ಮುಂಬಯಿ:- ಮುಂಬಯಿ ವಿಶ್ವವಿದ್ಯಾಲಯ, ಕನ್ನಡ ವಿಭಾಗ ಹಾಗೂ ಐಲೇಸಾ ದಿ ವಾಯ್ಸ್ ಆಫ್ ಓಷನ್(ರಿ) ಆಯೋಜಿಸಿರುವ ವಿಶೇಷ ವಿಚಾರ ಸಂಕಿರಣ ‘ಸುಧಾ ಮೂರ್ತಿ ಅವರ ಸಾಹಿತ್ಯ ಸಾಧನೆ- ಒಂದು ಅವಲೋಕನ’ ಕಾರ್ಯಕ್ರಮವು ಎಪ್ರಿಲ್ 23ರಂದು ಸಂಜೆ 4ರಿಂದ ಝೂಮ್ ವೇದಿಕೆಯಲ್ಲಿ ನಡೆಯಲಿದೆ. ಈ ಕಾರ್ಯಕ್ರಮದಲ್ಲಿ ಪದ್ಮಭೂಷಣ ಡಾ.ಸುಧಾ ಮೂರ್ತಿ ಅವರ ಗಣ್ಯ ಉಪಸ್ಥಿತಿಯಲ್ಲಿ ಅವರ ಕೃತಿಗಳ ಕುರಿತು ಚರ್ಚೆ ನಡೆಸಲಾಗುವುದು.
ಮುಂಬಯಿ ವಿಶ್ವವಿದ್ಯಾಲಯ, ಕನ್ನಡ ವಿಭಾಗದ ಪ್ರಾಧ್ಯಾಪಕರು ಹಾಗೂ ಮುಖ್ಯಸ್ಥರಾದ ಡಾ.ಜಿ.ಎನ್.ಉಪಾಧ್ಯ ಅವರು ಅಧ್ಯಕ್ಷತೆ ವಹಿಸಲಿರುವರು. ‘ಸಿರಿತನ ಹಿರಿತನಗಳ ಸಮ್ಮಿಲನದ ಶಕ್ತಿ ಸುಧಾ ಮೂರ್ತಿ’ ಈ ವಿಷಯದ ಕುರಿತು ಕನ್ನಡ ವಿಭಾಗದ ಸಂದರ್ಶಕ ಪ್ರಾಧ್ಯಾಪಕರಾದ ಡಾ.ಉಮಾ ರಾಮರಾವ್ ಅವರು ಮಾತನಾಡಲಿರುವರು. ಸುಧಾ ಮೂರ್ತಿ ಅವರ ‘ಸಾಹಿತ್ಯ ಸಾಧನೆ’ಯ ಕುರಿತು ಪ್ರತಿಭಾ ರಾವ್, ‘ಪ್ರವಾಸ ಕಥನ’ದ ಕುರಿತು ಸವಿತಾ ಶೆಟ್ಟಿ, ಕಾದಂಬರಿಗಳಾದ ಅತಿರಕ್ತೆಯ ಕುರಿತು ರಾಜಶ್ರೀ ಶೆಟ್ಟಿ, ‘ಮಹಾಶ್ವೇತೆ’ಯ ಕುರಿತು ಶಶಿಕಲಾ ಹೆಗ್ಡೆ, ‘ಋಣ’ದ ಕುರಿತು ಅನಿತಾ ಪೂಜಾರಿ ತಾಕೋಡೆ, , ‘ತುಮುಲ’ದ ಕುರಿತು ಅಂಬಿಕಾ ದೇವಾಡಿಗ, ‘ಯಶಸ್ವಿ’ ಕೃತಿಯ ಕುರಿತು ವಿದ್ಯಾ ರಾಮಕೃಷ್ಣ, ಡಾಲರ್ ಸೊಸೆಯ ಕುರಿತು ಗಾಯತ್ರಿ ನಾಗೇಶ್, ಪರಿಧಿಯ ಕುರಿತು ಕಲಾ ಭಾಗ್ವತ್ ಮಾತನಾಡಲಿರುವರು. ಅವರ ಥ್ರಿ ಥೌಸಂಡ್ ಸ್ಟಿಚಸ್ ಕೃತಿಯ ಕುರಿತು ವಿಭಾ ಪುರೋಹಿತ್, ಸಾಮಾನ್ಯರಲ್ಲಿ ಅಸಾಮಾನ್ಯರು ಕೃತಿಯ ಕುರಿತು ಸುರೇಖಾ ಹರಿಪ್ರಸಾದ್ ಶೆಟ್ಟಿ, ಆಂಗ್ಲ ಭಾಷೆಯಲ್ಲಿ ಬಾಲಸಾಹಿತ್ಯದ ಬಗ್ಗೆ ವಿಕ್ರಮ್ ಜೋಶಿ ಮಾತನಾಡಿದರೆ, ‘ನಾ ಕಂಡಂತೆ ಸುಧಾ ಮೂರ್ತಿ’ ಈ ವಿಷಯದ ಬಗ್ಗೆ ಗೀತಾ ಮಂಜುನಾಥ್ ಮಾತನಾಡಲಿದ್ದಾರೆ. ಅನುಭವ ಕಥನ ವಾಚನವನ್ನು ನಳಿನಾ ಪ್ರಸಾದ್ ಮಾಡಲಿದ್ದಾರೆ. ಮುಂಬಯಿ ವಿಶ್ವವಿದ್ಯಾಲಯ, ಕನ್ನಡ ವಿಭಾಗದ ಸಹಪ್ರಾಧ್ಯಾಪಕರಾದ ಡಾ.ಪೂರ್ಣಿಮಾ ಸುಧಾಕರ ಶೆಟ್ಟಿ ಅವರು ಕಾರ್ಯಕ್ರಮ ಸಂಯೋಜನೆ ಮಾಡಲಿದ್ದು, ಐಲೇಸಾ ತಂಡ ಶಾಂತಾರಾಮ ಶೆಟ್ಟಿ, ಗೋಪಾಲ ಪಟ್ಟೆ, ಸುರೇಂದ್ರ ಕುಮಾರ್ ಮಾರ್ನಾಡ್ ಸಹಕರಿಸಲಿದ್ದಾರೆ ಎಂದು ಕನ್ನಡ ವಿಭಾಗದ ಪ್ರಕಟಣೆಯ ಮೂಲಕ ತಿಳಿಸಲಾಗಿದೆ.
ಡಾ.ಸುಧಾ ಮೂರ್ತಿ:- ಸುಧಾ ಮೂರ್ತಿ ಅವರು ಮೂಲತ: ಹಾವೇರಿಯ ಶಿಗ್ಗಾಂವಿನವರು. ಅವರು ಎಲೆಕ್ಟ್ರಾನಿಕ್ಸ್ ಇಂಜಿನಿಯರ್ ಪದವಿ ಪಡೆದು ಮುಂದೆ ಇಂಡಿಯನ್ ಇನ್ ಸ್ಟಿಟ್ಯೂಟ್ ಆಫ್ ಸೈನ್ಸ್ ನಿಂದ ಕಂಪ್ಯೂಟರ್ ಸೈನ್ಸ್ನಲ್ಲಿ ಸ್ನಾತಕೋತ್ತರ ಪದವಿಯನ್ನು ಪೂರ್ಣ ಗೊಳಿಸಿದರು. ಪ್ರತಿಭಾವಂತರಾದ ಡಾ.ಸುಧಾ ಮೂರ್ತಿ ಅವರು ಭಾರತದ ಅತಿದೊಡ್ಡ ಟೆಲ್ಕೋ ಕಂಪನಿಯಲ್ಲಿ ನೇಮಕಗೊಂಡ ಮೊದಲ ಮಹಿಳಾ ಇಂಜಿನಿಯರ್ ಎಂಬ ಹೆಗ್ಗಳಿಕೆಗೂ ಪಾತ್ರರಾಗಿದ್ದಾರೆ. ಕನ್ನಡ ಮತ್ತು ಇಂಗ್ಲಿಷ್ ಬರಹಗಾರರಾಗಿ ಅವರು ಅಪಾರವಾದ ಜನಪ್ರಿಯತೆಯನ್ನು ಗಳಿಸಿದ್ದಾರೆ. ಭಾರತರ ಬಹುತೇಕ ಪ್ರಮುಖ ಭಾಷೆಗಳಲ್ಲಿಯೂ ಅವರ ಕೃತಿಗಳು ಅನುವಾದಗೊಂಡು, ಅನೇಕ ಮರು ಮುದ್ರಣಗೊಂಡಿರುವುದು ವಿಶೇಷ. ಡಾಲರ್ ಸೊಸೆ, ಕಾವೇರಿ ಇಂದ ಮೇಕಾಂಗಿಗೆ, ಹಕ್ಕಿಯ ತೆರದಲ್ಲಿ, ಅತಿರಿಕ್ತೆ, ಗುಟ್ಟೊಂದು ಹೇಳುವೆ, ಮಹಾಶ್ವೇತೆ, ತುಮುಲ, ಸಾಮಾನ್ಯರಲ್ಲಿ ಅಸಾಮಾನ್ಯರು, ಯಶಸ್ವಿ, ಅಸ್ತಿತ್ವ, ಪರಿಧಿ ಮೊದಲಾದ ಮೂವತ್ತಕ್ಕೂ ಹೆಚ್ಚು ವೈವಿಧ್ಯಮಯವಾದ ಕೃತಿಗಳನ್ನು ಅವರು ರಚಿಸಿದ್ದಾರೆ. ಇನ್ನೂರಕ್ಕೂ ಹೆಚ್ಚು ಅವರ ಕೃತಿಗಳ ಶೀರ್ಷಿಕೆಗಳು ಪ್ರಕಟವಾಗಿರುವುದು ಅಚ್ಚರಿಯ ಸಂಗತಿ. ಡಾ.ಸುಧಾಮೂರ್ತಿ ಅವರು ಪದ್ಮಶ್ರೀ, ಪದ್ಮಭೂಷಣ, ಗೌರವ ಡಾಕ್ಟರೇಟ್, ಕರ್ನಾಟಕ ರಾಜ್ಯೋತ್ಸವ ಪ್ರಶಸ್ತಿ ಹೀಗೆ ಅನೇಕ ಪ್ರಶಸ್ತಿ, ಪುರಸ್ಕಾರಗಳಿಗೆ ಭಾಜನರಾಗಿದ್ದಾರೆ. ಇನ್ಫೋಸಿಸ್ ಸಂಸ್ಥೆಯ ನಿರ್ದೇಶಕಿಯಾಗಿ ಇನ್ಪೋಸಿಸ್ ಪ್ರತಿಷ್ಠಾನದ ಮೂಲಕ ಸಮಾಜ ಸೇವೆಯನ್ನು ಮಾಡಿ ಜನಸಾಮಾನ್ಯರ ನೋವಿಗೆ ಸ್ಪಂದಿಸಿ ಸಹಾಯ ಹಸ್ತವನ್ನು ನೀಡುತ್ತಾ ಬಂದಿರುವುದು ಅವರ ಮಾನವೀಯತೆಗೆ ಸಾಕ್ಷಿ.