ತು, ಲತೀಶ್ ಶೆಟ್ಟಿ, ಪ್ರಭಾಕರ ಶೆಟ್ಟಿ ಮತ್ತಿತರು ಭಾಗವಹಿಸಿದ್ದರು. ಶೋಭಾ ಶೆಟ್ಟಿ ಪ್ರಾರ್ಥನೆಗೈದರು. ಗಣ್ಯರು ದೀಪ ಬೆಳಗಿಸಿ ಕಾರ್ಯಕ್ರಮ ಉದ್ಘಾಟಿಸಿದರು. ಸಂಘದ ಮಹಿಳಾ ವಿಭಾಗದ ಕೋಶಾಧಿಕಾರಿ, ಸಿಟಿ ಪ್ರಾದೇಶಿಕ ಸಮಿತಿಯ ನಿಕಟ ಪೂರ್ವ ಕಾರ್ಯಾಧ್ಯಕ್ಷೆ ಸುಚಿತ ಕೆ ಶೆಟ್ಟಿ ನಿರೂಪಿಸಿ ವಂದಿಸಿದರು.






































































































