ಜಾಹೀರಾತು ಇಂದು ಮಾನವನ ದೈನಂದಿನ ಜೀವನದಲ್ಲಿ ಹಾಸು ಹೊಕ್ಕಾಗಿ ತನ್ನ ಮಹಿಮೆಯನ್ನು ಎಲ್ಲೆಡೆಗೂ ಬಿತ್ತಿ ಬೃಹತ್ ರೂಪ ತಾಳಿದೆ. ಅದೆಷ್ಟು ಅನಿವಾರ್ಯವೆಂದರೆ ಜಾಹೀರಾತು ಇಲ್ಲದೆ ಯಾವ ವಸ್ತು ಮಾರಾಟವಾಗಲೂ ಸಾದ್ಯವಿಲ್ಲ ಎನ್ನುವಷ್ಟರ ಮಟ್ಟಿಗೆ ನಮ್ಮ ಮನಸ್ಥಿತಿ ಬಂದು ಮುಟ್ಟಿದೆ. ಜಾಹೀರಾತು ಜಗತ್ತು ತನ್ನ ಉಳಿವು ಬೆಳವಣಿಗೆಗೆ ಮಹಿಳೆಯರನ್ನು ಆಶ್ರಯಿಸಿಕೊಂಡಿದ್ದು, ಜಾಹೀರಾತು ಜಗತ್ತಿನಲ್ಲಿ ಮಹಿಳೆಯೋ ಮಹಿಳಾ ಜಗತ್ತಿನಲ್ಲಿ ಜಾಹೀರಾತೊ ಎನ್ನುವಷ್ಟರ ಮಟ್ಟಿಗೆ ಜಾಹೀರಾತು ವಿಜ್ರಂಭಿಸುತ್ತಿದೆ, ವೈಭವಿಸುತ್ತಿದೆ.
ಕೆಲವೊಮ್ಮೆ ಜಾಹೀರಾತು ಪ್ರಸ್ತುತಪಡಿಸುವ ರೀತಿ ಆ ರೂಪದರ್ಶಿಗಳನ್ನು ನೋಡಿ ಆನಂದಿಸುವುದರಲ್ಲಿ ಅದು ಯಾವ ವಸ್ತುವಿನ ಬಗ್ಗೆ ಎಂಬುದು ಗಮನಕ್ಕೆ ಬರುವುದಿಲ್ಲ. ಹೆಣ್ಣಿನ ಹೆಣ್ತನ, ಅವಳ ಉಡುಗೆ ತೊಡುಗೆ, ಭಾವುಕತೆಯ ಜಾಹೀರಾತೋ ಎಂಬಂತೆ ಬಿಂಬಿಸುವ ಜಾಹೀರಾತು ಎಲ್ಲೆಡೆ ಹೆಚ್ಚು ಗಮನ ಸೆಳೆಯುವುದು. ಆದರೆ ಮಹಿಳೆಯರನ್ನು ಆರ್ಥಿಕವಾಗಿ ಬಲಸಡ್ಯಾರನ್ನಾಗಿರಿಸಿದೆ ಜಾಹಿರಾತು ಎನ್ನುವ ಸತ್ಯವನ್ನು ದಾರಾಳವಾಗಿ ಒಪ್ಪಿಕೊಳ್ಳ ಬೇಕು. ಹಿಂದೆಲ್ಲ ಒಂದು ನಂಬಿಕೆ ಇತ್ತು. ಹೊರ ಪ್ರಪಂಚ ಪುರುಷನದ್ದು ಮನೆ ಒಳಗಿನ ಪ್ರಪಂಚ ಮಹಿಳೆಯರದ್ದು ಆಗಿತ್ತು. ತನ್ನ ಕುಟುಂಬದ ನಿರ್ವಹಣೆಯೊಂದಿಗೆ ಸ್ತ್ರೀ ಇಂದು 4 ಗೋಡೆ ಒಳಗಿಂದ ಹೊರ ಬಂದು ಜಾಹೀರಾತು ಎಂಬ ಜಗತ್ತಿನಲ್ಲಿ ಕಾಲಿರಿಸಿದೆ. ಹೆಮ್ಮೆಯ ವಿಚಾರ ಎಸ್ .ವಿ ಪರಮೇಶ್ವರ ಭಟ್ಟ ನುಡಿದಂತೆ, ಸಂಸಾರವೆನ್ನುವುದು ಬಹುದೊಡ್ಡ ಸರ್ಕಸ್ ಇದನ್ನು ನಡೆಸುವುದು ತಪಸ್ಸು ಎಂಬಂತೆ ಎಲ್ಲಾ ಅಡೆ ತಡೆಗಳನ್ನು ಮಿರಿ ಜಾಹೀರಾತು ಜಗತ್ತಿನಲ್ಲಿ ತನ್ನನ್ನು ಗುರುತಿಸಿಕೊಳ್ಳುವಷ್ಟು ಬೆಳೆದು ಸಾಧಿಸಲು ಅಸಾಧ್ಯವಾದು ಇಲ್ಲ ಅನ್ನುವಷ್ಟರ ಮಟ್ಟಿಗೆ ಇತ್ತೀಚೆಗೆ ಮಹಿಳೆಯರು ಜಾಹೀರಾತನ್ನು ಪ್ರದರ್ಶಿಸುತ್ತಾ, ಪ್ರದರ್ಶಿಸುತ್ತಾ ನಮ್ಮ ನಾಡಿನ, ದೇಶದ ಸಂಸ್ಕೃತಿಗಳ, ಸಂಪ್ರದಾಯಬದ್ದ ಉಡುಗೆ ತೊಡುಗೆಗಳ ಗೌರವ ಉಳಿಸುತ್ತಾರೊ, ಅಳಿಸುತ್ತಾರೊ ಎಂಬ ಭಯ ಸಂಪ್ರದಾಯಸ್ಥರಲ್ಲಿ ಮೂಡುತ್ತಿರುವುದು ಸತ್ಯ.
ಜಾಹೀರಾತುಗಳಿಗೆ ಆಯ್ಕೆಯಾದವರು ಮಾರಾಟ ವಸ್ತುವಿನ್ನೊಂದಿಗೆ ನಿಕಟ ಸಂಬಂಧ ಹೊಂದಿರುತ್ತಾರೆ ಎಂದು ಭಾವಿಸಲಾಗುತ್ತದೆ. ಅದು ಭ್ರಮೆ ಅಷ್ಟೇ, ಗಂಡಸರ ಗಡ್ಡ ಮಾಡುವ ಬ್ಲೇಡ್ ನಲ್ಲಿ ಹೆಂಗಸರಿಗೆ ಏನು ಕೆಲಸ? ಯಾವುದೇ ಕೃತಕ ತಂಪು ಪಾನೀಯವನ್ನು ಕುಡಿದೆ ಇರುವುದಿಲ್ಲ ಅದೇ ಜಾಹೀರಾತಿನಲ್ಲಿ ಬರುವ ರೂಪದರ್ಶಿಗಳು. ಜಾಹೀರಾತು ಜಗತ್ತು ವಸ್ತುವನ್ನು ಕೊಳ್ಳುವುದಕ್ಕಾಗಿ, ಮಾರಾಟಕ್ಕಾಗಿ ಮಹಿಳೆಯರನ್ನು ಕೇಂದ್ರ ಅವಾಗಿಸಿಕೊಂಡಿದೆ. ಜಾಹೀರಾತು ಯಾವ ರೀತಿಯಲ್ಲಾದರು ಸರಿ ಯಾವ ಮಟ್ಟಕ್ಕಾದರು ಸರಿ ಎಂದು ಸಂಕೋಚನವಿಲ್ಲದೆ ರೇಡಿಯೋದಲ್ಲಿ ಕಿರುಚಿ, ಪತ್ರಿಕೆಗಳಲ್ಲಿ ನುಸುಳಿ, ದೂರದರ್ಶನ, ಚಲನಚಿತ್ರ ಗಳ ತೆರೆಯಲ್ಲಿ ರಾರಾಜಿಸುವ ಜಾಹೀರಾತು ಜಗತ್ತಿನ ಮಹಿಳೆಯರಿಗೆ ಅನ್ಯಾಯವಾಗುವ ಪ್ರಸಂಗ ಸಾಕಷ್ಟಿವೆ. ಒಂದು ಉದಾಹರಣೆ ಕೊಡುತ್ತೇನೆ, ಮುಖ ಕಾಂತಿಯನ್ನು ಇಮ್ಮುಡಿಸುವ ವಸ್ತುಗಳಿಗೆ ಸಂಬಂಧ ಪಟ್ಟ ಜಾಹೀರಾತೊಂದರಲ್ಲಿ ಕಪ್ಪುಬಣ್ಣದ ಯುವತಿ ಗಂಡನಿಂದ ತಿರಸ್ಕೃತಳಾಗಿ ನಂತರ ಬಿಳಿಯಾಗಿಸುವ ಕ್ರೀಮನ್ನು ಲೇಪಿಸಿ ಗೌರವರ್ಣ ಪಡೆದು ಗಗನ ಸಖಿಯಾಗಿ ಕೈ ತುಂಬಾ ಸಂಪಾದಿಸುತ್ತಾಳೆ. ಆದರೆ ಹೆಣ್ಣಿನ ವಿದ್ಯೆ, ಬುದ್ದಿವಂತಿಕೆ, ಜಾಣ್ಮೆ, ಗೌರವದ ನಡತೆ ಎಲ್ಲೂ ಎದ್ದು ಕಾಣದಂತೆ ಹೆಣ್ಣನ್ನು ಬಿಂಬಿಸಿ ಕೇವಲ ಅವಳಿಗೆ ತೆಳ್ಳಗೆ, ಬೆಳ್ಳಗಿನ ಬಳಕುವ ಶರೀರ ಹೆಣ್ಣಿನ ಪ್ರತಿಯೊಂದು ಅಂಗಾಂಗಗಳನ್ನು ಮಾದರಿಯಾಗಿಸುವ ಜಾಹಿರಾತು ಪ್ರಪಂಚ ಎಲ್ಲೆಲ್ಲೂ ಕಾಣ ಸಿಗುತ್ತಿರುವುದು ಸರಿ ಅಲ್ಲ.
1986 ರಲ್ಲಿ ಭಾರತ ಸರಕಾರ ಒಂದು ಕಾನೂನು ಜಾರಿಗೆ ತಂದಿತ್ತು. ಮಹಿಳೆಯರಿಗೆ ಸಂಬಂದಿಸಿದಂತೆ ಯಾವುದೇ ಜಾಹೀರಾತುಗಳಲ್ಲಿ ಅಶ್ಲೀಲ ಬರಹ, ಬಿತ್ತಿಪತ್ರಗಳಲ್ಲಿ ಹೆಣ್ಣನ್ನು ಕೀಳಾಗಿ ಅಸಭ್ಯವಾಗಿ ಚಿತ್ರಿಸಬಾರದು ಎಂದು. ಹಾಗೆ ಮಾಡಿದಲ್ಲಿ ಕಠಿಣ ಶಿಕ್ಷೆ ಇದೆ.
ಆದರೆ ವಿಪರ್ಯಾಸ ನೋಡಿ, ಮಹಿಳೆಯರ ಅಪಮಾನಗೊಳಿಸುವ ಜಾಹೀರಾತುಗಳು ಇಂದಿಗೂ ರಾರಾಜಿಸುತ್ತಿವೆ. ಗ್ರೀಟಿಂಗ್ ಕಾರ್ಡ ಖರೀದಿಗೆ ಒಬ್ಬಳು ಹೆಣ್ಣು ಬರುತ್ತಾಳೆ. ಅಂಡಿಯವರಲ್ಲಿ ಕೇಳುತ್ತಾರೆ ನೀನೆ ನನ್ನ ಮೊದಲ ಹಾಗೂ ಕೊನೆಯ ಪ್ರೇಮಿ ಎಂದು ಬರೆದ ಗ್ರೀಟಿಂಗ್ ಕಾರ್ಡ್ ಇದೆಯ? ನನ್ನ ಪ್ರೇಮಿಗೆ ಕೊಡಲು ಅಂತ ಕೇಳುತ್ತಾಳೆ. ಅಂಗಡಿಯಾತ ಹೌದು ಎಂದಾಗ ಅವಳು ಹೇಳುತ್ತಾಳೆ. ಹತ್ತು ಕಾರ್ಡ್ ಕೊಡಿ ಅಂತ. ಈ ಜಾಹೀರಾತಿಗೆ ನನ್ನ ಪ್ರಶ್ನೆ ಒಬ್ಬ ಹೆಣ್ಣು ಮಗಳ ಪ್ರೀತಿ ಹಾಗೂ ಅವಳ ಭಾವನೆಯನ್ನು ಸಸಾರ ಮಾಡಿದಂತೆ ಅಲ್ಲವೆ?
ಭಾರತದ ಅತಿ ದೊಡ್ಡ ಮೆಣಸಿನ ಮಾರುಕಟ್ಟೆಯಾದ ಬ್ಯಾಡಗಿಯ ಮೆಣಸ್ಸಿನ ಮೇಳದಲ್ಲಿ ಹೀಗೊಂದು ಜಾಹೀರಾತು ನೋಡಿ ನಾ ಬೆಚ್ಚಿಬಿದ್ದಿದ್ದೆ, ಸೌಂದರ್ಯ ಸಾಧನಗಳಿಗೆ ಬಣ್ಣ ತಯಾರಿಕಾ ಕೇಂದ್ರಗಳಿಗೆ ವಿಶೇಷ ರಿಯಾಯಿತಿ ದರದಲ್ಲಿ ಮೆಣಸು ನೀಡಲಾಗುವುದು ಎಂದು ದೊಡ್ಡ ಫಲಕವಿತ್ತು ಇದೆಂತ ಜಾಹೀರಾತು? ತುಟಿಗೆ ಹಾಕುವ ಬಣ್ಣದಲ್ಲಿ ಬ್ಯಾಡಗಿ ಮೆಣಸ್ಸಿನ ಬಣ್ಣವಿರುತ್ತದೆ ಅಂತೆ.
ಇತ್ತೀಚೆಗೆ ಜಾಹೀರಾತುಗಳ ಸಂಖ್ಯೆ, ಆರ್ಭಟ, ಬಹಳ ಹೆಚ್ಚಾಗಿ ಉತ್ಪಾದಕರ ವಸ್ತುಗಳಿಗೆ ಕಡಿಮೆ ಗಮನ ಹೋಗಿ ಜಾಹೀರಾತುಗಳಲ್ಲಿ ಮಹಿಳೆ ಅಥವಾ ಹೆಣ್ಣು ಧರಿಸುವ ಉಡುಪುಗಳನ್ನು ನೋಡಿ ಮೆಚ್ಚುವವರಿದ್ದಾರೆ.
ವಿಶ್ವದ ಯಾವ ದೇಶದ ಯಾವ ಸಂಸ್ಖತಿಯಲ್ಲಿ ಗಳಿಸಿಕೊಳ್ಳದ ದೊಡ್ಡ ಸ್ಥಾನವನ್ನು ನಮ್ಮ ದೇಶ ಸ್ತ್ರೀಯರಿಗೆ ನೀಡಿದೆ. ನಮ್ಮಲ್ಲಿ ಸ್ತ್ರೀಯರಿಗೆ ಅಗಾಧ ಗೌರವವಿದೆ. ಮಹಿಳೆ ಭಕ್ತಿ, ಜ್ಞಾನ, ಶಾಂತಿ, ಸಹನೆ, ಮಮತೆ, ಶಕ್ತಿಯ ಪ್ರತೀಕಾ. ಜಾಹೀರಾತು ಜಗತ್ತಿನ ಎಂಬ ಸುಂದರ ಲೋಕದಲ್ಲಿ ಅಳಿ ಬಳಿದು ಹಾಳಾಗದಿರಲಿ ಎಂಬುದು ನನ್ನ ಆಶಯ.
ಲತಾ ಸಂತೋಷ ಶೆಟ್ಟಿ ಮುದ್ದುಮನೆ.