ಪುಣೆ : ಬಂಟರ ಸಂಘ ಪಿಂಪ್ರಿ ಚಿಂಚ್ವಾಡ್ ಮಹಿಳಾ ವಿಭಾಗದ ವತಿಯಿಂದ ನಿಗ್ಡಿಯಲ್ಲಿರುವ ಹೋಟೆಲ್ ಪುಣೆ ಗೇಟ್ ಸಭಾಂಗಣದಲ್ಲಿ “ಆಟಿಡೊಂಜಿ ತಮ್ಮನ” ಎನ್ನುವ ವಿಶಿಷ್ಟ ತುಳುನಾಡ ಸಂಪ್ರದಾಯವನ್ನು ಸಾರುವ ಕಾರ್ಯಕ್ರಮ ಸಂಭ್ರಮದಿಂದ ನಡೆಯಿತು. ಸಂಘದ ಅಧ್ಯಕ್ಷ ವಿಜಯ್ ಶೆಟ್ಟಿ ಕಟ್ಟಣಿಗೆ ಮನೆ ಇವರ ಅಧ್ಯಕ್ಷತೆಯಲ್ಲಿ ಮಹಿಳಾ ವಿಭಾಗದ ಕಾರ್ಯಾಧ್ಯಕ್ಷೆ ಸುಪ್ರಿಯಾ ಜೆ ಶೆಟ್ಟಿ ಇವರ ನೇತೃತ್ವದಲ್ಲಿ ನಡೆದ ಕಾರ್ಯಕ್ರಮದಲ್ಲಿ ಮುಖ್ಯ ಅತಿಥಿಗಳಾಗಿ ರಾಯಲ್ ಕೊನೊಟ್ ಬೋಟ್ ಕ್ಲಬ್ ಅಧ್ಯಕ್ಷರಾದ ಮೊಳಹಳ್ಳಿ ಬಾಲಕೃಷ್ಣ ಶೆಟ್ಟಿ ,ಪುಣೆ ಬಂಟರ ಸಂಘದ ಅಧ್ಯಕ್ಷರಾದ ಸಂತೋಷ್ ಶೆಟ್ಟಿ ಇನ್ನ ಕುರ್ಕಿಲ್ ಬೆಟ್ಟು, ಮಹಿಳಾ ವಿಭಾಗದ ಕಾರ್ಯಾಧ್ಯಕ್ಷೆ ಸುಲತಾ ಎಸ್ ಶೆಟ್ಟಿ ಹಾಗೂ ಸಂಘದ ಪದಾಧಿಕಾರಿಗಳು ಉಪಸ್ಥಿತರಿದ್ದು ದೀಪ ಪ್ರಜ್ವಲಿಸಿ ಕಾರ್ಯಕ್ರಮಕ್ಕೆ ಚಾಲನೆ ನೀಡಿದರು. ಈ ಸಂದರ್ಭ ಮೊಳಹಳ್ಳಿ ಬಾಲಕೃಷ್ಣ ಹೆಗ್ಡೆಯವರು ಮಾತನಾಡಿ ಹಿಂದಿನ ಕಾಲದಲ್ಲಿ ಆಟಿ ತಿಂಗಳೆಂದರೆ ಬಹಳ ಕಷ್ಟದ ದಿನಗಳಾಗಿತ್ತು. ಆಟಿ ತಿಂಗಳಲ್ಲಿ ವಿಶೇಷವಾಗಿ ಆರೋಗ್ಯಕ್ಕೆ ಪೂರಕವಾದ ಪ್ರಕೃತಿದತ್ತವಾದ ಆಹಾರ ಪದಾರ್ಥಗಳನ್ನು ಸೇವಿಸುವ ಪರಿಪಾಠವಿತ್ತು. ಅಂತಹ ದಿನಗಳನ್ನು ನೆನಪಿಸಿಕೊಂಡು ನಮ್ಮ ಸಂಪ್ರದಾಯಗಳನ್ನು ಉಳಿಸುವ ಕಾರ್ಯ ಪಿಂಪ್ರಿ ಚಿಂಚ್ವಾಡ್ ಬಂಟರ ಸಂಘದಿಂದ ಆಗುತ್ತಿರುವುದು ಶ್ಲಾಘನೀಯವಾಗಿದೆ. ನಾನು ಈ ಸಂಘದ ಅಭಿಮಾನಿಯಾಗಿದ್ದು ನಿಮ್ಮೊಂದಿಗೆ ಸದಾ ಇದ್ದೇನೆ ಎಂದರು. ಪುಣೆ ಬಂಟರ ಸಂಘದ ಅಧ್ಯಕ್ಷರಾದ ಸಂತೋಷ್ ಶೆಟ್ಟಿ ಮಾತನಾಡಿ ಬಂಟ ಸಮಾಜ ಯಾವಾಗಲೂ ಸಾಮಾಜಿಕ, ಧಾರ್ಮಿಕ, ಶೈಕ್ಷಣಿಕ ಕಾರ್ಯಗಳನ್ನು ಮಾಡುವ ಮೂಲಕ ಎಲ್ಲರಿಗೂ ಮಾದರಿಯಾಗಿರಬೇಕಾಗಿದೆ ಎಂದು ಅಭಿಪ್ರಾಯಪಟ್ಟರು. ಪುಣೆ ಬಂಟರ ಸಂಘದ ಮಹಿಳಾ ವಿಭಾಗದ ಕಾರ್ಯಾಧ್ಯಕ್ಷೆ ಸುಲತಾ ಎಸ್ ಶೆಟ್ಟಿ ಮಾತನಾಡಿ ಪಿಂಪ್ರಿ ಚಿಂಚ್ವಾಡ್ ಬಂಟರ ಸಂಘದ ಮಹಿಳಾ ವಿಭಾಗ ಸಾಮಾಜಿಕ ಕಾರ್ಯಗಳಲ್ಲಿ ತೊಡಗಿಸಿಕೊಂಡಿರುವುದು ಮಾತ್ರವಲ್ಲದೆ ನಮ್ಮ ತುಳುನಾಡಿನ ಸಂಸ್ಕೃತಿ, ಆಚಾರ, ವಿಚಾರಗಳನ್ನು ಉಳಿಸುವ ಕಾರ್ಯವನ್ನೂ ಮಾಡುತ್ತಿರುವುದು ಅಭಿನಂದನೀಯವಾಗಿದೆ. ಅವರು ಆಟಿ ತಿಂಗಳಲ್ಲಿ ತುಳುವರ ಆಹಾರಪದ್ಧತಿಗಳನ್ನು ನೆನಪಿಸಿದರು.
ಸಂಘದ ಅಧ್ಯಕ್ಷ ವಿಜಯ್ ಶೆಟ್ಟಿಯವರು ಮಾತನಾಡಿ ಕೊರೋನಾ ಮಹಾಮಾರಿಯ ನಂತರ ಸಂಘದ ಚಟುವಟಿಕೆಗಳನ್ನು ನಿರಂತರವಾಗಿಸಲು ಸಂಘದ ಎಲ್ಲಾ ಪದಾಧಿಕಾರಿಗಳು, ಮಹಿಳಾ ವಿಭಾಗ, ಯುವ ವಿಭಾಗಗಳು ಸಕ್ರಿಯವಾಗಿ ತೊಡಗಿಸಿಕೊಂಡಿರುವುದು ಉತ್ತಮ ವಿಚಾರವಾಗಿದೆ. ಮುಂದಿನ ದಿನಗಳಲ್ಲಿ ಇನ್ನಷ್ಟು ಕಾರ್ಯಕ್ರಮಗಳನ್ನು ಮಾಡುವ ಹುಮ್ಮಸ್ಸಿನಲ್ಲಿ ನಮ್ಮ ಸಂಘವಿದೆ. ಸಮಾಜಬಾಂಧವರೆಲ್ಲರ ಪ್ರೋತ್ಸಾಹ, ಸಹಕಾರ ಸಂಘದೊಂದಿಗಿರಲಿ ಎಂದರು. ಆಟಿ ತಿಂಗಳ ಮಹತ್ವವನ್ನು ತಾರಾ ಶೆಟ್ಟಿಯವರು ವಿವರಿಸಿದರು.
ಉಪಾಧ್ಯಕ್ಷರಾದ ರಾಕೇಶ್ ಶೆಟ್ಟಿ ಸ್ವಾಗತಿಸಿದರು. ಮಹಿಳಾ ವಿಭಾಗದ ಕಾರ್ಯಾಧ್ಯಕ್ಷೆ ಸುಪ್ರಿಯಾ ಜೆ ಶೆಟ್ಟಿ ಅತಿಥಿಗಳನ್ನು ಪರಿಚಯಿಸಿದರು. ಸುಧಾಕರ ಶೆಟ್ಟಿ ಪೆಲತ್ತೂರು ಕಾರ್ಯಕ್ರಮ ನಿರೂಪಿಸಿ ವಂದಿಸಿದರು. ಕಾರ್ಯಕ್ರಮದಲ್ಲಿ ಸಂಘದ ಮಾಜಿ ಅಧ್ಯಕ್ಷರಾದ ವಿಶ್ವನಾಥ ಡಿ ಶೆಟ್ಟಿ, ಎರ್ಮಾಳ್ ವಿಶ್ವನಾಥ ಶೆಟ್ಟಿ, ಪದ್ಮನಾಭ ಶೆಟ್ಟಿ, ಎರ್ಮಾಳ್ ಸೀತಾರಾಮ ಶೆಟ್ಟಿ ಹಾಗೂ ಸಮಾಜಬಾಂಧವರು ಹೆಚ್ಚಿನ ಸಂಖ್ಯೆಯಲ್ಲಿ ಉಪಸ್ಥಿತರಿದ್ದರು. ತುಳುನಾಡಿನ ವಿವಿಧ ಸಾಂಪ್ರದಾಯಿಕ ಖಾದ್ಯಗಳನ್ನು ಭೋಜನದಲ್ಲಿ ಅಳವಡಿಸಲಾಗಿತ್ತು. ಸಂಘದ ಪದಾಧಿಕಾರಿಗಳು, ಮಹಿಳಾ ವಿಭಾಗ, ಯುವ ವಿಭಾಗದ ಸದ್ಸ್ಯರು ಕಾರ್ಯಕ್ರಮದ ಯಶಸ್ಸಿಗೆ ಸಹಕರಿಸಿದರು.