ಶ್ರೀ ರಾಮಕೃಷ್ಣ ಕ್ರೆಡಿಟ್ ಕೋ- ಓಪರೇಟಿವ್ ಸೊಸೈಟಿಯ ೩೨ನೇ ವಾರ್ಷಿಕ ಮಹಾಸಭೆ ಸಂಘದ ಅಧ್ಯಕ್ಷರಾದ ಕೆ. ಜೈರಾಜ್ ಬಿ ರೈಯವರ ಅಧ್ಯಕ್ಷತೆಯಲ್ಲಿ ಮಂಗಳೂರಿನ ಉರ್ವ ಸೆಂಟಿನರಿ ಚರ್ಚ್ ಹಾಲ್ನಲ್ಲಿ ಸೆಪ್ಟೆಂಬರ್ 6 ರಂದು ಜರಗಿತು. ಸಂಘವು 31.08.2026 ಕ್ಕೆ ಅಂತ್ಯವಾದ ೨೦೨೫ -೨೬ನೇ ಸಾಲಿನಲ್ಲಿ ರೂ.೬೯೫ ಕೋಟಿ ಠೇವಣಾತಿ ಹಾಗೂ ರೂ. ೬೧೧ ಕೋಟಿ ಸಾಲ ಮತ್ತು ಮುಂಗಡ ಹೀಗೆ ಒಟ್ಟು ರೂ. ೧೩೦೬ ಕೋಟಿ ಒಟ್ಟು ವ್ಯವಹಾರದೊಂದಿಗೆ ರೂ.೧೯.೫೪ ಕೋಟಿ ನಿವ್ವಳ ಲಾಭ ಗಳಿಸಿದ್ದು, ಸದಸ್ಯರಿಗೆ ಶೇ. ೨೫ ಡಿವಿಡೆಂಡ್ನ್ನು ನೀಡಲು ಮಹಾಸಭೆಯಲ್ಲಿ ನಿರ್ಧರಿಸಿದೆ. ಸಂಘದ ಅಧ್ಯಕ್ಷರಾದ ಕೆ. ಜೈರಾಜ್ ಬಿ. ರೈಯವರು ೨೦೨೫ -೨೬ನೇ ಸಾಲಿನ ಆಡಳಿತ ಮಂಡಳಿಯ ವರದಿ ಮತ್ತು ಕಾರ್ಯ ಯೋಜನೆಗಳನ್ನು ಮಂಡಿಸಿ, ಸದಸ್ಯರು ಪ್ರಸ್ತಾವಿಸಿರುವ ವಿಷಯಗಳ ಬಗ್ಗೆ ಸಮಂಜಸವಾದ ವಿವರಣೆಗಳನ್ನು ನೀಡಿದರು. ಈ ಸಂದರ್ಭದಲ್ಲಿ ಮಾತನಾಡಿದ ಅವರು ಸಂಘದ ಕೇಂದ್ರ ಕಛೇರಿ ಕಟ್ಟಡದ ಕಾಮಗಾರಿ ಅಂತಿಮ ಹಂತದಲ್ಲಿದ್ದು ೨೦೨೭ ಜನವರಿ ತಿಂಗಳಲ್ಲಿ ಕಟ್ಟಡವನ್ನು ಲೋಕಾರ್ಪಣೆಗೊಳಿಸಲಾಗುವುದು. ಸದಸ್ಯರಿಗೆ ಅನುಕೂಲವಾಗುವಂತೆ ಸಾಲಗಾರರ ಮರಣೋತ್ತರ ಸಾಲ ಸಂರಕ್ಷಣಾ ಯೋಜನೆಯನ್ನು ಅನುಷ್ಠಾನಿಸಲಾಗಿರುವುದನ್ನು ತಿಳಿಸಿ, ಸಂಘದ ಗುರಿ ಮೀರಿದ ದಾಖಲೆಯ ಪ್ರಗತಿ ಸಾಧನೆಗೆ ಸದಸ್ಯರು ನೀಡಿರುವ ಸಹಕಾರಕ್ಕೆ ಧನ್ಯವಾದವನ್ನು ಸಲ್ಲಿಸಿದರು.
ಸಂಘದ ಉಪಾಧ್ಯಕ್ಷೆ ಲಕ್ಷ್ಮೀ ಜಯಪಾಲ ಶೆಟ್ಟಿಯವರ ಉಪಸ್ಥಿತಿಯಲ್ಲಿ ಅವರ ಸಂದೇಶವನ್ನು ವಾಚಿಸಲಾಯಿತು. ನಿರ್ದೇಶಕರುಗಳಾದ ಕೆ. ಸೀತಾರಾಮ ರೈ ಸವಣೂರು, ಡಾ. ಕೆ. ಸುಭಾಶ್ಚಂದ್ರ ಶೆಟ್ಟಿ, ಪಿ.ಎಸ್ ಅಡ್ಯಂತಾಯ, ಸಿ.ಎ ಎಚ್.ಆರ್ ಶೆಟ್ಟಿ, ವಿಠಲ ಪಿ ಶೆಟ್ಟಿ, ಯಂ. ರಾಮಯ ಶೆಟ್ಟಿ, ಅರುಣ್ ಕುಮಾರ್ ಶೆಟ್ಟಿ, ಪಿ.ಬಿ ದಿವಾಕರ ರೈ, ರವೀಂದ್ರನಾಥ ಜಿ ಹೆಗ್ಡೆ, ಕುಂಬ್ರ ದಯಾಕರ ಆಳ್ವ, ಬೆಳ್ಳಿಪಾಡಿ ಪ್ರಸಾದ್ ಕೌಶಲ್ ಶೆಟ್ಟಿ, ಅರಿಯಡ್ಕ ಚಿಕ್ಕಪ್ಪ ನ್ಯಾಕ್ ಮತ್ತು ಡಾ| ಬಿ. ಸಂಜೀವ ರೈ ಉಪಸ್ಥಿತರಿದ್ದರು. ಮಹಾ ಪ್ರಬಂಧಕರಾದ ಗಣೇಶ್ ಜಿ.ಕೆ ಲೆಕ್ಕಪರಿಶೋಧಿತ ಆರ್ಥಿಕ ತಖ್ತೆ, ಲಾಭ ವಿಂಗಡಣೆ, ಬಜೆಟ್ ಮತ್ತು ಬೈಲಾ ತಿದ್ದುಪಡಿ ಪ್ರಸ್ತಾವನೆಗಳನ್ನು ಮಂಡಿಸಿದರು. ಸಂಘದ ಸೇವೆಯಿಂದ ವಯೋ ನಿವೃತ್ತರಾದ ವ್ಯವಸ್ಥಾಪಕ ಬಾಲಕೃಷ್ಣ ರೈಯವರನ್ನು ಸನ್ಮಾನಿಸಲಾಯಿತು. ೨೦೨೫ -೨೬ನೇ ಸಾಲಿನಲ್ಲಿ ಅತ್ಯುತ್ತಮ ಕಾರ್ಯ ನಿರ್ವಹಣೆ ತೋರಿ ಪ್ರಗತಿ ಸಾಧಿಸಿದ ಶಾಖೆಗಳನ್ನು ಗೌರವಿಸಲಾಯಿತು. ದ್ವಿತೀಯ ಪಿ.ಯು.ಸಿ. ಪರೀಕ್ಷೆಯಲ್ಲಿ ಶೇ. ೧೦೦ ಅಂಕಗಳನ್ನು ಗಳಿಸಿ ರಾಜ್ಯಕ್ಕೆ ಪ್ರಥಮ ರ್ಯಾಂಕ್ ಪಡೆದಿರುವ ಆಳ್ವಾಸ್ ಪಿ.ಯು ಕಾಲೇಜಿನ ವಿದ್ಯಾರ್ಥಿನಿ ದಿಶಾ, ಎಸ್.ಎಸ್.ಎಲ್.ಸಿ ಹಾಗೂ ಪಿ.ಯು.ಸಿ ಪರೀಕ್ಷೆಯಲ್ಲಿ ಸಾಧನೆಯನ್ನು ಮಾಡಿರುವ ಸಂಘದ ಸದಸ್ಯರ ಮಕ್ಕಳಾದ ಧ್ರುವಿ ಬಿ., ಗಗನ್ ಆಳ್ವ, ಸಮನ್ಯು ಶೆಟ್ಟಿ, ಪ್ರಜ್ವಲ್ ಶೆಟ್ಟಿ, ತ್ರಿಶಾ ಎಸ್ ಶೆಟ್ಟಿ, ದಿಯಾ ಮತ್ತು ಸಂಘದ ಸಿಬ್ಬಂದಿಗಳ ಮಕ್ಕಳಾದ ಅನ್ವಿತಾ ಶೆಟ್ಟಿ, ಸಮೃದ್ಧಿ ಶೆಟ್ಟಿ ಮತ್ತು ಜಾಗೃತಿ ಪಿ ಶೆಟ್ಟಿಯವರಿಗೆ ಕೆ.ಬಿ ಜಯಪಾಲ ಶೆಟ್ಟಿ ಪ್ರತಿಭಾ ಪುರಸ್ಕಾರವನ್ನು ಪ್ರದಾನ ಮಾಡಲಾಯಿತು. ನಿರ್ದೇಶಕ ಕೆ ಸೀತಾರಾಮ ರೈ ಸವಣೂರು ಸ್ವಾಗತಿಸಿದರು. ಯಂ. ರಾಮಯ ಶೆಟ್ಟಿ ವಂದಿಸಿದರು. ಸಿಬ್ಬಂದಿಗಳಾದ ಸುಶ್ಮಿತಾ ಪ್ರಾರ್ಥಿಸಿದರು. ಶಮಂತ್ ಟಿ. ರೈ ಮತ್ತು ಅಪೂರ್ವ ಕಾರ್ಯಕ್ರಮ ನಿರೂಪಿಸಿದರು. ಬಹು ಸಂಖ್ಯೆಯಲ್ಲಿ ಸಂಘದ ಸದಸ್ಯರು ಮಹಾಸಭೆಯ ಕಾರ್ಯಕ್ರಮದಲ್ಲಿ ಸಕ್ರಿಯವಾಗಿ ಪಾಲ್ಗೊಂಡರು.















































































































