ಉಡುಪಿ ಜಿಲ್ಲಾ ಸಾಂಪ್ರದಾಯಿಕ ಕಂಬಳ ಸಮಿತಿಯ ವಾರ್ಷಿಕ ವಿಶೇಷ ಸಭೆಯು ಬ್ರಹ್ಮಾವರದ ಲಕ್ಷ್ಮಿ ಎಂಪೈರ್ ನ ಬಾಂಧವ್ಯ ಸಭಾಂಗಣದಲ್ಲಿ ಜರಗಿತು. ಜಿಲ್ಲೆಯ ಸಾಂಪ್ರದಾಯಿಕ ಕಂಬಳಗಳ ಆಯೋಜಕರು, ಕಂಬಳ ಕೋಣಗಳ ಯಜಮಾನರುಗಳು, ಓಟಗಾರರು ಹಾಜರಿದ್ದ ಸಭೆಯಲ್ಲಿ ಕೆಲವು ಮಹತ್ವದ ನಿರ್ಣಯಗಳನ್ನು ತೆಗೆದುಕೊಳ್ಳಲಾಯಿತು. ಕಾರ್ಯಕ್ರಮದ ಅಧ್ಯಕ್ಷತೆ ವಹಿಸಿದ್ದ ಸುಧಾಕರ್ ಶೆಟ್ಟಿ ಹೆರ್ಗ ಮಾತನಾಡಿ, ಕರಾವಳಿಯಲ್ಲಿ ಇವತ್ತು ನೂರಾರು ವರ್ಷಗಳ ಧಾರ್ಮಿಕ ಹಿನ್ನೆಲೆಯುಳ್ಳ ಸಾಂಪ್ರದಾಯಿಕ ಕಂಬಳದಿಂದ ಕಂಬಳ ಉಳಿದಿದ್ದು, ನಾವೆಲ್ಲರೂ ಇದನ್ನು ಉಳಿಸಿ ಬೆಳೆಸಬೇಕಾಗಿದೆ ಎಂದರು. ಕರ್ನಾಟಕ ರಾಜ್ಯ ಕಂಬಳ ಅಸೋಸಿಯೇಷನ್ ಸದಸ್ಯರಾದ ಬಾರ್ಕೂರು ಶಾಂತರಾಮ ಶೆಟ್ಟಿ ಮಾತನಾಡಿ, ಸಾಂಪ್ರದಾಯಿಕ ಕಂಬಳಕ್ಕೆ ಸರ್ಕಾರಿಂದ ಅನುದಾನ ಸಿಗುವ ತನಕ ನಮ್ಮ ಹೋರಾಟ ಮುಂದುವರಿಯಲಿದೆ ಎಂದರು. ಸಮಿತಿಯ ಪ್ರಧಾನ ಕಾರ್ಯದರ್ಶಿ ಪ್ರಥ್ವಿರಾಜ್ ಶೆಟ್ಟಿ ಬಿಲ್ಲಾಡಿ ಪ್ರಾಸ್ತಾವಿಕವಾಗಿ ಮಾತನಾಡಿ, ಮುಂದಿನ ದಿನಗಳಲ್ಲಿ ಜಿಲ್ಲಾ ಸಾಂಪ್ರದಾಯಿಕ ಕಂಬಳ ಸಮಿತಿಯ ಜೊತೆಯಾಗಿ ಕಂಬಳ ಕೋಣಗಳ ಮಾಲೀಕರ ಸಂಘಟನೆಯನ್ನು ಜಿಲ್ಲೆಯಲ್ಲಿ ಕಟ್ಟುವ ಅವಶ್ಯಕತೆಯಿದ್ದು, ಈ ಕುರಿತು ಜಿಲ್ಲಾದ್ಯಂತ ಪ್ರವಾಸ ಮಾಡಿ ಸಂಘಟನೆ ಬಲಪಡಿಸಲಾಗುವುದು ಎಂದರು.




ಈ ಸಂದರ್ಭದಲ್ಲಿ ಕೋಣಗಳ ಮಾಲೀಕರ ಪ್ರತಿನಿಧಿಯಾಗಿ ಗಿರಿಜಾ ರೋಡ್ ಲೈನ್ಸ್ ಕೋಟ ಗಿಳಿಯಾರು ಭೋಜ ಪೂಜಾರಿಯವರು ಸಮಿತಿಯ ಸಂಘಟನೆಗೆ ಸಲಹೆ ಸೂಚನೆ ನೀಡಿದರು. ಉದ್ಯಮಿ ದೇವದಾಸ ಶೆಟ್ಟಿ ಉಪಸ್ಥಿತರಿದ್ದರು. ಜಿಲ್ಲೆಯ 40 ಕ್ಕೂ ಹೆಚ್ಚು ಸಂಪ್ರದಾಯಬದ್ಧ ಕಂಬಳ ಆಯೋಜಕರು ಹಾಜರಿದ್ದ ಸಭೆಯಲ್ಲಿ ಸಾಂಪ್ರದಾಯಿಕ ಕಂಬಳಗಳಿಗೆ ಸರಕಾರದಿಂದ ನ್ಯಾಯೋಚಿತವಾಗಿ ಸಿಗಬೇಕಿದ್ದ ಅನುದಾನ ಪಡೆಯುವಲ್ಲಿ ಹಕ್ಕೊತ್ತಾಯ ಮಂಡಿಸಲು ರೂಪುರೇಷೆಗಳನ್ನು ಸಿದ್ಧಪಡಿಸಿ, ಅಗತ್ಯ ಬಿದ್ದಲ್ಲಿ ಮುಂಬರುವ ದಿನಗಳಲ್ಲಿ ರಾಜಕೀಯ ಬೆರೆಸದೆ ಪಕ್ಷಾತೀತ ಹೋರಾಟಕ್ಕೆ ಮುಂದಾಗಲು ನಿರ್ಣಯಿಸಲಾಯಿತು. ಹಾಗೆಯೇ ಜಿಲ್ಲೆಯ ಎಲ್ಲಾ ತಾಲೂಕುಗಳಲ್ಲಿ 1 ತಿಂಗಳ ಒಳಗೆ ಸಾಂಪ್ರದಾಯಿಕ ಕಂಬಳ ಸಮಿತಿ ರಚನೆ ಮಾಡುವ ನಿರ್ಣಯ ಕೈಗೊಳ್ಳಲಾಯಿತು.


















































































































