ಭಾರತದ ಪ್ರಾಚೀನ ಸಾಂಪ್ರದಾಯಿಕ ಮೈನವಿರೇಳಿಸುವ ಕ್ರೀಡೆ ಮಲ್ಲಕಂಬದಲ್ಲಿ ಜನಸಾಮಾನ್ಯರಿಗೆ ಆಸಕ್ತಿ ಹೆಚ್ಚುತ್ತಿದ್ದು ದೇಹಕ್ಕೆ ಉತ್ತಮ ವ್ಯಾಯಾಮ ನೀಡುವ ದೇಸಿಕ್ರೀಡೆ ನಶಿಸಿ ಇತಿಹಾಸದ ಪುಟ ಸೇರುವ ಹಂತ ತಲುಪದಿರಲಿ ಎಂದು ಇತರ ಕ್ರೀಡೆಗಳ ಅಬ್ಬರದಲ್ಲಿ ಮಲ್ಲಕಂಬ ನಶಿಸಿ ಹೋಗದಂತೆ ಕ್ರೀಡಾ ಪಟುಗಳು ಇತ್ತೀಚಿಗೆ ಶ್ರಮಿಸುತ್ತಿರುವುದು ಆಶಾದಾಯಕ ಬೆಳವಣಿಗೆ ಅದರೊಂದಿಗೆ ಹೆಮ್ಮೆಯಿಂದ ಮಲ್ಲಕಂಬ ಸ್ಪರ್ಧೆ ನೋಡಿ ಚಪ್ಪಾಳೆ ಹಾಕುವ ಸುಂದರ ಅವಕಾಶವು ಕ್ರೀಡಾ ಸಮಿತಿಗಳು ನೀಡುತ್ತಿದೆ. ಆಟಗಾರರಲ್ಲಿ ಹೊಸ ಬರವಸೆ ಹಾಗೂ ಸ್ಪೂರ್ತಿ ತುಂಬಿವ ಈ ಕ್ರೀಡೆ ಕೇಂದ್ರ ,ರಾಜ್ಯ ಸರಕಾರ,ಭಾರತೀಯ ಕ್ರೀಡಾ ಪ್ರಾಧಿಕಾರ ಕ್ರೀಡಾ ಕೂಟದಲ್ಲಿ ಮಲ್ಲ ಕಂಬ ಕಡ್ಡಯಾವಾಗಿ ಸೇರಿಸಿದರೆ ಈ ಸ್ಥಳೀಯ ಕ್ರೀಡಾ ಕೌಶಲ್ಯ ಪ್ರೇಕ್ಷಕರಿಗೆ ನೋಡ ಸಿಗಲಿದೆ.
ಮಲ್ಲಕಂಬ
ಮಲ್ಲಕಂಬ ಹಾಗೂ ಮಲ್ಲ ಹಗ್ಗ ಎಂಬ ಎರಡು ವಿವಿಧ ಕ್ರೀಡೆಗಳಿದ್ದು. ಮಲ್ಲಕಂಬ ಪಟುಗಳ ಕಸರತ್ತು ಪ್ರೇಕ್ಷಕರನ್ನು ರೋಮಾಂಚನಗೊಳಿಸುವ ದೈಹಿಕ ಕಸರತ್ತಿನ ಪ್ರದರ್ಶನ.ನೆಲದ ಮೇಲೆ ನೇರವಾಗಿ ನಿಲ್ಲಿಸಿದ ಹರಳೆಣ್ಣೆ ಹಾಕಿದ ನಯವಾದ ಕಂಬ ಹತ್ತಿ ವಿವಿಧ ದಿಕ್ಕಿನಲ್ಲಿ ನಿರ್ದಿಷ್ಟ ಭಂಗಿಯಲ್ಲಿ ತಮ್ಮ ಕಸರತನ್ನು ಮಾಡುತ್ತಾರೆ. ಇದು ಸಮೂಹ ಹಾಗೂ ಏಕವ್ಯಕ್ತಿ ಸ್ಪರ್ಧೆ ಆಗಿ ಪ್ರದರ್ಶಿಸಿಸ ಬಹುದು. ನೋಡುಗರಿಗೆ ಕುತೂಹಲ, ರೋಮಾಂಚನ, ಎದೆ ದಸ್ಕಕ್ಕೆನ್ನುವ ಆಟ. ಜಿಮ್ನಾಸ್ನಾಕ್ ಯೋಗ ಭಂಗಿ ತರಹ ಇದ್ದು ಕಂಬದ ಎತ್ತರ 250 ರಿಂದ 290 ಸೆಂಮೀ ಇರುವ ಮರದ ಕಂಬದೊಂದಿಗಿನ ಪ್ರದರ್ಶನ ನೋಡುಗರಲ್ಲಿ ಭಯ ಬೀತಿ ಹುಟ್ಟಿಸುವಂತೆ ಮಾಡುತ್ತದೆ.ಕಂಬವನ್ನು ಹಿಡಿದು ನೇತಾಡುತ್ತಾ ಮಾಡುವ ವ್ಯಾಯಾಮ ಮಲ್ಲಕಂಬದ ಒಂದು ಅಂಗವಾಗಿದೆ. ಒಬ್ಬೊಬ್ಬರಾಗಿ ಮಲ್ಲಕಂಬ ಏರಿ ನಕ್ಷತ್ರಾಕಾರ, ವೃತ್ತಾಕಾರದಲ್ಲಿ ಬಾಗಿನಿಂತುಪಟಪಟನೆ ಕೆಲವರು ಮೇಲೆ ಏರಿ ವಿವಿಧ ಆಸನದಲ್ಲಿ ಆಸೀನರಾಗಿ ನಾಜೂಕಾದ ಕಂಬದಲ್ಲಿ ಕುಳಿತ, ನಿಂತ, ಮಲಗಿದ ಹಲವು ಆಸನಗಳನ್ನು ಪ್ರದರ್ಶಿಸಿ ಎಣ್ಣೆ ಹಚ್ಚಿದ ಕಂಬದಲ್ಲಿ ಹೆಚ್ಚಿನ ಆದಾರವಿಲ್ಲದೆ ಕೈಕಾಲು ಗಾಳಿಯಲ್ಲಿ ಚಾಚಿ ತಮ್ಮ ಸಾಹಸ ಭಂಗಿ ಪ್ರದರ್ಶಿಸುವ ಅವಕಾಶವಿದ್ದು ಇಲ್ಲಿ ಹಿರಿಯ ಕಿರಿಯರು ಸಾಹಸಮಯ ದೃಶ್ಯ ಮಾಡುವುದನ್ನು ನೋಡುವುದೆ ರೋಮಾಂಚನ. ಸಮತೋಲನವನ್ನು ಕಾಯ್ದು ಕೊಳ್ಳಬೇಕಾದ ಚಾಕಚಕತ್ಯೆಯ ಕ್ರೀಡೆ. ಮಲ್ಲಕಂಬ ಪ್ರದರ್ಶನ ಕಣ್ತುಂಬಿ ಕೊಳ್ಳಲು ಕಣ್ಣು ರಪ್ಪೆ ಮುಚ್ಚ ತೆರೆಯುವುದರೊಳಗೆ ಒಂದು ಭಂಗಿಯಿಂದ ಇನ್ನೊಂದು ಭಂಗಿಗೆ ತಮ್ಮನ್ನು ಹೊಂದಿಸಿಕೊಳ್ಳುತ್ತಾರೆ. ಮಲ್ಲಕಂಬದಲ್ಲಿ ಯೋಗಾಸನದ ಭಂಗಿಗಳನ್ನು ತೋರ್ಪಡಿಸುವ ಹಲವು ಆಸನಗಳಿವೆ. ಯೋಗಾಸನ, ಚಕ್ರಾಸನ, ಶವಾಸನ, ತ್ರಿಕೋನಾಸನ, ಶಿರ್ಷಾಸನ ನಿದ್ರಾಸನ, ಧ್ಯಾನ ಆಸನಗಳು ಹೆಚ್ಚಾಗಿ ಮಲ್ಲ ಕಂಬದಲ್ಲಿ ಕಾಣಸಿಗುತ್ತವೆ. ಚುರುಕಿನ ಸಾಹಸಮಯ ಕ್ರೀಡೆಯಿದು. ಈ ಪ್ರದರ್ಶನ ನೋಡುವಾಗ ಕಣ್ಣು, ಮನಸ್ಸು, ಕಿವಿಗಳು ಏಕಕಾಲದಲ್ಲಿ ತೆರೆದುಕೊಳ್ಳ ಬೇಕಾಗುತ್ತದೆ.
ಮಲ್ಲ ಹಗ್ಗ
ಮೇಲಿನಿಂದ ನೇತುಹಾಕಿದ ಹಗ್ಗವನ್ನು ಯಾವ ಆಧಾರವು ಇಲ್ಲದೆ ಏರಿ ವಿವಿಧ ಆಸನಗಳನ್ನು ಪ್ರದರ್ಶಿಸುವುದೇ ಮಲ್ಲಹಗ್ಗ. ಈ ಕ್ರೀಡೆಯಲ್ಲಿ ಪಟುಗಳು ಎಲ್ಲಿಯಾದರೂ ಒಂದು ಕ್ಷಣ ಅಜಾಗರುಕತೆಗೆ ಒಳಗಾದರೂ ಅನಾಹುತ ಕಟ್ಟಿಟ್ಟ ಬುತ್ತಿ. ಸೂಕ್ಷ್ಮವಾಗಿದ್ದು ಜಾಣ್ಮೆಯನ್ನು ಕ್ರೀಡಾಪಟುಗಳು ಹೊಂದಿರಬೇಕಾಗುತ್ತದೆ. ಹಾಗೆ ಹಗ್ಗದಲ್ಲಿ ಸರಸರನೆ ಮೇಲೆರಿ ಇಳಿಯುತ್ತಾ ನೋಡುಗರಿಗೆ ಆಶ್ಚರ್ಯ ಹುಟ್ಟಿಸುವ ಇಲ್ಲಿ ನೋಡಸಿಗುವ ದೃಶ್ಯಗಳು ಅವಿಸ್ಮರಣೀಯ. ಮೆಲುಕು ಹಾಕುವಂತಹದ್ದು.
ಮರಾಠ ಪೇಶ್ವೆಗಳ ಪೋತ್ಸಾಹ
ಮರಾಠಪೇಶ್ವಯರ ಆಸ್ಥಾನದಲ್ಲಿ ರಾಜ ಪುರೋಹಿತರಾಗಿದ್ದ ಶ್ರೀ ಗುರುದಾದಾ ದೇವಧರ್ ಬಾಳಂಭಟ್ಟರು ಮಲ್ಲಕಂಬವನ್ನು ಮೊದಲ ಬಾರಿಗೆ ಪ್ರಾರಂಬಿಸಿದರು ಎನ್ನಲಾಗುತ್ತದೆ. ಮಲ್ಲ ಎಂದರೆ ಜಟ್ಟಿ ,ಕುಸ್ತಿಪಟು .ಕಂಬ ಎಂದರೆ ಕೋಲು ಒಟ್ಟಿಗೆ ಮಲ್ಲಕಂಬ ಎಂದರೆ ಕುಸ್ತಿಕಂಬ.ಮಲ್ಲಕಂಬದ ಆಸನದ ಹೆಸರುಗಳು ಮರಾಠಿ ಭಾಷೆಯಲ್ಲಿದ್ದು ಇದರಲ್ಲಿ ಸಲಾಮ, ಧಸರಂಗ,ನಿಕ್ಕಿಕಪ್, ಬಹಿರಂಗ ಹೀಗೆ ವಿವಿಧ ಆಸನಗಳಿವೆ. ಸಮತೋಲನ ಕಾಯ್ದುಕೊಂಡು ಕ್ರೀಡಾ ಪಟುಗಳು ಚುರುಕಾಗಿರಬೇಕಾಗುತ್ತದೆ. ಆದ್ದರಿಂದ ಮರಾಠ ದೊರೆಗಳು ತಮ್ಮ ಸೈನಿಕರಿಗೆ ಕಡ್ಡಾಯವಾಗಿ ಮಲ್ಲಕಂಬ ತರಬೇತಿ ನೀಡುತ್ತಿದ್ದು ಈ ಕ್ರೀಡೆಗೆ ಹೆಚ್ಚಿನ ಪ್ರೋತ್ಸಾಹ ನೀಡುತ್ತಿದ್ದರು. ಮಲ್ಲಕಂಬ ಮಧ್ಯ ಪ್ರದೇಶದ ರಾಜ್ಯ ಕ್ರೀಡೆಯು ಹೌದು.
ಇತಿಹಾಸದ ಪುಟ ಸೇರುತ್ತದೋ ಎಂಬ ಭೀತಿಯಲ್ಲಿದ್ದ ಮಲ್ಲಕಂಬ ಕ್ರೀಡೆಯ ಹಿಂದಿನ ತಂತ್ರಗಳನ್ನು, ಕಲೆಗಳ ನಿಜ ಸಮಸ್ಯೆ ಕಲಾವಿದರ ಸ್ಥಿತಿ ಗತಿ ಗಳು ಅವರ ಆತಂಕಗಳೇನು ಎನ್ನುವುದನ್ನು ಸರಕಾರ ಗಮನಿಸ ಬೇಕಾಗಿದೆ. ಯುವ ಪೀಳಿಗೆಯನ್ನು ಈ ಕಲೆಯತ್ತಾ ಆಕರ್ಷತರನ್ನಾಗಿಸಲು ಖೆಲೋ ಇಂಡಿಯಾ ಆಟದಲ್ಲಿ ಮಲ್ಲಕಂಬ ಸೇರಿಸಿರುವುದು ಸ್ವಾಗತಕರ. ಸಮೃದ್ಧವಾದ ಸಂಸ್ಕೃತಿಯನ್ನು ಹೊಂದಿದ ಕ್ರೀಡೆಗಳಿಗೆ ಪ್ರೋತ್ಸಾಹ ನೀಡಿ ಯುವಪಟುಗಳಿಗೆ ಗ್ರಾಮಿಣ ಶೈಲಿಯ ಮಲ್ಲಕಂಬ ಕಲಿಸುವ ಅಗತ್ಯವಿದ್ದು ಕೆಲವರು ಮಲ್ಲಕಂಬವನ್ನು ಹವ್ಯಾಸಕ್ಕಾಗಿ ಮತ್ತೆ ಕೆಲವರು ವೃತ್ತಿಯಾಗಿ ಸ್ವೀಕರಿಸಿದವರು ಇದ್ದಾರೆ. ಈ ಕ್ರೀಡೆಯ ಬಗ್ಗೆ ಅನೇಕ ಗ್ರಂಥಗಳಲ್ಲಿ ಉಲ್ಲೇಖವಿದೆ. ವಿದೇಶೀ ಕ್ರೀಡೆಗಳ ಎದುರು ದೇಶಿ ಕೀಡೆಗಳ ಹಾದಿಯಲ್ಲಿ ಅದೆಷ್ಟು ಕಲ್ಲು ಮುಳ್ಳುಗಳು, ತಗ್ಗು, ದಿನ್ನೆಗಳಿದ್ದರು ಛಲಬಿಡದೆ ಮುಂದೆ ಹೆಜ್ಜೆ ಹಾಕುವ ಅಗತ್ಯ ವಿದೆ.
ಲತಾ ಸಂತೋಷ ಶೆಟ್ಟಿ ಮುದ್ದುಮನೆ