ರಾಜ್ಯದಲ್ಲಿ ಪದವಿ ಶಿಕ್ಷಣದಲ್ಲಿ ರಾಷ್ಟ್ರೀಯ ಶಿಕ್ಷಣ ನೀತಿಯನ್ನು ಅಳವಡಿಸಿ ಎರಡು ವರ್ಷಗಳು ಸಂದಿವೆ. ಜಾರಿಯಾದ ಮೊದಲ ವರ್ಷದಲ್ಲಿ ಒಂದಿಷ್ಟು ಗೊಂದಲ ಗಳು ಸೃಷ್ಟಿಯಾಗಿ ಕಾಲೇಜುಗಳೂ ಇದರ ಅನುಷ್ಠಾನಕ್ಕೆ ಹಿಂಜರಿದುದು ಸಹಜ. ಆದರೆ ಈಗ ಬಹುತೇಕ ಕಾಲೇಜುಗಳು ಹೊಸ ಶಿಕ್ಷಣ ನೀತಿಯ ಆಶಯವನ್ನು ಅರ್ಥೈಸಿಕೊಂಡು, ಹೊಸ ಪಠ್ಯ ಕ್ರಮಕ್ಕನುಗುಣವಾದ ಅಗತ್ಯ ಸೌಲಭ್ಯಗಳನ್ನು ಅಳವಡಿಸಿಕೊಂಡು ವಿದ್ಯಾರ್ಥಿಗಳಿಗೆ ಗುಣಮಟ್ಟದ ಶಿಕ್ಷಣ ನೀಡುವಲ್ಲಿ ಸಫಲವಾಗಿವೆ. ಆದರೆ ಎನ್ಇಪಿ ಜಾರಿಯ ಬಳಿಕ ವಿಜ್ಞಾನ ಮತ್ತು ಕಲಾ ಪದವಿಗೆ ಸೇರ್ಪಡೆಗೊಳ್ಳುತ್ತಿರುವ ವಿದ್ಯಾರ್ಥಿಗಳ ಸಂಖ್ಯೆ ಕಡಿಮೆಯಾಗಿರು ವುದು ಜಿಜ್ಞಾಸೆ ಹುಟ್ಟುಹಾಕಿದೆ. ವಾಸ್ತವದಲ್ಲಿ ರಾಷ್ಟ್ರೀಯ ಶಿಕ್ಷಣ ನೀತಿಯಡಿ ಈ ಎರಡೂ ಪದವಿಗಳಿಗೆ ಹೆಚ್ಚಿನ ಮಹತ್ವ ಲಭಿಸಿದ್ದು ಇದನ್ನು ವಿದ್ಯಾರ್ಥಿ ಗಳು ಮತ್ತವರ ಹೆತ್ತವರು ಮನಗಾಣಬೇಕು.
ಕೊರೊನಾದಿಂದಾಗಿ ಪದವಿ ಶಿಕ್ಷಣದ ವೇಳಾ ಪಟ್ಟಿಯಲ್ಲಿ ಆಗಿರುವ ಏರುಪೇರು ಇನ್ನೂ ಸರಿಯಾಗಿಲ್ಲ. ಹಿಂದಿನ ಪ್ರಕಾರ ಈಗ ಸೆಮ್ ಎಂಡ್ ಪರೀಕ್ಷೆ ಮುಗಿದು ವಿದ್ಯಾರ್ಥಿಗಳಿಗೆ ರಜಾದಿನಗಳಾಗಬೇಕಿತ್ತು. ಆದರೆ ಉರಿ ಬೇಸಗೆಯ ಈ ದಿನಗಳಲ್ಲೂ ಈಗ ಎರಡನೆಯ ಸೆಮ್ನ ಪಾಠಪ್ರವಚನಗಳು ನಡೆಯುತ್ತಿವೆ. ಜತೆಗೆ ಪಿಯುಸಿ ಮುಗಿಸಿಕೊಂಡ ವಿದ್ಯಾರ್ಥಿಗಳ ಪದವಿ ತರಗತಿಗಳ ಪ್ರವೇಶಾತಿಯೂ ನಡೆಯು ತ್ತಿದೆ. ಆದರೆ ಈ ಸಂದರ್ಭ ಈಗ ಬಿಎ ಮತ್ತು ಬಿಎಸ್ಸಿ ತರಗತಿಗಳಿಗೆ ವಿದ್ಯಾರ್ಥಿಗಳ ಪ್ರವೇಶಾತಿ ತೀರಾ ಕಡಿಮೆಯಾಗುತ್ತಿರುವುದು ಗಂಭೀರ ವಿಷಯವೇ ಸರಿ. ಈ ಹಿನ್ನೆಲೆಯಲ್ಲಿ ಒಂದಿಷ್ಟು ಚಿಂತನೆ ಇಲ್ಲಿದೆ.
ಕರ್ನಾಟಕದಲ್ಲಿ ಪದವಿ ಶಿಕ್ಷಣದಲ್ಲಿ ಎನ್ಇಪಿಯನ್ನು 2021-22ನೇ ಶೈಕ್ಷಣಿಕ ವರ್ಷ ದಿಂದ ಆರಂಭಿಸಲಾಗಿದೆ. ಆರಂಭಿಕ ಗೊಂದಲ ಗಳ ನಡುವೆಯೂ ಎನ್ಇಪಿ-2020ರ ಆಶಯವನ್ನು ಇಂದು ನಾಡಿನಾದ್ಯಂತ ಎಲ್ಲ ಪದವಿ ಕಾಲೇಜುಗಳೂ ಪೂರೈಸುತ್ತಿವೆ. ಹೊಸ ಪಠ್ಯಕ್ರಮಗಳಿಗೆ ಪೂರಕವಾದ ಎಲ್ಲ ಸೌಲಭ್ಯ ಗಳನ್ನು ಅಳವಡಿಸಿಕೊಂಡು ಯಶಸ್ವಿಯಾಗಿ ಹೊಸ ಶಿಕ್ಷಣ ನೀತಿಯನ್ವಯ ಗುಣಮಟ್ಟದ ಶಿಕ್ಷಣ ನೀಡುತ್ತಿವೆ.
ರಾಷ್ಟ್ರೀಯ ಶಿಕ್ಷಣ ನೀತಿಯಲ್ಲಿ ಪದವಿ ಶಿಕ್ಷಣ
2020ರ ರಾಷ್ಟ್ರೀಯ ಶಿಕ್ಷಣ ನೀತಿಯ ಪ್ರಕಾರ ಹೊಸಯುಗದ ಅಗತ್ಯಗಳನ್ನು ಮನಗಂಡು ಸಾಂಪ್ರದಾಯಿಕ ಪದವಿ ಶಿಕ್ಷಣದಲ್ಲಿ ಆಮೂಲಾಗ್ರ ಬದಲಾವಣೆ ತರಲಾಗಿದೆ. ಪದವಿಯಲ್ಲಿ ಮೂರು ಪ್ರಧಾನ ವಿಷಯಗಳ ಬದಲಿಗೆ ಕೇವಲ ಎರಡು ಪ್ರಧಾನ ವಿಷಯ ಗಳನ್ನು ಮಾತ್ರ ಎರಡು ಭಾಷಾ ವಿಷಯ ಗಳೊಂದಿಗೆ ಆಯ್ಕೆ ಮಾಡಿಕೊಳ್ಳಬೇಕು, ಮತ್ತೂಂದನ್ನು ಬೇರೆ ಯಾವುದೇ ಶಿಸ್ತಿನ ವಿಷಯವನ್ನಾದರೂ ಸರಿ, ಮುಕ್ತವಾಗಿ ಆಯ್ಕೆ ಮಾಡಿಕೊಳ್ಳಲು ಅವಕಾಶವಿದೆ. ಉದಾಹರಣೆಗೆ ಕಲಾ ವಿಭಾಗದಲ್ಲಿ ಇತಿಹಾಸ ಮತ್ತು ರಾಜ್ಯಶಾಸ್ತ್ರ ವಿಷಯವನ್ನು ಪ್ರಧಾನ ವಿಷಯವಾಗಿ ತೆಗೆದುಕೊಂಡರೆ ಮತ್ತೂಂದು ವಿಷಯವನ್ನು ವಿದ್ಯಾರ್ಥಿಯು ತನಗೆ ಆಸಕ್ತಿಯಿರುವ ಕನ್ನಡ ಸಾಹಿತ್ಯ, ಪತ್ರಿಕೋದ್ಯಮ, ಅರ್ಥಶಾಸ್ತ್ರ, ವಿಜ್ಞಾನ ಸಂಬಂಧಿ ವಿಷಯ ಅಥವಾ ಕಾಮರ್ಸ್ ಸಂಬಂಧಿ ಯಾವುದಾದರೊಂದು ವಿಷಯವನ್ನು ಆಯ್ಕೆ ಮಾಡಿಕೊಳ್ಳಬಹುದು; ಪ್ರತಿಯೊಂದು ಸೆಮ್ಗೆ ಯಾವುದಾದರೂ ಒಂದು ಹೊಸ ವಿಷಯವನ್ನು ಆಯ್ಕೆ ಮಾಡಿಕೊಳ್ಳಲು ಉತ್ತಮ ಅವಕಾಶವಿದೆ. ಅಲ್ಲದೆ ಭಾರತದ ಸಂವಿಧಾನ, ಪರಿಸರ ವಿಜ್ಞಾನ, ಕ್ರೀಡೆ, ಯೋಗ, ಡಿಜಿಟಲ್ ತಜ್ಞತೆ, ಕೃತಕ ಬುದ್ಧಿಮತ್ತೆ (ಆರ್ಟಿಫಿಶಿಯಲ್ ಇಂಟೆಲಿಜೆನ್ಸ್)-ಇತ್ಯಾದಿ ಹಲವು ಅಗತ್ಯ ವಿಷಯಗಳನ್ನು ಕಡ್ಡಾಯವಾಗಿ ತಿಳಿದುಕೊಳ್ಳಲು ಅನುಕೂಲ ಮಾಡಿಕೊಡಲಾಗಿದೆ. ಹಾಗೆಯೇ ಸ್ಥಳೀಯ ಪಾರಂಪರಿಕ ಜ್ಞಾನ-ವಿಜ್ಞಾನಗಳಿಗೆ (ಕುಂಬಾರಿಕೆ, ಬಡಗಿ, ಕಮ್ಮಾರಿಕೆ, ನೇಕಾರಿಕೆ ಇತ್ಯಾದಿ), ದೇಶೀಯ ಭಾಷೆಗಳಿಗೆ, ಸಂಶೋಧನ ಸಂಗತಿಗಳಿಗೆ ರಾಷ್ಟ್ರೀಯ ಶಿಕ್ಷಣ ನೀತಿಯ ಪಠ್ಯಕ್ರಮದಲ್ಲಿ ವಿಶೇಷ ಆದ್ಯತೆ ನೀಡಲಾಗಿದೆ. ಇನ್ನೊಂದು ವಿಶೇಷ ಎಂದರೆ ಪದವಿಗೆ ಒಂದು ಕಡೆ ಪ್ರವೇಶ ಪಡೆದು ವ್ಯಾಸಂಗವನ್ನು ಕಾರಣಾಂತರದಿಂದ ಮೊಟಕುಗೊಳಿಸಿದ ಪಕ್ಷದಲ್ಲಿ ಮತ್ತೆ ಅದೇ ವಿಷಯದಲ್ಲಿ ಅಧ್ಯಯನವನ್ನು ದೇಶದ ಯಾವುದೇ ಭಾಗದಲ್ಲೂ ಮುಂದುವರಿಸಬಹುದಾಗಿದೆ. ಎನ್ಇಪಿ (ನ್ಯಾಶನಲ್ ಎಜುಕೇಶನ್ ಪಾಲಿಸಿ)ಯಲ್ಲಿ ಒಂದು ವರ್ಷ ಓದಿ ಬಿಟ್ಟು ಹೋದರೆ ಸರ್ಟಿಫಿಕೆಟ್ ಕೋರ್ಸ್ ಎಂದೂ, ಎರಡು ವರ್ಷ ಓದಿ ಬಿಟ್ಟುಹೋದರೆ ಡಿಪ್ಲೊಮಾ ಕೋರ್ಸ್ ಎಂದೂ, ಮೂರು ವರ್ಷ ಓದಿದರೆ ಪದವಿ ಎಂದೂ ಪ್ರಮಾಣ ಪತ್ರ ನೀಡಲಾಗುತ್ತದೆ. ಮಾತ್ರವಲ್ಲ, ಆಯಾ ವರ್ಷದ ಕೋರ್ಸ್ಗಳಿಗೆ ಸಂಬಂಧಿಸಿದಂತೆ ನೇರ ಉದ್ಯೋಗಗಳಿಗೆ ಸೇರಲು ಇಲ್ಲಿ ಹೆಚ್ಚಿನ ಅವಕಾಶಗಳಿವೆ. ಆ ರೀತಿ ಯಲ್ಲಿ ಪಠ್ಯಕ್ರಮಗಳನ್ನು ಸಿದ್ಧಪಡಿಸಲಾಗಿದೆ. ಅಂದರೆ ಎನ್ಇಪಿ ಅಡಿಯಲ್ಲಿ ಪದವಿ ಶಿಕ್ಷಣವು ಕೌಶಲಾಧಾರಿತವೂ ಹೌದು; ಉದ್ಯೋಗ ಕೇಂದ್ರಿತವೂ ಹೌದು; ಭಾರತೀಯ ಜೀವನ ಮೌಲ್ಯಗಳ ಜ್ಞಾನ ಪರಂಪರೆಯ ಸಂರಕ್ಷಣೆಯ ಉದ್ದೇಶಕ್ಕೆ ಪೂರಕವಾದದ್ದೂ ಹೌದು.
ತಪ್ಪು ತಿಳಿವಳಿಕೆ ಬೇಡ
ರಾಷ್ಟ್ರೀಯ ಶಿಕ್ಷಣ ನೀತಿಯನ್ನು ಅನುಷ್ಠಾನಕ್ಕೆ ತರುವಾಗ ತಿಳಿವಳಿಕೆಯ ಕೊರತೆಯಿಂದ ಸಾಮಾನ್ಯವಾಗಿ ತಪ್ಪು ಅಭಿಪ್ರಾಯಗಳು ಹರಿದಾಡಿರುವುದು ಸಹಜ. ಮೂರು ವರ್ಷ ಓದುತ್ತಿದ್ದ ಪದವಿಯನ್ನು ಈಗ ನಾಲ್ಕು ವರ್ಷ ಓದಬೇಕಾ? ಎಂದು ತಿಳಿದುಕೊಂಡವರೂ ಅನೇಕರಿ¨ªಾರೆ. ಖಂಡಿತ ಇಲ್ಲ, ಪದವಿ ಓದಲು ಹಿಂದಿನಂತೆ ಮೂರೇ ವರ್ಷ. ಒಂದು ವರ್ಷ ಹೆಚ್ಚು ಓದಬೇಕೆನ್ನುವವರಿಗೆ ಆನರ್ಸ್ ಪ್ರಮಾಣ ಪತ್ರ ಸಿಗಲಿದೆ. ಆದರೆ ಇದು ಯಾವುದೂ ಕಡ್ಡಾಯವಲ್ಲ. ಹಾಗೆಯೇ ಮೂರು ವರ್ಷ ಪದವಿ ಪಡೆದು ಹಿಂದಿನಂತೆ ಎರಡು ವರ್ಷದ ಸ್ನಾತಕೋತ್ತರ ಪದವಿ ಮಾಡಲೂ ಅವಕಾಶವಿದೆ ಅಥವಾ ನಾಲ್ಕು ವರ್ಷದ ಆನರ್ಸ್ ಓದಿದರೆ ಅನಂತರ ಕೇವಲ ಒಂದು ವರ್ಷದಲ್ಲಿ ಸ್ನಾತಕೋತ್ತರ ಪದವಿಯನ್ನೂ ಮುಗಿ ಸಬಹುದು. ಇಲ್ಲವೇ ಆನರ್ಸ್ ಮುಗಿಸಿ ನೇರ ಸಂಶೋಧನೆಗೂ ಹೋಗಬಹುದು. ಹಾಗಾಗಿ ರಾಷ್ಟ್ರೀಯ ಶಿಕ್ಷಣ ನೀತಿಯನ್ನು ಸರಿಯಾಗಿ ತಿಳಿದುಕೊಂಡಲ್ಲಿ ಉತ್ತಮವಾದ ಮುಕ್ತ ಅವಕಾಶಗಳು ಇಲ್ಲಿವೆ.
ಬಿಎ, ಬಿಎಸ್ಸಿಯಲ್ಲಿ ಶೈಕ್ಷಣಿಕ ಸಾಧನೆಗೆ ಸುಂದರ ಅವಕಾಶಗಳು
ಮೊದಲೇ ಹೇಳಿದಂತೆ ಇತ್ತೀಚಿನ ದಿನಗಳಲ್ಲಿ ಬಿಎ, ಬಿಎಸ್ಸಿ ಪದವಿಗಳಿಗೆ ಕಾಲೇಜುಗಳಲ್ಲಿ ಪ್ರವೇಶ ಪಡೆಯುವ ವಿದ್ಯಾರ್ಥಿಗಳ ಸಂಖ್ಯೆ ಗಣನೀಯವಾಗಿ ಕಡಿಮೆಯಾಗುತ್ತಿದೆ. ಇದಕ್ಕೆ ಹೊಸಯುಗದ ಶೈಕ್ಷಣಿಕ ಮತ್ತು ಔದ್ಯೋಗಿಕ ಅವಕಾಶಗಳು ಕಾರಣ ಇರಬಹುದು. ಇದರಿಂದಾಗಿ ಈಗ ಕಲೆ ಮತ್ತು ಮಾನವಿಕ ವಿಭಾಗಗಳಲ್ಲಿ ವಿದ್ವಾಂಸರ ಹಾಗೂ ಮೂಲಭೂತ ವಿಜ್ಞಾನ ವಿಭಾಗದಲ್ಲಿ ಒಳ್ಳೆಯ ಸಂಶೋಧಕರ ಕೊರತೆಯಿದೆ. ಆಸಕ್ತಿ ಮತ್ತು ಶ್ರದ್ಧೆಯಿಂದ ಆರ್ಟ್ಸ್ ಮತ್ತು ಸೈನ್ಸ್ ವಿಷಯಗಳಲ್ಲಿ ಪದವಿಯನ್ನು ಮಾಡುವ ವಿದ್ಯಾರ್ಥಿಗಳಿಗೆ ಈಗ ದೊಡ್ಡ ಪ್ರಮಾಣದ ಉದ್ಯೋಗಾವಕಾಶಗಳು ತೆರೆದುಕೊಂಡಿವೆ. ಇತಿಹಾಸ, ರಾಜ್ಯಶಾಸ್ತ್ರ, ಅರ್ಥಶಾಸ್ತ್ರ, ಸಮಾಜ ಶಾಸ್ತ್ರ, ಕನ್ನಡ ಸಾಹಿತ್ಯ ಮುಂತಾದ ವಿಷಯಗಳಲ್ಲಿ ಸಾಕಷ್ಟು ಸಾಧನೆ ಮಾಡಬಹುದಾಗಿದೆ. ಆದ್ದರಿಂದ ಕೇವಲ ಹೊಸ ಹೊಸ ಆಧುನಿಕ ಕೋರ್ಸ್ಗಳನ್ನಷ್ಟೇ ಹುಡು ಕುವ ಬದಲಿಗೆ ಸಾಂಪ್ರದಾಯಿಕ ಕೋರ್ಸ್ ಗಳಲ್ಲಿರುವ ವಿಪುಲ ಅವಕಾಶಗಳ ಬಗ್ಗೆ ಹೆಚ್ಚಿನ ತಿಳಿವಳಿಕೆ ಪಡೆಯುವುದು ಉತ್ತಮ. ಈ ದಿಸೆಯಲ್ಲಿ ಪಿಯುಸಿ ಪಾಸಾದ ವಿದ್ಯಾರ್ಥಿಗಳು ಮತ್ತು ಪೋಷಕರು ಒಂದಿಷ್ಟು ಚಿಂತನೆ ಮಾಡುವುದೊಳಿತು.