ನಾವೆಲ್ಲರೂ ಕೂಡುಕುಟುಂಬದಿಂದ ಬದುಕಿದವರು. ಮಹಿಳೆಯರಿಗೆ ಸೀರೆ ಉಡುಗೆ ಭೂಷಣ. ಮಹಿಳೆ ಸೀರೆ ಉಟ್ಟಾಗ ಮೋಹಕವಾಗಿ, ಲಕ್ಷಣವಾಗಿ ಕಾಣುತ್ತಾಳೆ. ಸೀರೆ ಹೆಣ್ಣಿನ ಅಂದ, ಸೌಂದರ್ಯವನ್ನು ಹೆಚ್ಚಿಸುತ್ತದೆ ಎಂದು ತುಳು ವಲ್ಡ್೯ ಫೌಂಡೇಶನ್ ಕಟೀಲು ಇದರ ಅಧ್ಯಕ್ಷೆ ಭಾನುಮತಿ ಶೆಟ್ಟಿ ಕಕ್ವಗುತ್ತು ತಿಳಿಸಿದರು. ಸುರತ್ಕಲ್ ಬಂಟರ ಸಂಘದಲ್ಲಿ ಮಹಿಳಾ ವೇದಿಕೆ ಬಂಟರ ಸಂಘ ಸುರತ್ಕಲ್ ಆಯೋಜಿಸಿದ “ಸಿಂಧೂರ -2026” ಸೀರೆ ಮತ್ತು ಆಭರಣಗಳ ಮೇಳವನ್ನು ಉದ್ಘಾಟಿಸಿ ಮಾತನಾಡಿದರು. ಸುರತ್ಕಲ್ ಬಂಟರ ಸಂಘ ಇತರ ಸಂಘಗಳಿಗೆ ಮಾದರಿಯಾಗಿದೆ. ಮಹಿಳೆಯರು ಸ್ವಾವಲಂಬಿಗಳಾಗಿ ಬದುಕಬೇಕು. ಸ್ವಉದ್ಯೋಗದಿಂದ ಮಹಿಳೆ ಯಶಸ್ಸನ್ನು ಸಾಧಿಸಬೇಕು. ಸುರತ್ಕಲ್ ಬಂಟರ ಸಂಘದ ಮಹಿಳಾ ವೇದಿಕೆಯವರು ಹಮ್ಮಿಕೊಂಡ ಸೀರೆ, ಆಭರಣ ಮೇಳದಿಂದ ಪರಿಸರದ ಜನರಿಗೆ ಪ್ರಯೋಜನವಾಗಲಿ. ಇದರ ಪ್ರಯೋಜನವನ್ನು ಎಲ್ಲರೂ ಪಡೆಯುವಂತಾಗಲಿ ಎಂದರು.
ಮಹಿಳಾ ವೇದಿಕೆಯ ಸ್ಥಾಪಕಾಧ್ಯಕ್ಷೆ ಅಂಜನಾ ಮಂಜಯ್ಯ ಶೆಟ್ಟಿ ಮಾತನಾಡಿ, ಸಂಘ ಸಂಸ್ಥೆಗಳು ಬೇಕು. ಒಬ್ಬರಿಗೊಬ್ಬರು ಸಹಾಯ ಮಾಡುವಂತಿರಬೇಕು. ಸ್ವಾರ್ಥ ಇಲ್ಲದ ಸಂಘಟನೆ ತಾನಾಗಿಯೇ ಬೆಳೆಯುತ್ತದೆ ಎನ್ನುವುದಕ್ಕೆ ಸುರತ್ಕಲ್ ಬಂಟರ ಸಂಘದ ಮಹಿಳಾ ವೇದಿಕೆ ಉದಾಹರಣೆ. ಮಹಿಳಾ ವೇದಿಕೆ ಇಂತಹ ಕಾರ್ಯಕ್ರಮಗಳನ್ನು ಆಯೋಜಿಸಿ ಇದರಿಂದ ಬಂದಂತಹ ಲಾಭಾಂಶವನ್ನು ಸಮಾಜಕ್ಕೆ ಅರ್ಪಿಸುತ್ತಿರುವುದು ಶ್ಲಾಘನೀಯ ಎಂದರು. ಸುರತ್ಕಲ್ ಬಂಟರ ಸಂಘದ ಅಧ್ಯಕ್ಷ ಬಾಳ ಜಗನ್ನಾಥ ಶೆಟ್ಟಿ ಮಾತನಾಡಿ, ಮಹಿಳಾ ವೇದಿಕೆ ಸುರತ್ಕಲ್ ಬಂಟರ ಸಂಘದ ಶಕ್ತಿ. ಸಂಘ ಹಮ್ಮಿಕೊಳ್ಳುವ ಪ್ರತಿಯೊಂದು ಕಾರ್ಯಕ್ರಮದಲ್ಲೂ ಮಹಿಳಾ ವೇದಿಕೆ ಜೊತೆಯಾಗಿ ನಿಂತು ಕೆಲಸ ಮಾಡುತ್ತಿದೆ. ಅದೇ ರೀತಿ ಮಹಿಳಾ ವೇದಿಕೆ ಹಮ್ಮಿಕೊಳ್ಳುವ ಎಲ್ಲಾ ಕಾರ್ಯಕ್ರಮಗಳಿಗೂ ಬಂಟರ ಸಂಘ ಸಹಕಾರ ನೀಡುತ್ತಾ ಬಂದಿರುತ್ತದೆ ಎಂದರು.



ಮಹಿಳಾ ವೇದಿಕೆಯ ಅಧ್ಯಕ್ಷೆ ಸರೋಜ ತಾರಾನಾಥ ಶೆಟ್ಟಿ ಮಾತನಾಡಿ, ಮಹಿಳಾ ವೇದಿಕೆ ನಿರಂತರವಾಗಿ ಕಾರ್ಯ ಚಟುವಟಿಕೆಯಲ್ಲಿ ತೊಡಗಿಸಿಕೊಳ್ಳುತ್ತಿದೆ. ಮಹಿಳಾ ವೇದಿಕೆ ಮದುವೆ, ಶಿಕ್ಷಣ, ಮನೆ ನಿರ್ಮಾಣ, ಕ್ರೀಡೆ, ಸಾಂಸ್ಕೃತಿಕ ಸಹಿತ ಸಾಮಾಜಿಕ ಚಟುವಟಿಕೆಗಳಿಗೆ ಪ್ರೋತ್ಸಾಹ ನೀಡುತ್ತಾ ಬಂದಿದೆ ಎಂದರು. ವೇದಿಕೆಯಲ್ಲಿ ಮಹಿಳಾ ವೇದಿಕೆಯ ಉಪಾಧ್ಯಕ್ಷೆ ಜಯಂತಿ ಪಿಟಿ ರೈ, ಕಾರ್ಯದರ್ಶಿ ರಾಜೇಶ್ವರಿ ಡಿ ಶೆಟ್ಟಿ, ಕೋಶಾಧಿಕಾರಿ ಮಾಲತಿ ಜೆ ಶೆಟ್ಟಿ ಉಪಸ್ಥಿತರಿದ್ದರು. ಕಾರ್ಯದರ್ಶಿ ರಾಜೇಶ್ವರಿ ಡಿ ಶೆಟ್ಟಿ ಸ್ವಾಗತಿಸಿದರು. ಜೊತೆ ಕಾರ್ಯದರ್ಶಿ ಕವಿತಾ ಪುಷ್ಪರಾಜ್ ಶೆಟ್ಟಿ ವಂದಿಸಿದರು. ಡಾ| ಸುಧಾ ಚಂದ್ರಶೇಖರ್ ಶೆಟ್ಟಿ ಕಾರ್ಯಕ್ರಮ ನಿರ್ವಹಿಸಿದರು.


“ಸಿಂಧೂರ -2026” ಸೀರೆ ಹಾಗೂ ಆಭರಣಗಳ ಮಾರಾಟ ಮೇಳ ಜನರನ್ನು ಆಕರ್ಷಿಸುತ್ತಿದೆ. ನಗರ ಮತ್ತು ಗ್ರಾಮಾಂತರ ಪ್ರದೇಶಗಳಿಂದ ಬರುವ ಜನರು ಕಡಿಮೆ ಬೆಲೆಗೆ ದೊರಕುವ ಸೀರೆ ಮತ್ತಿತರ ವಸ್ತುಗಳಿಂದ ಖುಷಿ ಪಡುತ್ತಿದ್ದಾರೆ. 99 ರೂಪಾಯಿಂದ 99,999 ರೂಪಾಯಿವರೆಗಿನ ಸೀರೆಗಳು ಸಿಂಧೂರದಲ್ಲಿ ಲಭ್ಯವಿದೆ. ಯೋಗ್ಯ ಬೆಲೆಗೆ ಗುಣಮಟ್ಟದ ಸೀರೆಗಳು ಈ ಬಾರಿ “ಸಿಂಧೂರ” ಸಾರಿ ಮೇಳದಲ್ಲಿದೆ. ಜೊತೆಗೆ ವಿವಿಧ ನಮೂನೆಯ ಆಭರಣಗಳ ಮಾರಾಟ, ಹಪ್ಪಳ, ಸೆಂಡಿಗೆ ಜೊತೆಗೆ ತಿಂಡಿ ತಿನಿಸುಗಳ ಮಾರಾಟ, ವಿವಿಧ ಬಗೆಯ ಜನೋಪಯೋಗಿ ವಸ್ತುಗಳ ಮಾರಾಟ ಸಿಂಧೂರ ಮೇಳದಲ್ಲಿದೆ. ಜನರು ಇದರ ಪ್ರಯೋಜನವನ್ನು ಪಡೆದುಕೊಳ್ಳಬಹುದು. ಮಹಿಳೆಯರಿಗೆ ಕಾಂಜೀವರಂ, ಬನಾರಸ್, ಧರ್ಮಾವರಂ, ಪೋಚಂಪಳ್ಳಿ, ಉಪ್ಪಡ, ಟಕ್ಸರ್ ರೇಷ್ಮೆ ಸೀರೆಗಳು, ಶುದ್ಧ ಹತ್ತಿ ಕೈ ಮಗ್ಗದ ಸೀರೆಗಳು, ಜಾರ್ಜೆಟ್, ಕ್ರೇಪ್, ಷಿಫಾನ್ ಸೀರೆಗಳು ಮನಮೋಹಕ ಕಸೂತಿ ಸೀರೆಗಳು ಮತ್ತು ಫ್ಯಾನ್ಸಿ ಸೀರೆಗಳ ಬೃಹತ್ ಸಂಗ್ರಹವಿದೆ. ಅತ್ಯುತ್ತಮ ಗುಣಮಟ್ಟದ ರೇಷ್ಮೆ, ಹತ್ತಿ, ಕ್ರೇಪ್, ಪಾಲಿಸ್ಟರ್, ಸಲ್ವಾರ್ ಸೂಟ್ ಬಟ್ಟೆಗಳು, ಕುರ್ತಾಗಳು, ಕಸೂತಿ ಬ್ಯಾಗ್ಗಳು ಗೃಹಪಯೋಗಿ ವಸ್ತುಗಳು ಮತ್ತು ಚಿಕನ್ ಮಸಾಲ, ಚಿಕನ್ ಸುಕ್ಕ, ಗಿರೋಸ್ಟ್, ಸಾಂಬಾರು ಇತ್ಯಾದಿ ಮಸಾಲೆ ಪುಡಿಗಳು ಲಭ್ಯವಿದೆ. ವಿವಿಧ ಮಾದರಿಯ ಒಂದು ಗ್ರಾಂ ಚಿನ್ನದ, ಪಂಚಲೋಹ ಆಭರಣಗಳು, ಚಿನ್ನದಂತೆ ಕಾಣುವ ಕಲಾತ್ಮಕ ಆಭರಣಗಳ ಆಪೂರ್ವ ಸಂಗ್ರಹವೂ ಇದೆ. ಪ್ರತೀ ವರ್ಷ ಸುರತ್ಕಲ್ ಬಂಟರ ಸಂಘದ ಮಹಿಳಾ ವೇದಿಕೆಯು ಜನರಿಗೆ ಅನುಕೂಲ ಆಗಲಿ ಎಂದು ಇಂತಹ ಕಾರ್ಯಕ್ರಮವನ್ನು ಆಯೋಜಿಸಿಕೊಂಡು ಬರುತ್ತಿದೆ. ಗ್ರಾಮಾಂತರ ಮತ್ತು ನಗರ ಪ್ರದೇಶದ ಜನರು ಇದರ ಪ್ರಯೋಜನವನ್ನು ಪಡೆದುಕೊಳ್ಳಬಹುದು ಎಂದು ಮಹಿಳಾ ವೇದಿಕೆಯ ಅಧ್ಯಕ್ಷೆ ಸರೋಜ ಟಿ ಶೆಟ್ಟಿ ಮತ್ತು ಕಾರ್ಯದರ್ಶಿ ರಾಜೇಶ್ವರಿ ಡಿ ಶೆಟ್ಟಿ ತಿಳಿಸಿದ್ದಾರೆ.














































































































