ದುರಂತವನ್ನಪ್ಪಿದ ಅವಳಿ ಸಹೋದರಿಯರು ಉರ್ಕಿದೊಟ್ಟು ಸಾನದ ಸೊನ್ನೆ ಮತ್ತು ಗುರು ಮಾರ್ಲ ರ ಮಕ್ಕಳು ಅಬ್ಬಗ-ದಾರಗರು. ಬ್ರಹ್ಮರಿಗೆ ಹರಸಿಕೊಂಡು ಹುಟ್ಟಿದ ಅವಳಿಮಕ್ಕಳು ಇವರು. ಹೇಳಿಕೊಂಡ ಹರಕೆಯನ್ನು ಸಲ್ಲಿಸಲು ಮರೆಯುತ್ತಾರೆ ಸೊನ್ನೆ-ಗುರುಮಾರ್ಲ ದಂಪತಿಗಳು. ಅಬ್ಬಗೆ-ದಾರಗೆಯರಿಗೆ ಗಂಡು ನಿಶ್ಚಯಿಸಿ ಬರಲು ಹೋಗುವಾಗ ಬೆರ್ಮೆರ್ ಬಡ ಬ್ರಾಹ್ಮಣನ ವೇಷ ಧರಿಸಿ ಬಂದು ‘ಬೆರ್ಮೆರಿಗೆ ಹೇಳಿದ ಹರಿಕೆಯನ್ನು ನೆನಪಿಸುತ್ತಾರೆ. ಆಗ ಸೊನ್ನೆ ಉದ್ಧಟತನದಿಂದ ವರ್ತಿಸುತ್ತಾಳೆ. ಇದರಿಂದ ಕೋಪಗೊಂಡ ಬೆರ್ಮೆರು ಅದೇ ಬಡ ಬ್ರಾಹ್ಮಣನ ರೂಪದಲ್ಲಿ ಬೀಡಿಗೆ ಬಂದು ಅಬ್ಬಗೆ-ದಾರಗೆಯರನ್ನು ಚೆನ್ನೆಯಾಡಲು ಪ್ರೇರೇಪಿಸಿ ಅವರೊಳಗೆ ಜಗಳ ತಂದು ಹಾಕಿ ಅವರಿಬ್ಬರೂ ಸಾವನ್ನಪ್ಪುವಂತೆ ಮಾಡುತ್ತಾರೆ.
ಅಬ್ಬಗ ದಾರಗರು ಒಳಗಿನ ಕೋಣೆಗೆ ಹೋದರು ಕಲ್ಲು ಪೆಟ್ಟಿಗೆಯ ಬೀಗ ತೆರೆದು ಬರುತ್ತದೆ. ಬೆಳ್ಳಿಯ ಚೆನ್ನಮಣೆ ಬಂಗಾರದ ಮುತ್ತು ಹರಳು ತೆಗೆದುಕೊಂಡರು ಬಾಜಿರ ಹಲಗೆಯಲ್ಲಿ ಕುಳಿತರು ಚೆನ್ನೆಯಾಡಿದರು ಒಂದಾಟ ಆಡಿದಳು ತಂಗಿಗೆ ಗೆಲುವು ತೋರಿ ಬಂತು ಎರಡಾಟವಾಗಿ ಅಕ್ಕನಿಗೆ ಪೊರಿ ಆಯಿತು ಮೂರನೆ ಆಟದಲ್ಲಿಯೂ ಅಕ್ಕನಿಗೆ ತಂಗಿಯನ್ನು ಗೆಲ್ಲಲಾಗಲಿಲ್ಲ ಆಗೆಂದಳು ತಂಗಿ ಓ ಅಕ್ಕನವರೆ ಕೇಳಿದಿರ ಈ ಮೂರು ಪೊರಿಯನ್ನು ಚಂದದಿಂದ ಹೊಸ ಗಡಿಗೆಯಲ್ಲಿ ತುಂಬಿ ಇಡಿಸಿರಿ ನಿಮ್ಮ ಮದುಮಗನಿಗೆ ಅರಳಕ್ಕಿ ಸಮ್ಮಾನ ಮಾಡಿರಿ ಎಂದು ವ್ಯಂಗ್ಯವಾಡಿದಳು ತಂಗಿ.
ಮೊದಲೇ ಸೋತ ಅಕ್ಕನಿಗೆ ತಂಗಿಯ ವ್ಯಂಗ್ಯ ಕೇಳಿ ಕೋಪ ನೆತ್ತಿಗೇರುತ್ತದೆ. ಆಟದಲ್ಲಿ ಆರಂಭವಾದುದು ದುರಂತದಲ್ಲಿ ಮುಕ್ತಾಯವಾಗಲು ಕಾರಣವಾಗುತ್ತದೆ.
ಕೋಪದಿಂದ ಕೆರಳಿ ಕೆಂಡವಾಗಿ ಹಾರಿದಳು ಅಕ್ಕ ಚೆನ್ನೆಮಣೆ ತಿರುಗಿಸಿ ಹಿಡಿದಳು ತಂಗಿಯ ನಡುನೆತ್ತಿಪ್ಪಳಿಸಿದಳು ದಾರಗನ ನೆತ್ತಿಯೊಡೆಯಿತು ನೆತ್ತರಿನ ಕೊಳವೇ ಆಯಿತು ದಡಕ್ಕನೆ ಕುಸಿದಳು ದಾರಗ ಕಾಯ ಬಿಟ್ಟು ಸಂದಳು ಅಯ್ಯಯ್ಯೊ ಪಾಪವೇ ಅಕಟಕಟಾ ದೋಷವೆ ತಂಗಿಯನ್ನು ಕೊಂದೆಯಲ್ಲಾ ಮಗು ಅಬ್ಬಗಾಯೆಂದ ಬ್ರಾಹ್ಮಣ ನಾನೊಮ್ಮೆ ಇಲ್ಲಿಂದ ಹೋಗುವೆನೆಂದು ಹೊರಟರು ಒಡಹುಟ್ಟಿದ ತಂಗಿಯನ್ನು ಕೊಂದೆನಲ್ಲಾ ನಾನು ಎಂದು ತಲೆಗೆ ಬಡಿದುಕೊಂಡಳು ಅಬ್ಬಗ ಅತ್ತು ಗೋಳಾಡಿದಳು ಇನ್ನು ನಾನುಳಿಯುವುದು ಯಾಕೆಂದು ತಂಗಿಯ ಶವವನ್ನು ಬಾವಿಗೆ ಹಾಕಿದಳು ತಾನೂ ಬಾವಿಗೆ ಹಾರಿಕೊಂಡಳು ಅಬ್ಬಗ.
ದೈವದ ಆಗ್ರಹಕ್ಕೆ ಸಿಲುಕಿ ದುರಂತವನ್ನಪ್ಪಿದ ಅಬ್ಬಗೆ ದಾರಗೆಯರು ಮುಂದೆ ದೈವತ್ವ ಪಡೆದು ಬೆರ್ಮೆರ ಎಡ ಭಾಗದಲ್ಲಿ ನೆಲೆಯಾಗುತ್ತಾರೆ.