ಹೌದು, ದೇಶದ ಪ್ರಮುಖ ನಗರಗಳಲ್ಲಿ ಒಂದಾದ,ಅತ್ಯಂತ ವೇಗವಾಗಿ ಬೆಳೆಯುತ್ತಿರುವ ಜಲ, ನೆಲ, ರೈಲು ಮತ್ತು ವಾಯು ಸಾರಿಗೆಗಳನ್ನು ಹೊಂದಿರುವ ರಾಜ್ಯದ ಏಕೈಕ ನಗರ ಎಂಬ ಹೆಗ್ಗಳಿಕೆಗೆ ಪಾತ್ರವಾದ ಮಂಗಳೂರಿನ ದುರಂತ ಕಥೆ.
ಇತರ ಜಿಲ್ಲೆಗಳಿಗೆ ಹೋಲಿಸಿದರೆ ಬೆಂಗಳೂರಿನ ನಂತರ ವೇಗವಾಗಿ ಮಾರ್ಪಾಡಾಗುತ್ತಿರುವ ನಗರಗಳಲ್ಲಿ ಮಂಗಳೂರೂ ಒಂದು. ಗುಣಮಟ್ಟದ ಶಿಕ್ಷಣ , ದೇಶದಲ್ಲೇ ಉತ್ತಮ ಸುಸ್ಸಜಿತ ಆಸ್ಪತ್ರೆ ಮತ್ತು ಆರೈಕೆ, ರಫ್ತು ಆಮದಿಗೆ ಪ್ರಮುಖ ಬಂದರು, ಅಂತಾರಾಷ್ಟ್ರೀಯ ವಿಮಾನ ನಿಲ್ದಾಣ ಹೀಗೆ ನಾನಾ ರೀತಿಯಲ್ಲಿ ಮಿಂಚುತ್ತಿರುವ ಮಂಗಳೂರಿಗೆ ರಾಷ್ಟ್ರೀಯ ಹೆದ್ದಾರಿ NH 75 ದುಸ್ಥಿತಿ ಶಾಪವಾಗಿ ತಿರುಗಿದೆ.
ರಾಜಕಾರಣಿಗಳ ಇಚ್ಛಾಶಕ್ತಿ ಕೊರತೆ , ಅವೈಜ್ಞಾನಿಕ ಮತ್ತು ಕಳಪೆ ಕಾಮಗಾರಿಯಿಂದ ಶಿರಾಡಿ ಘಾಟಿಯ ಮೂಲಕ ಹಾದು ಹೋಗುವ ಬೆಂಗಳೂರು ಮಂಗಳೂರು ರಾಷ್ಟ್ರೀಯ ಹೆದ್ದಾರಿ ಅತ್ಯಂತ ಆಮೆ ಗತಿಯಲ್ಲಿ ಸಾಗುತ್ತಿರುವುದು ಬೇಸರದ ಸಂಗತಿ. ಈ ಸಮಸ್ಯೆ ಆರಂಭವಾಗಿ ದಶಕಗಳೇ ಉರುಳಿ ಹೋಗಿವೆ,ಒಬ್ಬರ ಹಿಂದೆ ಒಬ್ಬರಂತೆ ಬಂದು ಹೋದ ಜನಪ್ರತಿನಿದಿಗಳೆಷ್ಟೋ ದೇವರೇ ಬಲ್ಲ.ಅದರೂ ಇನ್ನೂ ಸರಿಯಾದ ಪರಿಹಾರ ಸಿಗದೆ ಸಾಮಾನ್ಯ ಜನರು ಕಷ್ಟ ಪಡಬೇಕಾದ ಪರಿಸ್ಥಿ ದೇವರಿಗೆ ಪ್ರೀತಿ. ಭ್ರಷ್ಟಾಚಾರದಿಂದ ತುಂಬಿ ತುಳುಕಾಡುತ್ತಿರುವುದು ಇಲ್ಲಿನ ಸಮಸ್ಯೆಗೆ ಹಿಡಿದ ಕೈಗನ್ನಡಿ. ಹಲವರ ನಿರ್ಲಕ್ಸ್ಯದಿಂದ ದಿನನಿತ್ಯ ಈ ಹೆದ್ದಾರಿ ಮೂಲಕ ಹಾದು ಹೋಗುವವರಿಗೆ ಯಮಕೂಪವಾಗಿರುವುದಂತೂ ಸತ್ಯ.
ಮುಖ್ಯವಾಗಿ ಈ ಹೆದ್ದಾರಿಯಲ್ಲಿ ದಿನನಿತ್ಯ ಸಂಚರಿಸುವರು ಅತಿ ಹೆಚ್ಚು ತೊಂದರೆಗಳಿಗೆ ಒಳಪಡುತ್ತಿದ್ದಾರೆ.ಈ ಹೆದ್ದಾರಿ ಮಂಗಳೂರು ಬೆಂಗಳೂರಿನ ಸಂಪರ್ಕ ಬೆಳೆಸುವ ಪ್ರಮುಖ ಕೊಂಡಿಯಾದ್ದರಿಂದ ಇಲ್ಲಿ ಸಂಚರಿಸುವುದು ಅನಿವಾರ್ಯವಾಗಿದೆ. ದಿನ ನಿತ್ಯ ಮುಂಜಾನೆ ಮಂಗಳೂರು ಹಾಗೂ ಘಟ್ಟದ ಕೆಳಗಿನ ಊರುಗಳಿಗೆ ತರಕಾರಿ,ಹಣ್ಣುಗಳು ಇನ್ನಿತರ ಅಗತ್ಯ ವಸ್ತುಗಳನ್ನ ಪೂರೈಸುವುದು ಇದೇ ಹೆದ್ದಾರಿಯಾ ಮೂಲಕ. ಗಜ ಗಾತ್ರದ ವಾಹನಗಳಲ್ಲಿ ತಮ್ಮ ಜೀವನ ಸಾಗಿಸಲು ಜೀವದ ಹಂಗು ತೊರೆದು ಪ್ರಾಯಾಣಿಸಿ ಬರಬೇಕಾದ ಪರಿಸ್ಥಿತಿ ಸಾಮಾನ್ಯ ಜನರದ್ದು.ಈ ಹೆದ್ದಾರಿಯ ದುಸ್ಥಿತಿಯಿಂದ ಅದೆಷ್ಟೋ ಬದುಕಿ ಬಾಳಬೇಕ್ಕಿದ ಜೀವ ಇಂದು ಜೀವ ಕಳೆದು ಕೊಂಡು ಅಕಾಲಿಕ ಮರಣ ಹೊಂದಿದನ್ನ ನೆನೆದರೆ ಮನಸ್ಸಿಗೆ ನೋವಾಗುತ್ತದೆ . ಅಧಿಕಾರಿಗಳ ನಿರ್ಲಕ್ಷಕ್ಕೆ ತಮ್ಮದಲ್ಲದ ತಪ್ಪಿಗೆ ಜೀವ ಕಳೆದುಕೊಂಡ ಕುಟುಂಬಸ್ಥರ ಕಣ್ಣೇರು ಒರೆಸಲು ಇವರಿಂದ ಸಾಧ್ಯವೇ? ಒಂದು ಕಡೆ ಜೀವ ಹಾನಿಯಾದರೆ ಇನ್ನೊಂದು ಕಡೆ ಆರ್ಥಿಕತೆಗೆ ಹೊಡೆತ ಬೀಳುತ್ತಿದೆ. ಅದೆಷ್ಟೋ ಮಂಗಳೂರಿನ ದೊಡ್ಡ ದೊಡ್ಡ ಕಾರ್ಖಾನೆಗಳಿಗೆ ಸಾವಿರಾರು ಕೋಟಿ ರೂಪಾಯಿಗಳಲ್ಲಿ ನಷ್ಟ ಉಂಟಾಗುತ್ತಿದೆ . ಸರಿಯಾದ ಸಮಯದಲ್ಲಿ ಕಚ್ಚಾ ವಸ್ತು ಸಾಗಣೆಯಾಗದರ ಪರಿಣಾಮ ಉತ್ಪತ್ತಿಯೂ ಕುಂಟುತ್ತಿದೆ ಎನ್ನವಬಹುದು. ಇಷ್ಟೆಲ್ಲಾ ಸಮಸ್ಯೆಗಳ ನಡುವೆ ಪ್ರವಾಸಿ ತಾಣ ಅಭಿವೃದ್ಧಿ ಪಡುವುದಾದರೂ ಹೇಗೆ ? ರಾಷ್ಟ್ರೀಯ ಹೆದ್ದಾರಿಯೇ ಸರಿ ಇಲ್ಲದಿದ್ರೆ ಎಲ್ಲ ವರ್ಗದ ಪ್ರವಾಸಿಗರು ಬರುವುದಾದರೂ ಹೇಗೆ? ಒಟ್ಟಿನಲ್ಲಿ ಈ ದುಸ್ತಿಯಿಂದ ಜೀವ ಹಾನಿಯ ಜೊತೆಗೆ ಅವಿಭಜಿತ ದಕ್ಷಿಣ ಕನ್ನಡ ಜಿಲ್ಲೆಯ ಅಭಿವೃದ್ಧಿಗೂ ಹಿನ್ನೆಡೆಯಾಗಿದೆ. ಇನ್ನೂ ಇಷ್ಟೆಲ್ಲಾ ತೊಂದರೆಗಳ ನಡುವೆ ಮಂಗಳೂರು ಐಟಿ ಕ್ಷೇತ್ರವಾಗಿ ಬದಲಾಗುವುದು ದೂರದ ಮಾತು.
ಕೇವಲ ವಯುಕ್ತಿಕ ಸಮಸ್ಯೆಗಳಿಗೆ ಧ್ವನಿ ಎತ್ತುವ ನಾವು ಸಾಮಾಜಿಕ ಪ್ರಜ್ಞೆಯನ್ನು ಬೆಳೆಸಿ ನಮ್ಮಿಂದ ಮತ ಪಡೆದು ಗದ್ದುಗೆ ಏರಿ ಕುಳಿತ ಜನಪ್ರತಿನಿಧಿಗಳ ಕಾರ್ಯವೈಖರಿಯ ಕುರಿತು ಪ್ರಶ್ನಿಸುವುದು ಯಾವಾಗ? ನಿಯಮ ಉಲ್ಲಂಘನೆಗೆ ದಂಡ ಕಟ್ಟುವ ನಾವು ದುರಸ್ತಿಯ ಮುಖವನ್ನೇ ಕಾಣದ ರಸ್ತೆಗಳಲ್ಲಿ ಸಂಚರಿಸುವಾಗ ನಮ್ಮ ಅಮೂಲ್ಯವಾದ ಜೀವಕ್ಕೆ ಬೆಲೆತೆರಲು ನಮ್ಮ ಜನಪ್ರತಿನಿದಿಗಳಿಗೆ ಸಾಧ್ಯವೇ? ನಮ್ಮ ಜನಸಾಮಾನ್ಯಾರ ಧ್ವನಿ ಮಂತ್ರಿ ಒಕ್ಕೊಟದವರೆಗೆ ಕೇಳಬೇಕೆಂದರೆ ಸರಕಾರವನ್ನ ಪ್ರಶ್ನಿಸುವ ಧೈರ್ಯ ತೋರಬೇಕು. ಇಂದು ಅದೆಷ್ಟೋ ದೇಶಗಳಲ್ಲಿ ಹಲವು ದಶಕಗಳಿಂದ ನಡೆಯದ ಕೆಲಸ ಕಾರ್ಯಗಳು ಸಾಮಾಜಿಕ ಜಾಲತಾಣಗಲ್ಲಿ ಸ್ವರ ಏರಿಸುವುದರಿಂದ ನಡೆದ ಉದಾಹರಣೆಗಳೂ ಇದೆ. ಒಗ್ಗಟ್ಟಿನಲ್ಲಿ ಬಲವಿದೆ ಎಂಬುದನ್ನ ನಾವು ಮಗದೊಮ್ಮೆ ಸಾಬೀತು ಪಡಿಸಬೇಕು . ಜಾತಿ ಧರ್ಮ ರಾಜಕೀಯ ಎಲ್ಲವನ್ನೂ ಬದಿಗಿಟ್ಟು ಮಂಗಳೂರು ಬೆಂಗಳೂರು ಶಿರಾಡಿ ಘಾಟಿನ ಮೂಲಕ ಹಾದು ಹೋಗುವ ರಾಷ್ಟ್ರೀಯ ಹೆದ್ದಾರಿಯ ಸಮಸ್ಯೆಗೆ ಶಾಶ್ವತ ಪರಿಹಾರವನ್ನು ಕಂಡುಕೊಳ್ಳಲೂ ನಮ್ಮ ಧ್ವನಿಯು ಸಿಂಹ ಘರ್ಜನೆಯಾಗಿ ನಿದ್ದೆಯಲ್ಲಿರುವ ಸರಕಾರವನ್ನು ಎಚ್ಚರಿಸಬೇಕು.
ಇಲ್ಲಸಲ್ಲದ ಅವೈಜ್ಞಾನಿಕ ಎತ್ತಿನಹೊಳೆ ಎಂಬ ಯೋಜನೆ ರೂಪಿಸಿ ಹೆಚ್ಚು ಕಡಿಮೆ 2500 ಕೋಟಿ ರೂಪಾಯಿಗಳನ್ನ ದುಂದು ವೆಚ್ಚ ಮಾಡಿದ ಸರಕಾರಕ್ಕೆ ಕನಿಷ್ಠ ಖರ್ಚಿನಲ್ಲಿ ಮಂಗಳೂರು ಬೆಂಗಳೂರು ಹೆದ್ದಾರಿ ದುರಸ್ತಿ ಕಾರ್ಯ ಮುಗಿಸುವುದಕ್ಕೆ ಮೀನಾ ಮೇಷ ಎನಿಸುವುದಾದರೂ ಏಕೆ ? ಮೇಲೂ ನಾವೇ ಇಲ್ಲೂ ನಾವೇ ಎಂದು ಹೇಳುವ ಶಾಸಕ ಸಂಸದರು ಶಿರಡಿ ಘಾಟಿನ ವಿಚಾರ ಬಂದಾಗ ಕಂಡೂ ಕಾಣದಂತೆ ಕೇಳಿಯೂ ಕೇಳದಂತೆ ಮೌನಕ್ಕೆ ಜಾರುವುದು ಏತಕೆ ? ಕೇಂದ್ರ ಸರಕಾರದ ಹೆದ್ದಾರಿ ಪ್ರದಿಕಾರ ಮಂತ್ರಿ ಮಾನ್ಯ ನಿತಿನ್ ಗಡ್ಕರಿ ಯವರು ದೇಶದ ಪ್ರತಿಯೊಂದು ರಾಷ್ಟ್ರೀಯ ಹೆದ್ದಾರಿಯೂ ತ್ವರಿತ ಗತಿಯಲ್ಲಿ ಸಾಗಬೇಕು ಎಂದು ಅನುಮೋದನೆ ಕೊಟ್ಟರು ಈ ಹೆದ್ದಾರಿಯ ರೋಧನೆ ಮಾತ್ರ ಯಾರೀಗೂ ಕೇಳದಿರುವುದು ವಿಪರ್ಯಾಸ ! ದೇವರು ಕೊಟ್ಟರು ಪೂಜಾರಿ ಕೊಡದಂತೆ ಕೇಂದ್ರ ಸರಕಾರ ಹಸಿರು ನಿಶಾನೆ ತೋರಿಸಿದರೂ ರಾಜ್ಯ ಸರಕಾರ ಘಾಡ ನಿದ್ರೆಗೆ ಜಾರಿದೆ. ಕೆಲ ತಿಂಗಳ ಹಿಂದೆ ಮಾನ್ಯ ಪ್ರಧಾನಿಗಳು ಮಂಗಳೂರಿಗೆ ಭೇಟಿ ನೀಡಿದ ಸಂಧರ್ಭ ದುರಸ್ತಿಯೇ ಕಾಣದ ಕೂಳೂರು ರಸ್ಥೆಯು ರಾತ್ರೆ ಬೆಳಗಾಗುವ ಮುನ್ನ ನವ ವಧುವಿನಂತೆ ಕಂಗೊಳಿಸಿದನ್ನ ಕಂಡಾಗ ಶಿರಾಡಿ ಘಾಟ್ ರಸ್ತೆಯಲ್ಲಿ ಒಮ್ಮೆ ಪ್ರಧಾನಿಯವರು ಸಂಚರಿಸಿದರೆ ಈ ರಸ್ತೆಗೂ ದುರಸ್ತಿ ಭಾಗ್ಯ ದೊರೆಯಬಹುದೇನೋ….
✍🏻 ದಿಲ್ ರಾಜ್ ಆಳ್ವ