ಮೊದಲಿಗೆ ಹೇಳುತ್ತೇನೆ ನಾನು ಚಿತ್ರ ವಿಮರ್ಶಕನಲ್ಲ ಆದರೆ ಕಾಂತಾರ ಚಲನಚಿತ್ರದ ಸಫಲತೆ ಎಂದರೆ ಬೌದ್ಧಿಕ ಮಟ್ಟದ ಅಧಃಪತನದ ಕಾರಣದಿಂದ ತಮ್ಮ ಮೂಲ ಮರೆತ ಯುವ ತುಳುವ ಜನಾಂಗಕ್ಕೆ ಕಾಂತಾರ ಚಲನಚಿತ್ರ ಅವರ ಮೂಲವನ್ನು ನೆನಪಿಸಿತು.
ಕುಟುಂಬದ ಮೂಲಮನೆಯ ಕಡೆಗೆ ತಲೆಹಾಕಿ ಮಲಗದ ಎಷ್ಟೋ ತುಳುವ ಯುವಜನರನ್ನು ನನ್ನ ವೃತ್ತಿ ಜೀವನದಲ್ಲಿ ಕಂಡಿದ್ದೇನೆ.ಆದೂ ಅಲ್ಲದೆ ತನ್ನ ಮೂಲದ ಶಕ್ತಿಯ ಮೇಲಿನ ನಂಬಿಕೆಯನ್ನು ಬಿಟ್ಟು ಇನ್ಯಾವುದೋ ಶಕ್ತಿಯ ಮೇಲಿನ ಭಕ್ತಿಯ ಪರಾಕಾಷ್ಠೆಗೆ ಹೋದವರನ್ನು ಕಂಡಿದ್ದೇನೆ. ಈ ಎಲ್ಲಾ ಏರಿಳಿತಗಳ ನಡುವೆ ಕಾಂತಾರ ಸಿನಿಮಾ ಕತ್ತಲೆಯ ಕಾಡಿನಲ್ಲಿ ದಾರಿ ತಪ್ಪಿದ ತುಳುವರಿಗೆ ಸತ್ಯ ಜೀಟಿಗೆಯಾಗಿ ಮರೆತು ಹೋದ ಮೂಲದ ಮನೆಯ ದಾರಿ ತೋರಿಸಿದ್ದಂತು ಸತ್ಯ.
ತುಳುವರ ಕುಟುಂಬದ ತರವಾಡು ಮನೆಯು ಐದು ಸಮೂಹ ಶಕ್ತಿಗಳ ಆರಾಧನಾ ಕೇಂದ್ರ. ಆ ಶಕ್ತಿಗಳೇ ಕುಟುಂಬದ ಸದಸ್ಯರ ಆಗುಹೋಗುಗಳ ಕಾರಣೀಕರ್ತರು ಎಂದು ತೌಳವ ಸಂಪ್ರದಾಯದ ಅನನ್ಯ ನಂಬಿಕೆ. ಆ ಐದು ಶಕ್ತಿಗಳೇ ನಾಗ, ಮುಡಿಪು, ಪಂಜುರ್ಲಿ, ಗತಿಸಿ ಹೋದ ಗುರು ಹಿರಿಯರು ( ೧೬ ಇರೆ), ಹಾಗೂ ರಾಹು…ಈ ಐದು ಶಕ್ತಿಗಳಿಗೆ ಕಾಲ ಕಾಲಕ್ಕೆ ೧೨ ಸಂಕ್ರಾಂತಿ ವಾರ್ಷಿಕ ಪಂಚಪರ್ವಗಳ ಆರಾಧನೆ ಕ್ರಮಬದ್ಧವಾಗಿ ಸೌಹಾರ್ದತೆಯಿಂದ ಎಲ್ಲಿ ನಡೆಯುತ್ತಾ ಇದೆಯೋ ಆ ಕುಟುಂಬದಲ್ಲಿ ಯಾವುದೇ ದೈವ ಪ್ರಕೋಪಗಳು,ಸಂತಾನ ಕ್ಷಯ ಸೂಚನೆಗಳು, ವರ್ಣ ಸಂಕರಣ ಸಮಸ್ಯೆಗಳು, ಮಾನಸಿಕ ದೈಹಿಕ ಸಮಸ್ಯೆಗಳು ಕಡಿಮೆ ಎಂದೇ ಹೇಳಬಹುದು.
ಆದರೆ ಪ್ರಸಕ್ತ ಸಾಮಾಜಿಕ ಜಾಲತಾಣದ ಪ್ರಭಾವದಿಂದ ಮೂಲದ ಶಕ್ತಿಗಳನ್ನು ಮರೆತು ಕಾಲಪ್ರಭಾವದ ಆಕರ್ಷಣೀಯ ಹಾಗೂ ಸಮೂಹ ಸನ್ನಿಗೆ ಒಳಗಾದವರಂತೆ ಬೇರೆ ಎಲ್ಲೋ ಯಾವುದೋ ತಮಗೆ ಸಂಬಂಧಿಸದ ದೈವಗಳ ಸ್ವರೂಪಕ್ಕೆ ತುಳುವ ಯುವ ಜನತೆ ತಮ್ಮ ಭಕ್ತಿಯನ್ನು ತೋರ್ಪಡಿಸುವುದನ್ನು ಕಂಡಾಗ ಬೇಸರ ಹಾಗೂ ದುಃಖವಾಗುತ್ತಿತ್ತು. ಹಾಗೂ ಅದರ ನಡುವೆ ಅದನ್ನು ಬಂಡವಾಳ ಮಾಡಿಕೊಂಡು ತಮ್ಮ ವ್ಯಾಪಾರವಾಗಿ ದೈವಾರಾಧನೆಯನ್ನು ಬಳಸಿಕೊಂಡ ಒಂದು ವರ್ಗ.ಈ ಎಲ್ಲದರ ನಡುವೆ ತೌಳವ ಸಂಪ್ರದಾಯ ತನ್ನ ಮೂಲ ಮರೆತು ಸಾಂಸ್ಕೃತಿಕ ಧಾರ್ಮಿಕ ಅಧಃಪತನದತ್ತ ಹೊರಟಿರುವ ಈ ಮಧ್ಯಂತರ ಕಾಲಘಟ್ಟದಲ್ಲಿ ಕಾತುರದ ಕಾಂತಾರ ಎಂಬ ಹೊಸ ಹಣತೆಯ ಬೆಳಕೊಂದು ಆಶಾಜ್ಯೋತಿಯಾಗಿ ಬೆಳಗಿದೆ.
ನಾನು ನೋಡಿದ ನನ್ನ ಧಾರ್ಮಿಕ ಜೀವನದ ಒಂದು ಅನುಭವವನ್ನು ಇಲ್ಲಿ ಹಂಚಿಕೊಳ್ಳುತ್ತೇನೆ. ಸುಮಾರು ಐದು ವರ್ಷಗಳ ಹಿಂದೆ ಕುಟುಂಬದ ಪಂಜುರ್ಲಿ ದೈವ ದರ್ಶನದ ಸಮಯದಲ್ಲಿ ಒಬ್ಬ ಕುಟುಂಬದ ಹುಡುಗನಿಗೆ ಕುಟುಂಬದ ದೈವದ ಸೇವೆ ಮಾಡಲು ದೈವದ ಅಪ್ಪಣೆ ಆದಾಗ ಆತ ಒಂದು ಮಾತು ಹೇಳುತ್ತಾನೆ.ಅದನ್ನು ತುಳುವಿನಲ್ಲಿ ಹೇಳಿದರೆ ಉತ್ತಮ (ಎಂಕ್ ಕುಟುಂಬದ ಭೂತದ ಚಾಕಿರಿ ಮಲ್ಪೆರೆ ಆಪುಜಿ ಯಾನ್ ಇಲ್ಲಡ್ ಒಂಜಿ ದೈವ ನಂಬೊಂದು ಉಲ್ಲೆ ಯಾನ್ ಅಯಿರ್ದೆ ಜೀವನಡ್ ಎಡ್ಡೆ ಆತಿನಿ ಪಂದ್) ಇಲ್ಲಿ ಇರುವುದು ದೈವಗಳ ಶಕ್ತಿ ಪ್ರಾಬಲ್ಯದ ತೂಕವಲ್ಲ ಅಥವಾ ಬಲಾಬಲದ ಪ್ರಶ್ನೆಯಲ್ಲ.. ತುಳುವರ ಮಾತೃ ಪ್ರಧಾನ ವ್ಯವಸ್ಥೆಯ ಕುಟುಂಬ ವ್ಯವಸ್ಥೆಯ ಭವಿಷ್ಯದ ಪ್ರಶ್ನೆ… ( ಹಾಗಾಗಿ ನಾನು ಆತ ಹೇಳಿದ ಇನ್ನೊಂದು ಶಕ್ತಿಯ ಹೆಸರು ನಮೂದಿಸಿಲ್ಲ).
ಆತ ಹೇಳಿದ ಎಲ್ಲಾ ಮಾತುಗಳನ್ನು ಕುಟುಂಬದ ಪಂಜುರ್ಲಿ ದೈವ ಶಾಂತಚಿತ್ತದಿಂದ ಕೇಳಿ ಕೊನೆಗೆ ಒಂದು ಕಟ್ಟುಗ್ರದ ನುಡಿ ನೀಡಿತು ( ಆವುಯಾ ನಿಕ್ಕ್ ಅವ್ವೇ ಮಲ್ಲ ಆಂಡ ಅವೆನೆ ನಂಬು ನನ ದುಂಬುಗು ನಿಕ್ಕ್ ಎನ್ನ ಒಂಜಿರೆ ಗಂಧ ಇಜ್ಜಿ… ನೆಂಪು ದೀಲ ಎಲ್ಲಂಜಿ ಕಡೆಗ್ ೧೬ ಸೇರ್ದ್ ಆಯಿ ಬೊಕ್ಕ ಯಾನ್ ಜುಂಬು ದಕ್ಕಿನ ಕೊಜಂಟಿನೆ ಈ ತಿನೊಡು ಈ ನಂಬಿನ ಶಕ್ತಿದ ಅಗೆಲ್ ಅತ್ತ್ ನೆನಪು ದೀಲ ಎಂದು ನುಡಿಯಿತು) ದೈವ ತನ್ನ ನುಡಿಯನ್ನು ಮುಂದುವರಿಸುತ್ತಾ “೧೨ ವರ್ಷ ಆಯುಷ್ಯ ಕೊರಿಯೆರ್ಲಾ ೧೨ ವರ್ಷ ಆಯುಷ್ಯ ಕರಿಪೆರ್ಲಾ ಬೆರ್ಮೆರೆಡ ವರತ ಸಂಜೀವಿನಿದ ಕಡ್ಡಿ ಜಪತ್ತ ಮಾಲೆ ಪತ್ತೊಂದು ಬೈದಿನಾಯೆ ಯಾನ್ ಆಯುಷ್ಯಗ್ ಪಟ್ಟ ಕಟ್ಟಿನಾಯೆ ಯಾನ್ ಕುಟುಂಬಗ್ ಪೆದ್ದ್ಂಡ ಅಪ್ಪೆ ತಾಂಕ್ಂಡ ತಮ್ಮಲೆ ತರೆಕ್ ತಮೆರಿ ಯಾನ್ ತೂಕ ಎನನ್ ದಟ್ಂದ್ ಏತ್ ಪೋಪ ಯಾನ್ಲ ತೂಪೆ ಎಂದು ದೈವ ಉಗ್ರವಾಗಿ ನುಡಿಯಾಡಿತು.
ದೈವ ಪ್ರಕೋಪವೋ,ಅವನ ಆಯುಷ್ಯದ ಅವಧಿ ಅಷ್ಟೇಯೋ ತಿಳಿಯದು ಒಂದು ಆಕಸ್ಮಿಕ ಅಪಘಾತದಲ್ಲಿ ಆ ಹುಡುಗನ ಮೃತ್ಯುವಾಯಿತು… ತುಳುವ ದೈವಾರಾಧನೆಯ ಜಗತ್ತಿನಲ್ಲಿ ಒಂದು ಮಾತಿದೆ “ಇಲ್ಲ್ ಇಲ್ಲ್ ಭೂತ – ಕಂಡ ಕಂಡ ಕಾಟ…ಕೊನೆಗೆ ಆತನ ಆತ್ಮ ಆತನ ಕುಟುಂಬದ ಮನೆ ಸೇರಿ ಸ್ವೀಕರಿಸಿದ್ದು ಪಂಜುರ್ಲಿ ದೈವದ ಕೊಜಂಟಿಯನ್ನು ( ದೈವಕ್ಕೆ ಬಲಿಕೊಟ್ಟ ಕೋಳಿಯ ಪಲ್ಯ)… ಇಲ್ಲಿ ಕಂಡಿದ್ದು ಒಂದೇ ತುಳುವ ಪೂರ್ವಿಕರು ಪಂಜುರ್ಲಿ ದೈವಕ್ಕೆ ಕೊಟ್ಟ ಪ್ರಾಧಾನ್ಯತೆಯನ್ನು ಹಾಗೂ ಕುಟುಂಬಧಿಕಾರ ಯಜಮಾನ ಸ್ಥಾನವನ್ನು… ಪಂಜುರ್ಲಿ ದೈವದ ಆರಾಧನೆಗೆ ಸೋಕಾಲ್ಡ್ ಜಾನಪದ ಸಂಶೋಧಕರು ಹೇಳುವುದು ಕೃಷಿ ನಾಶ ಮಾಡಲು ಬಂದ ಹಂದಿಯನ್ನು ಆರಾಧಿಸಿದಂತೆ ಇವರ ಜ್ಞಾನದ ಮೌಢ್ಯತೆಗೆ ಯಾವ ಜ್ಞಾನಪೀಠ ಪ್ರಶಸ್ತಿ ಕೊಟ್ಟರೂ ಕಡಿಮೆಯೇ…( ಪಂಜುರ್ಲಿ ಆರಾಧನೆಯ ಮೂಲ ಸ್ವರೂಪದ ಬಗ್ಗೆ ಇನ್ನೊಮ್ಮೆ ಬರೆಯುತ್ತೇನೆ)
ಒಟ್ಟಾರೆ ಕಾಂತಾರ ತುಳು ಯುವ ಜನತೆಗೆ ಮೂಲ ನೆನಪಿಸಿತು… ಶಿವ ಚಿತ್ರದಲ್ಲಿ ಜಯಿಸಿದ… ವಾಸ್ತವದಲ್ಲಿ ತೌಳವ ಮೂಲ ಮಣ್ಣಿನ ಗಂಧದ ಪರಿಮಳ ಜಗದಗಲ ಪಸರಿಸಿತು…ಬೆರ್ಮರ ಸಾರಥ್ಯದ ಸಾವಿರಮಾನ್ಯ ದೈವಗಳ ರಥದ ಧ್ವಜದ ಲಾಂಛನ ಪಂಜುರ್ಲಿ ದೈವ ( ವರಾಹ ರೂಪ ) ವರಿಷ್ಠನೆಂದೂ…ಶಿವ (ಬೆರ್ಮ) ಸಂಭೂತನೆಂದೂ ಈ ತೌಳವ ಮಣ್ಣಿನ ಸಂಜಾತನೆಂದು…ಸಾವಿರಮಾನ್ಯ ದೈವಗಳಲ್ಲಿ ಕುಟುಂಬ ವ್ಯವಸ್ಥೆಯ ಯಜಮಾನನೆಂದು ( ಸಾರಮಾನ್ಯ ದೈವೊಲು ಸಾರ ನಾಯೆರ್’ಡ್ ದತ್ತ್ಂಡ ಒಂಜಿ ಪಲಾಯಿಡ್ ಮಾಜಾವುನಾಯೆ ) ಚಿತ್ರದ ಹಾಡಿನ ಮೂಲಕವಾಗಿಯೂ ತುಳುವ ಯುವ ಜನತೆ ಪರೋಕ್ಷವಾಗಿ ಸ್ತುತಿಸಿ ಅದರ ನಿಜಾರ್ಥವನ್ನು ಅರ್ಥೈಸುವಂತಾಯಿತು.
– ಅಭಿಲಾಷ್ ಚೌಟ ಕೊಡಿಪಾಡಿ ಬಾಳಿಕೆ ಸುರತ್ಕಲ್
( ಶ್ರೀಕೊಡಮಣಿತ್ತಾಯ ದೈವದ ಮುಕ್ಕಾಲ್ದಿ )