ಪುಣೆ ಬಂಟರ ಸಂಘದ 42 ನೇ ವಾರ್ಷಿಕ ಮಹಾಸಭೆಯು ಓಣಿಮಜಲು ಜಗನ್ನಾಥ ಶೆಟ್ಟಿ ಬಂಟರ ಸಾಂಸ್ಕೃತಿಕ ಭವನದ ಸಭಾಂಗಣದಲ್ಲಿ ನಡೆಯಿತು. ಸಂಘದ ಅಧ್ಯಕ್ಷ ಸಂತೋಷ್ ಶೆಟ್ಟಿ ಇನ್ನ ಕುರ್ಕಿಲ್ ಬೆಟ್ಟು ಬಾಳಿಕೆ ಇವರು ದೀಪ ಪ್ರಜ್ವಲಿಸಿ ಸಭೆಗೆ ಚಾಲನೆಯಿತ್ತು ಸದಸ್ಯರನ್ನು ಸ್ವಾಗತಿಸಿದರು. ಮೊದಲಿಗೆ ಅಗಲಿದ ಸಮಾಜಬಾಂಧವರ ಆತ್ಮಕ್ಕೆ ಚಿರಶಾಂತಿ ಕೋರಿ ಶ್ರದ್ಧಾಂಜಲಿ ಅರ್ಪಿಸಲಾಯಿತು. ಸಂಘದ ಪ್ರಧಾನ ಕಾರ್ಯದರ್ಶಿ ಅಜಿತ್ ಹೆಗ್ಡೆ ಸಂಘದ ಎರಡು ವರ್ಷಗಳ ಕಾರ್ಯಚಟುವಟಿಕೆಗಳ ವರದಿಯನ್ನು ಸಭೆಯ ಮುಂದಿಟ್ಟರು. ಗೌರವ ಕೋಶಾಧಿಕಾರಿ ಶ್ರೀನಿವಾಸ ಶೆಟ್ಟಿ ಸಂಘದ ವಾರ್ಷಿಕ ಲೆಕ್ಕಪತ್ರಗಳನ್ನು ಮಂಡಿಸಿದರು. ಮುಂದಿನ ಲೆಕ್ಕಪರಿಶೋಧಕರನ್ನಾಗಿ ಸಿಎ ದಯಾನಂದ ಶೆಟ್ಟಿಯವರನ್ನು ಮರು ನೇಮಕಗೊಳಿಸಲಾಯಿತು .
ಈ ಸಂದರ್ಭ ಅಧ್ಯಕ್ಷ ಸಂತೋಷ್ ಶೆಟ್ಟಿಯವರು ಮಾತನಾಡಿ ಯಾವುದೇ ಸಂಘ ಸಂಸ್ಥೆ ಯಶಸ್ಸಿನ ಹಾದಿಯಲ್ಲಿ ಸುಲಲಿತವಾಗಿ ಮುಂದುವರಿಯಬೇಕಾದರೆ ಸಮರ್ಥವಾದ ನಾಯಕತ್ವ ಅತೀ ಅಗತ್ಯವಾಗಿದೆ. ನಮ್ಮ ಹಿರಿಯರು ಯಾವ ವಿಚಾರಧಾರೆಯನ್ನು ಮುಂದಿಟ್ಟುಕೊಂಡು ಸಮಾಜದ ಒಳಿತಿಗಾಗಿ ಈ ಸಂಘವನ್ನು ಕಟ್ಟಿ ಬೆಳೆಸಿದ್ದಾರೋ ಆ ಉದ್ದೇಶವನ್ನಿಟ್ಟುಕೊಂಡು ಸಮಾಜದ ಶ್ರೇಯೋಭಿವೃದ್ಧಿಯನ್ನು ಬಯಸಿ ಅದನ್ನು ಜವಾಬ್ದಾರಿಯಿಂದ ಮುಂದುವರಿಸಿಕೊಂಡು ಹೋಗುವ ಮಹತ್ತರ ಜವಾಬ್ದಾರಿ ನಮ್ಮ ಮೇಲಿದೆ. ಸಂಘದ ಪದಾಧಿಕಾರಿಗಳ ,ಮಹಿಳಾ ವಿಭಾಗ, ಯುವ ವಿಭಾಗ, ಉತ್ತರ ಮತ್ತು ದಕ್ಷಿಣ ಪ್ರಾದೇಶಿಕ ಸಮಿತಿಗಳ ಸಹಕಾರ, ಹೃದಯವಂತ ದಾನಿಗಳ ನೆರವು, ಸಮಾಜಬಾಂಧವರೆಲ್ಲರ ಪ್ರೀತಿ ವಿಶ್ವಾಸದಿಂದ ನಾಯಕತ್ವದ ಜವಾಬ್ದಾರಿಯನ್ನು ಯಶಸ್ವಿಯಾಗಿ ನಿರ್ವಹಿಸಿದ ಆತ್ಮತೃಪ್ತಿಯಿದೆ . ಎಲ್ಲರೂ ಸ್ವಚ್ಛ ಮನಸ್ಸಿನ ಸಮಾಜಪರ ಕಾಳಜಿಯಿಂದ ಮಾಡುತ್ತಿರುವ ಸೇವಾ ಕಾರ್ಯದಿಂದಾಗಿಯೇ ದೇವರ ಆಶೀರ್ವಾದ ಹಾಗೂ ಧನಾತ್ಮಕ ಶಕ್ತಿ ನಮ್ಮ ಭವನದಲ್ಲಿದೆ. ನಾವು ಸಮಾಜಬಾಂಧವರ ಕ್ಷೇಮಾಭಿವೃದ್ಧಿಯ ದೃಷ್ಟಿಕೋನದಿಂದ ಆರಂಭಿಸಿದ ಕಲ್ಪವೃಕ್ಷ ಸಮಾಜಕಲ್ಯಾಣ ಯೋಜನೆ ಹೃದಯವಂತ ದಾನಿಗಳ ನೆರವಿನಿಂದ ಯಶಸ್ವಿಯಾಗಿದೆ. ನಮ್ಮ ಶಿಕ್ಷಣ ಸಂಸ್ಥೆಗಳನ್ನು ಆರಂಭಿಸುವ ಭವಿಷ್ಯದ ಯೋಜನೆಗೂ ಮಹಾದಾನಿಗಳು ಈಗಾಗಲೇ ನೆರವು ನೀಡುವ ಭರವಸೆ ನೀಡಿದ್ದಾರೆ. ಸಂಘ ಹಿತದಲ್ಲಿ ಕೈಜೋಡಿಸಿದ ಮಹಾದಾನಿಗಳೆಲ್ಲರಿಗೂ ಕೃತಜ್ಞತೆಗಳನ್ನು ಸಲ್ಲಿಸುತ್ತಿದ್ದೇನೆ. ಸಮಾಜಬಾಂಧವರಿಗೆ ಅತೀ ಕಡಿಮೆ ವೆಚ್ಚದಲ್ಲಿ ವೈದ್ಯಕೀಯ ತಪಾಸಣೆಗಾಗಿ ಪುಣೆಯಲ್ಲಿ ಆರಂಭಗೊಂಡ ಮಣಿಪಾಲ ಆಸ್ಪತ್ರೆಯೊಂದಿಗೆ ಮಾತುಕತೆ ನಡೆಸಲಾಗಿದ್ದು ಇದಕ್ಕೆ ಆಸ್ಪತ್ರೆಯ ವತಿಯಿಂದ ಸಮ್ಮತಿ ಸಿಕ್ಕಿದ್ದು ಸಮಾಜಬಾಂಧವರು ಇದರ ಸದುಪಯೋಗಪಡಿಸಿಕೊಳ್ಳಬಹುದಾಗಿದೆ. ಸಂಘದ ಪದಾಧಿಕಾರಿಗಳೆಲ್ಲರೂ ಸಂಘದ ಅಭಿವೃದ್ಧಿಗೆ ನಿಸ್ವಾರ್ಥವಾಗಿ ಶ್ರಮಿಸಿದ್ದಾರೆ. ಸಂಘದ ಮಹಿಳಾ ವಿಭಾಗ, ಯುವ ವಿಭಾಗ, ಉತ್ತರ ಮತ್ತು ದಕ್ಷಿಣ ಪ್ರಾದೇಶಿಕ ಸಮಿತಿಗಳು ಸಂಘದ ಕಾರ್ಯಕ್ಕೆ ಕೈಜೋಡಿಸಿ ವಿವಿಧ ಸಾಮಾಜಿಕ ,ಶೈಕ್ಷಣಿಕ ,ಸಾಂಸ್ಕೃತಿಕ, ಧಾರ್ಮಿಕ ಕಾರ್ಯಕ್ರಮ ಗಳೆಲ್ಲವನ್ನೂ ಸುಸೂತ್ರವಾಗಿ ನಡೆಸುವಲ್ಲಿ ಸಂಪೂರ್ಣ ಸಹಕಾರ ನೀಡಿದ್ದಾರೆ. ಸಮಾಜಬಾಂಧವರೆಲ್ಲರ ಪ್ರೀತಿ ವಿಶ್ವಾಸಕ್ಕೆ ನಾನು ಚಿರಋಣಿಯಾಗಿದ್ದೇನೆ. ಮುಂದೆಯೂ ಒಮ್ಮತದಿಂದ ಸಮಾಜದ ಹಿತದೃಷ್ಟಿಯಿಂದ ನಾವೆಲ್ಲರೂ ಸಂಘವನ್ನು ಬಲಪಡಿಸೋಣ ಎಂದರು.
ಈ ಸಂದರ್ಭ ಮಣಿಪಾಲ್ ಆಸ್ಪತ್ರೆಯ ವೈದ್ಯೆ ಡಾ. ವಿಜು ರಾಜನ್ ಪುಣೆ ಬಂಟರ ಸಂಘದ ಸದಸ್ಯರಿಗೆ ಆಸ್ಪತ್ರೆ ವತಿಯಿಂದ ರಿಯಾಯತಿ ದರದಲ್ಲಿ ವೈದ್ಯಕೀಯ ತಪಾಸಣೆ ಹಾಗೂ ರಿಯಾಯತಿ ದರದಲ್ಲಿ ಚಿಕಿತ್ಸೆ ಕೊಡಿಸುವ ಬಗ್ಗೆ ವಿವರವಾಗಿ ತಿಳಿಸಿದರು. ಈ ಬಗ್ಗೆ ಆಸ್ಪತ್ರೆ ವತಿಯಿಂದ ನೀಡಲಾಗುವ ಆರೋಗ್ಯ ಕಾರ್ಡ್ ನ ಬಗ್ಗೆಯೂ ವಿವರಿಸಿದರು . ಅವರನ್ನು ಸಂಘದ ವತಿಯಿಂದ ಗೌರವಿಸಲಾಯಿತು.
ವೇದಿಕೆಯಲ್ಲಿ ಸಂಘದ ಉಪಾಧ್ಯಕ್ಷ ಎರ್ಮಾಳ್ ಚಂದ್ರಹಾಸ ಶೆಟ್ಟಿ, ಪ್ರವೀಣ್ ಶೆಟ್ಟಿ ಪುತ್ತೂರು ಪ್ರಧಾನ ಕಾರ್ಯದರ್ಶಿ ಅಜಿತ್ ಕೆ ಹೆಗ್ಡೆ, ಕೋಶಾಧಿಕಾರಿ ಶ್ರೀನಿವಾಸ ಶೆಟ್ಟಿ, ಉತ್ತರ ಪ್ರಾದೇಶಿಕ ಸಮಿತಿ ಕಾರ್ಯಾಧ್ಯಕ್ಷ ಗಣೇಶ್ ಪೂಂಜಾ, ದಕ್ಷಿಣ ಪ್ರಾದೇಶಿಕ ಸಮಿತಿ ಕಾರ್ಯಾಧ್ಯಕ್ಷಶೇಖರ್ ಸಿ ಶೆಟ್ಟಿ, ಮಹಿಳಾ ವಿಭಾಗದ ಕಾರ್ಯಾಧ್ಯಕ್ಷೆ ಸುಲತಾ ಎಸ್ ಶೆಟ್ಟಿ ಪದಾಧಿಕಾರಿಗಳಾದ ಸುಚಿತ್ರಾ ಎಸ್ ಶೆಟ್ಟಿ, ಶಮ್ಮಿ ಅಜಿತ್ ಹೆಗ್ಡೆ , ಯುವ ವಿಭಾಗದ ಉಪ ಕಾರ್ಯಾಧ್ಯಕ್ಷ ಪ್ರಫುಲ್ ಶೆಟ್ಟಿ ಉಪಸ್ಥಿತರಿದ್ದರು. ಅಜಿತ್ ಹೆಗ್ಡೆ ಕಾರ್ಯಕ್ರಮ ನಿರೂಪಿಸಿ ವಂದಿಸಿದರು. ಸಭೆಯಲ್ಲಿ ಸಂಘದ ಕಾರ್ಯಕಾರಿ ಸಮಿತಿ ಸದಸ್ಯರು, ಮಹಿಳಾ ವಿಭಾಗ, ಯುವ ವಿಭಾಗ, ಉತ್ತರ ಮತ್ತು ದಕ್ಷಿಣ ಪ್ರಾದೇಶಿಕ ಸಮಿತಿಗಳ ಸದಸ್ಯರು ಹಾಗೂ ಹೆಚ್ಚಿನ ಸಂಖ್ಯೆಯಲ್ಲಿ ಸದಸ್ಯರು ಉಪಸ್ಥಿತರಿದ್ದರು . ಪ್ರೀತಿ ಭೋಜನದೊಂದಿಗೆ ಮಹಾಸಭೆ ಕೊನೆಗೊಂಡಿತು.
ವರದಿ :- ಕಿರಣ್ ರೈ