ರಾಜ್ಯ ವಿಧಾನಸಭಾ ಚುನಾವಣೆ ಅಭ್ಯರ್ಥಿ ಆಯ್ಕೆಗಾಗಿ ಅನ್ಯ ರಾಜ್ಯಗಳ “ಮಾದರಿ’ ಹುಡುಕುತ್ತಿರುವ ಬಿಜೆಪಿಗೆ ಕುಂದಾಪುರ ಶಾಸಕ ಹಾಲಾಡಿ ಶ್ರೀನಿವಾಸ್ ಶೆಟ್ಟಿ ಈಗ ದೊಡ್ಡ “ಮಾಡೆಲ್’ ಆಗಿ ಪರಿಣಮಿಸಿದ್ದಾರೆ. ಶಾಸಕ, ಸಂಸದ, ಸಚಿವರಾಗಿಯೇ “ಕೊನೆಯ ಉಸಿರಾಡಬೇಕು’ ಎಂಬ ಹಪಹಪಿಕೆಯ ರಾಜಕಾರಣಿಗಳ ಮಧ್ಯೆ ಹಾಲಾಡಿಯವರ ಈ ನಡೆ ಹೊಸ ಮಾರ್ಗವನ್ನು ಸೃಷ್ಟಿಸಿದ್ದು, ರಾಜಕಾರಣದಲ್ಲಿ ಇಂಥವರು ಇರುತ್ತಾರೆಯೇ ಎಂಬ ಪ್ರಶ್ನೆಗೆ ಉತ್ತರವಾಗಿ ನಿಂತಿದ್ದಾರೆ. ಹಾಲಾಡಿ ಸತತ ಐದು ಬಾರಿಗೆ ಗೆಲುವು ಕಂಡವರು. ಬಿಜೆಪಿಯ ಅಧಿಕಾರ ರಾಜಕಾರಣದ ಲಾಬಿಯಲ್ಲಿ ಅವರಿಗೆ “ಮಂತ್ರಿ’ಯಾಗುವ ಅವಕಾಶ ಲಭಿಸದೇ ಇದ್ದರೂ ಜನರ ಮನ್ನಣೆಗೆ ಪಾತ್ರರಾದವರು. ಸ್ಪರ್ಧಿಸಿದ್ದೇ ಹೌದಾದರೆ ಈ ಬಾರಿಯೂ ಗೆಲುವು ನಿಶ್ಚಿತವಾಗಿತ್ತು. ಹಾಗಿದ್ದೂ ಉಡುಪಿ ಜಿಲ್ಲೆಯಲ್ಲಿ ಈ ಬಾರಿ ಒಂದಿಷ್ಟು ಬದಲಾವಣೆ ನಿರೀಕ್ಷಿತ ಎಂಬ ಸುದ್ದಿ ಹೊರಬಿದ್ದಾಗ ಹಾಲಾಡಿ ಶ್ರೀನಿವಾಸ ಶೆಟ್ಟಿ ಅವರಿಗೆ ಈ ಸಲ ಟಿಕೆಟ್ ಇಲ್ಲ ಎಂಬ ಚರ್ಚೆ ಕುಂದಾಪುರ ಕ್ಷೇತ್ರದಲ್ಲಿ ಗಾಢವಾಗಿತ್ತು. ಈ ವರ್ಷ ಅವರಿಗಂತೆ, ಇವರಿಗಂತೆ ಎಂಬ ವದಂತಿ ಜೀವಂತ ವಾಗಿರುವಾಗಲೇ “ನಾನು ಸ್ಪರ್ಧಿಸುವುದಿಲ್ಲ’ ಎಂದು ಸ್ವಯಂ ಘೋಷಣೆ ಮೂಲಕ ಶೆಟ್ಟರು ಅಚ್ಚರಿ ಮೂಡಿಸಿದ್ದಾರೆ.
ಸ್ವಯಂ ಆಗಿರಲಿ, ಕಡ್ಡಾಯವಾಗಿರಲಿ ಅಥವಾ ವಯೋ ಸಹಜವೇ ಆಗಿರಲಿ “ನಿವೃತ್ತಿ’ ಎಂಬ ಪದ ಅಧಿಕಾರ ಗದ್ದುಗೆ ಏರಿದವರಿಗೆ ಅಪಥ್ಯವಷ್ಟೇ ಅಲ್ಲ ಸಂಕಟದಾಯಕವೂ ಹೌದು! ನಿವೃತ್ತಿ ಅನಿವಾರ್ಯವಾಗಿದ್ದಾಗ ಕಣ್ಣೀರಿಟ್ಟವರನ್ನು, ನಿವೃತ್ತಿ ಘೋಷಿಸಿದ ಬಳಿಕವೂ ಹತ್ತು ವರ್ಷ ಮೇಲ್ಪಟ್ಟು ಸಕ್ರಿಯ ರಾಜಕಾರಣದಲ್ಲೇ ಇರುವಂಥವರನ್ನೂ ಕರ್ನಾಟಕದ ಜನ ಕಂಡಿದ್ದಾರೆ. ಆದರೆ ಹಾಲಾಡಿ ಶ್ರೀನಿವಾಸ್ ಶೆಟ್ಟಿ ಯಾವುದೇ ರಂಗಸ್ಥಳವನ್ನು ಸೃಷ್ಟಿಸದೇ ಪಕ್ಷಕ್ಕೊಂದು ಪತ್ರ ಕೊಟ್ಟು ಚುನಾವಣಾ ರಾಜಕೀಯದಿಂದ ನೇಪಥ್ಯಕ್ಕೆ ಸರಿದಿದ್ದಾರೆ. ಅವರ ಹಾದಿಯಲ್ಲಿ ದಾವಣಗೆರೆ ಉತ್ತರ ಕ್ಷೇತ್ರದ ಎಸ್. ಎ.ರವೀಂದ್ರ ನಾಥ್ ಕೂಡಾ ಹೆಜ್ಜೆಯಿಟ್ಟಿದ್ದಾರೆ. ಹೀಗಾಗಿ ಬಿಜೆಪಿಯ ಇನ್ನಷ್ಟು ನಾಯಕರು ಇದೇ ಹಾದಿಯಲ್ಲಿ ಸಹಪ್ರಯಾಣಿಕರಾಗಬಹುದೇ ಎಂಬ ಕುತೂಹಲ ಈಗ ಸೃಷ್ಟಿಯಾಗಿದೆ.
ಕಂಗಾಲು: ಈ ಬಾರಿ ಚುನಾವಣೆಯಲ್ಲಿ ಗುಜರಾತ್ ಮಾದರಿಯಂತೆ, ಯುಪಿ ಮಾದರಿಯಂತೆ ಎಂದೆಲ್ಲ ಟಿವಿ ವಾಹಿನಿಯಲ್ಲಿ ವಿಶ್ಲೇಷಣೆ ನಡೆಸುತ್ತಿದ್ದ ಬಿಜೆಪಿಯ “ಬೌದ್ಧಿಕ’ರು ಅಧಿವೇಶನ ಸಂದರ್ಭದಲ್ಲಿ ಬಣ್ಣ ಬಣ್ಣದ “ಗಾಳಿಪಟ’ ಹಾರಿಸುವ ಕೇಸರಿ ಪಕ್ಷದ ಶಾಸಕರಿಗೆ ತ್ಯಾಗದ ಪ್ರಶ್ನೆ ಬಂದಾಗ ಯಾವ ಮಾದರಿಯೂ ಸವಿಯೆನಿ ಸುತ್ತಿರಲಿಲ್ಲ. ಆದರೆ ವರಿಷ್ಠರ ಕೆಂಗಣ್ಣಿಗೆ ಗುರಿ ಯಾಗಿರುವ ಹಲವರು ಹಾಲಾಡಿ ಮಾಡೆಲ್ನಿಂದ ಕಂಗಾಲಾಗಿರುವುದಂತೂ ಸುಳ್ಳಲ್ಲ. ಹಲ ವರ್ಷ ಕಾಲ ಶಾಸಕರಾಗಿ ವಿಧಾನಸೌಧದ ಹಾದಿ ಸವೆಸಿದವರಿಗೆ ಈ ದಾರಿಯಲ್ಲಿ ನಡೆಯಿರಿ ಎಂದು ವರಿಷ್ಠರೇ ಪತ್ರ ಬರೆಸುವ ಸಾಧ್ಯತೆ ನಿಚ್ಚಳವಾಗಿದೆ.
ಈಗಾಗಲೇ ಬಿಜೆಪಿಯ ಡಜನ್ಗಟ್ಟಲೇ ಶಾಸಕರಿಗೆ ಟಿಕೆಟ್ ಕೈ ತಪ್ಪುವ ಭೀತಿ ಇದೆ. ಈ ಪಟ್ಟಿಯಲ್ಲಿ ಮಾಜಿ ಮುಖ್ಯಮಂತ್ರಿ, ಉಪಮುಖ್ಯಮಂತ್ರಿ, ಹಾಲಿ ಸಚಿವರೂ ಇದ್ದಾರೆ. ಏಪ್ರಿಲ್ 9ರೊಳಗಾಗಿ ಬಿಜೆಪಿಯ ಮೊದಲ ಪಟ್ಟಿ ಬಿಡುಗಡೆಯಾಗುವುದಕ್ಕೆ ಮುನ್ನ “ಹಾಲಾಡಿ ಮಾಡೆಲ್’ ಪತ್ರಗಳು ಇನ್ನಷ್ಟು ಪ್ರಕಟಗೊಳ್ಳಬಹುದೆಂಬ ಮಾತು ಬಿಜೆಪಿ ಪಡಸಾಲೆಯಲ್ಲಿ ದಟ್ಟವಾಗಿ ಕೇಳಿ ಬರುತ್ತಿದೆ. ನಿವೃತ್ತಿಯ ಪ್ರಶ್ನೆಯೇ ಇಲ್ಲ ಎಂದು ಬೀಗುತ್ತಿದ್ದ ರಾಜಕಾರಣಿಗಳನ್ನು ಸದ್ದಿಲ್ಲದೇ ಬದಿಗೆ ಸರಿಸುವುದಕ್ಕೆ ಹಾಲಾಡಿ ನಡೆ ಬಿಜೆಪಿ ವರಿಷ್ಠರಿಗೆ ಈಗ ದಿವ್ಯಾಸ್ತ್ರವಾಗಿ ಪರಿಣಮಿಸಿದೆ. ಕುತೂಹಲಕಾರಿ ಸಂಗತಿ ಎಂದರೆ ಬಿಜೆಪಿಯ ಭದ್ರಕೋಟೆ ಎನಿಸಿದ ಕರಾವಳಿ- ಮಲೆನಾಡು ಜಿಲ್ಲೆಯ “ಹಿರಿತಲೆಗಳೇ’ ಈ ಪ್ರಯೋಗಕ್ಕೆ ಶರಣಾಗಬಹುದು ಎಂದೂ ಹೇಳಲಾಗಿದೆ.