“ಹೆಣ್ಣುಮಕ್ಕಳು ತಮ್ಮ ಕಾಲ ಮೇಲೆ ನಿಲ್ಲಬೇಕು. ತನ್ನ ಸಾಮರ್ಥ್ಯವನ್ನು ಸಮಾಜಕ್ಕೆ ಧಾರೆ ಎರೆಯುವ ರೀತಿ ಅವಳಿಗೆ ವಿದ್ಯಾಭ್ಯಾಸ ದೊರೆಯಬೇಕು. ತಮ್ಮ ಮನೆಯ ಹೆಣ್ಣುಮಕ್ಕಳಿಗೆ ಉನ್ನತ ಶಿಕ್ಷಣ ಕೊಡಿಸಲು ಹೆತ್ತವರು ಮುಂದಾಗಬೇಕು. ಸರಕಾರಿ ಹುದ್ದೆಯಲ್ಲಿ ಬಂಟರು ಕಡಿಮೆ ಸಂಖ್ಯೆಯಲ್ಲಿದ್ದಾರೆ. ಐಎಎಸ್ ಪರೀಕ್ಷೆ ಬರೆಯಲು ಹಿಂದುಳಿದ ವರ್ಗಗಳ ಮೀಸಲಾತಿ ಕೇಂದ್ರ ಸರಕಾರದಿಂದ ಇದೆ ಆದರೆ ನಮ್ಮ ಬಂಟ ಸಮುದಾಯಕ್ಕೆ ಲಭ್ಯವಿಲ್ಲ. ಇದು ಅಗತ್ಯವಾಗಿ ಬೇಕಾಗಿದೆ. ಅದಕ್ಕಾಗಿ ನಮ್ಮ ಬಂಟ ಸಮಾಜ ಪ್ರಾಮಾಣಿಕ ಪ್ರಯತ್ನ ಮಾಡಬೇಕು” ಎಂದು ಉಡುಪಿ ಜಿಲ್ಲಾಧಿಕಾರಿ ಡಾ. ವಿದ್ಯಾಕುಮಾರಿ ಅವರು ಹೇಳಿದರು. ಅವರು ಬಂಟರ ಯಾನೆ ನಾಡವರ ಮಾತೃ ಸಂಘ, ಶ್ರೀ ಸಿದ್ಧಿವಿನಾಯಕ ಪ್ರತಿಷ್ಠಾನ ಹಾಗೂ ಸಾರ್ವಜನಿಕ ಶ್ರೀ ಗಣೇಶೋತ್ಸವ ಸಮಿತಿಯ ಆಶ್ರಯದಲ್ಲಿ ದ.ಕ., ಉಡುಪಿ ಹಾಗೂ ಕಾಸರಗೋಡಿನ ವಿವಿಧ ಬಂಟರ ಸಂಘಗಳ ಸಹಭಾಗಿತ್ವದಲ್ಲಿ ಸಾರ್ವಜನಿಕ ಶ್ರೀ ಗಣೇಶೋತ್ಸವ ಅಂಗವಾಗಿ ಬಂಟ್ಸ್ ಹಾಸ್ಟೆಲ್ ನ ಓಂಕಾರ ನಗರದಲ್ಲಿ ನಡೆದ ಗಣೇಶೋತ್ಸವ ಕಾರ್ಯಕ್ರಮದ ಧಾರ್ಮಿಕ ಸಭೆಯಲ್ಲಿ ಸನ್ಮಾನ ಸ್ವೀಕರಿಸಿ ಮಾತಾಡಿದರು.
ವೇದಿಕೆಯಲ್ಲಿ ಮಂಗಳೂರು ಮೇಯರ್ ಸುಧೀರ್ ಶೆಟ್ಟಿ ಕಣ್ಣೂರು ಅವರನ್ನು ಅತಿಥಿಗಳು ಸನ್ಮಾನಿಸಿದರು. ಬಳಿಕ ಮಾತಾಡಿದ ಸುಧೀರ್ ಶೆಟ್ಟಿ ಕಣ್ಣೂರು ಅವರು, ‘ಬಂಟ ಸಮುದಾಯ ಇಂದು ದಕ್ಷಿಣ ಕನ್ನಡ, ಉಡುಪಿ, ಕಾಸರಗೋಡು ಜಿಲ್ಲೆಗಳ ಅದೆಷ್ಟೋ ದೇವಸ್ಥಾನಗಳ ಜೀರ್ಣೋದ್ಧಾರಕ್ಕೆ ಶ್ರಮಿಸುತ್ತಿದೆ. ಕೇವಲ ಸಮುದಾಯದ ಹಿತವನ್ನು ಕಾಯದೆ ಸಮಾಜದ ಎಲ್ಲಾ ವರ್ಗಗಳ ಜನರನ್ನು ಒಂದೇ ರೀತಿ ನೋಡುವ ಬಂಟರು ಇದೇ ಕಾರಣಕ್ಕೆ ಸಮಾಜದಲ್ಲಿ ಗುರುತಿಸಲ್ಪಡುತ್ತಿದ್ದಾರೆ. ನಾನು ಪಕ್ಷ ಕೊಟ್ಟಿರುವ ಜವಾಬ್ದಾರಿಯನ್ನು ಶ್ರಮವಹಿಸಿ ನಿರ್ವಹಿಸಿ ಮಂಗಳೂರು ಮಹಾನಗರ ಪಾಲಿಕೆಯ ವ್ಯಾಪ್ತಿಯಲ್ಲಿ ಎಲ್ಲರನ್ನೂ ಸಮಾನವಾಗಿ ಕಾಣುವ ಮೂಲಕ ಪಾಲಿಕೆಯನ್ನು ಅಭಿವೃದ್ಧಿ ಕಾರ್ಯದಲ್ಲಿ ಉತ್ತುಂಗಕ್ಕೆ ಏರಿಸಲು ಬದ್ಧನಾಗಿದ್ದೇನೆ. ಬಾಲ ಗಂಗಾಧರ್ ತಿಲಕ್ ಅವರು ಪ್ರಾರಂಭಿಸಿದ ಗಣೇಶೋತ್ಸವವನ್ನು ದೇಶದಾದ್ಯಂತ ಇಂದು ಶ್ರದ್ಧಾಭಕ್ತಿಯಿಂದ ಆಚರಿಸಲಾಗುತ್ತಿದೆ. ಬಂಟರ ಸಂಘವು ಮುಂದೆಯೂ ಇದೇ ರೀತಿ ಸಮಾಜವನ್ನು ಒಗ್ಗೂಡಿಸಿಕೊಂಡು ಗಣೇಶೋತ್ಸವ ಆಚರಿಸುವ ಮೂಲಕ ಸಮಾಜಕ್ಕೆ ಮಾದರಿಯಾಗಬೇಕು” ಎಂದರು.
ಬಂಟರ ಯಾನೆ ನಾಡವರ ಮಾತೃ ಸಂಘದ ಅಧ್ಯಕ್ಷ, ಸಿದ್ದಿವಿನಾಯಕ ಪ್ರತಿಷ್ಠಾನದ ಟ್ರಸ್ಟಿ ಅಜಿತ್ ಕುಮಾರ್ ರೈ ಮಾಲಾಡಿ ಅಧ್ಯಕ್ಷತೆ ವಹಿಸಿದ್ದರು. ವೇದಿಕೆಯಲ್ಲಿ ವಿಧಾನಸಭಾ ಸ್ಪೀಕರ್ ಯು.ಟಿ. ಖಾದರ್, ಮಂಗಳೂರು ಯುನಿವರ್ಸಿಟಿ ಪ್ರೊ ಚಾನ್ಸೆಲರ್ ಡಾ ಎ ಶ್ರೀನಿವಾಸ್ ರಾವ್, ಕೆನರಾ ವಿದ್ಯಾಸಂಸ್ಥೆಯ ಗೌರವ ಕಾರ್ಯದರ್ಶಿ ಎಮ್ ರಂಗನಾಥ್ ಭಟ್, ಯೂನಿಯನ್ ಬ್ಯಾಂಕ್ ಆಫ್ ಇಂಡಿಯಾ ಜೋನಲ್ ಹೆಡ್ ರೇಣು ಕೆ ನಾಯರ್, ರಾಷ್ಟ್ರೀಯ ಕೃಷಿ ಪ್ರಶಸ್ತಿ ಪುರಸ್ಕೃತ ಕಡಮಜಲು ಸುಭಾಸ್ ರೈ, ಬಂಟರ ಮಾತೃ ಸಂಘದ ಉಪಾಧ್ಯಕ್ಷ ಕಾವು ಹೇಮನಾಥ ಶೆಟ್ಟಿ, ಪ್ರಧಾನ ಕಾರ್ಯದರ್ಶಿ ಕೆ.ಎಮ್ ಶೆಟ್ಟಿ, ಕೋಶಾಧಿಕಾರಿ ರಾಮಮೋಹನ್ ರೈ, ಶ್ರೀ ಸಿದ್ದಿ ವಿನಾಯಕ ಪ್ರತಿಷ್ಠಾನದ ಟ್ರಸ್ಟಿಗಳಾದ ಕೃಷ್ಣ ಪ್ರಸಾದ್ ರೈ, ನಿಟ್ಟೆಗುತ್ತು ರವಿರಾಜ ಶೆಟ್ಟಿ, ಜಿಲ್ಲಾ ಸಂಚಾಲಕ ಬಿ.ನಾಗರಾಜ ಶೆಟ್ಟಿ, ಎಮ್ ಸಂಜೀವ ಶೆಟ್ಟಿ ಕಾಸರಗೋಡು, ಮೊದಲಾದವರು ಉಪಸ್ಥಿತರಿದ್ದರು.
ಇದೇ ಸಂದರ್ಭದಲ್ಲಿ ವಿಧಾನ ಸಭಾಧ್ಯಕ್ಷ ಯು.ಟಿ.ಖಾದರ್, ಹಿರಿಯ ವೈದ್ಯ ಡಾ.ಯು. ಮಾಧವ ಶೆಟ್ಟಿ, ಯಕ್ಷಗಾನ ಕ್ಷೇತ್ರದ ಕಿಶನ್ ಹೆಗ್ಡೆ, ಸಂಗೀತ ಕ್ಷೇತ್ರದ ವಿದ್ವಾನ್ ಬಾಬು ರೈ ಅವರನ್ನು ಸನ್ಮಾನಿಸಲಾಯಿತು.
ಸನ್ಮಾನ ಸ್ವೀಕರಿಸಿ ಮಾತಾಡಿದ ಕಿಶನ್ ಹೆಗ್ಡೆ ಅವರು, “ಗೌರವ ಸನ್ಮಾನದಿಂದ ನಮ್ಮ ಜವಾಬ್ದಾರಿಗಳು ಇನ್ನಷ್ಟು ಹೆಚ್ಚಾಗುತ್ತವೆ. ನಮ್ಮ ಶ್ರಮವನ್ನು ನೀವು ಗುರುತಿಸಿದ್ದೀರಿ, ಇನ್ನಷ್ಟು ಸಾಧನೆ ಮಾಡಲು ಪ್ರೆರೇಪಣೆ ನೀಡಿದ್ದೀರಿ. ಯಕ್ಷಗಾನ ರಂಗದಲ್ಲಿ ಇನ್ನಷ್ಟು ದುಡಿಯಲು ಇಂತಹ ಸಾರ್ವಜನಿಕ ಸನ್ಮಾನಗಳು ಉತ್ತೇಜನ ನೀಡುತ್ತವೆ” ಎಂದರು. ಜಿಲ್ಲಾ ಸಂಚಾಲಕ ಬಿ.ನಾಗರಾಜ್ ಶೆಟ್ಟಿ ಪ್ರಾಸ್ತಾವಿಕ ಮಾತನ್ನಾಡಿ ಅತಿಥಿಗಳನ್ನು ಸ್ವಾಗತಿಸಿದರು.
ಅಭಿಷೇಕ್ ಶೆಟ್ಟಿ, ಕವಿತಾ ಪಕ್ಕಳ ಕಾರ್ಯಕ್ರಮ ನಿರೂಪಿಸಿದರು. ಕೃಷ್ಣಪ್ರಸಾದ್ ರೈ ಬೆಳ್ಳಿಪಾಡಿ ವಂದಿಸಿದರು. ಬಳಿಕ ಸಾಂಸ್ಕೃತಿಕ ಕಾರ್ಯಕ್ರಮ ಜರಗಿತು.