ನಾವು ತುಳುನಾಡಿನಿಂದ ಬಂದವರು. ನಮ್ಮ ಜನ್ಮಭೂಮಿಯ ಪರಂಪರೆ, ಆಚಾರ-ವಿಚಾರಗಳನ್ನು ಉಳಿಸಿ ಬೆಳೆಸುವಲ್ಲಿ ಕರ್ಮಭೂಮಿಯ ಮುಂಬಯಿಯ ನಮ್ಮ ಕಲಾಭಿಮಾನಿಗಳು ಕಲೆಗೆ ಬೆಲೆ ನೀಡುವ ಆದರ್ಶಮಯ ವಿಚಾರವಂತರು. ಸಾಂಸ್ಕೃತಿಕ ಪರಂಪರೆಯನ್ನು, ಧಾರ್ಮಿಕ ಲೋಕವನ್ನು ಪ್ರತಿಬಿಂಬಿಸುವಂತಹ ಯಕ್ಷಗಾನದ ಅರಿವನ್ನು ನಮ್ಮ ಮುಂದಿನ ಪೀಳಿಗೆಗೆ ನೀಡುವಂತಾಗಬೇಕು. ಈ ನಿಟ್ಟಿನಲ್ಲಿ ನಮ್ಮವರು ಇಂತಹ ಕಾರ್ಯಕ್ರಮಕ್ಕೆ ಬರುವಾಗ ಮಕ್ಕಳೊಂದಿಗೆ ಬಂದರೆ ಅಧ್ಯಾತ್ಮಿಕ ಚಿಂತನೆಗಳ ಸ್ವರೂಪದ ಯಕ್ಷಗಾನದ ಕಲೆಯು ಅಜರಾಮವಾಗಿರಲು ಸಾಧ್ಯ ಎಂದು ಪೊವಾಯಿ ಕನ್ನಡ ಸೇವಾ ಸಂಘದ ಅಧ್ಯಕ್ಷ ನ್ಯಾಯವಾದಿ ಆರ್. ಜಿ. ಶೆಟ್ಟಿಯವರು ನುಡಿದರು. ಅವರು ಮೀರಾ ರೋಡ್ ಪೂರ್ವದ ಪೂನಮ್ ಸಾಗರ್ ಕಾಂಪ್ಲೆಕ್ಸ್ ನ ರಾಧಾಕೃಷ್ಣ ಬ್ಯಾಂಕೆಟ್ ಹಾಲ್ ನ ಸಭಾಂಗಣದಲ್ಲಿ ಅ.11ರಂದು ಸಂಜೆ ಸ್ವರ್ಗೀಯ ಶೇಖರ್ ವಿ. ಶೆಟ್ಟಿ ಬೆಳ್ಮಣ್ ಸಂಸ್ಮರಣಾ ಸಮಿತಿ ಆಯೋಜಿಸಿದ್ದ, ಡಿ. ಮನೋಹರ್ ಕುಮಾರ್ ಸಂಯೋಜನೆಯ, ದಿ. ಹರೀಶ್ ಜೆ.ಶೆಟ್ಟಿ ನಿಂಜೂರು ವೇದಿಕೆಯಲ್ಲಿ ಬೆಂಕಿನಾಥೇಶ್ವರ ಕೃಪಾಪೋಷಿತ ದಶವತಾರ ಯಕ್ಷಗಾನ ಮಂಡಳಿ ಬಾಳ ಕಳವಾರು ಮಂಗಳೂರು ಮತ್ತು ಯಕ್ಷ ತುಳು ಪರ್ಬ ಇವರ ಜಂಟಿ ಆಯೋಜನೆಯ ಯಕ್ಷಗಾನ ಪ್ರದರ್ಶನ ಹಾಗೂ ಪ್ರಶಸ್ತಿ ಪ್ರಧಾನ ಸಭಾ ಸಮಾರಂಭದ ಅಧ್ಯಕ್ಷತೆ ವಹಿಸಿ ಮಾತನಾಡುತ್ತಾ 80 ರ ದಶಕದಲ್ಲಿ ಯಕ್ಷಗಾನ ರಂಗಕ್ಕೆ ತವರೂರಲ್ಲಿ ಹಾಗೂ ಮುಂಬಯಿಯಲ್ಲಿ ಪೈಪೋಟಿಯ ವಿಷೇಶ ಮೆರಗನ್ನು ನೀಡಿದವರು ದಿ. ಶೇಖರ್ ವಿ. ಶೆಟ್ಟಿ ಬೆಳ್ಮಣ್.
ಅವರ ಸಾಧನೆಯ ನೆನಪಿನ ಯಥಾಸ್ಥಿತಿಯನ್ನು ಕಾಯ್ದುಕೊಳ್ಳುವ ನಿಟ್ಟಿನಲ್ಲಿ ಅವರ ಸ್ಮರಣಾರ್ಥ ಸೋದರಳಿಯ ಅಜಿತ್ ಜೆ. ಶೆಟ್ಟಿ ಬೆಳ್ಮಣ್ ರವರ ಸದಾಕಾಲದ ಪ್ರಯತ್ನ ಶ್ಲಾಘನೀಯ ಎಂದರು.
ಮುಖ್ಯ ಅತಿಥಿಯಾಗಿ ಆಗಮಿಸಿದ ಮೀರಾ ಭಯಂದರ್ ಸೈಂಟ್ ಅಗ್ನೇಸಿಯಸ್ ಸ್ಕೂಲ್ ಮತ್ತು ಕಾಲೇಜಿನ ಆಡಳಿತ ನಿರ್ಧೇಶಕ ಡಾ. ಅರುಣೋದಯ ರೈ ಬಿಳಿಯೂರುಗುತ್ತು ಮಾತನಾಡುತ್ತಾ, ನಮ್ಮ ಪೂರ್ವಜರ ಮಹತ್ವದ ಕೊಡುಗೆಯಾದ ಯಕ್ಷಗಾನವು ನಾಡು, ನುಡಿ, ಸಂಸ್ಕಾರ, ಆಚಾರ ವಿಚಾರ, ಧಾರ್ಮಿಕ ಸಂಪ್ರದಾಯಗಳಿಗೆ ಮಹತ್ವದ ಕೊಡುಗೆ ನೀಡಿದೆ. ಅದನ್ನು ಉಳಿಸಿ ಬೆಳೆಸುಕೊಳ್ಳುವಲ್ಲಿ ನಾವು ಸದಾ ಜಾಗೃತರಾಗಿರಬೇಕು ಎಂದು ಅಭಿಪ್ರಾಯ ಪಟ್ಟರು.
ಅತಿಥಿಯಾಗಿ ಉಪಸ್ಥಿತರಿದ್ದ ರವೀಂದ್ರ ಡಿ. ಶೆಟ್ಟಿ ಕೊಟ್ರಪಾಡಿ ಗುತ್ತಿನಾರ್ ಬಳ್ಳುಂಜೆ ಗುತ್ತುರವರು ಮಾತನಾಡುತ್ತಾ ತುಳುನಾಡಿನ ಕಟ್ಟು ನಿಟ್ಟಿನ ಪರಂಪರೆಯನ್ನು ಹೊಂದಿದ ನಮ್ಮವರ ಕೂಡು ಕುಟುಂಬದ ಬೀಡಾಗಿತ್ತು. ಅಜ್ಜ ಅಜ್ಜಿ, ಮಾಮ, ಮಾಮಿ, ಚಿಕ್ಕಮ್ಮ, ದೊಡ್ಡಮ್ಮ, ದೊಡ್ಡಪ್ಪ, ಚಿಕ್ಕಪ್ಪ ಮುಂತಾದ ಸಂಬಂಧಗಳ ಅವಿನಾಭಾವದಿಂದ ಅಂದು ಪರಿವಾರ ಭದ್ರವಾಗಿತ್ತು. ಆದರೆ ಇಂದು ಪರಿಸ್ಥಿತಿ ಬದಲಾವಣೆಯೊಂದಿಗೆ ಮುಂದುವರಿದಿದೆ. ಪೂರ್ವಜರ ಹೆಸರನ್ನು ಮರೆಯುವ ಈ ಕಾಲದಲ್ಲಿ ಯಕ್ಷಗಾನದಲ್ಲಿ ಕ್ರಾಂತಿಯನ್ನುಂಟು ಮಾಡಿದ ದಿವಂಗತ ಶೇಖರ ವಿ. ಶೆಟ್ಟಿ ಬೆಳ್ಮಣ್ ಅವರ ಸ್ಮರಣೆಯನ್ನು ಯಕ್ಷಗಾನದ ಮೂಲಕ ಸ್ಮರಿಸುವ ಅವರ ಸೋದರಳಿಯ ಅಜಿತ್ ಜೆ.ಶೆಟ್ಟಿ ಬೆಳ್ಮಣ್ ನಮಗೆ ಮಾದರಿ ಪುರುಷರಾಗಿದ್ದಾರೆ. ಯಕ್ಷಗಾನಕ್ಕೆ ಮಾತ್ರವಲ್ಲದೆ ಸಾಮಾಜಿಕ ಬದುಕಿನಲ್ಲಿ ಸಮಾಜ ಸೇವೆಗೈದ ದಿವಂಗತ ಹರೀಶ್ ಜೆ.ಶೆಟ್ಟಿ ನಿಂಜೂರ್ ರವರ ಈ ವೇದಿಕೆ ಇಂದು ಧನ್ಯತೆಯನ್ನು ಪಡೆಯಿತು ಎಂದರು.
ಬಿಡುವಿಲ್ಲದ ಕರ್ಮಭೂಮಿಯಲ್ಲೂ ಊರವರ ಹಾಗೂ ಮುಂಬಯಿಯ ಕಲಾ ಸಂಸ್ಥೆಗಳ ಸಾಂಸ್ಕೃತಿಕ ಕಾರ್ಯಕ್ರಮಗಳಿಗೆ ಮಿನಿ ಮಂಗ್ಳೂರು ಎಂದೇ ಖ್ಯಾತವಾಗಿರುವ ಮೀರಾ ಭಯಂದರ್ ಕಲಾಪ್ರೇಮಿಗಳ ಕೊಡುಗೆಗಳನ್ನು ಕಾಣುವಾಗ ನಮ್ಮೂರ ಸಂಸ್ಕೃತಿಗಳ ಚಟುವಟಿಕೆಗಳಿಗೆ ಎಂದೂ ಕೊರತೆಯುಂಟಾಗದು ಎಂದು ನಮ ಜವನೆರ್ ಸಂಸ್ಥೆಯ ಅಧ್ಯಕ್ಷ ಚೇತನ್ ಶೆಟ್ಟಿ ಮೂಡಬಿದ್ರೆ ತನ್ನ ಅತಿಥಿ ಸ್ಥಾನದಲ್ಲಿ ಅಭಿಪ್ರಾಯಿಸಿದರು.
ಅತಿಥಿಯಾಗಿ ಆಗಮಿಸಿದ ಗೋರೆಗಾಂವ್ ಕರ್ನಾಟಕ ಸಂಘದ ಮಾಜಿ ಅಧ್ಯಕ್ಷ ಜಿ. ಟಿ. ಅಚಾರ್ಯ ತನ್ನ ಅನಿಸಿಕೆಯಲ್ಲಿ ಕಳೆದ 35 ವರ್ಷಗಳ ಹಿಂದೆ ಕಲಾಮಾತೆಯ ಸೇವೆಯನ್ನು ಗೈದ ದಿ. ಶೇಖರ್ ವಿ. ಶೆಟ್ಟಿಯವರ ನೆನಪಿನಂತಹ ಇಂತಹ ಕಾರ್ಯಕ್ರಮಗಳು ಎಲ್ಲರಿಗೂ ಮಾದರಿಯಾಗಿರಲಿ ಎಂದು ಆಶಿಸಿದರು.
ಪ್ರಾರಂಭದಲ್ಲಿ ವಿಜಯ್ ಶೆಟ್ಟಿ ಮೂಡುಬೆಳ್ಳೆಯವರಿಂದ ರಸಮಂಜರಿ ಕಾರ್ಯಕ್ರಮ ನಡೆದರೆ, ಸಭಾಕಾರ್ಯಕ್ರಮಕ್ಕೆ ಗಣ್ಯರು ದೀಪ ಬೆಳಗಿಸಿ ಚಾಲನೆ ನೀಡಿದರು. ವಿಜಯ್ ಶೆಟ್ಟಿ ಮೂಡುಬೆಳ್ಳೆಯವರು ಪ್ರಾರ್ಥನೆಗೈದರು. ಸಾಣೂರು ಸಾಂತಿಂಜ ಜನಾರ್ಧನ್ ಭಟ್ ಆಶೀರ್ವಚನವಿತ್ತರು.
ಸಂಸ್ಮರಣಾ ಸಮಿತಿಯ ಅಧ್ಯಕ್ಷ ಅಶೋಕ್ ಶೆಟ್ಟಿ ಸರಪಾಡಿಯವರು ಸಮಿತಿಯ ಬಗ್ಗೆ ಪ್ರಸ್ತಾವನಾ ಭಾಷಣ ಗೈದರು. ಇದೇ ಸಂದರ್ಭದಲ್ಲಿ ಇಳಿವಯಸ್ಸಿನಲ್ಲೂ 18 ಬಾರಿ ಶಬರಿ ಮಲೈ ಯಾತ್ರೆಯನ್ನು ಗೈದ ರೋಹಿಣಿ ರಾಜು ಶೆಟ್ಟಿಯವರಿಗೆ ಗುರು ವಂದನೆಯೊಂದಿಗೆ ಗಣ್ಯರ ಸಮ್ಮುಖದಲ್ಲಿ ಗೌರವಿಸಲಾಯಿತು.
ಬಾಲ ಕಲಾವಿದನಾಗಿ ಯಕ್ಷಗಾನ ರಂಗವನ್ನು ಪ್ರವೇಶಿಸಿದ ಕಲಾವಿದ ಹಾಗೂ ಉದ್ಯಮಿ ಯಶವಂತ್ ಕೆ. ಪೂಜಾರಿ ಮೂಡುಶೆಡ್ಡೆ ದಂಪತಿಯವರನ್ನು ಗಣ್ಯರು ಪ್ರಶಸ್ತಿಯನ್ನು ನೀಡಿ ಸನ್ಮಾನಿಸಿದರು. ಸನ್ಮಾನಕ್ಕೆ ಉತ್ತರಿಸಿದ ಶ್ರೀಯುತರು, ಇದು ನನ್ನ ಜೀವನದ ಅತೀ ಶ್ರೇಷ್ಠ ಕ್ಷಣ, ನನ್ನನ್ನು ಪೋಷಿಸಿ ಬೆಳಿಸಿದಂತಹ ಕಲಾ ಮಾತೆಗೆ ಇಂದು ನಾನು ಧನ್ಯನಾಗಿದ್ದೇನೆ ಎಂದರು.
ವೇದಿಕೆಯಲ್ಲಿ ಬಂಟರ ಸಂಘ ಮುಂಬಯಿ ಇದರ ಮೀರಾ ಭಯಂದರ್ ಪ್ರಾದೇಶಿಕ ಸಮಿತಿಯ ಜತೆ ಕೋಶಾಧಿಕಾರಿ ರಮೇಶ್ ಶೆಟ್ಟಿ ಸಿದ್ಧಕಟ್ಟೆ, ಉದ್ಯಮಿ ಐಕಳ ಆನಂದ ಶೆಟ್ಟಿ, ಉದ್ಯಮಿ ಸುರೇಶ್ ಶೆಟ್ಟಿ ಬೆಳ್ಮಣ್, ಪಾಂಗಾಳ ನಾನಯರ ಗರೋಡಿ ಪ್ರಭಾಕರ್ ಶೆಟ್ಟಿ, ಉದ್ಯಮಿ ಮಲಾರ್ ಬೀಡು ಉದಯ ಶೆಟ್ಟಿ, ಉದ್ಯಮಿ ಕಲಾ ಪೋಷಕ ಸುಧಾಕರ್ ಪೂಜಾರಿ, ಮೇಳದ ವ್ಯವಸ್ಥಾಪಕ ಸುರೇಂದ್ರ ಮಲ್ಲಿ ಗುರುಪುರ, ಪತ್ರಕರ್ತ ವೈ. ಟಿ. ಶೆಟ್ಟಿ ಹೆಜಮಾಡಿ ಉಪಸ್ಥಿತರಿದ್ದರು. ಕಾರ್ಯಕ್ರಮದ ನಿರೂಪಣೆಯನ್ನು ಚಲನ ಚಿತ್ರ ನಟ ಹಾಗೂ ರಂಗ ನಿದೇಶಕ ಬಾಬಾ ಪ್ರಸಾದ್ ಅರಸ ನಿರ್ವಹಿಸಿದರು. ದನ್ಯವಾದವನ್ನು ಅಜಿತ್ ಶೆಟ್ಟಿ ಬೆಳ್ಮಣ್ ಗೈದರು.
ವರದಿ, ಚಿತ್ರ : ಜಗ್ಗು ಶೆಟ್ಟಿ ಮೀರಾರೋಡ್