ಪುಣೆ ಬಂಟರ ಸಂಘದ ಯುವ ವಿಭಾಗದಿಂದ ಸಮಾಜ ಬಾಂಧವರಿಗಾಗಿ ಆಯೋಜಿಸಿದ ವಾರ್ಷಿಕ ಬಾಕ್ಸ್ ಕ್ರಿಕೆಟ್ ಪಂದ್ಯಾವಳಿಯು ಯುವ ವಿಭಾಗದ ಕಾರ್ಯಾಧ್ಯಕ್ಷ ಯಶ್ ರಾಜ್ ಶೆಟ್ಟಿಯವರ ನೇತೃತ್ವದಲ್ಲಿ ಗ್ರೀನ್ ಬಾಕ್ಸ್ ಟರ್ಫ್ಸ್, ಭಂಡಾರ್ಕಾರ್ ರೋಡ್, ಪುಣೆ ಇಲ್ಲಿ ನಡೆಯಿತು . ಪಂದ್ಯಾಟದಲ್ಲಿ ಕಟೀಲ್ ವಾರಿಯರ್ಸ್ ಪ್ರಶಸ್ತಿಯನ್ನು ಜಯಿಸಿದ್ದು 25000 ನಗದು ಹಾಗೂ ಟ್ರೋಪಿಯನ್ನು ಪಡೆದುಕೊಂಡಿತು. ದೇಹು ರೋಡ್ ಬಿ ತಂಡವು ರನ್ನರ್ ಅಪ್ ಪ್ರಶಸ್ತಿಯನ್ನು ಪಡೆದುಕೊಂಡು 15000 ನಗದು ಹಾಗೂ ಟ್ರೋಪಿಯನ್ನು ಪಡೆದುಕೊಂಡಿತು.
ಬೆಳಗ್ಗೆ ಪುಣೆ ಬಂಟರ ಸಂಘದ ಮಾಜಿ ಅಧ್ಯಕ್ಷ ಹಾಗೂ ಪುಣೆ ಕೊನೊಟ್ ಬೋಟ್ ಕ್ಲಬ್ ಇದರ ಅಧ್ಯಕ್ಷರಾದ ಮೊಳಹಳ್ಳಿ ಬಾಲಕೃಷ್ಣ ಹೆಗ್ಡೆಯವರು ಪಂದ್ಯಾಟವನ್ನು ಉದ್ಘಾಟಿಸಿದರು. ಈ ಸಂದರ್ಭ ಅತಿಥಿಗಳಾಗಿ ರಾಷ್ಟ್ರೀಯ ಮಹಿಳಾ ಆಯೋಗ ನವದೆಹಲಿ ಇದರ ಸದಸ್ಯರಾದ ಶ್ಯಾಮಲಾ ಕುಂದರ್, ಪುಣೆ ಮಹಾನಗರ ಪಾಲಿಕೆಯ ಶಿಕ್ಷಣ ಸಮಿತಿ ಕಾರ್ಯಾಧ್ಯಕ್ಷೆ ಮಂಜುಶ್ರೀ ಖರ್ಡೆಕರ್ ಉಪಸ್ಥಿತರಿದ್ದರು.
ಸಂಜೆ ಪುಣೆ ಬಂಟರ ಸಂಘದ ಅಧ್ಯಕ್ಷ ಸಂತೋಷ್ ಶೆಟ್ಟಿ ಇನ್ನಾ ಕುರ್ಕಿಲ್ ಬೆಟ್ಟು ಇವರ ಅಧ್ಯಕ್ಷತೆಯಲ್ಲಿ ನಡೆದ ಸಮಾರೋಪ ಸಮಾರಂಭದಲ್ಲಿ ಪ್ರಶಸ್ತಿಗಳನ್ನು ವಿತರಿಸಲಾಯಿತು. ಈ ಸಂದರ್ಭದಲ್ಲಿ ಪುಣೆ ಬಂಟರ ಸಂಘದ ಪ್ರಧಾನ ಕಾರ್ಯದರ್ಶಿ ಅಜಿತ್ ಹೆಗ್ಡೆ, ಗೌರವ ಕೋಶಾಧಿಕಾರಿ ಎರ್ಮಾಳ್ ಚಂದ್ರಹಾಸ್ ಶೆಟ್ಟಿ, ಸಾಂಸ್ಕೃತಿಕ ವಿಭಾಗದ ಕಾರ್ಯಾಧ್ಯಕ್ಷ ಪ್ರವೀಣ್ ಶೆಟ್ಟಿ ಪುತ್ತೂರು, ಮಹಿಳಾ ವಿಭಾಗದ ಕಾರ್ಯಾಧ್ಯಕ್ಷೆ ಸುಲತಾ ಎಸ್ ಶೆಟ್ಟಿ ಉಪಸ್ಥಿತರಿದ್ದರು.
ಮೊಳಹಳ್ಳಿ ಬಾಲಕೃಷ್ಣ ಹೆಗ್ಡೆಯವರು ಮಾತನಾಡಿ ಸಂಘದ ಯುವ ವಿಭಾಗವು ಕ್ರಿಕೆಟ್ ಪಂದ್ಯಾಟದ ಮೂಲಕ ಯುವ ಸಮುದಾಯವನ್ನು ಒಗ್ಗೊಡಿಸುವ ಕಾರ್ಯ ಮಾಡುತ್ತಿರುವುದು ಅಭಿನಂದನೀಯವಾಗಿದೆ. ಪ್ರತೀ ವರ್ಷ ಇಂತಹ ಕಾರ್ಯಕ್ರಮವು ನಡೆಯುತ್ತಿರಲಿ, ಭವಿಷ್ಯದಲ್ಲಿ ರಾಷ್ಟ್ರೀಯ ಮಟ್ಟದಲ್ಲಿ ಇಂತಹ ಪಂದ್ಯಾಟ ಆಯೋಜನೆಗೊಳ್ಳುವಂತಾಗಲಿ, ನಾವೆಲ್ಲರೂ ಇವರ ಬೆನ್ನು ತಟ್ಟಿ ಪ್ರೋತ್ಸಾಹಿಸುವ ಕಾರ್ಯವನ್ನು ಮಾಡಬೇಕಾಗಿದೆ ಎಂದರು.
ಅಧ್ಯಕ್ಷ ಸಂತೋಷ್ ಶೆಟ್ಟಿಯವರು ಮಾತನಾಡಿ ಯುವ ವಿಭಾಗದ ಕಾರ್ಯಾಧ್ಯಕ್ಷ ಯಶ್ ರಾಜ್ ಶೆಟ್ಟಿ ನೇತೃತ್ವದಲ್ಲಿ ಬಹಳ ಅಚ್ಚುಕಟ್ಟುತನದಿಂದ ಕ್ರಿಕೆಟ್ ಪಂದ್ಯಾಟವನ್ನು ಆಯೋಜಿಸಿದ್ದು ಉತ್ತಮ ಬೆಳವಣಿಗೆಯಾಗಿದೆ. ಯುವ ಸಮೂಹವನ್ನು ಒಗ್ಗೂಡಿಸಿ ಮುಂದಿನ ದಿನಗಳಲ್ಲಿ ಇನ್ನಷ್ಟು ಇಂತಹ ಕಾರ್ಯಕ್ರಮಗಳನ್ನು ನಡೆಸುವಲ್ಲಿ ಸಹಕಾರ ನೀಡಲಾಗುವುದು ಎಂದರು.
ಪಂದ್ಯಾಟದಲ್ಲಿ ಒಟ್ಟು 16 ತಂಡಗಳು ಭಾಗವಹಿಸಿದ್ದು 31 ಪಂದ್ಯಗಳನ್ನು ಆಡಲಾಗಿತ್ತು, ಪ್ರತೀ ತಂಡದಲ್ಲಿ ೮ ಆಟಗಾರರು ಒಳಗೊಂಡಿದ್ದು ೫ ಹುಡುಗರು ಹಾಗೂ ಮೂವರು ಹುಡುಗಿಯರಿದ್ದರು. ಅಭಿನಂದನ್ ಶೆಟ್ಟಿ ಮ್ಯಾನ್ ಆಫ್ ದ ಸಿರೀಸ್ ಹಾಗೂ ಸ್ನೇಹಾ ಶೆಟ್ಟಿ ವುಮೆನ್ ಆಫ್ ದ ಸಿರೀಸ್ ಪ್ರಶಸ್ತಿಗಳನ್ನು ಜಯಿಸಿದರು. ಯುವ ವಿಭಾಗದ ಪದಾಧಿಕಾರಿಗಳಾದ ರೌನಕ್ ಶೆಟ್ಟಿ, ಉದಯ್ ಶೆಟ್ಟಿ, ಪ್ರಫುಲ್ ಶೆಟ್ಟಿ, ಸಿದ್ಧಾಂತ್ ಶೆಟ್ಟಿ, ವಿಶಾಲ್ ಶೆಟ್ಟಿ ಮತ್ತು ಸದಸ್ಯರು ಪಂದ್ಯಾಟದ ಯಶಸ್ಸಿಗೆ ಶ್ರಮಿಸಿದರು. ಯುವ ವಿಭಾಗದ ಕಾರ್ಯಾಧ್ಯಕ್ಷ ಯಶ್ ರಾಜ್ ಶೆಟ್ಟಿ ಪಂದ್ಯಾಟವನ್ನು ಯಶಸ್ವಿಗೊಳಿಸಲು ಸಹಕಾರ ನೀಡಿದ ಎಲ್ಲರಿಗೂ ಕೃತಜ್ಞತೆಗಳನ್ನು ಸಲ್ಲಿಸಿದರು .