ದೈವಾರಾಧನೆಯು ತುಳುನಾಡಿನ ಪ್ರಮುಖ ನಂಬಿಕೆಯಾಗಿದ್ದು ಅತೀ ಶ್ರದ್ಧಾ ಭಾವ ಭಕ್ತಿಯಿಂದ ಅನಾದಿ ಕಾಲದಿಂದಲೂ ನಂಬಿಕೊಂಡು ಬಂದಿರುತ್ತೇವೆ. ದೈವಾರಾಧನೆಯನ್ನು ಮಾಡಿಕೊಂಡು ಬರುವುದು ಎಲ್ಲರಿಗೂ ಸಾಧ್ಯವಾಗದ ಕೆಲಸ. ಅಂತಹ ಪುಣ್ಯ ಕೆಲಸವನ್ನು ಮಾಡಲು ಅವಕಾಶ ದೊರಕಿದರೆ ಅದುವೇ ಅದೃಷ್ಟ. ಅನಾದಿ ಕಾಲದಿಂದಲೂ ಗುತ್ತು, ಬರಿಕೆಗಳೇ ಪ್ರಧಾನ. ಕೋರ್ಟ್ ಪೋಲಿಸ್ ಸ್ಟೇಷನ್ ಗಳಿಗೆ ಮಾನ್ಯತೆಯಿದ್ದರೂ ಗುತ್ತಿನ ಯಜಮಾನ ನೀಡುವ ತೀರ್ಮಾನಕ್ಕೆ ಆದ್ಯತೆಯಿತ್ತು. ಗುತ್ತು ಬರಿಕೆಗಳಲ್ಲಿ ದೈವ ದೇವರುಗಳ ಆರಾಧನೆ ಇದ್ದೇ ಇರುತ್ತದೆ. ಬೇರೆ ಕಡೆಗಳಲ್ಲೂ ದೈವಾರಾಧನೆಯ ಸಂದರ್ಭದಲ್ಲಿ ಗುತ್ತು ಮನೆತನದವರಿಗೆ ಮೊದಲಿಗೆ ಪ್ರಸಾದ ನೀಡುವ ವಿಧಾನ ಈಗಲೂ ಇದೆ.
ಪ್ರತಿಷ್ಠಿತ ಗುತ್ತು ಮನೆತನಗಳಲ್ಲಿ ಒಂದಾದ ಮಾಣಿಗುತ್ತು ಮನೆತನದಲ್ಲಿ ಜನಿಸಿ ಅತೀ ಎಳೆಯ ಪ್ರಾಯದಲ್ಲೇ ನಮ್ಮ ಸಂಸ್ಕೃತಿ, ಆಚರಣೆ, ಆರಾಧನೆಗಳ ಬಗೆಗಿನ ವಿಚಾರಧಾರೆಗಳನ್ನು ತಿಳಿದುಕೊಂಡು ಗುತ್ತಿನ ಮನೆಯ ದೈವಾರಾಧನೆಯನ್ನು ಮಾಡಿಕೊಂಡು ಬರಬೇಕೆಂಬ ಸದುದ್ದೇಶದಿಂದ ಗುರು ಹಿರಿಯರ ಮಾರ್ಗದರ್ಶನವನ್ನು ಪಡೆದುಕೊಂಡು ಮುಂಚೂಣಿಯಲ್ಲಿ ನಿಂತು ದೈವಾರಾಧನೆಯನ್ನು ಮುನ್ನಡೆಸಿಕೊಂಡು ಬರುತ್ತಿರುವವರು ಸಚಿನ್ ರೈ ಮಾಣಿಗುತ್ತು.
7- 4 -1982 ರಲ್ಲಿ ದಿ| ಕೋಚಣ್ಣ ರೈ ಹಾಗೂ ಪ್ರಪುಲ್ಲ ಕೆ ರೈ ದಂಪತಿಗಳ ಏಕೈಕ ಪುತ್ರನಾಗಿ ಜನಿಸಿದ ಸಚಿನ್ ರೈ ಬಂಟ್ವಾಳ ಎಸ್ ವಿ ಎಸ್ ಕಾಲೇಜಿನಲ್ಲಿ ತನ್ನ ಬಿ ಕಾಂ ಪದವಿ ಶಿಕ್ಷಣವನ್ನು ಪೂರೈಸಿದರು. ಪ್ರಸ್ತುತ ಐ.ಸಿ.ಐ.ಸಿ.ಐ ಬ್ಯಾಂಕ್ ನಲ್ಲಿ ಮ್ಯಾನೇಜರ್ ಹುದ್ದೆಯಲ್ಲಿ ಕಾರ್ಯ ನಿರ್ವಹಿಸುತ್ತಿದ್ದಾರೆ.
ಪದವಿ ಶಿಕ್ಷಣವನ್ನು ಪಡೆದು ಉನ್ನತ ಹುದ್ದೆಯಲ್ಲಿದ್ದರೂ ತುಳುನಾಡಿನ ಆಚಾರ – ವಿಚಾರಗಳ ಬಗ್ಗೆ ಅಪಾರ ನಂಬಿಕೆಯನ್ನು ಇಟ್ಟುಕೊಂಡಿರುವ ಇವರ ನಿಲುವು ಅಭಿನಂದನೀಯ. ಮುಕ್ತೇಸರರಾಗಿ ಮುಂದಾಳತ್ವವನ್ನು ವಹಿಸಿ, ಹಿರಿಯರ ಮಾರ್ಗದರ್ಶನದಂತೆ ಹಿಂದಿನಿಂದಲೂ ನಡೆದು ಬಂದಿರುವ ಪೂಜೆ ಪುರಸ್ಕಾರಗಳನ್ನು ಮುಂದುವರೆಸುತ್ತಾ ಬಂದಿರುತ್ತಾರೆ.
“ಯಾವುದೇ ಆರಾಧನೆಗಳಿಗೆ ನಂಬಿಕೆ, ಶ್ರದ್ಧೆ ಮುಖ್ಯವೇ ಹೊರತು ವಯಸ್ಸು ಮುಖ್ಯವಲ್ಲ. ಅನಾದಿ ಕಾಲದ ಈ ಆಚಾರ ವಿಚಾರಗಳನ್ನು ತಿಳಿದುಕೊಳ್ಳುವತ್ತ ಯುವ ಜನತೆ ಗಮನ ಹರಿಸಿ ದೈವಾರಾಧನೆಯನ್ನು ಉತ್ತಮ ರೀತಿಯಲ್ಲಿ ನಡೆಸಿಕೊಂಡು ಬರಬೇಕು. ದೈವ ದೇವರುಗಳ ಆಚರಣೆಗಳಲ್ಲಿ ತೊಡಗಿಸಿಕೊಂಡಿರುವುದಕ್ಕೆ ಆತ್ಮಭಿಮಾನ ಹಾಗೂ ಸಂತಸವಿದೆ” ಎನ್ನುತ್ತಾರೆ ಸಚಿನ್ ರೈ.
ಪ್ರತಿಷ್ಠಿತ ಬಂಟ ಮನೆತನ ಮಾಣಿಗುತ್ತಿನಲ್ಲಿ ಗ್ರಾಮದೈವಗಳಿಗೆ ನೇಮಾದಿ ಕಾರ್ಯಗಳನ್ನು ಈವರೆಗೂ ನಡೆಸುತ್ತಾ ಬಂದಿರುತ್ತಾರೆ. ಮಾಣಿ ಉಳ್ಳಾಲ್ತಿ ದೈವಕ್ಕೆ ಪ್ರತಿವರ್ಷ ಮೆಚ್ಚಿ ಸೇವೆಯನ್ನು ಹಿಂದಿನ ಕಟ್ಟುಪಾಡಿನಂತೆಯೇ ಭಕ್ತಿಯಿಂದ ನಡೆಸುತ್ತಾ ಬಂದಿದ್ದಾರೆ. ಅದೇ ರೀತಿ ಮಾಣಿ ಅರೆಬೆಟ್ಟು ಗ್ರಾಮದ ದೈವಗಳಾದ ಅರಸು ಗುಡ್ಡೆ ಚಾಮುಂಡಿ ಪ್ರಧಾನಿ, ಪಂಜುರ್ಲಿ ಬಂಟೆದಿ ಮಲೆ ಕೊರತಿ, ಸೇರಿ ಒಟ್ಟು ಏಳು ಕಡೆಗಳಲ್ಲಿ ವರ್ಷಾವಧಿ ನೇಮಗಳನ್ನು ವಿಧಿ – ವಿಧಾನಗಳಂತೆ ನಡೆಸಿಕೊಂಡು ಬಂದಿದ್ದಾರೆ.
ಮಾಣಿಗುತ್ತು ಮನೆಯಲ್ಲಿ ನಡೆದು ಬರುತ್ತಿರುವ ಎಲ್ಲಾ ಕಾರ್ಯಕ್ರಮಗಳ ಮುಂದಾಳತ್ವ ವಹಿಸಿ ಭಕ್ತಿಯಿಂದ ನಡೆಸುತ್ತಾ ಬಂದಿರುತ್ತಾರೆ. ಬಾಲ್ಯದಿಂದಲೂ ಗ್ರಾಮೀಣ ಭಾಗದಲ್ಲೇ ಶಿಕ್ಷಣವನ್ನು ಪಡೆದು ಮಾಣಿ ಪರಿಸರದಲ್ಲಿ ನಡೆಯುತ್ತಿದ್ದ ಎಲ್ಲಾ ಕಾರ್ಯಕ್ರಮಗಳಲ್ಲಿ ಭಾಗವಹಿಸುತ್ತಿದ್ದರು. 1999 ರಲ್ಲಿ ತನ್ನ ಸೋದರ ಮಾವ ಸುಪ್ರೀತ್ ಕುಮಾರ್ ರೈ ಮಾಣಿಗುತ್ತು ಮರಣದ ನಂತರ ಮಾಣಿಗುತ್ತಿನ ಉಳ್ಳಾಲ್ತಿ ಮುಕ್ತೇಸರರಾಗಿ ಜವಾಬ್ಧಾರಿ ಹೊತ್ತು ಸಂಪೂರ್ಣ ಮುಂದಾಳತ್ವವನ್ನು ವಹಿಸಿ ಎಲ್ಲಾ ಕಾರ್ಯಕ್ರಮಗಳನ್ನು ನಿಷ್ಠೆಯಿಂದ ಅಚ್ಚುಕಟ್ಟಾಗಿ ನೆರವೇರಿಸುತ್ತಾ ಬರುತ್ತಿದ್ದಾರೆ. ಇಂದಿಗೂ ಮಾಣಿ ಗುತ್ತಿನ ಪರಿಸರದಲ್ಲಿ ಗುತ್ತಿನ ಪರವಾಗಿ ಇವರಿಗೆ ದೊರಕುತ್ತಿರುವ ಗೌರವ ಇವರ ಹೆಗ್ಗಳಿಕೆಯನ್ನು ಎತ್ತಿ ತೋರಿಸುತ್ತದೆ. ದೈವಾರಾಧನೆ ಮಾತ್ರವಲ್ಲದ ಕ್ರೀಡೆ, ಫೋಟೋಗ್ರಫಿಯಲ್ಲಿ ಆಸಕ್ತಿ ಹೊಂದಿರುವ ಶ್ರೀಯುತರು ಸದ್ಯ ಬ್ಯಾಂಕ್ ಉದ್ಯೋಗದಲ್ಲಿ ಇದ್ದುಕೊಂಡು ಕೃಷಿಯಲ್ಲಿ ಕೂಡಾ ಆಸಕ್ತಿ ಹೊಂದಿದ್ದಾರೆ.
ಪತ್ನಿ ಸವಿತಾ ಎಸ್ ರೈ ಮತ್ತು ಮಗಳು ಭುವಿಕಾ ಎಸ್ ರೈ ಇವರೊಂದಿಗೆ ಸುಖಮಯ ಜೀವನವನ್ನು ನಡೆಸುತ್ತಿದ್ದಾರೆ. ನಮ್ಮ ಸಂಸ್ಕೃತಿ, ಆಚಾರ ವಿಚಾರಗಳ ಬಗ್ಗೆ ಒಲವನ್ನಿಟ್ಟುಕೊಂಡಿರುವ ಸಚಿನ್ ರೈ ಇತರರಿಗೂ ಆದರ್ಶರಾಗಲಿ. ಸಕಲ ದೈವ ದೇವರುಗಳ ಆಶೀರ್ವಾದ ಇವರ ಮೇಲಿರಲಿ. ಇವರ ಸ್ಪೂರ್ತಿ ಚಿಂತನೆಗಳು ಎಲ್ಲೆಡೆ ಪಸರಿಸಲೆನ್ನುವುದೇ ನಮ್ಮೆಲ್ಲರ ಆಶಯ. ಬಂಟ ಸಮಾಜದ ತೆರೆಮರೆಯ ಧಾರ್ಮಿಕ ಕ್ಷೇತ್ರದ ಸಾಧಕರಾದ ನಿಮಗೆ ಬಂಟ್ಸ್ ನೌ ಮಾಧ್ಯಮ ಸಂಸ್ಥೆಯ ಪರವಾಗಿ ಧನ್ಯವಾದಗಳು.