“ಒಳ್ಳೆಯತನಕ್ಕೆ ಹಣದ ಅವಶ್ಯಕತೆ ಇಲ್ಲ. ಒಳ್ಳೆಯ ಮನಸ್ಸಿದ್ದರೆ ಸಾಕು ” ಎಂಬ ಮಾತಿದೆ. ಪುತ್ತೂರು ತಾಲ್ಲೂಕಿನಲ್ಲಿ ತಿಮ್ಮಪ್ಪಣ್ಣ ಎಂದೇ ಖ್ಯಾತರಾಗಿರುವ ಹಿರಿಯರಾದ ಚನಿಲ ತಿಮ್ಮಪ್ಪ ಶೆಟ್ಟಿ ತಮ್ಮ ಸರಳತೆ ಸಜ್ಜನಿಕೆಯಿಂದಾಗಿ ಜನಾನುರಾಗಿಯಾದವರು.
ಪ್ರತಿಷ್ಠಿತ ಬೆಳಿಯೂರು ಗುತ್ತು ದಿ. ವೆಂಕಪ್ಪ ಶೆಟ್ಟಿ ಮತ್ತು ಕೊಂಡೆಮಾರು ದಿ. ಉಮ್ಮಕ್ಕೆ ಶೆಡ್ತಿ ದಂಪತಿಗಳ ಮಕ್ಕಳಲ್ಲಿ ಮುದ್ದಿನ ಒಬ್ಬನೇ ಗಂಡು ಮಗುವಾಗಿ ಜನಿಸಿದ ಇವರು ಆ ಕಾಲದ ಬಿಎಸ್ಸಿ ಪದವೀಧರರು. ಕುಟುಂಬದ ಕೃಷಿಯ ಜೊತೆಗೆ ಸಮಾಜ ಸೇವೆಯನ್ನು ಹವ್ಯಾಸವಾಗಿಸಿಕೊಂಡ ಇವರು ಪುತ್ತೂರಿನ ಸಾಮಾಜಿಕ, ರಾಜಕೀಯ ಸಾಂಸ್ಕೃತಿಕ, ಧಾರ್ಮಿಕ ಮತ್ತು ಸಹಕಾರಿ ಕ್ಷೇತ್ರಗಳಲ್ಲಿ ಕಳೆದ ನಾಲ್ಕು ದಶಕಗಳಿಂದ ದುಡಿದು ಈ ಕ್ಷೇತ್ರಗಳಲ್ಲಿ ತಮ್ಮ ಛಾಪು ಮೂಡಿಸಿದರು.
ಪ್ರಸ್ತುತ ಕರಾವಳಿ ಅಭಿವೃದ್ಧಿ ಪ್ರಾಧಿಕಾರದ ಅಧ್ಯಕ್ಷರಾಗಿ ಕಾರ್ಯ ನಿರ್ವಹಿಸುತ್ತಿರುವ ಶ್ರೀಯುತರು ಪುತ್ತೂರಿನ ಮಾಜಿ ತಾಲ್ಲೂಕು ಪಂಚಾಯತ್ ಅಧ್ಯಕ್ಷರಾಗಿದ್ದರು. ಅಡಿಕೆ ಬೆಳೆಗಾರರಾಗಿರುವ ಶ್ರೀಯುತ ತಿಮ್ಮಪ್ಪ ಶೆಟ್ಟಿ ಎರಡು ಅವಧಿಗೆ ಕ್ಯಾಂಪ್ಕೋ ನಿರ್ದೇಶಕರಾಗಿ ಕಾರ್ಯ ನಿರ್ವಹಿಸಿದ್ದರು. ವಿವೇಕಾನಂದ ವಿದ್ಯಾವರ್ಧಕ ಸಂಘದ ಉಪಾಧ್ಯಕ್ಷರಾಗಿ ಮಂಗಳೂರು ಬಂಟರ ಯಾನೆ ನಾಡವರ ಮಾತೃ ಸಂಘದ ನಿರ್ದೇಶಕರಾಗಿ ಇವರು ನೀಡಿದ ಸೇವೆ ಸಮುದಾಯ ಬಾಂಧವರ ಪ್ರೀತಿಗೆ ಪಾತ್ರವಾಗಿದೆ.
ಬಂಟ ಸಿರಿ ವಿವಿಧೋದ್ಧೇಶ ಸಹಕಾರಿ ಸಂಘ ನಿರ್ದೇಶಕರಾಗಿ ವ್ಯಾಪಾರ ಉದ್ಯಮಗಳಿಗೆ ಪ್ರೋತ್ಸಾಹ ನೀಡುತ್ತಿದ್ದ ಇವರು ಒಂದಷ್ಟು ಯುವಶಕ್ತಿಯ ಸ್ವಾವಲಂಭಿ ಬದುಕಿಗೆ ಮಾರ್ಗದರ್ಶಕರಾಗಿ ಇದ್ದರು.
ಶೈಕ್ಷಣಿಕ ಕ್ಷೇತ್ರಗಳಾದ ಶ್ರೀ ರಾಮಕೃಷ್ಣ ಪ್ರೌಢ ಶಾಲೆಯ ಆಡಳಿತ ಮಂಡಳಿ ಸದಸ್ಯರಾಗಿ ಉತ್ತಮ ಸಂಘಟನಾ ಶಕ್ತಿಯಾಗಿ ಗುರುತಿಸಿಕೊಂಡ ಶ್ರೀಯುತರು ಎಸ್.ಕೆ.ಸಿ.ಎಂ.ಎಸ್ ನಿರ್ದೇಶಕರಾಗಿ ಸಂಸ್ಥೆಯನ್ನು ಯಶಸ್ವಿಯಾಗಿ ಮುನ್ನಡೆಸಿದರು. ಬೆಳಿಯೂರು ಕಟ್ಟೆ ಶಾಲಾ ಸಮಿತಿಯ ಸದಸ್ಯರಾಗಿ, ಬಲ್ನಾಡು ಪ್ರಾಥಮಿಕ ಕೃಷಿ ಪತ್ತಿನ ಸಹಕಾರ ಸಂಘದ ಅಧ್ಯಕ್ಷರಾಗಿ ಪರ್ಲಡ್ಕದ ಸರಕಾರಿ ಶಾಲೆಯ ಪುನರ್ ನಿರ್ಮಾಣ ಸಮಿತಿಯ ಗೌರವಾಧ್ಯಕ್ಷರಾಗಿಯೂ ಕಾರ್ಯನಿರ್ವಹಿಸಿದ್ದ ಇವರು ಸಮಾಜದ ವಿವಿಧ ಕ್ಷೇತ್ರಗಳ ವಿಭಿನ್ನ ಅನುಭವಗಳನ್ನು ತನ್ನದಾಗಿಸಿಕೊಂಡು ಅಧಿಕಾರಯುತವಾಗಿ ಮಾತನಾಡಬಲ್ಲವರಾಗಿ ಯಶಸ್ಸಿನ ಏಣಿಯ ಒಂದೊಂದೇ ಮೆಟ್ಟಿಲು ಏರಿ ಇತರರಿಗೆ ಮಾದರಿ ವ್ಯಕ್ತಿತ್ವವೆನಿಸಿಕೊಂಡರು.
ದೈವ ಭಕ್ತರಾದ ಇವರಿಗೆ ಪುತ್ತೂರು ಸೀಮೆಯ ಬಲ್ನಾಡು ಉಳ್ಳಾಲ್ತಿ- ದಂಡನಾಯಕ ಧೈವಸ್ಥಾನದ ಆಡಳಿತ ಮೊಕ್ತೇಸರರಾಗಿ ನಿರಂತರ 26 ವರ್ಷಗಳ ಸೇವೆ ತನಗೆ ಒದಗಿ ಬಂದ ಭಾಗ್ಯ ಎಂದು ಭಾವಿಸಿದವರು. ಇದೇ ಸಮಯದಲ್ಲಿ ಧೈವಸ್ಥಾನದ ಜೀರ್ಣೋದ್ದಾರ ಬ್ರಹ್ಮಕಲಶವೂ ನಡೆದು ಊರಿನ ಸಮಸ್ತ ಜನಸಾಗರವೇ ಇಲ್ಲಿ ಭಾಗವಹಿಸಿತ್ತು. ಪುತ್ತೂರು ಮಹಾಲಿಂಗೇಶ್ವರ ದೇವಳದ ಜೀರ್ಣೋದ್ದಾರ ಬ್ರಹ್ಮಕಲಶ ಸಮಿತಿಯ ಪ್ರಧಾನ ಕಾರ್ಯದರ್ಶಿಯಾಗಿಯೂ ಇವರು ನೀಡಿದ ಸೇವೆ ಜನಮಾನಸದಲ್ಲಿ ಅಚ್ಚಳಿಯದೇ ಉಳಿದಿದೆ.
ಮಾಜಿ ಮುಖ್ಯಮಂತ್ರಿ ಡಿ. ಎ. ಸದಾನಂದ ಗೌಡರು ಪುತ್ತೂರು ಶಾಸಕರಾಗಿದ್ದ ಅವಧಿಯಲ್ಲಿ ಚನಿಲ ತಿಮ್ಮಪ್ಪ ಶೆಟ್ಟಿಯವರು ಪುತ್ತೂರು ತಾಲೂಕು ಬಿ.ಜೆ.ಪಿ ಕ್ಷೇತ್ರ ಸಮಿತಿಯ ಅಧ್ಯಕ್ಷರಾಗಿದ್ದರು.1998 ರಿಂದ 2006 ರ ವರೆಗೆ ನಿರಂತರ ಎರಡು ಅವಧಿಗೆ ಪುತ್ತೂರು ಬಿ.ಜೆ.ಪಿ ಯ ಅಧ್ಯಕ್ಷರಾಗಿ ಪಾರ್ಟಿಯನ್ನು ಮುನ್ನಡೆಸಿದ ಇವರ ಸಾಮರ್ಥ್ಯವನ್ನು ಗುರುತಿಸಿ ಮೂರನೇ ಬಾರಿಗೆ 2016ರಿಂದ 2020 ರವರೆಗೆ ಬಿ.ಜೆ.ಪಿ ಮಂಡಲಾಧ್ಯಕ್ಷರಾಗಿ ಆಯ್ಕೆಯಾದರು. ಬಿ.ಜೆ.ಪಿ ಜಿಲ್ಲಾ ಪರಿಷತ್ ಸದಸ್ಯರಾಗಿ ಲೋಕಸಭೆ, ರಾಜ್ಯಸಭೆ ಜಿಲ್ಲಾ ಪಂಚಾಯತ್, ತಾಲೂಕು ಪಂಚಾಯತ್ ಚುನಾವಣೆ ನಿರ್ವಹಣಾ ಸಮಿತಿ ಅಧ್ಯಕ್ಷರಾಗಿ ಕರ್ತವ್ಯ ನಿರ್ವಹಿಸಿದ ಶ್ರೀಯುತರು 2ನೇ ಭಾರಿ ತಾಲೂಕು ಪಂಚಾಯತಿಯ ಅಧ್ಯಕ್ಷ ಹುದ್ದೆಗೇರಿ 20 ತಿಂಗಳ ಕಾಲ ಯಶಸ್ವಿ ಆಡಳಿತ ನಡೆಸಿದರು.
ನಿಷ್ಕಳಂಕ ವ್ಯಕ್ತಿತ್ವ ಪ್ರಾಮಾಣಿಕ ದುಡಿಮೆಯ ಕೊಟ್ಟ ಜವಾಬ್ದಾರಿಯನ್ನು ಯಶಸ್ವಿಯಾಗಿ ನಿರ್ವಹಿಸುವ ಚನಿಲ ತಿಮ್ಮಪ್ಪ ಶೆಟ್ಟಿಯವರು ಸುಧೀರ್ಘ ಅನುಭವ ಸೇವೆಯನ್ನು ಮನಗಂಡ ರಾಜ್ಯ ಬಿ.ಜೆ.ಪಿ ನಾಯಕರು ಇವರಿಗೆ ಕರಾವಳಿ ಅಭಿವೃದ್ಧಿ ಪ್ರಾಧಿಕಾರದ ಅಧ್ಯಕ್ಷರನ್ನಾಗಿ ಆಯ್ಕೆ ಮಾಡಿರುವುದು ಸೂಕ್ತ ಆಯ್ಕೆ. 2022 ನೇ ನವೆಂಬರ್ ನಲ್ಲಿ ಶ್ರೀಯುತರಿಗೆ ನೀಡಲಾದ ಈ ಜವಾಬ್ದಾರಿಯನ್ನು ಯಶಸ್ವಿಯಾಗಿ ನಿರ್ವಹಿಸುತ್ತಿದ್ದಾರೆ. ನ್ಯಾಯಯುತವಾಗಿ ನೈತಿಕ ಬದ್ಧತೆಯೊಂದಿಗೆ ತಮಗೆ ನೀಡಿರುವ ಈ ಜವಾಬ್ದಾರಿಯನ್ನು ನಿರ್ವಹಿಸುವ ಮೂಲಕ ಶ್ರೀಯುತ ಚನಿಲ ತಿಮ್ಮಪ್ಪ ಶೆಟ್ಟಿಯವರು ಯುವ ಶಕ್ತಿಗೆ ಮಾದರಿಯಾಗಿ ಮುಂದಿನ ದಿನಗಳಲ್ಲಿ ಪುತ್ತೂರಿನ ಶಾಸಕರಾಗಲಿ ಎಂಬ ನಿರೀಕ್ಷೆ ಆಶಯ ನಮ್ಮದು.