ಕೊಡಗು ಜಿಲ್ಲಾ ಬಂಟ್ಸ್ ಸಂಘದ ವಾರ್ಷಿಕ ಮಹಾಸಭೆ ನಗರದ ಕಾವೇರಿ ಸಭಾಂಗಣದಲ್ಲಿ ನಡೆಯಿತು. ಸಂಘದ ನೂತನ ಅಧ್ಯಕ್ಷರಾಗಿ ಉದ್ಯಮಿ ಬಿ.ಡಿ.ಜಗದೀಶ ರೈ ಅವಿರೋಧವಾಗಿ ಆಯ್ಕೆಯಾದರು. ಮುಖ್ಯ ಕಾರ್ಯದರ್ಶಿಯಾಗಿ ಕುಶಾಲನಗರದ ಉದ್ಯಮಿ ವಿ ರವೀಂದ್ರ ರೈ ಅವರನ್ನು ಸರ್ವಾನುಮತದಿಂದ ಆಯ್ಕೆ ಮಾಡಲಾಯಿತು.
ಉಪಾಧ್ಯಕ್ಷ ಬಿ.ಕೆ.ರವೀಂದ್ರ ರೈ ಸಂಘ ಮತ್ತು ಟ್ರಸ್ಟ್ ನ ಆಸ್ತಿ ವಿವರ ನೀಡಿದರು. ಸಂಘದ ಆಸ್ತಿಗೆ ಸಂಬಂಧಿಸಿದಂತೆ ಕೆಲವರು ಸುಳ್ಳು ಪ್ರಚಾರ ಮಾಡುತ್ತಿದ್ದಾರೆ ಎಂದರು. ಆ ಹೇಳಿಕೆಗಳಲ್ಲಿ ಸತ್ಯಾಂಶವಿಲ್ಲ. ಸ್ವತ್ತುಗಳ ನಿಖರವಾದ ದಾಖಲೆಗಳು ಸಂಘದ ಬಳಿ ಇವೆ ಮತ್ತು ಯಾರಾದರೂ ಅದನ್ನು ಯಾವಾಗ ಬೇಕಾದರೂ ಪರಿಶೀಲಿಸಬಹುದು ಎಂದರು. ರವೀಂದ್ರ ರೈ ಮಾತನಾಡಿ, ‘ಹಲವು ವರ್ಷಗಳ ನಂತರ ನಾವು ಒಂದಾಗಿದ್ದೇವೆ. ಮಾಜಿ ಅಧ್ಯಕ್ಷರು ಮತ್ತು ಕಾರ್ಯದರ್ಶಿಗಳು ಜನರಿಗೆ ಸುಳ್ಳು ಮಾಹಿತಿ ರವಾನಿಸುತ್ತಿದ್ದಾರೆ. ಕೆಲವರು ತಾವಾಗಿಯೇ ಸಂಘವನ್ನು ಘೋಷಿಸಿಕೊಂಡಿದ್ದಾರೆ. ಈ ಹಿಂದೆ ಅವರು ಆಡಳಿತ ಸಮಿತಿಯ ಸಭೆಯನ್ನು ಕೂಡಾ ಕರೆಯಲು ಆಸಕ್ತಿ ತೋರಿಸಿರಲಿಲ್ಲ ಎಂದರು.
ನೂತನ ಅಧ್ಯಕ್ಷ ಜಗದೀಶ ರೈ ಮಾತನಾಡಿ, ‘ಭವಿಷ್ಯದಲ್ಲಿ ಯಾವುದೇ ಅವ್ಯವಸ್ಥೆ ಆಗುವುದಿಲ್ಲ. ಸಮುದಾಯಕ್ಕೆ ಅಗತ್ಯವಿರುವ ಎಲ್ಲಾ ಕೆಲಸಗಳನ್ನು ಕೈಗೊಳ್ಳಲಾಗುವುದು. ಸಮುದಾಯಕ್ಕೆ ಬಂಟರ ಭವನದ ಅಗತ್ಯವಿದೆ. ನನ್ನ ಅಧಿಕಾರಾವಧಿಯಲ್ಲಿ ಮಾಡಲಾಗುವುದು. ಶೀಘ್ರದಲ್ಲೇ ಸಂಘದ ಪದಾಧಿಕಾರಿಗಳನ್ನು ಆಯ್ಕೆ ಮಾಡಲಾಗುವುದು.
ಯಾರೊಬ್ಬರ ಒಪ್ಪಿಗೆಯಿಲ್ಲದೆ ಸಂಘದ ಅಧ್ಯಕ್ಷ ಎಂದು ಘೋಷಿಸಿಕೊಂಡು ಸಾಮಾಜಿಕ ಜಾಲತಾಣಗಳಲ್ಲಿ ಸಮುದಾಯದ ಬಗ್ಗೆ ಅವಹೇಳನಕಾರಿ ವಿಡಿಯೋ ಮಾಡಿದ ವಿರಾಜಪೇಟೆ ರತ್ನಾಕರ ಶೆಟ್ಟಿ ಅವರನ್ನು ಅನಿರ್ದಿಷ್ಟಾವಧಿಗೆ ಸಂಘದಿಂದ ವಜಾಗೊಳಿಸಲಾಯಿತು. ಸಂಘದ ಅಭಿವೃದ್ಧಿಗೆ ಸಂಬಂಧಿಸಿದಂತೆ ಹಲವರು ಪ್ರಸ್ತಾವನೆಗಳನ್ನು ಸಲ್ಲಿಸಿದರು. ಕಾರ್ಯದರ್ಶಿ ಹರೀಶ್ ರೈ ವರದಿ ವಾಚಿಸಿದರು. ಕೋಶಾಧಿಕಾರಿ ಬಿ.ಎನ್.ರತ್ನಾಕರ ರೈ ಆರ್ಥಿಕ ವರದಿ ಮಂಡಿಸಿದರು. ಗೌರವಾಧ್ಯಕ್ಷ ಬಿ.ಬಿ.ಐತಪ್ಪ ರೈ ಪ್ರಾಸ್ತಾವಿಕ ಮಾತನಾಡಿದರು. ಬಾಲಕೃಷ್ಣ ರೈ ಸ್ವಾಗತಿಸಿದರು. ಕಿಶೋರ್ ರೈ ಕತ್ತಲೆಕಾಡು ಕಾರ್ಯಕ್ರಮ ನಿರೂಪಿಸಿದರು. ಹಿತಾ ಯೋಗೀಶ್ ಶೆಟ್ಟಿ ಪ್ರಾರ್ಥಿಸಿ ಧನ್ಯವಾದ ಸಲ್ಲಿಸಿದರು.