ಜನ-ಗಣ-ಮನಧರ್ಮ- ಸಂಸ್ಕೃತಿ
ಪರಶುರಾಮನನ್ನು ಬಲಗೊಳಿಸುವುದೆಂದರೆ ತಾಯಿಯನ್ನು ಮೂಲೆ ಸೇರಿಸುವುದೆಂದೇ ಅರ್ಥ!
ಕಾರ್ಕಳದಲ್ಲಿ ಸ್ಥಾಪಿಸಲಾಗಿರುವ ಪರಶುರಾಮ ಥೀಮ್ ಪಾರ್ಕ್ ತುಳುನಾಡಿನ ಮೂಲನಿವಾಸಿಗಳನ್ನು ಹಾಗೂ ಅವರ ಮೂಲ ಸಂಸ್ಕೃತಿಯನ್ನು ಅಪಮಾನಿಸಲೆಂದೇ ಮಾಡಿರುವ ಒಂದು ಹುನ್ನಾರ… ಈ ನಿಟ್ಟಿನಲ್ಲಿ ಪೀಪಲ್ ಮೀಡಿಯಾ.ಕಾಂನಲ್ಲಿ ಹಲವಾರು ವಿದ್ವಾಂಸರು ತಮ್ಮ ಅಮೂಲ್ಯ ಅಭಿಪ್ರಾಯಗಳನ್ನು ಹಂಚಿಕೊಂಡಿದ್ದಾರೆ. ಈ ಕಂತಿನಲ್ಲಿ ನಾಲ್ವರು ಪ್ರಮುಖ ಚಿಂತಕರು ವ್ಯಕ್ತಪಡಿಸಿರುವ ಅಭಿಪ್ರಾಯಗಳು ಇಲ್ಲಿವೆ- ಸಂ
ಮೌಖಿಕ ಪರಂಪರೆಯ ಆಶಯಗಳೇ ತುಳುನಾಡಿನ ಸಾಂಸ್ಕೃತಿಕ ಪರಂಪರೆಯ ತಿರುಳುಗಳು. ವಾಸ್ತವಿಕವಾಗಿ ಈ ಸಾಂಸ್ಕೃತಿಕ ಪರಂಪರೆಯಲ್ಲಿ ಎಲ್ಲೂ ಪರಶುರಾಮನ ಪ್ರಸ್ತಾಪವಿಲ್ಲ. ಅದು ಇದ್ದರೂ ಮಾತೃಮೂಲಿಯ ವ್ಯವಸ್ಥೆಯನ್ನು ಕೆಡಿಸಿ ಪಿತೃಪ್ರಧಾನ ವ್ಯವಸ್ಥೆಯನ್ನು ಬಲಗೊಳಿಸಲು ತಂದ ಸೇರ್ಪಡೆ. ಇವತ್ತಿಗೂ ನಾವು ಪರಶುರಾಮನನ್ನು ಬಲಗೊಳಿಸುತ್ತೇವೆ ಎಂದರೆ ತಾಯಿಯನ್ನು ಸಂಪೂರ್ಣ ಮೂಲೆ ಸೇರಿಸಲು ತಯಾರಿ ನಡೆಸುತ್ತೇವೆ ಎಂದೇ ಅರ್ಥ. ಜನಪದರ ರಾಮ, ಕೃಷ್ಣ, ಶಿವ, ಬಿರ್ಮೆ ಎಲ್ಲರೂ ಕರಾವಳಿಯ ಒಡನಾಡಿಗಳು, ಅವರೆಂದೂ ನಾವು ಈ ನಾಡಿನ ಸೃಷ್ಟಿಕರ್ತರು ಎಂದು ಎಲ್ಲೂ ಹೇಳಿಕೊಳ್ಳಲಿಲ್ಲ. ಅವರೇ ಹೇಳಿಕೊಳ್ಳದ ಮೇಲೆ ನಮ್ಮ ಜನಪದರು ಹೆಸರೇ ಕೇಳದ ಈ ಪರಶುರಾಮ ಎಲ್ಲಿಂದ ಬಂದ ಎನ್ನುವುದೇ ಪ್ರಶ್ನೆ. ಆದ್ದರಿಂದ ಪರಶುರಾಮ ತುಳುನಾಡನ್ನು ಸೃಷ್ಟಿಸಿದ ಎನ್ನುವ ದೃಷ್ಟಿಕೋನವೇ ಇಲ್ಲಿಯ ಚರಿತ್ರೆ, ಐತಿಹ್ಯ, ನಂಬಿಕೆ ಮತ್ತು ಜಾನಪದ ಪರಂಪರೆಗೆ ಅಪಚಾರ ಮಾಡುವಂತದ್ದು. ಕರಾವಳಿಯ ಸಾಂಸ್ಕೃತಿಕ ಚರಿತ್ರೆಗಿಂತ ಭಿನ್ನವಾದ ವ್ಯವಸ್ಥೆಯನ್ನು ಸೃಷ್ಟಿಸಿ ಪರಶುರಾಮನನ್ನು ವೈಭವೀಕರಿಸುವುದು ಕರಾವಳಿಯ ಪ್ರಜ್ಞಾವಂತಿಕೆಯ ಮೇಲೆ ನಡೆಸುವ ಹಲ್ಲೆ.
ಚೆಲುವರಾಜ್ ಕೋಡಿಮಲೆ , ಚಿಂತಕರು
ದೈವಾರಾಧನೆಯ ಅನನ್ಯತೆಯನ್ನು ನಾಶ ಮಾಡಿದಂತೆ
ಮಾತೃಮೂಲೀಯ ಕೌಟುಂಬ, ಅವೈದಿಕ ಆಚರಣೆಗಳು ಮತ್ತು ಕೃಷಿ ಸಂಸ್ಕೃತಿ ತುಳುನಾಡ ಸಂಸ್ಕೃತಿಯ ಮುಖ್ಯ ಲಕ್ಷಣಗಳು. ಪಾಡ್ದನಗಳಲ್ಲಿ ಬ್ರಹ್ಮರು (ಬೆರ್ಮೆರ್) ತುಳುನಾಡನ್ನು ಸೃಷ್ಟಿ ಮಾಡಿದ ಬಗ್ಗೆ ವಿವರಗಳಿವೆ. ಈ ವಿವರಗಳು ವೈಜ್ಞಾನಿಕವಾಗಿರುವುದು ಕುತೂಹಲಕಾರಿಯಾಗಿದೆ. ಇದರಿಂದ ಪರಶುರಾಮ ಸೃಷ್ಟಿ ಎಂಬ ಪರಿಕಲ್ಪನೆಯು ತುಳುನಾಡಿನ ದೈವಾರಾಧನೆಗೆ ಹೊಂದಿಕೆಯಾಗುವುದಿಲ್ಲ. ವೈದೀಕರಣದಿಂದ ಈ ರೀತಿಯ ಆಭಾಸಗಳು ಉಂಟಾಗಿವೆ. ʼದೇವರು ನಾವೇ ದೈವವು ನಾವೇʼ ಎಂಬ ದೈವಗಳ ನುಡಿ ತುಳುನಾಡಿನಲ್ಲಿ ದೈವಗಳ ಸ್ವಾಯತ್ತತೆಯನ್ನು ಸೂಚಿಸುತ್ತದೆ. ಪರಶುರಾಮ ಸೃಷ್ಟಿಯನ್ನು ದೈವಾರಾಧನೆಗೆ ತಳುಕು ಹಾಕುವುದು ದೈವಾರಾಧನೆಯ ಅನನ್ಯತೆಯನ್ನು ನಾಶ ಮಾಡಿದಂತೆ. ಈ ದೃಷ್ಟಿಯಿಂದ ಚಿಂತಿಸಬೇಕಾದ ಅಗತ್ಯವಿದೆ.
ಡಾ.ಗಣನಾಥ ಎಕ್ಕಾರು, ಜಾನಪದ ವಿದ್ವಾಂಸರು.
ತುಳು ಜನರ ರಕ್ತ ಕುದಿಯುವಂತೆ ಮಾಡಿದೆ
ಕರಾವಳಿ ಪ್ರದೇಶ ಸಮುದ್ರ, ನದಿ, ಕಾಡು, ಕೃಷಿಗಳಿಂದ ಬೆಳೆದು ಬಂದಿರುವುದರಿಂದ ಸಹಜವಾಗಿ ಕೊರಗ, ಮನ್ಸ, ಬಾಕುಡ, ಮುಂಡಾಲರಂತಹ ಆದಿವಾಸಿ ಮೂಲನಿವಾಸಿಗಳು ಕಟ್ಟಿ ಬೆಳೆಸಿದ ನಾಡಾಗಿದೆ. ಹಾಗಾಗಿ ಮೂಲತ: ಇಲ್ಲಿನ ನಂಬಿಕೆ ಮತ್ತು ಆರಾಧನೆಯ ಪರಂಪರೆ ಆದಿವಾಸಿ ಹಾಗೂ ಅವೈದಿಕ ನೆಲೆಯದ್ದಾಗಿದೆ. ಇಲ್ಲಿನ ಸಾವಿರಾರು ದೈವಗಳು, ಪುರಾಣಗಳು, ಪಾಡ್ದನಗಳು, ಐತಿಹ್ಯಗಳು ಇಲ್ಲಿನ ಅವೈದಿಕ ಮೂಲನೆಲೆಗಟ್ಟನ್ನು ಸಾಬೀತು ಪಡಿಸುತ್ತವೆ. ಇಲ್ಲಿನ ದೈವರಾಧನೆಯ ವಿಸ್ತಾರ, ವ್ಯಾಪಕತೆ ಅದರ ಸುದೀರ್ಘ ಐತಿಹಾಸಿಕತೆಯನ್ನು ಮತ್ತು ಹಿರಿತನ ಹಾಗೂ ಸಮಗ್ರತೆಯನ್ನು ತೋರಿಸುವಂಥದ್ದಾಗಿದೆ. ಆದ್ದರಿಂದ ಇದು ಅವೈದಿಕ ಜನರ ಮತ್ತು ಅವರ ದೈವ ಸಂಸ್ಕೃತಿಗಳ ನಾಡೇ ಹೊರತು ವೈದಿಕ ಪರಂಪರೆಯ ಪರಶುರಾಮನ ನಾಡಲ್ಲ.
ಸುನೀಲ್ ಕುಮಾರನ ಪರಿಕಲ್ಪನೆಯ ಪರಶುರಾಮ ಥೀಂ ಪಾರ್ಕ್ ದೈವರಾಧಕರ, ತುಳುಜನರ ರಕ್ತ ಕುದಿಯುವಂತೆ ಮಾಡಿದೆ. ಇವನ ಹಿಂದುತ್ವದ ಅಹಂಕಾರ ಮಿತಿ ಮೀರಿದೆ. ನಮ್ಮ ದೈವಗಳನ್ನೇ ಬ್ರಾಹ್ಮಣ ಪರಶುರಾಮನ ಕಾಲಬುಡದಲ್ಲಿ ನಿಲ್ಲಿಸಿ ಕೈಮುಗಿಯುವ ಗುಲಾಮಿತನಕ್ಕೆ ತಳ್ಳಿದ ಇವನಿಗೆ ತಕ್ಕ ಶಿಕ್ಷೆ ಆಗಲೇಬೇಕು. ಬಹುಜನ ತುಳುವರನ್ನು ಹೀನಾಯವಾಗಿ ಅವಮಾನಿಸಿದ ಈ ಥೀಂ ಪಾರ್ಕನ್ನು ಕೆಡಹಿ ನಮ್ಮನ್ನು ಉಳಿಸಿಕೊಳ್ಳುವ ಕೆಲಸ ಮಾಡೋಣ.
ಪ್ರಕಾಶ್ ಸುವರ್ಣ, ಕಾರ್ಕಳ
ತುಳು ನಾಡಿನ ದೈವಗಳನ್ನು ಹಾಗೂ ದೈವಾರಾಧಕರನ್ನು ಸರಕಾರ ಅವಮಾನಿಸಿದೆ
ತುಳು ಸಂಸ್ಕೃತಿಗೆ ಪಾಡ್ದನಗಳೆ ಅಧಿಕೃತ ಪಠ್ಯ. ಪಾಡ್ದನಗಳಲ್ಲಿ ಎಲ್ಲಿಯೂ ಪರಶುರಾಮನ ಪ್ರಸ್ತಾಪ ಬರುವುದಿಲ್ಲ. ತುಳು ನಾಡಿನ ಆರಾಧ್ಯ ಶಕ್ತಿಗಳು ಸೃಷ್ಟಿ ಕರ್ತ ಬೆರ್ಮೆರಿಗೆ ಶರಣಾದವರು. ಈ ಬಗ್ಗೆ ಯೂ ಪಾಡ್ದನಗಳಲ್ಲಿ ಉಲ್ಲೇಖವಿದೆ. ಅರಾಧನಾಲಯಗಳಲ್ಲಿ ಬೆರ್ಮೆರೆ ಗುಡಿ ಇದೆ. ಹಾಗೂ ದೈವದ ನುಡಿಕಟ್ಟಿನಲ್ಲಿ ಬೆರ್ಮೆರೆ ಪ್ರಸ್ತಾಪ ಬರುತ್ತದೆ. ದೈವಗಳಿಗೆ ಸ್ವತಂತ್ರ ಅಸ್ತಿತ್ವ ಇದೆ. ಎಲ್ಲೂ ಇಲ್ಲದ ಪರಶುರಾಮ ಇಲ್ಯಾಕೆ ಬಂದ ಎಂಬುದು ಚಿಂತಿಸಬೇಕಾದುದು. ಪರಶುರಾಮ ಕಲಾಕೃತಿಯ ಬಗ್ಗೆ ಆಕ್ಷೇಪ ಇಲ್ಲ. ಪರಶುರಾಮನ ಕಾಲ ಬುಡದಲ್ಲಿ ದೈವಗಳನ್ನು ತರುವ ಮೂಲಕ ತುಳು ನಾಡಿನ ದೈವಗಳನ್ನು ಹಾಗೂ ಅಸಂಖ್ಯಾತ ದೈವಾರಾಧಕರನ್ನು ಅವಮಾನಿಸಲು ಸರಕಾರದ( ಸಾರ್ವಜನಿಕರ )ಹಣ ವ್ಯಯಿಸಿದ್ದು ದು:ಖಕರ ಸಂಗತಿ. ಅಸಮಾನ ಸಮಾಜ ನಿವಾರಣೆಯಾಗಿ ಸರ್ವರೂ ಸ್ವಾಭಿಮಾನದಿಂದ ಬದುಕಬೇಕೆಂಬುದು ಸಂವಿಧಾನದ ಆಶಯ. ಆ ದೃಷ್ಟಿಯಲ್ಲಿ ಕಾರ್ಯಪ್ರವೃತ್ತವಾಗುವುದು ಸರಕಾರದ ಆಶಯವಾಗಬೇಕು. ನಾಗರೀಕ ಸಮಾಜಕ್ಕೂ ಅದು ಶೋಭೆ. ತುಳುವರ ಆರಾಧ್ಯ ಶಕ್ತಿಗಳನ್ನು ಪರಶುರಾಮನ ಕಾಲ ಬುಡಕ್ಕೆ ತರುವ ಹಿಂದಿರುವ ಉದ್ದೇಶವಾದರೂ ಏನು? ಮತ್ತೆ ಅಸಮಾನ ಸಮಾಜದ ಮರು ಸ್ಥಾಪನೆಯೆ? ಜನರ ಧಾರ್ಮಿಕ ಭಾವನೆಗೆ ಆದ ನೋವಿಗೇನು ಪರಿಹಾರ?
ದೀಪಕ್ ರಾಜ್. ಸಿ. ಆರ್ ( ಲೇಖಕ, ಜಾನಪದ ಸಂಶೋಧಕ)