ಜಗತ್ತಿನ ಒಟ್ಟು ಅಡಿಕೆ ಉತ್ಪನ್ನದಲ್ಲಿ ಭಾರತದ ಪಾಲು ಸುಮಾರು ಐವತ್ತು ಶೇಕಡಾದಷ್ಟು. ಅದರಲ್ಲೂ ಭಾರತದ ಒಟ್ಟು ಅಡಿಕೆ ಉತ್ಪನ್ನದಲ್ಲಿ ಕರ್ನಾಟಕವೊಂದೇ ಶೇಕಡಾ ಅರವತ್ತಕ್ಕಿಂತಲೂ ಹೆಚ್ಚು ಪಾಲು ಹೊಂದಿದೆ. ಕರ್ನಾಟಕದ ಒಟ್ಟು ಅಡಿಕೆ ಉತ್ಪನ್ನದಲ್ಲಿ ದಕ್ಷಿಣ ಕನ್ನಡ ಜಿಲ್ಲೆಯದ್ದು ಬಹುದೊಡ್ಡ ಪಾಲು. ಭಾರತದಲ್ಲಿ ಈ ಅಡಿಕೆ ಕೃಷಿಯ ಪರಂಪರೆ ಅದೆಷ್ಟು ಪುರಾತನವೆಂದರೆ “ತಾಂಬೂಲ’ ಅನ್ನುವುದರ ಪರಿಕಲ್ಪನೆ ಹಿಂದೂ ಧರ್ಮದಷ್ಟೇ ಹಳೆಯದು. ಹಾಗಾಗಿ ಅಡಿಕೆ ಎನ್ನುವುದು ನಮ್ಮ ಧರ್ಮದ ಅವಿಭಾಜ್ಯ ಅಂಗ. ಅದ್ಯಾವ ದೇವತಾ ಕಾರ್ಯಗಳೇ ಇರಲಿ, ಅದ್ಯಾವುದೇ ಶುಭಸಮಾರಂಭಗಳಿರಲಿ ವೀಳ್ಯದ ಎಲೆ ಮತ್ತು ಅಡಿಕೆ ಎಂಬುದು ಎಲ್ಲ ಆಚರಣೆಗಳ ಅವಿಭಾಜ್ಯ ಅಂಗ. ಅಡಿಕೆಯನ್ನು ನಮ್ಮ ಆಯುರ್ವೇದದಂಥಾ ಔಷಧಶಾಸ್ತ್ರಗಳೂ ಕೂಡಾ ಔಷಧವಾಗಿ ಬಳಕೆ ಮಾಡುತ್ತದೆ. ಆದರೆ ಇತ್ತೀಚಿನ ವರ್ಷಗಳಲ್ಲಿ ಅಡಿಕೆಯ ಬಗ್ಗೆ ವಿಶ್ವಮಟ್ಟದಲ್ಲಿ ಅಪಪ್ರಚಾರ ನಡೆಯುತ್ತಿದೆ. ಅಡಿಕೆಯ ಅನೇಕ ಔಷಧೀಯ ಗುಣಗಳನ್ನರಿತು ಉಪಯೋಗಿಸುತ್ತಿದ್ದ ಭಾರತೀಯರ ನಂಬಿಕೆಗೆ ವಿರುದ್ಧವಾಗಿ ಅಡಿಕೆಯಲ್ಲಿ ಕ್ಯಾನ್ಸರ್ ಕಾರಕ ಅಂಶಗಳಿವೆ ಎನ್ನುವ ಸುದ್ದಿಗೆ ಹೆಚ್ಚು ಮನ್ನಣೆ ಕೊಡಲಾಯಿತು. ಹೆಚ್ಚಿನ ಸಂಶೋಧನೆಗಳೆಲ್ಲಾ ವೀಳ್ಯದೆಲೆ, ಅಡಿಕೆ, ಸುಣ್ಣ ಮತ್ತು ತಂಬಾಕಿನ ಸಹಿತ ಜಗಿಯುವ ಅಭ್ಯಾಸದ ಬಗ್ಗೆಯೇ ನಡೆದಿದ್ದವು. ಅಡಿಕೆಯೊಡನೆ ತಂಬಾಕನ್ನು ಕೂಡಾ ಸೇರಿಸಿ ಅಧ್ಯಯನ ನಡೆಸಿ ಅಡಿಕೆಯಲ್ಲಿ ಕ್ಯಾನ್ಸರ್ ಕಾರಕ ಅಂಶಗಳಿವೆ ಅಂತಂದರೆ ಏನನ್ನೋಣ..? ಅಡಿಕೆಯಲ್ಲಿ ಕ್ಯಾನ್ಸರ್ ಕಾರಕ ಗಳಿವೆ ಎಂದು ವಿಶ್ವ ಅರೋಗ್ಯ ಸಂಸ್ಥೆಯೇ ಪಟ್ಟಿ ಮಾಡಿದೆ ಅಂತಲೂ ಕೆಲವರು ಹಬ್ಬಿಸಿದರು. ಅಡಿಕೆಯಲ್ಲಿ ಮುಖ್ಯವಾಗಿ ಪಾಲಿಫೆನಾಲ್ ಗಳು, ಪಾಲಿಸ್ಯಾಕರೈಡುಗಳು, ಫೈಬರ್. ಪ್ರೊಟೀನ್, ಗಳು ದೊಡ್ಡ ಪ್ರಮಾಣದಲ್ಲಿ ಕಂಡು ಬರುತ್ತದೆ. ಆಲ್ಕಲಾಯ್ಡ್ ಗಳು ಅಡಿಕೆಯಲ್ಲಿ ತುಂಬಾ ಸಣ್ಣ ಪ್ರಮಾಣದಲ್ಲಿ ಕಂಡು ಬರುತ್ತದೆ. ಪಾಲಿಫೆನಾಲ್ ಗಳ ಪೈಕಿ ಬಹುಮುಖ್ಯವಾದುದು ಕಾಟೇಚಿನ್, ಎಪಿ ಕಾಟೇಚಿನ್, ಲ್ಯೂಕೋಸಯಾನಿಡಿನ್ ಎಂಬ ರಾಸಾಯನಿಕಗಳು. ಅಡಿಕೆಯಲ್ಲಿರುವ ಆಲ್ಕಲಾಯ್ಡ್ ಗಳ ಪೈಕಿ ಅರೆಕಾಲಿನ್, ಅರೆಕಾಯಿಡಿನ್, ಗುವಾಕೋಲಿನ್, ಗುವಾಸಿನ್ ಪ್ರಮುಖವಾದವು. ಈ ಪೈಕಿ ಅಡಿಕೆಯಲ್ಲಿ ಪ್ರಮುಖವಾಗಿರುವುದು ಅರೆಕೋಲಿನ್ ಎಂಬ ಹೆಸರಿನ ಆಲ್ಕಲಾಯ್ಡ್. ಆದರೆ ಅಡಿಕೆ ಆರೋಗ್ಯಕ್ಕೆ ಹಾನಿಕಾರಕ ಅಂತ ಜನರನ್ನು ದಾರಿತಪ್ಪಿಸುವುದು ಇಲ್ಲೇ. ಈಗಾಗಲೇ ಅಡಿಕೆಯಲ್ಲಿ ಆಲ್ಕಲಾಯ್ಡ್ ಗಳ ಪ್ರಮಾಣ ತುಂಬಾ ಸಣ್ಣದ್ದೆಂದು ಹೇಳಿದ್ದರೂ ಕೂಡಾ ಈ ಆಲ್ಕಲಾಯ್ಡ್ ಗಳ ಒಂದು ಸಣ್ಣ ಭಾಗವಾದ ಅರೆಕೋಲಿನ್ ಆನ್ನೇ ಹೆಚ್ಚಿನ ಸಂಶೋಧಕರು ಕ್ಯಾನ್ಸರ್ ಕಾರಕ ಅಂತ ಬೆಟ್ಟು ಮಾಡಿ ತೋರಿಸುತ್ತಿರುವುದು. ಆದರೆ ಇದಕ್ಕೆ ವೈಜ್ಞಾನಿಕ ಆಧಾರಗಳನ್ನು ಅವರು ಕೊಡುವುದಿಲ್ಲ. ಈ ಬಗ್ಗೆ ಮುಂದಿನ ದಿನಗಳಲ್ಲಿ ವಿವರವಾಗಿ ಹೇಳುತ್ತೇನೆ. ಆದರೆ ಅಡಿಕೆಯಲ್ಲಿ ಅತೀ ಸಣ್ಣ ಪ್ರಮಾಣದಲ್ಲಿರುವ ಅರೆಕೋಲಿನ್ ರಾಸಾಯನಿಕವೊಂದನ್ನೇ ಮುಂದಿಟ್ಟುಕೊಂಡು ಅಡಿಕೆ ಆರೋಗ್ಯಕ್ಕೆ ಹಾನಿಕಾರಕ ಅಂತ ಹೇಳುವ ಕೆಲ ದೇಶೀ ಮತ್ತು ವಿದೇಶೀ ಸಂಶೋಧಕರು ಅಡಿಕೆಯಲ್ಲಿರುವ ಆಳಿದ ಅನೇಕಾ ಆರೋಗ್ಯಕಾರೀ ರಾಸಾಯನಿಕಗಳ ಬಗ್ಗೆ ಹೇಳುವುದೇ ಇಲ್ಲ..! ನಮ್ಮ ಆಯುರ್ವೇದದಂಥಾ ಪ್ರಾಚೀನ ಔಷಧ ಶಾಸ್ತ್ರಗಳು ಅಡಿಕೆಯನ್ನು ಔಷಧವಾಗಿ ಬಳಸುತ್ತಾ ಬಂದಿದೆ. ಅಡಿಕೆಯು ಡಯಾಬಿಟೀಸ್ ಗೆ ಔಷಧವೆಂದು ಆಯುರ್ವೇದ ಹೇಳಿದೆ. ಆಗಿನ ಆಧುನಿಕ ಸಂಶೋಧನೆಗಳೂ ಕೂಡಾ ಇದನ್ನೇ ಹೇಳುತ್ತಿವೆ. ಯಾವ ಅರೆಕೋಲಿನ್ ಅನ್ನು ಕ್ಯಾನ್ಸರ್ ಕಾರಕ ಅಂತ ಕೆಲವೊಂದಷ್ಟು ಸಂಶೋಧಕರು ಹೇಳಿದ್ದರೋ ಅದೇ ಅರೆಕೋಲಿನ್ ಗೆ ಹೈಪೋಗ್ಲೈಸಿಮಿಕ್ ಗುಣಗಳಿವೆ ಎಂದೂ ಸಂಶೋಧನೆಗಳು ತಿಳಿಸುತ್ತವೆ..! ಇವದು ರಕ್ತದಲ್ಲಿ ಸಕ್ಕರೆಯ ಪ್ರಮಾಣವನ್ನು ಯಶಸ್ವಿಯಾಗಿ ನಿಯಂತ್ರಿಸುತ್ತದೆ ಅಂತ ಆಧುನಿಕ ಸಂಶೋಧನೆಗಳು ಹೇಳಿದ್ದಾರೆ ಅದನ್ನೇ ಸಾವಿರಾರು ವರ್ಷಗಳ ಹಿಂದೆಯೇ ಆಯುರ್ವೇದವೂ ಹೇಳಿತ್ತು….! ಅಷ್ಟೇ ಅಲ್ಲ ದೇಹಕ್ಕೆ ವಿಪರೀತವಾದ ಒತ್ತಡದಿಂದ ಅಥವಾ ಗಂಭೀರವಾದ ಅಪಾಯದ ಹೆದರಿಕೆಯಿಂದ ಉಂಟಾಗುವ ತೊಂದರೆಯನ್ನು ಶಮನಗೊಳಿಸುವುದು ಪ್ಯಾರಾಸಿಂಪಥೆಟಿಕ್ ನರ್ವಸ್ ಸಿಸ್ಟಮ್ ಅನ್ನುವ ಒಂದು ನರಗಳ ಮಂಡಲ. ಈ ನರಮಂಡಲ ಸರಿಯಾದ ರೀತಿಯಲ್ಲಿ ಕಾರ್ಯಾಚರಿಸಿ ನಮ್ಮ ಆತಂಕವನ್ನು ಶಮನ ಮಾಡುವಂತೆ ಸಹಕರಿಸಲು ಅಡಿಕೆಯಲ್ಲಿರುವ ರಾಸಾಯನಿಕಗಳು ನೆರವು ನೀಡುತ್ತದೆ…! ಅಡಿಕೆ ನಮ್ಮ ರಕ್ತದೊತ್ತಡವನ್ನು ಕೂಡಾ ಕಡಿಮೆ ಮಾಡುತ್ತದೆ. ಅಡಿಕೆಯಲ್ಲಿನ ರಾಸಾಯನಿಕಗಳು ಗಾಯವನ್ನು ಬೇಗ ಗುಣಪಡಿಸುತ್ತದೆ. ಹೊಟ್ಟೆ ಮತ್ತು ಜಠರದಲ್ಲಿರುವ ಹುಣ್ಣುಗಳನ್ನು ಗುಣಪಡಿಸುತ್ತದೆ. ಹೀಗೆ ಅಡಿಕೆಯಲ್ಲಿ ಮನುಷ್ಯನ ಆರೋಗ್ಯ ವೃದ್ಧಿಸುವ ಹಲವಾರು ಗುಣಗಳಿವೆ. ಇದೆಲ್ಲವನ್ನೂ ಹೇಗೆ ಆಯುರ್ವೇದ ಹೇಳಿದೆಯೋ ಅದೇ ರೀತಿ ಆಧುನಿಕ ವಿಜ್ಞಾನವೂ ಹೇಳಿದೆ.
ಅಡಿಕೆಯ ಇವೆಲ್ಲಾ ಔಷಧೀಯ ಗುಣಗಳನ್ನು ವಿಶ್ವ ಅರೋಗ್ಯ ಸಂಸ್ಥೆಯೂ ಕೂಡಾ ಒಪ್ಪಿಕೊಂಡಿದೆ. ಆದರೆ ಯಾಕೋ ಅಡಿಕೆ ಆರೋಗ್ಯಕ್ಕೆ ಹಾನಿಕಾರಕ ಅನ್ನೋ ರೀತಿಯ ಸುದ್ದಿಗಳಿಗಷ್ಟೇ ಮಹತ್ವ ಸಿಕ್ಕುತ್ತದೆ. ಮಾಧ್ಯಮಗಳೂ ಕೂಡಾ ಹೆಚ್ಚಾಗಿ ಇಂಥಾ ಸುದ್ದಿಗಳನ್ನೇ ಹೆಚ್ಚು ಹೈಲೈಟ್ ಮಾಡುತ್ತಾರೆ. ಅಡಿಕೆಯ ಔಷಧೀಯ ಗುಣಗಳ ಬಗ್ಗೆ ಇನ್ನಷ್ಟು ಸಂಶೋಧನೆಗಳಾಗಬೇಕು, ಇದಕ್ಕೆ ಇನ್ನಷ್ಟು ಪ್ರಚಾರ ಸಿಗಬೇಕು. ಈಗಾಗಲೇ ಹಲವಾರು ಜನ ಅಡಿಕೆಯಿಂದ ಸಕ್ಕರೆಖಾಯಿಲೆಗೆ ಔಷಧಿ, ನೋವು ನಿವಾರಕ ಔಷಧಿ ತಯಾರಿಸಿದ್ದಾರೆ. ಅಡಿಕೆಯಿಂದ ಹಲ್ಲುಜ್ಜುವ ಪುಡಿ, ಸೋಪ್ ಗಳನ್ನೂ ತಯಾರಿಸಿ ಯಶಸ್ವಿಯಾಗಿದ್ದಾರೆ.
ಹಣ್ಣಡಿಕೆಯ ಸಿಪ್ಪೆಯ ರಸದಿಂದ ವೈನ್ ಅನ್ನೂ ಯಶಸ್ವಿಯಾಗಿ ತಯಾರಿಸಿದ್ದಾರೆ. ಹೀಗೆ ಎಲೆ ಅಡಿಕೆ ಹಾಕಿಯೋ, ಬೀಡದಲ್ಲೋ, ಅಥವಾ ಗುಟ್ಕಾದಲ್ಲೋ ಅಡಿಕೆಯನ್ನು ಜಗಿದು ಉಗುಳುವುದು ಮಾತ್ರವಲ್ಲ, ಅಡಿಕೆ ಸೇವನೆಯಿಂದಾಗಿ ಅನೇಕ ಆರೋಗ್ಯ ಸಮಸ್ಯೆಗಳಿಗೆ ಪರಿಹಾರವೂ ಉಂಟು ಎಂಬುದಕ್ಕೆ ಹೆಚ್ಚಿನ ಪ್ರಚಾರ ದೊರೆಯಬೇಕು.
ಅಶೋಕ್ ಕುಮಾರ್ ರೈ
ರೈ ಎಸ್ಟೇಟ್, ಕೋಡಿಂಬಾಡಿ.
Previous Articleಚಿಣ್ಣರ ಬಿಂಬದ ಶಿಕ್ಷಕರಿಗೆ ಗೌರವ, ಪದವಿ ಪ್ರಧಾನ