ಅಂತರಾಷ್ಟ್ರೀಯ ಮಹಿಳಾ ದಿನಾಚರಣೆಯ ಪ್ರಯುಕ್ತ ವಿವಿಧ ಕ್ಷೇತದಲ್ಲಿ ಸಾಧನೆ ಮಾಡಿದ ಕಾರ್ಕಳ, ಹೆಬ್ರಿ ತಾಲೂಕಿನ ಸಾಧಕ ಮಹಿಳೆಯರನ್ನು ಕಾರ್ಕಳದ ಸಾವಿತ್ರಿ ಸತ್ಯವಾನ್ ಚಾರಿಟೇಬಲ್ ಟ್ರಸ್ಟ್ ವತಿಯಿಂದ ಸನ್ಮಾನಿಸುವ ಕಾರ್ಯಕ್ರಮವು ಹೆಬ್ರಿ ಚೈತನ್ಯ ಯುವ ವೃಂದ ಸಭಾಂಗಣದಲ್ಲಿ ನಡೆಯಿತು.
ಕಾರ್ಯಕ್ರಮವನ್ನು ಉಡುಪಿ ಜಿಲ್ಲಾ ಮೋದಿ ಬ್ರಿಗೇಡ್ ಮಹಿಳಾ ಘಟಕ ಜಿಲ್ಲಾಧ್ಯಕ್ಷೆ ವೇದಾವತಿ ಹೆಗ್ಡೆ ಉದ್ಘಾಟಿಸಿ ಮಾತನಾಡಿ ಜೀವನದ ಎಲ್ಲಾ ಕ್ಷೇತ್ರದಲ್ಲಿ ಮಹಿಳೆಯರ ಸಾಧನೆಗಳನ್ನು ಗೌರವಿಸಿ, ಮಹಿಳೆಯರ ಕಷ್ಟಗಳನ್ನು ತಡೆಯುವ ಸಲುವಾಗಿ ಮಹಿಳಾ ದಿನಾಚರಣೆಯನ್ನು ಕಾರ್ಯರೂಪಕ್ಕೆ ತಂದಿದ್ದಾರೆ. ಮಹಿಳೆಯರ ಆರ್ಥಿಕ, ಸಾಮಾಜಿಕ, ಮತ್ತು ಸಾಧನೆಗಳನ್ನು ಮಹಿಳಾ ದಿನಾಚರಣೆಯಂದು ನೆನೆಯಲಾಗುತ್ತಿದೆ. ಮಹಿಳೆಯರು ಮಾಡುವ ಪ್ರತಿ ಕಾರ್ಯಗಳನ್ನು ಸಮಾಜ ಗೌರವಿಸುತ್ತದೆ. ಮಹಿಳೆಯರು ಯಾವ ಪುರುಷರಿಗಿಂತ ನಾವೇನು ಕಮ್ಮಿ ಇಲ್ಲವೆಂದು ನಿರೂಪಿಸಿದ್ದಾರೆ. ಸಂಸ್ಥೆಯು ಸಾಧಕ ಮಹಿಳೆಯರನ್ನು ಗೌರವಿಸಿ ಪ್ರಶಸ್ತಿ ಪ್ರಧಾನ ಮಾಡುತ್ತಿರುವುದು ಶ್ಲಾಘನೀಯ ಎಂದು ಹೇಳಿದರು.
ಮಹರ್ಷಿ ಅರವಿಂದ ಘೋಷ್ ರವರ ನೆನಪಿಗಾಗಿ ಸಾವಿತ್ರಿ ಸತ್ಯವಾನ್ ಚಾರಿಟೇಬಲ್ ಟ್ರಸ್ಟ್ ಸಂಸ್ಥೆಯನ್ನು ಆರಂಭಿಸಿದೆವು. ಸಾಧನೆಗೆ ಸ್ಫೂರ್ತಿ, ಬದುಕಿಗೆ ದಾರಿ, ಕುಟುಂಬಕ್ಕೆ ಶಕ್ತಿ, ಎಲ್ಲರ ಬದುಕಿನಲ್ಲೂ ಸ್ಥಾನ ಪಡೆದವಳು ಸ್ತ್ರೀ. ಮಹಿಳೆ ಇಲ್ಲದೆ ಬದುಕೇ ಇಲ್ಲ. ಪ್ರತಿಯೊಬ್ಬರ ಬಾಳಿನಲ್ಲಿ ಹೆಣ್ಣು ಪ್ರತಿಯೊಂದು ಸ್ಥಾನವನ್ನು ತುಂಬುತ್ತಾಳೆ. ಈಗೀಗ ಮಹಿಳೆಯರು ಅಬಲೆಯರಲ್ಲ ಸಬಲರು, ಎಂದು ತೋರ್ಪಡಿಸುತ್ತಿದ್ದಾರೆ. ಮಹಿಳೆಯರು ಎಲ್ಲಾ ರಂಗದಲ್ಲೂ ಮೇಲಕ್ಕೆ ಬರತೊಡಗಿದ್ದಾರೆ. ಯಾವತ್ತೂ ಮಹಿಳೆಯರು ಹಿಂದೆ ಉಳಿಯಬಾರದೆಂಬ ಸದುದ್ದೇಶದಿಂದ ಟ್ರಸ್ಟನ್ನು ಸ್ಥಾಪಿಸಿ ಸಮಾಜಮುಖಿ ಚಟುವಟಿಕೆ ಮಾಡುತ್ತಾ ಬಂದಿದ್ದೇವೆ. ಮಹಿಳೆಯರು ಸಮಾಜದಲ್ಲಿ ಎಲ್ಲಾ ರಂಗದಲ್ಲೂ ಮುಂದೆ ಬಂದು ವಿವಿಧ ಕ್ಷೇತ್ರದಲ್ಲಿ ಸಾಧನೆ ಮಾಡಬೇಕು. ಎಲ್ಲಿ ಮಹಿಳೆಯರಿಗೆ ಕಷ್ಟ ನಷ್ಟಗಳು ಆಗುತ್ತದೋ ಅಲ್ಲಿಗೆ ಧಾವಿಸಿ ಪರಿಹಾರೊಪಾಯ ಕಂಡು ಕೊಳ್ಳುವಂತಾಗಬೇಕು. ಮಹಿಳೆಯರನ್ನು ಗೌರವಿಸಿ, ಅವರ ಶ್ರಮಕ್ಕೆ ಧನ್ಯವಾದ ಹೇಳಲು ಇದೊಂದು ಕಾರ್ಯಕ್ರಮವನ್ನು ಆಯೋಜಿಸಲಾಗಿದೆ ಎಂದು ಸಭೆಯ ಅಧ್ಯಕ್ಷತೆ ವಹಿಸಿದ ಟ್ರಸ್ಟಿನ ಅಧ್ಯಕ್ಷೆ ಡಾ. ಮಮತಾ ಹೆಗ್ಡೆ ಹೇಳಿದರು.
ವಿವಿಧ ಕ್ಷೇತ್ರದಲ್ಲಿ ಸಾಧನೆಗೈದ ಶಿಕ್ಷಕಿ ಪೂರ್ಣಿಮಾ ಶೆಣೈ, ಸಾಹಿತಿ ಚೈತ್ರಾ ಕಬ್ಬಿನಾಲೆ, ನಾಟಿವೈದ್ಯ ಜಯಂತಿ ಮಾಳ, ವಿಜೇತ ವಿಶೇಷ ಶಾಲೆಯ ಸಂಸ್ಥಾಪಕಿ ಡಾ. ಕಾಂತಿ ಹರೀಶ್, ಕೃಷಿ ಕ್ಷೇತ್ರದ ಸಾಧಕಿ ಸುಮಲತಾ ಮಾಳ, ಸಂಗೀತ ಕ್ಷೇತ್ರದ ಸಾಧಕಿ ಆರತಿ, ಸಮಾಜ ಸೇವಕಿ ಗಾಯತ್ರಿ ಪ್ರಭು, ಸುರಕ್ಷಾ ಸೇವಾಶ್ರಮದ ಆಯಿಷಾ ಭಾನು, ಶಿಕ್ಷಕಿ ಗೀತಾ ಎಸ್ ಹೆಗ್ಡೆ ಹೆಬ್ರಿ ಇವರನ್ನು (ಸಾಧಕ ಮಹಿಳೆ ೨೦೨೩ ) ಅಭಿನಂದನಾ ಪತ್ರ ನೀಡಿ ಗೌರವಿಸಿ ಸನ್ಮಾನಿಸಲಾಯಿತು. ಹೆಬ್ರಿ ಚೈತನ್ಯ ಮಹಿಳಾ ಯುವವೃಂದದ ಅಧ್ಯಕ್ಷೆ ವಿದ್ಯಾ ಜನಾರ್ಧನ್, ಕುಚ್ಚೂರು ಸರಕಾರಿ ಪ್ರೌಢಶಾಲೆ ಮುಖ್ಯ ಶಿಕ್ಷಕಿ ಸ್ನೇಹಲತಾ ಟಿ. ಜಿ. ಆಚಾರ್ಯ ಅತಿಥಿಗಳಾಗಿ ಸಭೆಯಲ್ಲಿ ಭಾಗವಹಿಸಿ ಮಾತನಾಡಿದರು. ಅಮೃತ ಭಾರತಿ ಮಾತೃ ಮಂಡಳಿ ಅಧ್ಯಕ್ಷೆ ವೀಣಾ ಆರ್. ಭಟ್, ಹೆಬ್ರಿಯ ಖ್ಯಾತ ಆಯುರ್ವೇದಿಕ್ ವೈದ್ಯೆ ಡಾ. ರೇಷ್ಮಾ ಶೆಟ್ಟಿ, ಕುಚ್ಚೂರು ಗ್ರಾಮ ಪಂಚಾಯತ್ ಅಧ್ಯಕ್ಷೆ ರೇವತಿ ಶೆಟ್ಟಿ ಉಪಸ್ಥಿತರಿದ್ದರು. ಸುಷ್ಮಾ ಪೂಜಾರಿ ಸ್ವಾಗತಿಸಿ, ನಿರೂಪಿಸಿ, ವಂದಿಸಿದರು.