ಮೂಡುಬಿದಿರೆ: ‘ಸ್ವಯಂ (ವೈಯಕ್ತಿಕ) ಕುರಿತು ಫಲಾಪೇಕ್ಷೆ ಇಲ್ಲದೇ ಸೇವೆ ಮಾಡುವವನೇ ಸ್ವಯಂ ಸೇವಕ’ ಎಂದು ಜವನೆರ್ ಬೆದ್ರ ಪ್ರತಿಷ್ಠಾನದ ಅಧ್ಯಕ್ಷ ಅಮರ್ ಕೋಟೆ ಹೇಳಿದರು. ಆಳ್ವಾಸ್ ಕಾಲೇಜು ಸ್ನಾತಕೋತ್ತರ ಸಮೂಹ ಸಂವಹನ ಮತ್ತು ಪತ್ರಿಕೋದ್ಯಮ ವಿಭಾಗದಲ್ಲಿ ಬುಧವಾರ ‘ಅಭಿವ್ಯಕ್ತಿ ವೇದಿಕೆ’ಯ 2024ನೇ ಸಾಲಿನ ಚಟುವಟಿಕೆಗಳಿಗೆ ಚಾಲನೆ ನೀಡಿ ಅವರು ಮಾತನಾಡಿದರು.
ನಮ್ಮ ಶರೀರ ಇರುವುದೇ ಪರೋಪಕಾರ ಮಾಡಲು. ದೇಹವು ಸಮಾಜ ಸೇವೆ ಮಾಡಿದಾಗ, ಮನಸ್ಸಿಗೆ ನೆಮ್ಮದಿ ಸಿಗುತ್ತದೆ. ಸಮಾಜ ಸೇವೆಯಲ್ಲಿ ದೊಡ್ಡದು, ಸಣ್ಣದು ಎಂಬುದಿಲ್ಲ. ಅಸಹಾಯಕರೊಬ್ಬರಿಗೆ ರಸ್ತೆ ದಾಟಲು ಕೈ ಹಿಡಿದು ನೆರವು ನೀಡುವುದು, ಬಸ್ನಲ್ಲಿ ಹಿರಿಯರಿಗೆ ಕುಳಿತುಕೊಳ್ಳಲು ಅನುವು ಮಾಡುವುದೂ ಮಾದರಿ ಸಮಾಜಸೇವೆ ಎಂದು ವಿವರಿಸಿದರು.
ಭಗವತ್ಗೀತೆಯಲ್ಲಿ ಶ್ರೀ ಕೃಷ್ಣ ಹೇಳಿದಂತೆ, ಲಾಭದ ನಿರೀಕ್ಷೆ ಇಲ್ಲದೇ ನಾವು ನಮ್ಮ ಕರ್ಮಗಳನ್ನು ಮಾಡಬೇಕು. ಮುಂದೊಂದು ದಿನ ಪ್ರತಿಫಲ ನಮ್ಮನ್ನು ಹುಡುಕಿಕೊಂಡು ಬರುತ್ತದೆ ಎಂದರು. ಸೇವೆ ಮಾಡಲು ಸಮೂಹವೇ ಬೇಕಾಗಿಲ್ಲ. ನಮ್ಮ ಸಾಮಥ್ರ್ಯ, ಇತಿಮಿತಿಯಲ್ಲಿ ಸಾಧ್ಯವಾದಷ್ಟು ಸೇವೆ ಮಾಡಬೇಕು. ಬದ್ಧತೆಯಿಂದ ಸೇವೆ ಮಾಡಿದರೆ, ಸಮೂಹವನ್ನೇ ಸೆಳೆಯುತ್ತದೆ ಎಂದರು. ಪತ್ರಿಕೋದ್ಯಮ ವಿಭಾಗದ ವೇದಿಕೆಗೆ ‘ಅಭಿವ್ಯಕ್ತಿ’ ಹೆಸರನ್ನು ಇಟ್ಟುರುವುದು ಸೂಕ್ತವಾಗಿದೆ. ನಾವು ನಮ್ಮೊಂದಿಗೆ ಇರುವವರ, ವಿದ್ಯಾರ್ಥಿಗಳ ಸೃಜನಶೀಲ ಅಭಿವ್ಯಕ್ತಿಗೆ ಅವಕಾಶ ನೀಡಬೇಕು. ಆಗ ಮಾತ್ರ ಸಮಾಜದ ಅಭಿವೃದ್ಧಿ ಸಾಧ್ಯ ಎಂದರು.
ಶಾಲಾ-ಕಾಲೇಜುಗಳ ವೇದಿಕೆಯಲ್ಲಿ ಸಕ್ರಿಯವಾಗಿ ಪಾಲ್ಗೊಳ್ಳುವ ವಿದ್ಯಾರ್ಥಿಗಳೇ ಭವಿಷ್ಯದಲ್ಲಿ ಸಮಾಜದ ಯಶಸ್ವಿ ವ್ಯಕ್ತಿಗಳಾಗಿರುತ್ತಾರೆ ಎಂದ ಅವರು, ‘ಆಳ್ವಾಸ್ ಶಿಕ್ಷಣ ಪ್ರತಿಷ್ಠಾನದ ಅಧ್ಯಕ್ಷ ಡಾ.ಎಂ. ಮೋಹನ ಆಳ್ವ ಅವರು ನಮಗೆಲ್ಲ ಮಾದರಿ. ಅವರ ಸಾಮಾಜಿಕ ಬದ್ಧತೆಯ ಕಾರ್ಯವೇ ಯಶಸ್ಸಿಗೆ ಕಾರಣ’ ಎಂದು ಶ್ಲಾಘಿಸಿದರು.
ಜನಪರ ಹೋರಾಟಕ್ಕೆ ಪತ್ರಿಕೋದ್ಯಮಕ್ಕಿಂತ ದೊಡ್ಡ ಅವಕಾಶ ಬೇರೆ ಇಲ್ಲ. ಆದರೆ, ಪತ್ರಿಕಾ ರಂಗವು ಈಗ ಪತ್ರಿಕೋದ್ಯಮ ಆಗಿದೆ. ಇಲ್ಲಿ ಸಾಮಾಜಿಕ ಹಾಗೂ ನೈತಿಕ ಜವಾಬ್ದಾರಿಯಿಂದ ಕಾರ್ಯ ನಿರ್ವಹಿಸಬೇಕು. ಲೇಖನಿ
ಸಮಾಜೋದ್ಧಾರದ ಅಸ್ತ್ರವಾಗಬೇಕು ಎಂದರು. ವಿಭಾಗದ ಸಂಯೋಜಕ ಪ್ರಸಾದ್ ಶೆಟ್ಟಿ ಮಾತನಾಡಿ, ‘ವಿದ್ಯಾರ್ಥಿಗಳು ವೇದಿಕೆಗಳ ಕಾರ್ಯಕ್ರಮಗಳಲ್ಲಿ ಸಕ್ರಿಯರಾಗುವ ಮೂಲಕ ವ್ಯಕ್ತಿತ್ವ ರೂಪಿಸಿಕೊಳ್ಳಬೇಕು’ ಎಂದರು.
ಅಭಿವ್ಯಕ್ತಿ ವೇದಿಕೆ ವಿದ್ಯಾರ್ಥಿ ಸಂಯೋಜಕ ವೈಶಾಖ್ ಹಾಗೂ ಸಹ ಸಂಯೋಜಕಿ ವೀಕ್ಷಿತಾ ಇದ್ದರು. ವಿದ್ಯಾರ್ಥಿ ಅವಿನಾಶ್ ಕಟೀಲ್ ಕಾರ್ಯಕ್ರಮ ನಿರೂಪಿಸಿದರು. ವೇದಿಕೆ ಪದಾಧಿಕಾರಿಗಳಾದ ಪ್ರಖ್ಯಾತ್, ಅಶ್ವಿನಿ, ಪ್ರಿಯದರ್ಶಿನಿ, ರುಧೀರ್, ಚರಿಷ್ಮಾ ಅವರಿಗೆ ಕರ್ತವ್ಯ ಹಸ್ತಾಂತರಿಸಲಾಯಿತು.