ಯಕ್ಷಲೋಕವೇ ಧರೆಗಿಳಿದು ಬಂದಿದೆಯೋ ಎಂದು ಭಾಸವಾಗುವ ರಂಗಸ್ಥಳ. ರಂಗಸ್ಥಳದ ಹಿಂಭಾಗದಲ್ಲಿ ಜಗಮಗಿಸುವ ಬೆಳಕಿನ ಮಧ್ಯೆ ಕಂಗೊಳಿಸುತ್ತಿರುವ ಕೆಂಪು ಮುಂಡಾಸಿನ ಹಿಮ್ಮೇಳ ತಂಡ.ಭಾಗವತರ ಪಕ್ಕದಲ್ಲಿ ನಿಂತಿರುವ ಎತ್ತರದ ನಿಲುವಿನ ಸುರದ್ರೂಪಿ ವ್ಯಕ್ತಿಯೋರ್ವ, ದಪ್ಪನೆಯ ಅಂಚಿನ ಬಿಳಿ ಪಂಚೆ ಹಾಗೂ ಉದ್ದನೆಯ ಪೈರಾನ್ ತೊಟ್ಟ, ಚೆನ್ನಾಗಿ ಕ್ಷೌರ ಮಾಡಿದ ನಸುಗಪ್ಪುಬಣ್ಣದ ಹೊಳೆಯುವ ಮುಖದ, ದಪ್ಪ ಮೀಸೆಯಡಿಯಿಂದ ಮಂದಹಾಸವನ್ನು ಸೂಸುತ್ತಾ, ಚೆಂಡೆಯನ್ನು ಹೆಗಲಿಗೇರಿಸಿ ತನ್ನ ಅಪೂರ್ವ ಕೈಚಳಕದೊಂದಿಗೆ ತಾಳ ರಾಗ ಲಯ ಗಳಿಗನುಗುಣವಾಗಿ ನುಡಿಸುತ್ತಾ ಯಕ್ಷ ರಸಿಕರ ಗಮನ ಸೆಳೆಯುತ್ತಾನೆ.ಇವರು ಮತ್ತಾರೂ ಅಲ್ಲ ಅವರೇ ತೆಂಕುತಿಟ್ಟಿನ ಖ್ಯಾತ ಚಂಡೆ ಮದ್ದಳೆ ವಾದಕ ಶ್ರೀ ಪ್ರಶಾಂತ್ ಶೆಟ್ಟಿ ವಗೆನಾಡು.
ಪ್ರಶಾಂತ್ ಶೆಟ್ಟಿಯವರು ಕಾಸರಗೋಡು ಜಿಲ್ಲೆಯ ಕುಡಾಲ ಗುತ್ತು ಮನೆತನದ ವಗೆನಾಡು ಶ್ರೀ ದೇರಣ್ಣ ಶೆಟ್ಟಿ ಹಾಗೂ ಸಾಲೆತ್ತೂರು ಕೊಡಂಗೆ ಮನೆ ಶ್ರೀಮತಿ ಚಂದ್ರಾವತಿ ದೇರಣ್ಣ ಶೆಟ್ಟಿ ದಂಪತಿಗಳ ನಾಲ್ಕು ಜನ ಮಕ್ಕಳಲ್ಲಿ ಕಿರಿಯವರಾಗಿ ದಕ್ಷಿಣ ಕನ್ನಡ ಜಿಲ್ಲೆಯ ಬಂಟ್ವಾಳ ತಾಲೂಕಿನ ಕರೋಪಾಡಿ ಗ್ರಾಮದ ವಗೆನಾಡು ಎಂಬಲ್ಲಿ ಜನಿಸಿದರು. ಈ ಪರಿಸರವು ಯಕ್ಷ ಮಾತೆಯ ತವರೂರು ಎಂದೇ ಖ್ಯಾತಿವೆತ್ತ ಹಲವಾರು ಯಕ್ಷ ದಿಗ್ಗಜ ಕುಟುಂಬಗಳಾದ, ಮಾಂಬಾಡಿ, ಕುರಿಯ, ತೆಂಕಬೈಲು, ಪದ್ಯಾಣ,ಚಿಪ್ಪಾರು ಮುಂತಾದ ಊರುಗಳಿಗೆ ಸಮೀಪದ ಒಂದು ಊರು. ಇಲ್ಲಿರುವ ವಗೆನಾಡು ಶ್ರೀ ಸುಬ್ರಹ್ಮಣ್ಯ ದೇವಸ್ಥಾನದಲ್ಲಿ ನಿರಂತರವಾಗಿ ಯಕ್ಷಗಾನ ಕಾರ್ಯಕ್ರಮಗಳು ಜರುಗುತ್ತಿದ್ದವು. ಇಂತಹ ಸದಾ ಯಕ್ಷ ಚಟುವಟಿಕೆಯುಕ್ತ ವಾತಾವರಣದಲ್ಲಿ ಹುಟ್ಟಿ ಬೆಳೆದ ಇವರು ಸುಪ್ರಸಿದ್ಧ ಯಕ್ಷಗಾನ ಕಲಾವಿದರಾದ ದಿ.ಗುಂಪೆ ರಾಮಯ್ಯ ರೈಗಳ ಮೊಮ್ಮಗ (ತಂದೆಯವರ ಮಾವ). ತನ್ನದೇ ಆದ ಶೈಲಿಯಿಂದ ಆಟ ಕೂಟಗಳೆರಡರಲ್ಲಿಯೂ ಪ್ರಖ್ಯಾತಿಯನ್ನು ಪಡೆದ ಪೆರ್ಮುದೆ ಜಯಪ್ರಕಾಶ್ ಶೆಟ್ಟಿಯವರ ಭಾವ.ಹೆಸರಾಂತ ಯಕ್ಷಗಾನ ಕಲಾವಿದ ಪೆರುವಾಯಿ ಶ್ರೀ ನಾರಾಯಣ ಶೆಟ್ಟಿಯವರು ಇವರಿಗೆ ಸಂಬಂಧದಲ್ಲಿ ಮಾವ. ಈ ತಲೆಮಾರಿನ ಸುಪ್ರಸಿದ್ಧ ಭಾಗವತರಾದ ಪಟ್ಲ ಸತೀಶ್ ಶೆಟ್ಟಿಯವರು ನೆರೆಕರೆಯವರು ಹಾಗೂ ಬಾಲ್ಯದ ಆಪ್ತ ಸ್ನೇಹಿತ. ಇವರ ತೀರ್ಥರೂಪರಾದ ದಿ.ದೇರಣ್ಣ ಶೆಟ್ಟಿಯವರು ಸ್ವತಃ ಯಕ್ಷಗಾನ ಕಲಾವಿದರು ಅಲ್ಲದಿದ್ದರೂ ಕೂಡ ಅಪ್ಪಟ ಯಕ್ಷಪ್ರೇಮಿಗಳಾಗಿದ್ದರು.ಆ ಪರಿಸರದಲ್ಲಿ ನಡೆಯುತ್ತಿರುವ ಪ್ರತಿಯೊಂದು ಆಟ ಕೂಟಗಳಲ್ಲಿ ತಪ್ಪದೆ ಹಾಜರಿರುತ್ತಿದ್ದು,ಯಕ್ಷಗಾನದ ವಿಷಯದಲ್ಲಿ ಅಪಾರ ಅನುಭವಿಗಳಾಗಿದ್ದರು. ಒಳ್ಳೆಯ ಯಕ್ಷಪರಿಸರ, ಕಲಾವಿದ ಬಂಧುಗಳು ಹಾಗೂ ತಂದೆಯವರ ಯಕ್ಷ ಪ್ರೇಮ ಬಾಲಕ ಪ್ರಶಾಂತನ ಚಿತ್ತವನ್ನು ತನಗರಿವಿಲ್ಲ ದಂತೆಯೇ ಯಕ್ಷಗಾನದೆಡೆಗೆ ಸೆಳೆಯಿತು. ಕೇವಲ 10-12 ವರ್ಷದ ಬಾಲಕನಾಗಿರುವಾಗಲೇ ಅಮುಲ್ ಪೌಡರ್ ನ ಡಬ್ಬವನ್ನೇ ಚೆಂಡೆಯನ್ನಾಗಿಸಿ, ಹಗ್ಗವನ್ನು ಕಟ್ಟಿ, ಹೆಗಲಿಗೇರಿಸಿ, ತೆಂಗಿನ ಸೋಗೆಯ ಕೋಲುಗಳಿಂದ ತಾಳಬದ್ಧವಾಗಿ ಮನೆಯಂಗಳದಲ್ಲಿ ದಿನಾಲೂ ಚೆಂಡೆಯನ್ನು ನುಡಿಸುತ್ತಿದ್ದರು. ಪ್ರಸಿದ್ಧ ಯಕ್ಷ ಗುರುಗಳಾದ ಮಾಂಬಾಡಿ ಸುಬ್ರಹ್ಮಣ್ಯ ಭಟ್ಟರು ಪ್ರತಿದಿನ ಇವರ ಮನೆಯ ಮುಂಭಾಗದಿಂದ ಹಾದುಹೋಗುತ್ತಿರುವಾಗ ಇದನ್ನು ಸೂಕ್ಷ್ಮವಾಗಿ ಗಮನಿಸುತ್ತಿದ್ದರು. ಒಂದು ದಿನ ಯಕ್ಷಗುರುಗಳು ನೇರವಾಗಿ ಇವರ ಮನೆಯಂಗಳಕ್ಕೆ ಬಂದು ಇವರ ತಂದೆಯವರಾದ ದೇರಣ್ಣ ಶೆಟ್ಟಿ ಯವರಲ್ಲಿ ಬಾಲಕ ಪ್ರಶಾಂತನನ್ನು ತನ್ನಲ್ಲಿಗೆ ಕಳುಹಿಸಿಕೊಟ್ಟರೆ, ಅವನ ಆಸಕ್ತಿಗೆ ಸರಿಯಾಗಿ ಚಂಡೆ ಮದ್ದಳೆಗಳ ನುಡಿಸುವಿಕೆಯ ಶಿಕ್ಷಣವನ್ನು ನೀಡಿ ಅವನನ್ನು ಬೆಳೆಸುತ್ತೇನೆ ಎಂದು ಆಶ್ವಾಸನೆ ನೀಡಿದರು. ಅಪ್ಪಟ ಯಕ್ಷ ಪ್ರೇಮಿಗಳಾದ ಇವರ ತಂದೆಯವರಿಗೆ ಯಕ್ಷಗರು ಮಾಂಬಾಡಿ ಶ್ರೀ ಸುಬ್ರಹ್ಮಣ್ಯ ಭಟ್ಟರಿಗೆ ಯಕ್ಷಗಾನ ರಂಗದಲ್ಲಿದ್ದ ಅಪಾರ ಜ್ಞಾನ ಹಾಗೂ ಸಾಮರ್ಥ್ಯಗಳ ಬಗ್ಗೆ ತುಂಬಾ ವಿಶ್ವಾಸವಿತ್ತು. ಇಂತಹ ಮಹಾನ್ ದಿಗ್ಗಜರ ಗರಡಿಯಲ್ಲಿ ತನ್ನ ಮಗ ಚೆಂಡೆ ಮದ್ದಳೆಗಳ ಶಿಕ್ಷಣವನ್ನು ಪಡೆದರೆ ಮುಂದೊಂದು ದಿನ, ಈ ಕ್ಷೇತ್ರದಲ್ಲಿ ಬಹಳ ಮುಂದುವರಿಯಲು ಸಾಧ್ಯ ಎಂಬುದನ್ನು ಮನಗಂಡು, ಇದಕ್ಕೆ ಸುಲಭವಾಗಿ ಒಪ್ಪಿಕೊಂಡು ಕಳುಹಿಸಿಕೊಡಲು ತಯಾರಾದರು.
ನನ್ನ ಬಾಲ್ಯದಲ್ಲಿ ನಡೆದ ಒಂದು ಘಟನೆ ಇಂದು ನನ್ನನ್ನು ಈ ಹಂತಕ್ಕೆ ತಂದು ನಿಲ್ಲಿಸಿದೆ ಎಂದು ವಿನಯಪೂರ್ವಕವಾಗಿ ಪ್ರಾಮಾಣಿಕತೆಯಿಂದ ಒಪ್ಪಿಕೊಳ್ಳುತ್ತಾರೆ ಪ್ರಶಾಂತ್ ಶೆಟ್ಟಿಯವರು. ಹೀಗೆ ಶಾಲಾ ವಿದ್ಯಾಭ್ಯಾಸದೊಂದಿಗೆ ನಿರಂತರ ಮೂರು ವರ್ಷಗಳ ಪರ್ಯುಂತ ಚಂಡೆ ಮದ್ದಳೆ ನುಡಿಸುವಿಕೆಯ ಶಿಕ್ಷಣವನ್ನು ಗುರುಗಳಿಂದ ಪಡೆದುಕೊಂಡು ಪರಿಣತಿಯನ್ನು ಹೊಂದಿದರು. ಇದೇ ಸಂಧರ್ಭದಲ್ಲಿ ಪಟ್ಲ ಶ್ರೀ ಸತೀಶ್ ಶೆಟ್ಟಿಯವರು ಕೂಡ ಮಾಂಬಾಡಿ ಗುರುಗಳಲ್ಲಿ ಭಾಗವತಿಕೆಯನ್ನು ಅಭ್ಯಸಿಸುತ್ತಿದ್ದರು. ಗುರುಗಳು ಹೇಳಿಕೊಟ್ಟ ಪ್ರತಿದಿನದ ಪಾಠವನ್ನು ಬಾಲ್ಯ ಸ್ನೇಹಿತರಾದ ಇವರಿಬ್ಬರೂ ಬಲು ಶ್ರದ್ಧೆಯಿಂದ ಅಭ್ಯಸಿಸುತ್ತಿದ್ದರು. ಪಟ್ಲರ ಭಾಗವತಿಕೆಗೆ ಇವರು ಚೆಂಡೆಮದ್ದಳೆ ನುಡಿಸಿ,ಮರುದಿನ ಒಪ್ಪಿಸುತ್ತಿದ್ದರು. ಇದು ಗುರುಗಳಿಗೆ ಬಹಳ ಪ್ರಿಯವಾಗುತ್ತಿತ್ತು. ಅಂದು ಆರಂಭವಾದ ಪಟ್ಲ-ಪ್ರಶಾಂತರ ಹಿಮ್ಮೇಳದ ಜೋಡಿ ಈ ತನಕವೂ ಹಾಗೆಯೇ ಮುಂದುವರಿದಿದೆ.ಇಬ್ಬರೂ ಈ ರಂಗದಲ್ಲಿ ಈಗಾಗಲೇ ಸಾಕಷ್ಟು ಬೆಳೆದಿದ್ದಾರೆ. ಇನ್ನೂ ಬೆಳೆಯುತ್ತಿದ್ದಾರೆ.
ಇವರಲ್ಲಿ ಸುಪ್ತವಾಗಿದ್ದ ಕಲಾಪ್ರತಿಭೆಗೆ ಗುರುಗಳಿಂದ ದೊರೆತ ಶಿಸ್ತಿನ ಶಿಕ್ಷಣ ಇವರ ಆತ್ಮವಿಶ್ವಾಸವನ್ನು ಹೆಚ್ಚಿಸಿತು. ಜೀವನದಲ್ಲಿ ಏನನ್ನಾದರೂ ಸಾಧಿಸುವುದು ಇದ್ದರೆ ಅದು ಖಂಡಿತವಾಗಿಯೂ ಯಕ್ಷರಂಗದಲ್ಲಿ ಎಂಬ ದೃಢಸಂಕಲ್ಪವನ್ನು ಮಾಡಿಕೊಂಡರು. ಇಂತಹ ಸಂದರ್ಭದಲ್ಲಿ ಇವರ ಸಹಪಾಠಿ ಹಾಗೂ ಬಾಲ್ಯ ಸ್ನೇಹಿತ ಪಟ್ಲ ಸತೀಶ್ ಶೆಟ್ಟಿಯವರು ಆವಾಗಲೇ ಕಟೀಲು ಮೇಳಕ್ಕೆ ಕಿರಿಯ ಭಾಗವತರಾಗಿ ಸೇರ್ಪಡೆಗೊಂಡಿದ್ದರು. ಆತ್ಮೀಯ ಮಿತ್ರ ಸತೀಶ್ ಶೆಟ್ಟಿಯವರ ಹಾಗೂ ಪ್ರಸಿದ್ಧ ಯಕ್ಷಗಾನ ಕಲಾವಿದ ತನ್ನ ಭಾವ ಪೆರ್ಮುದೆ ಜಯಪ್ರಕಾಶ್ ಶೆಟ್ಟಿಯವರ ಮಾರ್ಗದರ್ಶನದಂತೆ ಕಟೀಲು ಮೇಳಕ್ಕೆ ಸೇರವುದೆಂದು ತೀರ್ಮಾನಿಸಿದರು.ಆವಾಗ ಯಕ್ಷಗಾನ ರಂಗದ ವಾಲ್ಮೀಕಿಗಳೆಂದೇ ಖ್ಯಾತರಾದ ಪ್ರಸಿದ್ಧ ಪ್ರಸಂಗಕರ್ತ ಶ್ರೀ ಪುರುಷೋತ್ತಮ ಪೂಂಜರು ಕಟೀಲು ಒಂದನೇ ಮೇಳದಲ್ಲಿ ಪ್ರಧಾನ ಭಾಗವತರಾಗಿದ್ದರು. ಇವರ ತಂದೆಯವರು ಇವರನ್ನು ಪುರುಷೋತ್ತಮ ಪೂಂಜರಲ್ಲಿಗೆ ಕರೆದೊಯ್ದು ತನ್ನ ಮಗನನ್ನು ತಮ್ಮ ಗರಡಿಯಲ್ಲಿ ಪರಿಪೂರ್ಣ ಕಲಾವಿದನನ್ನಾಗಿಸಬೇಕೆಂದು ಕೇಳಿಕೊಂಡರು.ಇಲ್ಲಿಂದ ಸತತ ಹನ್ನೆರಡು ವರ್ಷಗಳ ಪರ್ಯಂತ ಪೂಂಜರ ಗರಡಿಯಲ್ಲಿ ಪಳಗಿ ಹಂತಹಂತವಾಗಿ ಮೇಲೇರಿ ಪ್ರಧಾನ ಚಂಡೆ ಮದ್ದಳೆ ವಾದಕರಾಗಿ ಪರಿಪೂರ್ಣ ಕಲಾವಿದರಾಗಿ ರೂಪುಗೊಂಡರು. ಈ ಕಾಲಘಟ್ಟದಲ್ಲಿ ಪುರುಷೋತ್ತಮ ಪೂಂಜರ ಹೆಸರು ಊರಿನಲ್ಲಿ ಮಾತ್ರವಲ್ಲದೆ ಬೆಂಗಳೂರು, ಮುಂಬಯಿ ಹಾಗೂ ವಿದೇಶಗಳಲ್ಲೂ ತುಂಬಾ ಪ್ರಸಿದ್ಧಿಯಲ್ಲಿ ಇತ್ತು. ಮುಂಬಯಿಯಲ್ಲಿ ಚಿಣ್ಣರ ಬಿಂಬದ ಮೂಲಕ ಹಲವಾರು ಮಕ್ಕಳು ಯಕ್ಷಗುರು ಶ್ರೀ ಸದಾನಂದ ಶೆಟ್ಟಿ ಕಟೀಲ್ ಇವರ ಮೂಲಕ ಯಕ್ಷಗಾನ ಕಲಿಯುತ್ತಿದ್ದರು. ಹಲವಾರು ಸಂಘ ಸಂಸ್ಥೆಗಳಲ್ಲಿ ಹವ್ಯಾಸಿ ಕಲಾವಿದರಿಂದ ಯಕ್ಷಗಾನ ಪ್ರದರ್ಶನಗಳು ಏರ್ಪಡುತ್ತಿದ್ದವು. ಬಹುತೇಕ ಎಲ್ಲಾ ಕೊಲ್ಲಿ ರಾಷ್ಟ್ರಗಳಲ್ಲಿಯೂ ಊರಿನ ಹೆಸರಾಂತ ಕಲಾವಿದರನ್ನು ಕರೆಸಿಕೊಂಡು ಯಕ್ಷಗಾನ ಪ್ರದರ್ಶನಗಳನ್ನು ಏರ್ಪಾಟು ಮಾಡಲಾಗುತ್ತಿತ್ತು. ಹೀಗೆ ದೇಶ-ವಿದೇಶಗಳಲ್ಲಿ ನಡೆಯುತ್ತಿದ್ದ ಎಲ್ಲಾ ಕಾರ್ಯಕ್ರಮಗಳಲ್ಲಿ ಭಾಗವಹಿಸಲು ಪುರುಷೋತ್ತಮ ಪೂಂಜರಿಗೆ ಕರೆ ಬರುತ್ತಿತ್ತು. ಇಂತಹ ಕಾರ್ಯಕ್ರಮಗಳಲ್ಲಿ ಅವರೊಂದಿಗಿನ ಹಿಮ್ಮೇಳ ತಂಡದಲ್ಲಿ ಭಾಗವಹಿಸುವ ಅವಕಾಶ ಪ್ರಶಾಂತರಿಗೆ ಒದಗಿಬರುತ್ತಿತ್ತು. ಭಾರತದ ಎಲ್ಲಾ ಪ್ರಮುಖ ನಗರಗಳಲ್ಲದೆ, ವಿದೇಶಗಳಾದ ದುಬಾಯಿ,ಓಮನ್, ಕುವೈಟ್, ಕತಾರ್, ಮಸ್ಕತ್, ಬಹರೈನ್,ಸಿಂಗಾಪುರ ಇವೇ ಮೊದಲಾದ ದೇಶಗಳಿಗೂ ಪದೇ ಪದೇ ಹೋಗಿ ಪ್ರದರ್ಶನ ನೀಡುವ ಸುಯೋಗ ಇವರ ಪಾಲಿಗೆ ಲಭ್ಯವಾಗುತ್ತಿತ್ತು. ಇದು ಮುಂದೆ ಪಟ್ಲ ಸತೀಶ್ ಶೆಟ್ಟಿಯವರ ತಂಡದಲ್ಲೂ ಮುಂದುವರಿದು ನಿರಂತರವಾಗಿ ಇಂದಿನವರೆಗೂ ಸಾಗಿದೆ. ಹೀಗೆ ಎಲ್ಲಾ ಕಡೆಗಳ ಕಲಾಭಿಮಾನಿಗಳು ಸಂಘಟಕರು, ಕಲಾಪೋಷಕರು ಹಾಗೂ ಕಲಾಭಿಮಾನಿಗಳು ಯುವ ಚೆಂಡೆ-ಮದ್ದಳೆ ಗಾರರಾದ ಇವರನ್ನು ಗುರುತಿಸಿ,”ಪ್ರಶಾಂತ ಶೆಟ್ಟಿ ವಗೆನಾಡು” ಎಂದು ಪ್ರಸಿದ್ಧಿಗೆ ಬಂದರು. ಸುಮಾರು 19 ವರ್ಷಗಳ ಪೂರ್ವದಲ್ಲಿ ಮುಂಬಯಿಯ ಯಕ್ಷಗುರು ಹಾಗೂ ಕಲಾಸಂಘಟಕ ಅಜೆಕಾರು ಶ್ರೀ ಬಾಲಕೃಷ್ಣ ಶೆಟ್ಟಿಯವರು ಅಜೆಕಾರು ಕಲಾಭಿಮಾನಿ ಬಳಗ ಎಂಬ ಸಂಸ್ಥೆಯನ್ನು ಹುಟ್ಟುಹಾಕಿ, ಅದರ ಮುಖೇನ ಮುಂಬಯಿ, ಪೂನಾ, ನಾಸಿಕ್ ಮುಂತಾದ ಕಡೆಗಳಲ್ಲಿ ಸರಣಿ ತಾಳಮದ್ದಳೆ ಕಾರ್ಯಕ್ರಮಗಳನ್ನು ಆಯೋಜಿಸಲು ಪ್ರಾರಂಭಿಸಿದರು. ಇದರ ಪ್ರಥಮ ವರ್ಷದ ಕಾರ್ಯಕ್ರಮದಲ್ಲಿಯೇ ಬಾಲಕೃಷ್ಣ ಶೆಟ್ಟರು, ಪೂಂಜರೊಂದಿಗೆ ಕಲಾಭಿಮಾನಿಗಳ ಗಮನ ಸೆಳೆದ ಪ್ರಶಾಂತರನ್ನು ಕರೆಸಿಕೊಂಡರು. ಇವರು ಆ ನಂಟನ್ನು ಅಂದಿನಿಂದ ಇಂದಿನವರೆಗೆ ಉಳಿಸಿಕೊಂಡಿದ್ದು, ಪ್ರತಿವರ್ಷ ಅಜೆಕಾರು ಕಲಾಭಿಮಾನಿ ಬಳಗದ ಪ್ರತಿಯೊಂದು ಕಾರ್ಯಕ್ರಮಗಳಲ್ಲಿಯೂ ತಪ್ಪದೇ ಭಾಗವಹಿಸುತ್ತಿದ್ಧಾರೆ. ಮುಂಬೈ ಹಾಗೂ ಮಹಾರಾಷ್ಟ್ರದ ಕಲಾರಸಿಕರ ಜನಮಾನಸದಲ್ಲಿ ನನ್ನ ಹೆಸರು ಅಚ್ಚಳಿಯದೆ ಉಳಿಯಲು ಕಾರಣ ಅಜೆಕಾರು ಶ್ರೀ ಬಾಲಕೃಷ್ಣ ಶೆಟ್ಟಿಯವರು ಎಂದು ಪ್ರೀತಿಯಿಂದ ನುಡಿಯುತ್ತಾರೆ. ಮುಂಬಯಿಯ ಶ್ರೀ ಬ್ರಾಹ್ಮರಿ ಯಕ್ಷಕಲಾ ನಿಲಯದ ಸಂಸ್ಥಾಪಕರಾದ ಯಕ್ಷಗುರು ಶ್ರೀ ಸದಾನಂದ ಶೆಟ್ಟಿ ಕಟೀಲ್ ರವರು ಆಯೋಜಿಸುತ್ತಿರುವ ಕಾರ್ಯಕ್ರಮಗಳಲ್ಲಿಯೂ ಭಾಗವಹಿಸುತ್ತಿರುತ್ತಾರೆ ಇದರೊಂದಿಗೆ ನಿಡ್ಲೆ ಗೋವಿಂದ ಭಟ್ಟರ ನೇತೃತ್ವದ ಶ್ರೀ ಮಹಾಗಣಪತಿ ಸಂಚಾರಿ ಯಕ್ಷಗಾನ ಮಂಡಳಿಯಲ್ಲಿ ಭಾರತದ ಎಲ್ಲಾ ನಗರಗಳಿಗೂ ಸಂಚರಿಸಿದ ಅನುಭವವಿದೆ.”ಅತಿ ಸಣ್ಣ ಪ್ರಾಯದಲ್ಲಿ ಮಾಂಬಾಡಿ ಗುರುಗಳಿಂದ ಚೆಂಡೆ ಮದ್ದಳೆ ವಾದನಗಳನ್ನು ಕಲಿತು, ಆಗತಾನೆ ಹೊರಬಂದ ನನ್ನನ್ನು ಶ್ರೀ ಪುರುಷೋತ್ತಮ ಪೂಂಜರು ತನ್ನ ಮಗನಂತೆ ನೋಡಿಕೊಳ್ಳುತ್ತಾ, ತಪ್ಪಿದಲ್ಲಿ ತಿದ್ದುತ್ತಾ, ಬುದ್ಧಿ ಹೇಳಿ, ರಂಗ ನಡೆಗಳನ್ನು ಸಂಪೂರ್ಣವಾಗಿ ನನಗೆ ಕಲಿಸಿಕೊಟ್ಟು ಈ ಹಂತಕ್ಕೆ ನನ್ನನ್ನು ಬೆಳೆಸಿದ್ದಾರೆ. ಅವರ ಈ ಕೊಡುಗೆಗೆ ನಾನು ಸದಾ ಚಿರಋಣಿಯಾಗಿದ್ದೇನೆ. ಕಟೀಲು ಮೇಳದಲ್ಲಿ ಹನ್ನೆರಡು ವರ್ಷಗಳ ಅವರೊಂದಿಗಿನ ತಿರುಗಾಟ ನನ್ನ ಕಲಾಜೀವನದ ಅತೀ ಪ್ರಾಮುಖ್ಯ ಘಟ್ಟ” ಎಂದು ಈಗಲೂ ಸ್ಮರಿಸಿಕೊಳ್ಳುತ್ತಾರೆ ಪ್ರಶಾಂತ್.
ಕಟೀಲು ಕ್ಷೇತ್ರದಲ್ಲಿ ಪಟ್ಲ ಸತೀಶ್ ಶೆಟ್ಟಿಯವರನ್ನು ಪ್ರಧಾನ ಭಾಗವತರನ್ನಾಗಿಸಿ ಐದನೇ ಮೇಳವನ್ನು ಪ್ರಾರಂಭಿಸಿದಾಗ, ಅದಕ್ಕೆ ಪ್ರಶಾಂತ್ ಶೆಟ್ಟಿ ಅವರನ್ನು ಚೆಂಡೆವಾದಕರನ್ನಾಗಿ ಆಯ್ಕೆ ಮಾಡಲಾಯಿತು. ಯುವ ಕಲಾವಿದರುಗಳಿಂದಲೇ ತುಂಬಿದ್ದ ಈ ಮೇಳದ ಜನಪ್ರಿಯತೆ ದಿನದಿಂದ ದಿನಕ್ಕೆ ಹೆಚ್ಚಾಗಲಾರಂಭಿಸಿತು. ಪಟ್ಲ ರವರು ಸಾಂಪ್ರದಾಯಿಕ ಯಕ್ಷಗಾನಕ್ಕೆ ಬದ್ಧರಾಗಿದ್ದು ಕೊಂಡೇ ಪೌರಾಣಿಕ ಪ್ರಸಂಗಗಳಲ್ಲಿ ಹೊಸ ಹೊಸ ಆವಿಷ್ಕಾರಗಳನ್ನು ಮಾಡಿ, ವಿನೂತನ ಶೈಲಿಯಲ್ಲಿ ಪದ್ಯಗಳನ್ನು ಹಾಡಿ, ಕಲಾವಿದರನ್ನು ಕುಣಿಸಿ, ಸ್ತ್ರೀವೇಷದ ನೃತ್ಯಕ್ಕೆ ಒತ್ತುಕೊಟ್ಟು, ಹಾಸ್ಯಗಾರರನ್ನು ಮಾತಿಗೆಳೆದು ಜನರನ್ನು ರಂಜಿಸಿದರು. ಕಲಾಭಿಮಾನಿಗಳು ಇದನ್ನು ಬಲು ಉತ್ತಮ ರೀತಿಯಿಂದ ಸ್ವೀಕರಿಸ ಲಾರಂಭಿಸಿದರು. ಹರಕೆಯ ಆಟವನ್ನು ಆಡಿಸುವವರೆಲ್ಲರಿಗೂ ಐದನೇ ಮೇಳವೇ ಬೇಕೆಂದು ಪಟ್ಟು ಹಿಡಿಯುವುದರ ಮಟ್ಟಿಗೆ ಜನಪ್ರಿಯತೆ ಬೆಳೆಯಿತು. ಮೇಳದ ಜನಪ್ರಿಯತೆಯೊಂದಿಗೆ ಈ ತಂಡದಲ್ಲಿದ್ದ ಕಲಾವಿದರೂ ಪ್ರಸಿದ್ಧಿಗೆ ಬಂದು ವಿವಿಧ ಕಡೆಯ ಕಾರ್ಯಕ್ರಮಗಳಲ್ಲಿ, ಆಟ- ಕೂಟಗಳಲ್ಲಿ ಮಿಂಚಲಾರಂಭಿಸಿದರು. ಸುಮಾರು ಐದು ವರ್ಷಗಳ ಕಾಲ ಕಟೀಲಿನ 5ನೇ ಮೇಳದಲ್ಲಿ ಪಟ್ಲರವರ ಭಾಗವತಿಕೆ, ಗುರುಪ್ರಸಾದ್ ಬೊಳಿಂಜಡ್ಕರವರ ಮದ್ದಳೆ ಹಾಗೂ ಪ್ರಶಾಂತ್ ಶೆಟ್ಟಿ ವಗೆನಾಡು ರವರ ಚೆಂಡೆ ಬಹಳ ಪ್ರಸಿದ್ಧಿಯಲ್ಲಿತ್ತು. ನಂತರ ನಡೆದದ್ದೆಲ್ಲವೂ ಇತಿಹಾಸ. ಕಳೆದ ಮೂರು ವರ್ಷಗಳಿಂದ ಇವರು ಬಪ್ಪನಾಡು ಮೇಳದಲ್ಲಿ ಪ್ರಧಾನ ಚಂಡೆ ವಾದಕರಾಗಿ ದುಡಿಯುತ್ತಿದ್ದಾರೆ.
ಚೆಂಡೆಮದ್ದಳೆಗಳಲ್ಲಿ,ಪ್ರಶಾಂತ್ ಶೆಟ್ಟಿಯವರ ಪ್ರಾವೀಣ್ಯತೆಯ ಬಗ್ಗೆ, ತೆಂಕುತಿಟ್ಟಿನ ಪ್ರಸಿದ್ಧ ಚೆಂಡೆ-ಮದ್ದಳೆ ವಾದಕರೂ ಯಕ್ಷಗಾನ ವಿಮರ್ಶಕರೂ ಆದ ಶ್ರೀ ಕೃಷ್ಣಪ್ರಸಾದ ಉಳಿತ್ತಾಯರು ಈ ರೀತಿ ವರ್ಣಿಸುತ್ತಾರೆ.” ಇವರು ತೆಂಕುತಿಟ್ಟಿನ ಖ್ಯಾತ ಚಂಡೆ ಮದ್ದಳೆ ವಾದಕರುಗಳಲ್ಲಿ ಒಬ್ಬರು. ತನ್ನ ಅಪೂರ್ವ ಕೈಚಳಕದಿಂದ ಚೆಂಡೆ-ಮದ್ದಳೆಗಳೆರಡನ್ನೂ ನುಡಿಸಬಲ್ಲರು. ಅವೆರಡರಲ್ಲೂ ಸಮಾನ ಪ್ರಾವೀಣ್ಯತೆ ಹಾಗೂ ಪರಿಪಕ್ವತೆಯಿದೆ.ಪ್ರಾಮಾಣಿಕ ಸ್ನೇಹಜೀವಿಯಾಗಿ ಸಹೃದಯಿಯಾದ ಇವರು ಖ್ಯಾತ ಯಕ್ಷಗುರುಗಳಾದ ಮಾಂಬಾಡಿ ಶ್ರೀ ಸುಬ್ರಹ್ಮಣ್ಯ ಭಟ್ಟರಿಂದ ಹಾಗೂ ಪ್ರಸಿದ್ಧ ಪ್ರಸಂಗಕರ್ತ ಹಾಗೂ ಶ್ರೇಷ್ಠ ಭಾಗವತರಾದ ಬೊಟ್ಟಿಕೆರೆ ಶ್ರೀ ಪುರುಷೋತ್ತಮ ಪೂಂಜರಿಂದ ರಂಗ ನಡೆಗಳ ಜ್ಞಾನ ಪಡೆದು ಅನಾವರಣಗೊಂಡ ಪ್ರತಿಭೆ. ರಂಗಸ್ಥಳದಲ್ಲಿ ಎದ್ದುಕಾಣುವ ಗಣ ಗಾಂಭೀರ್ಯ ವ್ಯಕ್ತಿತ್ವ. ಇವರ ಚೆಂಡೆ ಮದ್ದಳೆ ನುಡಿಸಾಣಿಕೆಯೂ ಸರಳವಾಗಿ ನೇರ. ವಿಷಮದ ನುಡಿಸಾಣಿಕೆಗೆ ಅಷ್ಟೊಂದು ಮನಸ್ಸಿಲ್ಲ. ಮದ್ದಳೆಯಲ್ಲಿ ಸರಳ ಬೇಸಿಕ್ಸ್ ಮೇಲೆ ಹುಟ್ಟಿ ಬೆಳೆಯುವ ನುಡಿತಗಳು. ನುಡಿಸುವಾಗ ತಾಳಧರ್ಮೀಯತಗೆ ಒಲವು ಹೆಚ್ಚು. ತಾಳಕ್ಕೇ ನೆಚ್ಚಿ ಸಾಗುವ ವಾದನ. ಚಂಡೆಯಲ್ಲಿ ತುಂಬಾ ಭಾರವಾದ ಬಡಿತಗಳ ನುಡಿಗಳು ಇವರದ್ದಲ್ಲ. ಮದ್ಯಮ ಸ್ತರದ ನುಡಿತಗಳು. ಚೆಂಡೆಯ ಅಂಚು ಮತ್ತು ಮಧ್ಯದ ನಡುವಿಗೆ ಹೆಚ್ಚಾಗಿ ನುಡಿಸುತ್ತಾರೆ. ಚೆಂಡೆ ನುಡಿಸುವಾಗ ತುಂಬಾ ಅಬ್ಬರದ ನುಡಿತವೇನೂ ನುಡಿಸರು. ಆದರೆ ರಂಗ ತುಂಬಿಸುವ ಚಳಕದ ಅರಿವಿದೆ. ವೇಗದ ಲಯಕ್ಕೆ ಒಲಿದಿರುವ ಚೆಂಡೆ ಇವರದ್ದು. ಅನಾಯಾಸವಾದ ಅವರದೇ ಶೈಲಿಯ ಉರುಳಿಕೆಯೂ ಕಾಣಸಿಗುತ್ತದೆ. ಕಟೀಲು ಶ್ರೀ ದುರ್ಗಾಪರಮೇಶ್ವರಿ ದಶಾವತಾರ ಯಕ್ಷಗಾನ ಮಂಡಳಿಯ 5ನೇ ಮೇಳದಲ್ಲಿ ಇದ್ದಾಗ ಪ್ರಸಿದ್ಧ ಭಾಗವತರಾದ ಪಟ್ಲ ಶ್ರೀ ಸತೀಶ ಶೆಟ್ಟರ ಅಪ್ರತಿಮ ಧ್ರುತಗತಿಯ ಪದ್ಯಗಳಿಗೆ ನಿರಾಯಾಸವಾದ ಇವರ ಚೆಂಡೆವಾದನ ಪ್ರೇಕ್ಷಕರನ್ನು ಮುದಗೊಳಿಸಿಸುತ್ತಿತ್ತು. ಅಂದಿನ ದಿನಗಳಲ್ಲಿನ ಪಟ್ಲರ ಭಾಗವತಿಗೆ ಹಾಗೂ ಪ್ರಶಾಂತರನ್ನೊಳ ಗೊಂಡ ಲಯಬದ್ಧವಾದ ಹಿಮ್ಮೇಳ ಪ್ರೇಕ್ಷಕರ ಸ್ಮೃತಿಪಟಲ ಗಳಲ್ಲಿ ಇಂದೂ ಅವಿಸ್ಮರಣೀಯ.ಕಲಿಯುವ ಹುಮ್ಮಸ್ಸು ಇನ್ನೂ ಇರುವ ಇವರು, ಈಗಲೂ ಕಲಿಯುತ್ತಿದ್ದಾರೆ, ಬೆಳೆಯುತ್ತಿದ್ದಾರೆ ಹಾಗೂ ರಂಗದಲ್ಲಿ ಇನ್ನಷ್ಟು ಬೆಳೆಯಬಲ್ಲರು”.
ಕಾಯಕವೇ ಕೈಲಾಸ ಎಂಬಂತೆ ಯಾವುದೇ ಸದ್ದು ಗದ್ದಲವಿಲ್ಲದೇ ತನ್ನ ಕರ್ತವ್ಯವನ್ನು ಪ್ರಾಮಾಣಿಕವಾಗಿ ನಿರ್ವಹಿಸಿ,ಕೆಲಸ ಮುಗಿದೊಡನೆ ಅಲ್ಲಿಂದ ನಿರ್ಗಮಿಸುವ ಜಾಯಮಾನ ಇವರದ್ದು.ಮಿತಭಾಷಿಯಾದ ಪ್ರಶಾಂತ್, ಸನ್ಮಾನ, ಪ್ರಶಸ್ತಿಗಳಿಂದ ಯಾವಾಗಲೂ ದೂರವೇ ಇರುವವರು. ಆದರೂ ಕೂಡ ಇವರ ಪ್ರತಿಭೆಯನ್ನು ಗುರುತಿಸಿ, ದೇಶ-ವಿದೇಶಗಳ ಹಲವಾರು ಸಂಘ-ಸಂಸ್ಥೆಗಳು, ಅಭಿಮಾನಿಗಳು ಸನ್ಮಾನಿಸಿದ್ದಾರೆ, ಪ್ರಶಸ್ತಿ ನೀಡಿ ಗೌರವಿಸಿದ್ದಾರೆ. ಅವುಗಳಲ್ಲಿ 2016 ರಲ್ಲಿ ಕೊಲ್ಲಿ ರಾಷ್ಟ್ರ ಒಮಾನ್ ನಲ್ಲಿ ಒಮಾನ್ ತುಳುವೆರ್ ಸಂಸ್ಥೆಯ ಸಾರ್ವಜನಿಕ ಸನ್ಮಾನ.2017 ರಲ್ಲಿ ಒಡಿಯೂರು ಸಂಸ್ಥಾನದಲ್ಲಿ ನೀಡಿದ ಯಕ್ಷ ಧ್ರುವ ಪಟ್ಲ ಫೌಂಡೇಶನ್ ನ ಯಕ್ಷ ಧ್ರುವ ಪ್ರಶಸ್ತಿ, 2018 ರಲ್ಲಿ ಅಜೆಕಾರು ಕಲಾಭಿಮಾನಿ ಬಳಗ ಮುಂಬಯಿಯಲ್ಲಿ ನೀಡಿದ ಯಕ್ಷ ರಕ್ಷಾ ಪ್ರಶಸ್ತಿ.2020 ರಲ್ಲಿ ಶ್ರೀ ದುರ್ಗಾ ಸೇವಾ ಸಮಿತಿ ಕನ್ಯಾನ ಇವರಿಂದ ಪಡೆದ ಸಾರ್ವಜನಿಕ ಸನ್ಮಾನ ಮುಂತಾದವುಗಳು ಪ್ರಮುಖವಾದವುಗಳು.ತಾನು ಕಲಿತ ವಿದ್ಯೆ ನಿಂತ ನೀರಾಗದೇ ಸದಾ ಹರಿಯುತ್ತಿರುವ ನದಿಯಾಗಿ ಇತರರಿಗೂ ಪ್ರಯೋಜನವಾಗಬೇಕು ಎಂಬ ಉದ್ದೇಶದಿಂದ ಇತ್ತೀಚೆಗೆ ವಗೆನಾಡಿನ ತನ್ನ ಮನೆಯಲ್ಲಿಯೇ ಆಸಕ್ತ ಮಕ್ಕಳಿಗೆ ಚೆಂಡೆ ಮದ್ದಳೆ ತರಬೇತಿಯನ್ನು ನೀಡುತ್ತಿದ್ದಾರೆ. ಸಾಂಸಾರಿಕ ಜೀವನದಲ್ಲಿ ಶ್ವೇತಾ ರವರ ಕೈಹಿಡಿದು ಸಪ್ತ ಹಾಗೂ ಸಾಕ್ಷ ಎಂಬ ಈರ್ವರು ಮಕ್ಕಳು ಹಾಗೂ ತನ್ನ ಮಾತೃಶ್ರೀಯವರೊಂದಿಗೆ ಸಂತೃಪ್ತ ಜೀವನವನ್ನು ನಡೆಸುತ್ತಿದ್ದಾರೆ.ತನ್ನ ಕಲಾಜೀವನದ ಯಶಸ್ಸಿಗೆ ತಾನು ನಂಬಿದ ವಗೆನಾಡು ಕ್ಷೇತ್ರದ ಶ್ರೀ ಸುಬ್ರಹ್ಮಣ್ಯ ದೇವರ ಅನುಗ್ರಹ,ಮಾತಾಪಿತರ ಆಶೀರ್ವಾದ,ಮಡದಿ ಮಕ್ಕಳ ಸಹಕಾರ ಹಾಗೂ ಎಲ್ಲಕ್ಕಿಂತಲೂ ಮಿಗಿಲಾಗಿ ಕಲಾಭಿಮಾನಿಗಳ ಪ್ರೋತ್ಸಾಹ ಎಂದು ನಂಬಿದವರು ಪ್ರಶಾಂತ್.ಇವರ ಹೆಸರು ಯಕ್ಷಗಾನ ರಂಗದಲ್ಲಿ ಇನ್ನಷ್ಟು ಮಿಂಚಿ ಇನ್ನೂ ಹೆಚ್ಚಿನ ಪ್ರಶಸ್ತಿ, ಸನ್ಮಾನ ಬಿರುದಾವಳಿಗಳು ಇವರಿಗೆ ಲಭ್ಯ ವಾಗಲಿ ಹಾಗೂ ನಿರಂತರವಾಗಿ ಇವರು ಯಕ್ಷಮಾತೆಯ ಸೇವೆಯನ್ನು ಮಾಡುತ್ತಿರಲಿ ಎಂದು ಶುಭಹಾರೈಕೆಗಳು.