ಮುಂಬಯಿ, ಆ.27: ಜೀವನದ ಅನುಭವ ಲೇಖನಿ ರೂಪದಲ್ಲಿ ಬರುವುವೇ ಸಾಹಿತ್ಯವಾಗಿದೆ. ಬದುಕಿನ ಜಂಜಾಟವನ್ನ ಅತೀ ಹೆಚ್ಚು ಎದುರಿಸುವ ಹೆಣ್ಣು ತನ್ನನ್ನು ತಾನು ಸ್ವತಂತ್ರಗೊಳಿಸಿ ತನ್ನ ಭಾವನೆಯನ್ನು ಒಂದು ರೂಪದಲ್ಲಿ ಹೊರಗೆ ತರಬೇಕು ಎಂದು ಕಾತರಿಸುತ್ತಿರುವಾಗ ಅವಳಿಗೆ ಸಿಕ್ಕಿದಂತಹ ಬರವಣಿಗೆಯ ಹಾದಿಯೇ ಸಾಹಿತ್ಯ. ಪ್ರಸ್ತುತ ಪ್ರತಿಭಾನ್ವಿತ ಸಾಹಿತಿಗಳು ಮರೆಯಾಗುತ್ತಾರೋ ಅನ್ನುವ ಸಂದೇಹ ನನ್ನನ್ನು ಕಾಡುತ್ತಿದೆ. ಆದರೆ ಅದಾಗದಂತೆ ಸೃಜನದಂತಹ ಸಂಘಟನೆ ಇನ್ನಷ್ಟು ಕೆಲಸ ಮುನ್ನಡೆಸಲಿ ಎಂದು ಕನ್ನಡ ಭವನ ಎಜ್ಯುಕೇಶನ್ ಸೊಸೈಟಿ ಇದರ ಕೆಬಿಇಎಸ್ ವಿದ್ಯಾಲಯದ ಪ್ರಾಂಶುಪಾಲೆ ಅಮೃತಾ ಅಜಯ್ ಶೆಟ್ಟಿ ತಿಳಿಸಿದರು.
ಇಂದಿಲ್ಲಿ ಶನಿವಾರ ಸಂಜೆ ಮಾಟುಂಗಾ ಪೂರ್ವದಲ್ಲಿನ ಮೈಸೂರು ಅಸೋಸಿಯೇಶನ್ ಮುಂಬಯಿ ಕಿರು ಸಭಾಗೃಹದಲ್ಲಿ ಬೃಹನ್ಮುಂಬಯಿಯಲ್ಲಿನ ಕನ್ನಡ ಲೇಖಕಿಯರ ಬಳಗ `ಸೃಜನಾ ಮುಂಬಯಿ’ ಆಯೋಜಿಸಿ ದ್ದ ಕೃತಿ ಬಿಡುಗಡೆ ಕಾರ್ಯಕ್ರಮದಲ್ಲಿ ಮುಖ್ಯ ಅತಿಥಿಯಾಗಿದ್ದು ಅಮೃತಾ ಶೆಟ್ಟಿ ಮಾತನಾಡಿದರು.
ಮುಂಬಯಿ ಕನ್ನಡ ಸಂಘ ಅಧ್ಯಕ್ಷ ಗುರುರಾಜ್ ಎಸ್.ನಾಯಕ್ ಅಧ್ಯಕ್ಷತೆಯಲ್ಲಿ ಜರುಗಿದ ಕಾರ್ಯಕ್ರಮದಲ್ಲಿ ಮುಂಬಯಿಯಲ್ಲಿನ ಪದ್ಮಜಾ ಮಣ್ಣೂರ, ಡಾ| ದಾಕ್ಷಾಯಿಣಿ ಯಡಹಳ್ಳಿ, ಶಾರದಾ ಅಂಬೆಸಂಗೆ ಸಂಪಾದಕತ್ವದ `ಸೃಜನಾ’ ಲೇಖಕಿಯರ ಬರಹಗಳ ಕೈಪಿಡಿಯನ್ನು ಗುರುರಾಜ್ ನಾಯಕ್ ಹಾಗೂ ಸೃಜನಾದ ಕೋಶಾಧಿಕಾರಿ ಡಾ| ದಾಕ್ಷಾಯಿಣಿ ಯಡಹಳ್ಳಿ ಅವರ `ರೆಕ್ಕೆಗಳು’ ಕಥಾ ಸಂಕಲನವನ್ನು ಅಮೃತಾ ಶೆಟ್ಟಿ ಬಿಡುಗಡೆ ಗೊಳಿಸಿದರು. ಪದ್ಮಜಾ ಮಣ್ಣೂರ ಮತ್ತು ಶಶಿಕಲಾ ಹೆಗಡೆ ಕ್ರಮವಾಗಿ ಕೃತಿಗಳನ್ನು ಪರಿಚಯಿಸಿದರು. ಕರ್ನಾಟಕ ರಾಜ್ಯೋತ್ಸವ ಪ್ರಶಸ್ತಿ ಪುರಸ್ಕೃತ ನಾಡಿನ ಹಿರಿಯಸಾಹಿತಿ, ಸೃಜನಾದ ಧೀಶಕ್ತಿ, ಸಂಸ್ಥಾಪಕ ಸಂಚಾಲಕಿ ಡಾ| ಸುನೀತಾ ಎಂ. ಶೆಟ್ಟಿ ಮತ್ತು ಪ್ರಾಂಶುಪಾಲೆ ಆಗಿ ನಿಯುಕ್ತಿಗೊಂಡ ಅಮೃತಾ ಶೆಟ್ಟಿ ಇವರನ್ನು ಸೃಜನಾ ಪರವಾಗಿ ಸನ್ಮಾನಿಸಿ ಅಭಿನಂದಿಸಲಾಯಿತು.
ನಾಳೆ ನಾವು ಇರುವುದಿಲ್ಲವಾದರೂ ಮುಂಬಯಿ ಸಾಗುತ್ತಾ ಇರುತ್ತದೆ. ಆದರೆ ಬೃಹನ್ಮುಂಬಯಿಯಲ್ಲಿ ಕಷ್ಟಪಟ್ಟು ಜೀವನ ಸಾಗಿಸುವ ಮಧ್ಯೆಯೂ ಇಷ್ಟುಮಂದಿ ಲೇಖಕಿಯರು ಇದ್ದರು ಅನ್ನುವ ದಾಖಲಾತಿ ಇತಿಹಾಸದ ಪುಟದಲ್ಲಿ ಸೇರುತ್ತದೆ. ಹವ್ಯಾಸವೆಂದು ಬರವಣಿಗೆಯನ್ನು ಆರಂಭಿಸಿದ್ದು ಇಂದು ಈ ರಾಜ್ಯದಲ್ಲಿ ದಾಖಲಾಗಿ ಉಳಿಯುವಂತಾಗಲಿ ಎಂದು ಸೃಜನ ಶ್ರಮಿಸುತ್ತಿದೆ. ನಾವು ಇತರ ಹೊಗಳುವಿಕೆಗೆ ಪ್ರಶಂಸೆಗೆಂದು ಬರೆಯ ಬೇಕಾಗಿಲ್ಲ ಬದಲಾಗಿ ನಮ್ಮ ಆತ್ಮತೃಪ್ತಿ, ಸಮಾಧಾನಕ್ಕೆ ಬರವಣಿಗೆ ಮುಂದುವರಿಸಿ ಎಂದು ಡಾ| ಸುನೀತಾ ಶೆಟ್ಟಿ ಕಿವಿಮಾತುಗಳನ್ನಾಡಿದರು.
ಮುಂಬಯಿಯಲ್ಲಿನ ಲೇಖಕಿಯರು ಸೃಜನದ ಹುಟ್ಟುಬೆಳವಣಿಗೆಗೆ ಮುಂಬಯಿ ಕನ್ನಡ ಸಂಘ ಕಾರಣ ಅನ್ನುವುದು ನಮ್ಮ ಹೆಮ್ಮೆಯಾಗಿದೆ. 86ರ ಸೇವೆಯಲ್ಲಿನ ಮುಂಬಯಿ ಕನ್ನಡ ಸಂಘ ಸಾಹಿತ್ಯ ಲೋಕಕ್ಕೆ ಅನುಪಮ ಸೇವೆಸಿದೆ. ಲೇಖಕಿಯರಲ್ಲಿ ಒಗ್ಗಟ್ಟು ಇದ್ದರೆ ಮುಂದೆ ನೂರಾರು ಲೇಖಕಿಯರ ಕೈಪಿಡಿ ಪ್ರಕಾಶಿಸಲು ಅಸಾಧ್ಯವಾಗದು. ಇಂತಹ ಪ್ರಯತ್ನ ಶೀಘ್ರಗತಿಯಾಗಿ ಆಗಲಿ ಎಂದು ಗುರುರಾಜ್ ನಾಯಕ್ ತಿಳಿಸಿದರು.
ಸೃಜನಾ ಜೊತೆ ಕಾರ್ಯದರ್ಶಿ ಲತಾ ಎಸ್.ಶೆಟ್ಟಿ ಮುದ್ದುಮನೆ, ಜೊತೆ ಕೋಶಾಧಿಕಾರಿ ಅನಿತಾ ಪಿ. ಪೂಜಾರಿ ತಾಕೋಡೆ ವೇದಿಕೆಯಲ್ಲಿ ಆಸೀನರಾಗಿದ್ದು ಸುಶೀಲಾ ಎಸ್.ದೇವಾಡಿಗ ಪ್ರಾರ್ಥನೆಯನ್ನಾಡಿದರು. ಸಂಚಾಲಕಿ ಶಾರದಾ ಅಂಬೆಸಂಗೆ ಪ್ರಸ್ತಾವನೆಗೈದರು. ಸಹ ಸಂಚಾಲಕಿ ಡಾ| ಜಿ.ಪಿ ಕುಸುಮಾ ಸ್ವಾಗತಿಸಿ ಕಾರ್ಯಕ್ರಮ ನಿರೂಪಿಸಿ ವಂದಿಸಿದರು.