ಸ್ವಸ್ಥ ಸಮಾಜದ ನಿರ್ಮಾಣದಲ್ಲಿ ಮಹಿಳೆಯರ ಪಾತ್ರ ಮಹತ್ತರವಾಗಿದೆ. ಮಹಿಳೆಯರು ಮುಖ್ಯವಾಗಿ ಆರೋಗ್ಯದ ಬಗ್ಗೆ ಕಾಳಜಿ ವಹಿಸಿಕೊಳ್ಳಬೇಕಾಗಿದೆ. ಪಿಂಪ್ರಿ ಚಿಂಚ್ವಾಡ್ ಬಂಟರ ಸಂಘದ ವತಿಯಿಂದ ಮಹಿಳೆಯರಿಗಾಗಿ ಆಯೋಜಿಸಿದ ಕಾರ್ಯಕ್ರಮದಲ್ಲಿ ಮಹಿಳೆಯರ ಆರೋಗ್ಯದ ಬಗ್ಗೆ ಮಾಹಿತಿ ನೀಡಲು ಖ್ಯಾತ ಸ್ತ್ರೀ ರೋಗ ತಜ್ಞೆ ಡಾ. ಪ್ರೀತಿಕಾ ಶೆಟ್ಟಿ ಆಗಮಿಸಿರುವುದು ಸಂತಸದ ವಿಚಾರವಾಗಿದೆ. ಡಾ. ಪ್ರೀತಿಕಾ ಶೆಟ್ಟಿಯಂತಹ ಸಂಪನ್ಮೂಲ ಮಹಿಳೆಯರು ನಮ್ಮ ಸಮಾಜದಲ್ಲಿ ಮಾದರಿಯಾಗಿ ಗುರುತಿಸಿಕೊಳ್ಳುತ್ತಾರೆ. ಯಾಕೆಂದರೆ ನಮ್ಮ ಮಕ್ಕಳು ವಿದ್ಯಾಭ್ಯಾಸವನ್ನು ಪಡೆದುಕೊಂಡು ಡಾಕ್ಟರ್, ಇಂಜಿನಿಯರ್ ಗಳಾಗಿ ಜೀವನದಲ್ಲಿ ಹೇಗೆ ಯಶಸ್ಸಿನ ಹಾದಿಯಲ್ಲಿ ಮುಂದುವರಿಯಬಹುದೆಂಬುದಕ್ಕೆ ಇವರು ಉತ್ತಮ ಉದಾಹರಣೆಯಾಗಿದ್ದಾರೆ, ಮಕ್ಕಳು ಇವರನ್ನು ರೋಲ್ ಮಾಡೆಲ್ ಆಗಿ ಸ್ವೀಕರಿಸಿ ಜೀವನದಲ್ಲಿ ಉತ್ತಮ ಸಾಧನೆಯನ್ನು ಮಾಡಬಹುದಾಗಿದೆ ಎಂದು ಪಿಂಪ್ರಿ ಚಿಂಚ್ವಾಡ್ ಬಂಟರ ಸಂಘದ ಅಧ್ಯಕ್ಷರಾದ ರಾಕೆಶ್ ಶೆಟ್ಟಿ ಬೆಳ್ಳಾರೆ ಅಭಿಪ್ರಾಯಪಟ್ಟರು.
ಅವರು ಮಾ ೧೯ ರಂದು ಪಿಂಪ್ರಿ ಚಿಂಚ್ವಾಡ್ ಬಂಟರ ಸಂಘದ ಮಿನಿ ಸಭಾಗೃಹದಲ್ಲಿ ನಡೆದ ಸ್ತ್ರೀ ರೋಗ ತಜ್ಞೆ ಡಾ. ಪ್ರೀತಿಕಾ ಶೆಟ್ಟಿಯವರಿಂದ ಮಹಿಳಾ ಆರೋಗ್ಯದ ಬಗ್ಗೆ ಉಪನ್ಯಾಸ ಕಾರ್ಯಕ್ರಮದಲ್ಲಿ ಮಾತನಾಡಿದರು.
ಡಾ. ಪ್ರೀತಿಕಾ ಶೆಟ್ಟಿಯವರು ಮಹಿಳಾ ಆರೋಗ್ಯದ ಬಗ್ಗೆ ಮಾಹಿತಿ ನೀಡಿದರು. ಈ ಸಂದರ್ಭ ಅವರು ಮಾತನಾಡಿ ವಿದ್ಯೆಗೆ ಬಹಳ ಮಹತ್ವವಿದೆ, ಜನರು ಉತ್ತಮ ಶಿಕ್ಷಣವನ್ನು ಪಡೆದುಕೊಂಡು ತಮ್ಮ ವಿದ್ವತ್ತಿನಿಂದ ಸಮಾಜದಲ್ಲಿ ಗುರುತಿಸಿಕೊಳ್ಳುತ್ತಾರೆ. ಪಿಂಪ್ರಿ- ಚಿಂಚ್ವಾಡ್ ಬಂಟರ ಸಂಘವು ನೀಡಿದ ಗೌರವಕ್ಕೆ ನಾನು ಚಿರಋಣಿಯಾಗಿದ್ದೇನೆ. ಸಂಘದ ಅಧ್ಯಕ್ಷರು, ಪದಾಧಿಕಾರಿಗಳು, ಮಹಿಳಾ ವಿಭಾಗದ ಎಲ್ಲಾ ಸದಸ್ಯರಿಗೆ ವಂದನೆಗಳು ಎಂದರು.
ವೇದಿಕೆಯಲ್ಲಿ ಸಂಘದ ಅಧ್ಯಕ್ಷ ರಾಕೇಶ್ ಶೆಟ್ಟಿ ಬೆಳ್ಳಾರೆ, ಪ್ರಧಾನ ಕಾರ್ಯದರ್ಶಿ ಅರುಣ್ ಶೆಟ್ಟಿ ಬೆಳ್ಳಂಪಳ್ಳಿ, ಶಿಕ್ಷಣ ಮತ್ತು ಸಮಾಜ ಕಲ್ಯಾಣ ಸಮಿತಿ ಕಾರ್ಯಾಧ್ಯಕ್ಷರಾದ ವಿಶ್ವನಾಥ ಕೆ ಶೆಟ್ಟಿ ಮುಂಡ್ಕೂರು, ಮಹಿಳಾ ವಿಭಾಗದ ಕಾರ್ಯಾಧ್ಯಕ್ಷೆ ಜ್ಯೋತಿ ವಿಜಯ್ ಶೆಟ್ಟಿ, ಮಹಿಳಾ ವಿಭಾಗದ ಶಿಕ್ಷಣ ಮತ್ತು ಸಮಾಜ ಕಲ್ಯಾಣ ಸಮಿತಿ ಕಾರ್ಯಾಧ್ಯಕ್ಷೆ ಶೋಭಾ ಜಯಾನಂದ ಶೆಟ್ಟಿ ಉಪಸ್ಥಿತರಿದ್ದರು .
ಕಾರ್ಯಕ್ರಮದಲ್ಲಿ ಹೆಚ್ಚಿನ ಸಂಖ್ಯೆಯಲ್ಲಿ ಮಹಿಳೆಯರು ಉಪಸ್ಥಿತರಿದ್ದರು. ಡಾ. ಪ್ರೀತಿಕಾ ಶೆಟ್ಟಿಯವರನ್ನು ಸಂಘದ ವತಿಯಿಂದ ಸಮ್ಮಾನಿಸಲಾಯಿತು . ಈ ಸಂದರ್ಭ ಸಂಘದ ಮಾಜಿ ಅಧ್ಯಕ್ಷರಾದ ವಿಶ್ವನಾಥ ಡಿ ಶೆಟ್ಟಿ, ಎರ್ಮಾಳ್ ವಿಶ್ವನಾಥ ಶೆಟ್ಟಿ, ಯುವ ವಿಭಾಗದ ಕಾರ್ಯಾಧ್ಯಕ್ಷ ಆಕಾಶ್ ಜೆ ಶೆಟ್ಟಿ, ತುಳುಸಂಘ ಪಿಂಪ್ರಿ ಚಿಂಚ್ವಾಡ್ ಅಧ್ಯಕ್ಷರಾದ ಹರೀಶ್ ಶೆಟ್ಟಿ ಕುರ್ಕಾಲ್ ಉಪಸ್ಥಿತರಿದ್ದರು. ಸಂಘದ ಗೌರವ ಕೋಶಾಧಿಕಾರಿ ಸುಧಾಕರ ಶೆಟ್ಟಿ ಪೆಲತ್ತೂರು ಕಾರ್ಯಕ್ರಮ ನಿರೂಪಿಸಿದರು. ಶ್ರಿಕಾ ರಾಕೇಶ್ ಶೆಟ್ಟಿ ಡಾ. ಪ್ರೀತಿಕಾ ಶೆಟ್ಟಿಯವರನ್ನು ಪರಿಚಯಿಸಿದರು. ಶೋಭಾ ಜಯಾನಂದ ಶೆಟ್ಟಿ ವಂದಿಸಿದರು.