ಮುಂಬಯಿ (ಆರ್ಬಿಐ), ಮೇ. 27: ಬರಹಗಾರರಿಗೆ ಅಸಕ್ತಿ ಮತ್ತು ಸೃಜನಶೀಲತೆ ಇದ್ದರೆ ಉತ್ತಮ ಬರಹಗಾರ ಆಗಲು ಸಾಧ್ಯ. ಇದನ್ನು ತರಬೇತಿ ಪಡೆದು ಗಳಿಸಲು ಸಾಧ್ಯವಿಲ್ಲ. ಇಂತಹ ಕಲೆ ದೈವದತ್ತವಾಗಿ ಬಂದಿರುತ್ತದೆ ಅದಕ್ಕೆ ಪ್ರೋತ್ಸಾ ನೀಡುವ ಕಾರ್ಯ ಎಳವೆಯಲ್ಲಿ ಹೆತ್ತವರಿಂದ ಆಗಬೇಕು ಅಶ್ವಿತಾ ಶೆಟ್ಟಿ ಇಂತಹ ಅವಕಾಶವನ್ನು ಪಡೆದಿದ್ದು, ಮುಂದಿನ ದಿನಗಳಲ್ಲಿ ಉತ್ತಮ ಬರಹಗಾರ್ತಿಯಾಗಿ ಬೆಳೆಯಲು ಅವಕಾಶವಿದ್ದು, ಅವರಿಂದ ಇನ್ನಷ್ಟು ಕೃತಿಗಳು ಮೂಡಿಬರಲಿ ಎಂದು ಕರ್ನಾಟಕ ಹೈಕೋರ್ಟ್ನ ನ್ಯಾಯಾದೀಶ ಎಸ್.ವಿಶ್ವಜಿತ್ ಶೆಟ್ಟಿ ಅಭಿಪ್ರಾಯಪಟ್ಟರು.

ಬೆಂಗಳೂರಿನ ಟೋಟಲ್ ಕನ್ನಡ ಮತ್ತು ಐಲೇಸಾ ದಿ ವಾಯ್ಸ್ ಆಫ್ ಓಸಿಯನ್ ಸಂಸ್ಥೆಯ ಸಹಯೋಗದಲ್ಲಿ ಮುಂಬಯಿಯ ಯುವ ಲೇಖಕಿ ಅಶ್ವಿತಾ ಶೆಟ್ಟಿ ಅವರ ಚೊಚ್ಚಲ ಕಥಾ ಸಂಕಲನ `ಮರ್ಸಿಡಿಸ್ ಬೆಂಜ್ನ ಹಿಂದೆ“ಶನಿವಾರ ಇನೋಳಿ ದೇವಂದಬೆಟ್ಟ ಶ್ರೀ ಸೋಮನಾಥೇಶ್ವರ ದುರ್ಗಾಪರಮೇಶ್ವರಿ ದೇವಸ್ಥಾನದಲ್ಲಿ ನಡೆದ ಕಾರ್ಯಕ್ರಮದಲ್ಲಿ ಬಿಡುಗಡೆಗೊಳಿಸಿ ಮಾತನಾಡಿ ಯುವ ಬರಹಗಾರ್ತಿಯ ಚೊಚ್ಚಲ ಕೃತಿ ದೇವಸ್ಥಾನದಲ್ಲಿ ಬಿಡುಗಡೆ ಶ್ಲಾಘನೀಯ ಎಂದ ಅವರು ಸಾಹಿತಿಗಳ ಕೊಡುಗೆ ಸಮಾಜ ಗುರುತಿಸದಿರುವುದು ಖೇದಕರ ಎಂದರು.
ಮಂಗಳೂರು ಎಂಆರ್ಪಿಎಲ್ನ ನಿವೃತ್ತ ವ್ಯವಸ್ಥಾಪಕ ನಿರ್ದೇಶಕಿ ವೀಣಾ ಟಿ.ಶೆಟ್ಟಿ ಮಾತನಾಡಿ, ಇಂದು ನಮ್ಮಲ್ಲಿ ಸಾಕಷ್ಟು ಹಣವಿದೆ, ಆದರೆ ಮೌಲ್ಯದ ಕೊರತೆ ಇದೆ. ಮೌಲ್ಯಗಳನ್ನು ಕಟ್ಟಿ ಕೊಡುವಲ್ಲಿ ಸಾಹಿತ್ಯದ ಕೊಡುಗೆ ಸಮಾಜ, ಉತ್ತಮ ಸಮಾಜ ನಿರ್ಮಾಣಕ್ಕೆ ಸಾಹಿತ್ಯಾಭಿರುಚಿ ಅಗತ್ಯ ಎಂದರು.
ಕಾರ್ಯಕ್ರಮದಲ್ಲಿ ಕಾಪು ಕ್ಷೇತ್ರದ ಶಾಸಕ ಸುರೇಶ್ ಶೆಟ್ಟಿ ಗುರ್ಮೆ, ಮಾಜಿ ಶಾಸಕ ಲಾಲಾಜಿ ಮೆಂಡನ್, ಐಲೇಸಾ ದಿ ವಾಯ್ಸ್ ಆಫ್ ಓಸಿಯನ್ ಸಂಸ್ಥೆಯ ಮುಖ್ಯಸ್ಥ ಹಾಗೂ ಬರಹಗಾರ ಶಾಂತರಾಮ್ ವಿ.ಶೆಟ್ಟಿ, ಬೆಂಗಳೂರಿನ ಟೋಟಲ್ ಕನ್ನಡ ಪ್ರಕಾಶಕ ಲಕ್ಷ್ಮಿಕಾಂತ್ ವಿ., ನಿವೃತ್ತ ಮುಖ್ಯಶಿಕ್ಷಕ ಗಂಗಾಧರ ಪೂಜಾರಿ, ಬಂಟರ ಯಾನೆ ನಾಡವರ ಮಾತೃ ಸಂಘದ ಅಧ್ಯಕ್ಷ ಅಜಿತ್ ಕುಮಾರ್ ರೈ ಮಾಲಾಡಿ, ಉದಯ ಕುಮಾರ್ ಶೆಟ್ಟಿ ಮುನಿಯಾಲು, ಸಿವಿಲ್ ನ್ಯಾಯಾಧೀಶ ಪ್ರಸಾದ್ ಕೆ.ವಿ., ಕರ್ನಿರೆ ವಿಶ್ವನಾಥ ಶೆಟ್ಟಿ, ಶ್ರೀ ಸೋಮನಾಥೇಶ್ವರ ದುರ್ಗಾಪರಮೇಶ್ವರಿ ದೇವಸ್ಥಾನದ ಆಡಳಿತ ಮೊಕ್ತೇಸರ ಚಂದ್ರಹಾಸ ಪೂಂಜಾ ಕಿಲ್ಲೂರುಗುತ್ತು, ಕೃತಿಯ ಲೇಖಕಿ ಆಶ್ವಿತಾ ಶೆಟ್ಟಿ, ಪ್ರೇಮಲತಾ ಶೆಟ್ಟಿ, ಶಶಿರಾಜ್ ಕಾವೂರು ಮೊದಲಾದವರು ಉಪಸ್ಥಿತರಿದ್ದರು. ಕಾರ್ಯಕ್ರಮದಲ್ಲಿ ಶ್ರೀ ಕ್ಷೇತ್ರದ ಅಭಿವೃದ್ಧಿಗೆ ಶ್ರಮ ವಹಿಸಿದ ಮೊಕ್ತೇಸರ ಗೋಪಾಲ ಶೆಟ್ಟಿ ಬಾರ್ಲ ಮತ್ತು ಪ್ರೇಮಲತಾ ಶೆಟ್ಟಿ ದಂಪತಿಯನ್ನು ಸನ್ಮಾನಿಸಲಾಯಿತು.
ಹರಿಶ್ಚಂದ್ರ ಶೆಟ್ಟಿ ಕರ್ನಿರೆ ಸ್ವಾಗತಿಸಿದರು. ನಿಟ್ಟೆ ವಿಶ್ವವಿದ್ಯಾಲಯದ ಮಾನವಿಕ ವಿಭಾಗ ಪ್ರಭಾರ ಮುಖ್ಯಸ್ಥೆ ಪೆÇ| ಸಾಯಿಗೀತ ಹೆಗ್ಡೆ ಕೃತಿ ಪರಿಚಯಿಸಿದರು. ರವಿ ರೈ ಪಜೀರ್ ಸನ್ಮಾನ ಪತ್ರ ವಾಚಿಸಿದರು. ಡಾ| ವಿಜಯಲಕ್ಷ್ಮಿ ಕಾರ್ಯಕ್ರಮ ನಿರೂಪಿಸಿದರು. ಸಚಿನ್ ಶೆಟ್ಟಿ ವಂದಿಸಿದರು.

















































































































