ರಂಗಚಾವಡಿ ಸಾಹಿತ್ಯಿಕ ಸಾಂಸ್ಕೃತಿಕ ಸಂಘಟನೆಯ ವರ್ಷದ ಹಬ್ಬ-ರಂಗಚಾವಡಿ ಪ್ರಶಸ್ತಿ ಪ್ರದಾನ ಸಮಾರಂಭ ಕಾರ್ಯಕ್ರಮ ಸುರತ್ಕಲ್ ಬಂಟರ ಭವನದಲ್ಲಿ ಜರುಗಿತು. ಕಾರ್ಯಕ್ರಮವನ್ನು ಹಿರಿಯ ರಂಗಕರ್ಮಿ, ಚಲನ ಚಿತ್ರ ನಿರ್ಮಾಪಕ, ಡಾ ಸಂಜೀವ ದಂಡೆಕೇರಿ ದೀಪ ಬೆಳಗಿಸುವ ಮೂಲಕ ಉದ್ಘಾಟಿಸಿದರು.
ಬಳಿಕ ಮಾತಾಡಿದ ಅವರು, “ರಂಗ ಚಾವಡಿ ಸಂಘಟನೆ ಕಳೆದ 23 ವರ್ಷಗಳಿಂದ ನಿರಂತರವಾಗಿ ಕಲೆ ಸಾಹಿತ್ಯ, ಸಾಂಸ್ಕೃತಿಕ ರಂಗಕ್ಕೆ ಸೇವೆ ಸಲ್ಲಿಸಿಕೊಂಡು ಬರುತ್ತಿರುವುದು ಶ್ಲಾಘನೀಯ. ಅದೆಷ್ಟೋ ಹಿರಿಯ, ಕಿರಿಯ ಕಲಾವಿದರಿಗೆ ಸಂಘಟನೆ ಆಸರೆಯಾಗಿ ಬೆಳೆಸಿದೆ. ಸಂಘಟನೆಯು ಪತ್ರಕರ್ತ ಜಗನ್ನಾಥ ಶೆಟ್ಟಿ ಬಾಳ ನೇತೃತ್ವದಲ್ಲಿ ಯಶಸ್ವಿಯಾಗಿ ಮುನ್ನಡೆಯಲಿ” ಎಂದು ಅವರು ಶುಭ ಹಾರೈಸಿದರು.
ವೇದಿಕೆಯಲ್ಲಿ ಹಿರಿಯ ಸಾಹಿತಿ, ಜಾನಪದ ಸಂಶೋಧಕ ಮುದ್ದು ಮೂಡುಬೆಳ್ಳೆ ಅವರಿಗೆ ರಂಗಚಾವಡಿ ಪ್ರಶಸ್ತಿ ಪ್ರದಾನ ಮಾಡಲಾಯಿತು.
ಸನ್ಮಾನ ಸ್ವೀಕರಿಸಿ ಮಾತಾಡಿದ ಮುದ್ದು ಮೂಡುಬೆಳ್ಳೆ ಅವರು, “ಎಲ್ಲ ಪ್ರಯತ್ನಗಳೂ ಯಶಸ್ಸು ತಂದುಕೊಡುತ್ತದೆ ಎಂದು ಹೇಳಲಾಗುವುದಿಲ್ಲ. ಆದರೆ ಪ್ರಯತ್ನದ ಬೆನ್ನಿಗೆ ಮತ್ತೊಂದು ಪ್ರಯತ್ನ ನಿರಂತರವಾಗಿ ನಡೆಸುತ್ತಲೇ ಇರಬೇಕು. ಅದು ಮುಂದೊಂದು ದಿನ ನಮಗೆ ಗೆಲುವು ತಂದುಕೊಡುತ್ತದೆ. ರಂಗ ಚಾವಡಿ ಸಂಘಟನೆ ನನ್ನಂತ ಹಿರಿಯ ಕಲಾವಿದರನ್ನು ಗುರುತಿಸಿ ಸನ್ಮಾನಿಸುತ್ತಿರುವುದು ಶ್ಲಾಘನೀಯ ಕಾರ್ಯ” ಎಂದರು.
ಬಳಿಕ ಮಾತಾಡಿದ ಕೆಪಿಸಿಸಿ ಪ್ರಧಾನ ಕಾರ್ಯದರ್ಶಿ ಇನಾಯತ್ ಅಲಿ ಅವರು, “ರಂಗ ಚಾವಡಿ ಸಂಘಟನೆ ಸಾಮಾಜಿಕವಾಗಿ ಗುರುತಿಸಿಕೊಂಡಿದ್ದು ಮುಂದಿನ ದಿನಗಳಲ್ಲಿ ಇಂತಹ ಹತ್ತಾರು ಉತ್ತಮ ಕಾರ್ಯಕ್ರಮಗಳನ್ನು ಆಯೋಜಿಸುವ ಮೂಲಕ ಮಾದರಿ ಸಂಘಟನೆಯಾಗಿ ಮುನ್ನಡೆಯಲಿ. ಸಮಾಜದ ವಿವಿಧ ಕ್ಷೇತ್ರಗಳ ಸಾಧಕರಿಗೆ ಬೆನ್ನೆಲುಬಾಗಿ ನಿಲ್ಲಲಿ” ಎಂದರು.
ಶ್ರೀ ಡೆವಲಪರ್ಸ ನ ಮಾಲಕ, ನಟ ಗಿರೀಶ್ ಎಂ. ಶೆಟ್ಟಿ ಕಟೀಲು ಮಾತಾಡುತ್ತಾ, “ಮನೋರಂಜನೆ ಎನ್ನುವುದು ಇಂದಿನ ದಿನಗಳಲ್ಲಿ ಜನರಿಗೆ ಅತ್ಯಗತ್ಯವಾಗಿದೆ. ಕಲಾವಿದರು ಮನೋರಂಜನೆ ಕಾರ್ಯಕ್ರಮದ ಜೀವಾಳ. ಇಂಥ ಕಲಾವಿದರನ್ನು ಸನ್ಮಾನಿಸಿ ಪ್ರೋತ್ಸಾಹಿಸುತ್ತಿರುವ ರಂಗ ಚಾವಡಿ ಸಂಘಟನೆ ನೂರು ಕಾಲ ಬಾಳಲಿ” ಎಂದು ಶುಭ ಹಾರೈಸಿದರು.
ವೇದಿಕೆಯಲ್ಲಿ ಚಲನಚಿತ್ರ ನಿರ್ಮಾಪಕ ವಾಸುದೇವ್ ಎಸ್. ಚಿತ್ರಾಪು, ತೆರಿಗೆ ನಿರ್ಧರಣೆ, ಹಣಕಾಸು ಮತ್ತು ಅಫೀಲು ಸ್ಥಾಯಿ ಸಮಿತಿಯ ಅಧ್ಯಕ್ಷ, ಚಲನ ಚಿತ್ರ ನಿರ್ಮಾಪಕ ಕಿಶೋರ್ ಕೊಟ್ಟಾರಿ, ಚಿತ್ರನಟ ಸುಮನ್ , ನಾಟಕ ಕಲಾವಿದರ ಒಕ್ಕೂಟದ ಅಧ್ಯಕ್ಷ ಕಿಶೋರ್ ಡಿ. ಶೆಟ್ಟಿ, ಸುರತ್ಕಲ್ ಬಂಟರ ಸಂಘದ ಅಧ್ಯಕ್ಷ ಸುಧಾಕರ ಎಸ್. ಪೂಂಜ, ಅರಂತಬೆಟ್ಟು ಮುಂಚೂರು ಶ್ರೀ ಕೋಡ್ದಬ್ಬು ದೈವಸ್ಥಾನ ಸಮಿತಿಯ ಅಧ್ಯಕ್ಷ ಸತೀಶ್ ಶೆಟ್ಟಿ ಮುಂಚೂರು, ಹಿರಿಯ ರಂಗಕರ್ಮಿ ವಿ.ಜಿ.ಪಾಲ್, ಉದ್ಯಮಿ ರಮಾನಾಥ ಶೆಟ್ಟಿ ಬೈಕಂಪಾಡಿ ಉಪಸ್ಥಿತರಿದ್ದರು. ಉಪಸ್ಥಿತರಿದ್ದರು.
ಈ ಸಂದರ್ಭದಲ್ಲಿ
ಖ್ಯಾತ ಚಿತ್ರನಟ ಸುಮನ್ ಮತ್ತು ಸ್ವರಾಜ್ ಶೆಟ್ಟಿ ಅವರನ್ನು ಗೌರವಿಸಲಾಯಿತು.
ನಿತೇಶ್ ಶೆಟ್ಟಿ ಎಕ್ಕಾರ್ ಕಾರ್ಯಕ್ರಮ ನಿರೂಪಿಸಿದರು.
ಸಭಾ ಕಾರ್ಯಕ್ರಮದ ಬಳಿಕ ಮಲ್ಲಿಕಾ ವಿಶ್ವಾಸ್, ವಿಶ್ವಾಸ್ ಗುರುಪುರ, ಮತ್ತು ಜಗಧೀಶ್ ಶಿವಪುರ ಅವರಿಂದ ಸಂಗೀತ ರಸಮಂಜರಿ, ಪ್ರಶಂಸ ಕಾಪು ತಂಡದಿಂದ “ಬಲೇ ತೆಲಿಪುಲೆ” ಹಾಸ್ಯ ಕಾರ್ಯಕ್ರಮ ಜರುಗಿತು.