ಪಿಂಪ್ರಿ ಚಿಂಚ್ವಾಡ್ ಬಂಟರ ಸಂಘವು ಬಹಳ ಶಿಸ್ತು ಬದ್ಧವಾಗಿ ಕ್ರೀಡಾಕೂಟ, ರಾಷ್ಟ್ರಮಟ್ಟದ ಕಬಡ್ಡಿ ಹಾಗೂ ತ್ರೋ ಬಾಲ್ ಪಂದ್ಯಾಟವನ್ನು ಆಯೋಜಿಸಿರುವುದು ಅಭಿನಂದನೀಯವಾಗಿದೆ. ಪುಣೆಯಲ್ಲಿರುವ ವಿವಿಧ ಉದ್ಯೋಗ, ಉದ್ಯಮ ಕ್ಷೇತ್ರಗಳಲ್ಲಿ ತೊಡಗಿಸಿಕೊಂಡ ಸಮಾಜ ಬಾಂಧವರೆಲ್ಲರನ್ನೂ ಸಂಘದ ಒಂದೇ ಛತ್ರದಡಿಯಲ್ಲಿ ಸೇರಿಸಿಕೊಂಡು ಇಂತಹ ಕ್ರೀಡಾಕೂಟಗಳನ್ನು ಆಯೋಜಿಸುವುದರಿಂದ ನಮ್ಮೊಳಗಿನ ಒಗ್ಗಟ್ಟು ಬಲಗೊಂಡು ಬಾಂಧವ್ಯ ವೃದ್ಧಿಯಾಗಲು ಸಾಧ್ಯವಿದೆ. ಪ್ರತಿಯೊಂದು ಊರಿನಲ್ಲಿಯೂ ಇಂತಹ ಕಾರ್ಯಕ್ರಮಗಳು ನಡೆಯುವಂತಾದರೆ ಸಂಘಟನೆಗಳು ಶಕ್ತಿಯುತವಾಗುತ್ತದೆ ಎಂದು ಅಮೆಚೂರ್ ಕಬಡ್ಡಿ ಅಸೋಸಿಯೇಷನ್ ಕರ್ನಾಟಕ ಇದರ ಅಧ್ಯಕ್ಷರಾದ ರಾಕೇಶ್ ಮಲ್ಲಿ ಅಭಿಪ್ರಾಯಪಟ್ಟರು.
ಅವರು ನಗರದ ಮೊರ್ಯಾ ಗೋಸಾವಿ ಕ್ರೀಡಾ ಸಂಕುಲದ ಎರ್ಮಾಳ್ ನಾರಾಯಣ ಕೆ ಶೆಟ್ಟಿ ವೇದಿಕೆಯಲ್ಲಿ ನಡೆದ ಪಿಂಪ್ರಿ ಚಿಂಚ್ವಾಡ್ ಬಂಟರ ಸಂಘದ ವಾರ್ಷಿಕ ಕ್ರೀಡಾಕೂಟ, ರಾಷ್ಟ್ರಮಟ್ಟದ ಕಬಡ್ಡಿ ಹಾಗೂ ತ್ರೋಬಾಲ್ ಪಂದ್ಯಾಟದ ಸಮಾರೋಪ ಸಮಾರಂಭದ ಮುಖ್ಯ ಅತಿಥಿಗಳಾಗಿ ಉಪಸ್ಥಿತರಿದ್ದು ಮಾತನಾಡಿ ಗ್ರಾಮೀಣ ಕ್ರೀಡೆಯಾದ ಕಬಡ್ಡಿ ಆಟಗಾರರಿಗೆ ಇಂದು ಮನ್ನಣೆ ಸಿಗುವಂತಾಗಲು ವಿಜಯಾ ಬ್ಯಾಂಕಿನ ಜಯಕರ್ ಶೆಟ್ಟಿಯವರು ಬಂಟ ಸಮಾಜದ ಕಬಡ್ಡಿ ಆಟಗಾರರಿಗೆ ಉದ್ಯೋಗ ನೀಡಿ ಪ್ರೋತ್ಸಾಹಿಸಿರುವುದು ಮುಖ್ಯ ಕಾರಣವಾಗಿದೆ. ಇದರಿಂದಾಗಿಯೇ ಇಂದು ಸುಕೇಶ್ ಹೆಗ್ಡೆಯಂತಹ ಆಟಗಾರ ಸಾಧನೆ ಮಾಡುವಂತಾಯಿತು. ಸಮಾಜದ ಉನ್ನತ ಹುದ್ದೆಯಲ್ಲಿರುವವರು ಹಾಗೂ ಉದ್ಯಮಿಗಳು ಯುವ ಆಟಗಾರರನ್ನು ಪ್ರೋತ್ಸಾಹಿಸಿದರೆ ಸಮಾಜದಲ್ಲಿ ಇನ್ನಷ್ಟು ಕ್ರೀಡಾ ಪ್ರತಿಭೆಗಳು ಅರಳಲು ಸಾಧ್ಯವಿದೆ. ಸಮಾಜದಲ್ಲಿರುವ ಕಟ್ಟಕಡೆಯ ವ್ಯಕ್ತಿಗಳಿಗೂ ಸಹಕಾರ ನೀಡುವಲ್ಲಿ ಸಂಘವು ತೊಡಗಿಸಿಕೊಳ್ಳಬೇಕಾಗಿದೆ ಎಂದರು.
ಅಂತಾರಾಷ್ಟ್ರೀಯ ಮಟ್ಟದ ಕಬಡ್ಡಿ ಆಟಗಾರ ಸುಕೇಶ್ ಹೆಗ್ಡೆ ಮಾತನಾಡಿ ಬಂಟ ಸಮಾಜ ವಿಶ್ವದಾದ್ಯಂತ ವಿವಿಧ ಕ್ಷೇತ್ರಗಳಲ್ಲಿ ಶ್ರೇಷ್ಠ ಸಾಧನೆಗಳನ್ನು ಮಾಡುವುದರೊಂದಿಗೆ ತುಳುನಾಡ ಸಂಸ್ಕೃತಿಯನ್ನು ಪಸರಿಸುವ ಕಾರ್ಯ ಮಾಡುತ್ತಿರುವುದು ಹೆಮ್ಮೆಯ ವಿಚಾರವಾಗಿದೆ. ಸಂಘ ಸಂಸ್ಥೆಗಳು ಕ್ರೀಡೆಗೆ ಹೆಚ್ಚಿನ ಆದ್ಯತೆ ನೀಡಿ ಯುವ ಪೀಳಿಗೆಯನ್ನು ಪ್ರೋತ್ಸಾಹಿಸಿದಾಗ ಕ್ರೀಡಾ ಪ್ರತಿಭೆಗಳು ಬೆಳೆಯಲು ಸಾಧ್ಯವಾಗುತ್ತದೆ. ಇಂದಿನ ದಿನಗಳಲ್ಲಿ ಡಾಕ್ಟರ್, ಇಂಜಿನಿಯರ್ ಗಳಿಂತಲೂ ಹೆಚ್ಚಿನ ಸಂಪಾದನೆ ಕ್ರೀಡಾ ಕ್ಷೇತ್ರದ ಸಾಧಕರಿಗೆ ಸಿಗುತ್ತಿದೆ. ಆದುದರಿಂದ ಮಕ್ಕಳನ್ನು ಆಸಕ್ತಿಯ ಕ್ರೀಡಾ ಕ್ಶೆತ್ರದಲ್ಲಿ ಬೆಳೆಯಲು ಅವಕಾಶ ನೀಡಬೇಕಾಗಿದೆ. ಇಂದಿನ ಸಂಘದ ಕಾರ್ಯಕ್ರಮದಲ್ಲಿ ಭಾಗವಹಿಸಿರುವುದು ಹೆಮ್ಮೆಯಾಗುತ್ತದೆ ಎಂದರು.
ಅತಿಥಿಗಳಾಗಿ ಉಪಸ್ಥಿತರಿದ್ದ ಮುಂಬಯಿಯ ಉದ್ಯಮಿ ಅಜಿತ್ ರೈ ಮಾತನಾಡಿ ಸಂಘದ ಅಧ್ಯಕ್ಷ ರಾಕೇಶ್ ಶೆಟ್ಟಿಯವರ ದಕ್ಷ ನೇತೃತ್ವದಲ್ಲಿ ಸಂಘವು ಉತ್ತಮ ಕಾರ್ಯಕ್ರಮಗಳನ್ನು ಮಾಡುತ್ತಿರುವುದು ಅಭಿನಂದನೀಯವಾಗಿದೆ. ಸಂಘವು ಮಾಡುವ ವಿವಿಧ ಸಾಮಾಜಿಕ, ಶೈಕ್ಷಣಿಕ ಕಾರ್ಯಗಳಿಗೆ ನನ್ನ ಸಹಕಾರ ಸದಾ ಇದೆ ಎಂದರು.
ಬಂಟ್ಸ್ ಅಸೋಸಿಯೇಷನ್ ಪುಣೆ ಇದರ ಉಪಾಧ್ಯಕ್ಷರಾದ ಸತೀಶ್ ರೈ ಕಲ್ಲಂಗಳಗುತ್ತು ಮಾತನಾಡಿ ರಾಕೇಶ್ ಶೆಟ್ಟಿಯವರ ನೇತೃತ್ವದಲ್ಲಿ ಸಂಘವು ನವನವೀನ ಚಿಂತನೆಗಳ ಮೂಲಕ ಕಾರ್ಯಕ್ರಮಗಳನ್ನು ಆಯೋಜಿಸಿ ಯುವ ಶಕ್ತಿಯನ್ನು ಒಗ್ಗೂಡಿಸುವ ಕಾರ್ಯವನ್ನು ಮಾಡುತ್ತಿರುವುದು ಅನ್ಯ ಸಂಘಗಳಿಗೆ ಮಾದರಿಯಾಗಿದೆ. ಇಂದು ಬಂಟ ಸಮಾಜದ ಸಂಘಟನೆಗಳು ಶಕ್ತಿಯುತವಾಗಿದೆ. ಆದರೆ ಯುವ ಸಮೂಹ ಸಂಘಟನೆಗಳಿಂದ ವಿಮುಖವಾಗುತ್ತಿರುವುದು ಉತ್ತಮ ವಿಚಾರವಲ್ಲ. ಆದುದರಿಂದ ಯುವ ಸಮೂಹವನ್ನು ಒಗ್ಗೂಡಿಸುವಲ್ಲಿ ವರ್ಷದಲ್ಲಿ ಎರಡು ಮೂರು ಇಂತಹ ಕಾರ್ಯಕ್ರಮಗಳನ್ನು ಆಯೋಜಿಸುವುದು ಉತ್ತಮವಾಗಿದೆ ಎಂದರು.
ಪುಣೆ ತುಳುಕೂಟದ ಅಧ್ಯಕ್ಷ ಮೋಹನ್ ಶೆಟ್ಟಿ ಎಣ್ಣೆಹೊಳೆ ಮಾತನಾಡಿ ಪಿಂಪ್ರಿ ಚಿಂಚ್ವಾಡ್ ಬಂಟರ ಸಂಘವು ರಜತ ಸಂಭ್ರಮದ ವರ್ಷದಲ್ಲಿ ಬಹಳ ಉತ್ತಮ ಕಾರ್ಯಕ್ರಮಗಳನ್ನು ಆಯೋಜಿಸಿ ಸಮಾಜಬಾಂಧವರನ್ನು ಒಗ್ಗೂಡಿಸುತ್ತದೆ. ಸಂಘದ ಅಧ್ಯಕ್ಷರು ಹಾಗೂ ಪದಾಧಿಕಾರಿಗಳಿಗೆ ಅಭಿನಂದನೆಗಳು ಎಂದರು.
ಪುಣೆ ಬಂಟರ ಸಂಘದ ದಕ್ಷಿಣ ಪ್ರಾದೇಶಿಕ ಸಮಿತಿಯ ಕಾರ್ಯಾಧ್ಯಕ್ಷ ಶೇಖರ್ ಸಿ ಶೆಟ್ಟಿ ಮಾತನಾಡಿ ಪುಣೆ ಯಲ್ಲಿಯೇ ಪ್ರಥಮ ಬಾರಿಗೆ ಇಂತಹ ಕ್ರೀಡಾಕೂಟ ಆಯೋಜನೆಗೊಂಡಿದ್ದು ಸಂಘದ ಅಧ್ಯಕ್ಷರ ಹಾಗೂ ಪದಾಧಿಕಾರಿಗಳ ಕಾರ್ಯ ಶ್ಲಾಘನೀಯವಾಗಿದೆ. ಕ್ರೀಡಾಪ್ರತಿಭೆಗಳಿಗೆ ವೇದಿಕೆ ಒದಗಿಸುವ ಕಾರ್ಯ ಸಂಘದಿಂದ ನಿರಂತರ ಆಗುತ್ತಿರಲಿ ಎಂದರು.
ಸಂಘದ ಅಧ್ಯಕ್ಷ ರಾಕೇಶ್ ಶೆಟ್ಟಿ ಮಾತನಾಡಿ ಇಂದು ನಾವು ಸಂಘದ ರಜತ ಸಂಭ್ರಮದ ನಿಮಿತ್ತ ಆಯೋಜಿಸಿದ ಕ್ರೀಡಾಕೂಟವನ್ನು ಯಶಸ್ವಿಗೊಳಿಸಿರುವುದಕ್ಕೆ ಸಂಘದ ಸರ್ವ ಸದಸ್ಯರಿಗೆ, ಕಾರ್ಯಕಾರಿ ಸಮಿತಿ, ಮಾಜಿ ಅಧ್ಯಕ್ಷರಿಗೆ, ಮಹಿಳಾ ವಿಭಾಗ, ಯುವ ವಿಭಾಗದ ಸದಸ್ಯರಿಗೆ ಹಾಗೂ ಸಮಾರಂಭದ ಶೋಭೆಯನ್ನು ಹೆಚ್ಚಿಸಿದ ಗಣ್ಯ ಅತಿಥಿಗಳಿಗೆ ವಂದನೆಗಳು, ನಿಮ್ಮೆಲ್ಲರ ಸಹಕಾರ ಸಂಘದೊಂದಿಗೆ ನಿರಂತರವಾಗಿರಲಿ ಎಂದರು.
ವೇದಿಕೆಯಲ್ಲಿ ಪುಣೆ ಬಂಟರ ಸಂಘದ ಅಧ್ಯಕ್ಷ ಸಂತೋಷ್ ಶೆಟ್ಟಿ ಇನ್ನ ಕುರ್ಕಿಲ್ ಬೆಟ್ಟು ಬಾಳಿಕೆ, ಬಂಟ್ಸ್ ಅಸೋಸಿಯೇಷನ್ ಪುಣೆ ಅಧ್ಯಕ್ಷರಾದ ಗಣೇಶ್ ಹೆಗ್ಡೆ ಪುಂಚೂರು, ಪುಣೆ ಬಂಟರ ಸಂಘದ ಉಪಾಧ್ಯಕ್ಷರಾದ ಎರ್ಮಾಳ್ ಚಂದ್ರಹಾಸ ಶೆಟ್ಟಿ, ಸಂಘದ ನಿಕಟಪೂರ್ವ ಅಧ್ಯಕ್ಷರಾದ ವಿಜಯ್ ಶೆಟ್ಟಿ ಕಟ್ಟಣಿಗೆ ಮನೆ ಬೋರ್ಕಟ್ಟೆ, ಉಪಾಧ್ಯಕ್ಷರಾದ ಜಗದೀಶ್ ಶೆಟ್ಟಿ, ಪ್ರಧಾನ ಕಾರ್ಯದರ್ಶಿ ಅರುಣ್ ಶೆಟ್ಟಿ ಬೆಳ್ಳಂಪಳ್ಳಿ, ಗೌರವ ಕೋಶಾಧಿಕಾರಿ ಸುಧಾಕರ ಶೆಟ್ಟಿ ಪೆಲತ್ತೂರು, ಕ್ರೀಡಾ ಸಮಿತಿ ಕಾರ್ಯಾಧ್ಯಕ್ಷ ಜಯಾನಂದ ಶೆಟ್ಟಿ, ಸಾಂಸ್ಕೃತಿಕ ಸಮಿತಿ ಕಾರ್ಯಾಧ್ಯಕ್ಷ ದಿನೇಶ್ ಶೆಟ್ಟಿ ಉಜಿರೆ, ಶಿಕ್ಷಣ ಮತ್ತು ಸಮಾಜ ಕಲ್ಯಾಣ ಸಮಿತಿ ಕಾರ್ಯಾಧ್ಯಕ್ಷ ವಿಶ್ವನಾಥ ಕೆ ಶೆಟ್ಟಿ ಮುಂಡ್ಕೂರು, ಮಹಿಳಾ ವಿಭಾಗದ ಕಾರ್ಯಾಧ್ಯಕ್ಷೆ ಜ್ಯೋತಿ ವಿ ಶೆಟ್ಟಿ, ಯುವ ವಿಭಾಗದ ಕಾರ್ಯಾಧ್ಯಕ್ಷ ಆಕಾಶ್ ಜೆ ಶೆಟ್ಟಿ, ಮಹಿಳಾ ವಿಭಾಗದ ಕ್ರೀಡಾ ಸಮಿತಿ ಕಾರ್ಯಧ್ಯಕ್ಷೆ ದಿವ್ಯಾ ಯು ಶೆಟ್ಟಿ, ಯುವ ವಿಭಾಗದ ಕ್ರೀಡಾ ಸಮಿತಿ ಕಾರ್ಯಾಧ್ಯಕ್ಷ ಸಚಿನ್ ಶೆಟ್ಟಿ ಉಪಸ್ಥಿತರಿದ್ದರು.
ಈ ಸಂದರ್ಭ ಖ್ಯಾತ ವಾಲಿಬಾಲ್ ಆಟಗಾರ ಅಕ್ಷತ್ ಶೆಟ್ಟಿ ಎರ್ಮಾಳ್ ಹಾಗೂ ವಸಂತ್ ಶೆಟ್ಟಿ ಹಿರಿಯಡ್ಕ ಇವರನ್ನು ಸಂಘದ ವತಿಯಿಂದ ಶಾಲು ಹೊದಿಸಿ, ನೆನಪಿನ ಕಾಣಿಕೆ, ಸನ್ಮಾನ ಪತ್ರಗಳನ್ನು ನೀಡಿ ಸನ್ಮಾನಿಸಲಾಯಿತು.
ಎರ್ಮಾಳ್ ಅಕ್ಷತ್ ಶೆಟ್ಟಿ ಸನ್ಮಾನಕ್ಕುತ್ತರಿಸಿ ಮಾತನಾಡಿ ನಾನು ಈ ಸಂಘದ ಸದಸ್ಯನಾಗಿದ್ದು ಈ ಸನ್ಮಾನವನ್ನು ನನ್ನ ಮನೆಯವರೇ ನನಗೆ ನೀಡಿದ ಗೌರವವೆಂದು ಭಾವಿಸುತ್ತೇನೆ. ಮಕ್ಕಳಿಗೆ ಕ್ರೀಡೆಯ ಬಗ್ಗೆ ಆಸಕ್ತಿ ಬೆಳೆಸಿ ಪ್ರೋತ್ಸಾಹ ನೀಡುವುದರಿಂದ ಅವರು ಮಾನಸಿಕ ಹಾಗೂ ದೈಹಿಕವಾಗಿ ಸದೃಢರಾಗುತ್ತಾರೆ. ನನ್ನ ಯಶಸ್ಸಿನ ಹಿಂದೆ ನನ್ನ ಸಹ ಆಟಗಾರರ ಪಾಲಿದೆ ಎಂದರು. ಅತಿಥಿಗಳನ್ನು ಸಂಘದ ವತಿಯಿಂದ ಗೌರವಿಸಲಾಯಿತು. ಅತಿಥಿಗಳು ದೀಪ ಪ್ರಜ್ವಲಿಸಿ ಕಾರ್ಯಕ್ರಮಕ್ಕೆ ಚಾಲನೆಯಿತ್ತರು.
ಸಂಘದ ವತಿಯಿಂದ ನಡೆದ ರಾಷ್ಟ್ರಮಟ್ಟದ ಕಬಡ್ಡಿ ಪಂದ್ಯಾಟದಲ್ಲಿ ಹವ್ಯಾಸಿ ಕಲಾವೃಂದ ಪಿಂಪ್ರಿ -ಚಿಂಚ್ವಾಡ್ ತಂಡ ಪ್ರಥಮ ಪ್ರಶಸ್ತಿಯನ್ನು ಗಳಿಸಿಕೊಂಡರೆ ಬಂಟ್ಸ್ ಅಸೋಸಿಯೇಷನ್ ಪುಣೆ ರನ್ನರ್ ಆಪ್ ಪ್ರಶಸ್ತಿಯನ್ನು ಗೆದ್ದುಕೊಂಡಿತು. ಮಹಿಳೆಯರ ತ್ರೋಬಾಲ್ ಪಂದ್ಯಾಟದಲ್ಲಿ ಬಂಟ್ಸ್ ಅಸೋಸಿಯೇಷನ್ ಪುಣೆ ಪ್ರಥಮ ಪ್ರಶಸ್ತಿಯನ್ನು ಗೆದ್ದುಕೊಂಡು ವಸಾಯಿ -ದಹಾಣು ಮಹಿಳಾ ತಂಡ ದ್ವಿತೀಯ ಬಹುಮಾನವನ್ನು ಗೆದ್ದುಕೊಂಡಿತು.
ಅತಿಥಿಗಣ್ಯರು ವಿಜೇತರಿಗೆ ಬಹುಮಾನಗಳನ್ನು ವಿತರಿಸಿದರು, ಅವಿನಾಶ್ ಶೆಟ್ಟಿ ಮಂದಾಡಿಗುತ್ತು ಹಾಗೂ ಕೋಶಾಧಿಕಾರಿ ಸುಧಾಕರ ಶೆಟ್ಟಿ ಪೆಲತ್ತೂರು ಕಾರ್ಯಕ್ರಮ ನಿರೂಪಿಸಿದರು . ಅವಿನಾಶ್ ಶೆಟ್ಟಿ ಮತ್ತು ಶ್ರೀಕಾ ರಾಕೇಶ್ ಶೆಟ್ಟಿ ಅತಿಥಿಗಳನ್ನು ಪರಿಚಯಿಸಿದರು.
ಅಧ್ಯಕ್ಷ ರಾಕೇಶ್ ಶೆಟ್ಟಿ ಬೆಳ್ಳಾರೆ ಸ್ವಾಗತಿಸಿ ಕ್ರೀಡಾ ಸಮಿತಿ ಕಾರ್ಯಾಧ್ಯಕ್ಷ ಜಯಾನಂದ ಶೆಟ್ಟಿ ವಂದಿಸಿದರು. ಸಂಘದ ಮಾಜಿ ಅಧ್ಯಕ್ಷರಾದ ಎರ್ಮಾಳ್ ನಾರಾಯಣ ಶೆಟ್ಟಿ, ವಿಶ್ವನಾಥ ಡಿ ಶೆಟ್ಟಿ, ಎರ್ಮಾಳ್ ವಿಶ್ವನಾಥ ಶೆಟ್ಟಿ, ಎರ್ಮಾಳ್ ಸೀತಾರಾಮ ಶೆಟ್ಟಿ, ಕೆ .ಪದ್ಮನಾಭ ಶೆಟ್ಟಿ, ವಿಜಯ್ ಶೆಟ್ಟಿ ಬೋರ್ಕಟ್ಟೆ, ಮಹೇಶ್ ಹೆಗ್ಡೆ ಕಾರ್ಯಕ್ರಮದಲ್ಲಿ ಉಪಸ್ಥಿತರಿದ್ದರು. ಸಂಘದ ಪದಾಧಿಕಾರಿಗಳು, ಮಹಿಳಾ ವಿಭಾಗ ,ಯುವ ವಿಭಾಗದ ಸದಸ್ಯರು ಕಾರ್ಯಕ್ರಮದ ಯಶಸ್ಸಿಗೆ ಶ್ರಮಿಸಿದರು.
ಪೂರ್ತಿ ದಿನದ ಕ್ರೀಡಾಕೂಟದಲ್ಲಿ ಬೆಳಗ್ಗಿನ ಉಪಾಹಾರ ಮಧ್ಯಾಹ್ನದ ಭೋಜನ, ಚಹಾ ,ತಿಂಡಿಯ ವ್ಯವಸ್ಥೆ, ಅತಿಥಿಗಣ್ಯರಿಗೆ ವಿಶೇಷ ಆತಿಥ್ಯ, ಆಟಗಾರರಿಗೆ ಸೂಕ್ತ ವ್ಯವಸ್ಥೆಗಳು, ಶಿಸ್ತು ಬದ್ಧವಾದ ಪಂದ್ಯಾಟಗಳ ಆಯೋಜನೆ, ಸುಡುಮದ್ದುಗಳ ಪ್ರದರ್ಶನ ಸೇರಿದ್ದ ಅಸಂಖ್ಯ ಸಮಾಜ ಬಾಂಧವರ ಮುಕ್ತಕಂಠದ ಶ್ಲಾಘನೆಗೆ ಪಾತ್ರವಾಯಿತು.