ಬಂಟರ ಯಾನೆ ನಾಡವರ ಮಾತೃ ಸಂಘ ಮಂಗಳೂರು, ಪುತ್ತೂರು ತಾಲೂಕು ಬಂಟರ ಸಂಘ ಇವರ ಮಾರ್ಗದರ್ಶನದಲ್ಲಿ ಬಂಟರ ಸಂಘ ನೆಲ್ಯಾಡಿ ವಲಯ ಇವರ ಆಶ್ರಯದಲ್ಲಿ ಆಟಿಡೊಂಜಿ ಬಂಟೆರೆ ಸೇರಿಗೆ, ಸಾಧಕರಿಗೆ ಸನ್ಮಾನ ಹಾಗೂ ಪ್ರತಿಭಾ ಪುರಸ್ಕಾರ ಕಾರ್ಯಕ್ರಮವು ನೆಲ್ಯಾಡಿ ಕಲ್ಪವೃಕ್ಷ ಸಹಕಾರಿ ಸೌಧದಲ್ಲಿ ನಡೆಯಿತು. ದೀಪ ಪ್ರಜ್ವಲಿಸಿ ಆಶೀರ್ವಚನ ನೀಡಿದ ಶ್ರೀ ಬಾರ್ಕೂರು ಮಹಾಸಂಸ್ಥಾನದ ಶ್ರೀ ಡಾ. ವಿದ್ಯಾವಾಚಸ್ಪತಿ ವಿಶ್ವ ಸಂತೋಷ ಭಾರತಿ ಶ್ರೀಪಾದರು, ಧಾರ್ಮಿಕವಾಗಿ ಬಂಟ ಸಮುದಾಯ ಹಿಂದುಳಿದಿದೆ. ಸರಕಾರದಿಂದಲೂ ಬಂಟ ಸಮುದಾಯಕ್ಕೆ ಯಾವುದೇ ಅನುದಾನ ಸಿಗುತ್ತಿಲ್ಲ. ಬಂಟ ಸಮುದಾಯದಲ್ಲಿ ಶೇ. 45ರಷ್ಟು ಜನ ಬಡವರಿದ್ದಾರೆ. ದೇವಸ್ಥಾನಕ್ಕೆ ಕೋಟ್ಯಾಂತರ ರೂಪಾಯಿ ವ್ಯಯಿಸುವುದಕ್ಕಿಂತ ಆಸ್ಪತ್ರೆ ನಿರ್ಮಾಣ ಮಾಡಿ ಚಿಕಿತ್ಸೆ ಕೊಟ್ಟಲ್ಲಿ ಸಾವಿರಾರು ಜನರಿಗೆ ಉತ್ತಮ ಆರೋಗ್ಯ ನೀಡಬಹುದು ಎಂದು ನುಡಿದರು. ಕರಾವಳಿಯ ಒಂದು ಸಾವಿರ ದೇವಸ್ಥಾನಗಳ ಪೈಕಿ 800 ದೇವಸ್ಥಾನದ ಜೀರ್ಣೋದ್ಧಾರ ಕೆಲಸದಲ್ಲಿ ಬಂಟರದ್ದು ಸಿಂಹಪಾಲು ಇದೆ. ಸಮುದಾಯದಲ್ಲಿನ ಬಡತನ ನಿವಾರಣೆಯಾಗುವ ನಿಟ್ಟಿನಲ್ಲಿಯೂ ಚಿಂತಿಸಬೇಕಾಗಿದೆ. ಇದರಿಂದ ಬಡವರ ಉದ್ಧಾರ ಹಾಗೂ ಸಮಾಜದ ಉದ್ಧಾರ ಆಗುತ್ತದೆ. ಧಾರ್ಮಿಕವಾಗಿಯೂ ಬಂಟ ಸಮಾಜ ಬಲಿಷ್ಠವಾಗಬೇಕು ಹಾಗೂ ಬಂಟ ಸಂಪ್ರದಾಯ, ಸಂಸ್ಕೃತಿ ಉಳಿಯಬೇಕೆಂದು ಶ್ರೀ ಡಾ. ವಿದ್ಯಾವಾಚಸ್ಪತಿ ವಿಶ್ವಸಂತೋಷ ಸ್ವಾಮೀಜಿ ಹೇಳಿದರು. ಸಾಮಾಜಿಕ, ಧಾರ್ಮಿಕ ಮುಂದಾಳು ತುಕ್ರಪ್ಪ ಶೆಟ್ಟಿ ನೂಜೆ ಕಾರ್ಯಕ್ರಮ ಉದ್ಘಾಟಿಸಿ ಮಾತನಾಡಿ, ಬಂಟ ಸಮುದಾಯ ಇನ್ನೊಂದು ಸಮಾಜವನ್ನು ಗೌರವಿಸಿಕೊಂಡು ಸತ್ಯ ಧರ್ಮದಲ್ಲಿ ನಡೆಯುವ ಸಮಾಜ. ಜಗತ್ತಿನೆಲ್ಲೆಡೆ ಬಂಟ ಸಮಾಜದವರಿದ್ದಾರೆ. ಬಂಟ ಸಮಾಜದವರಲ್ಲಿ ನಾಯಕತ್ವ ಗುಣವಿದೆ ಎಂದರು.




ಸಾಧಕರನ್ನು ಸನ್ಮಾನಿಸಿ ಮಾತನಾಡಿದ ಬಂಟರ ಯಾನೆ ನಾಡವರ ಮಾತೃ ಸಂಘ ಪುತ್ತೂರು ತಾಲೂಕಿನ ಸಂಚಾಲಕರಾದ ಸಹಕಾರ ರತ್ನ ದಂಬೆಕ್ಕಾನ ಸದಾಶಿವ ರೈ ಅವರು ಮಾತನಾಡಿ, ಬಂಟ ಎಂದರೆ ಗೆದ್ದವ ಎಂದರ್ಥ. ಬಂಟ ಸಮಾಜದ ಸಂಸ್ಕೃತಿ, ಸಂಪ್ರದಾಯದ ಬಗ್ಗೆ ಯುವಕರಿಗೆ ಅರಿವು ಮೂಡಿಸುವ ಕೆಲಸ ಆಗಬೇಕು. ಆಟಿಡೊಂಜಿ ಬಂಟರ ಸೇರಿಗೆ ಮೂಲಕ ಸಾಧಕರನ್ನು ಸನ್ಮಾನಿಸುತ್ತಿರುವುದು ಅರ್ಥಪೂರ್ಣ ಕಾರ್ಯಕ್ರಮ ಎಂದರು. ರಾಷ್ಟ್ರೀಯ ವೈಟ್ ಲಿಫ್ಟಿಂಗ್ ತರಬೇತುದಾರ ಪ್ರಮೋದ್ ಕುಮಾರ್ ಶೆಟ್ಟಿ ಮನವಳಿಕೆಗುತ್ತು, ಪುತ್ತೂರು ತಾಲೂಕು ಬಂಟರ ಸಂಘದ ಮಾಜಿ ಅಧ್ಯಕ್ಷ ದಯಾನಂದ ರೈ ಮನವಳಿಕೆಗುತ್ತು, ಪುತ್ತೂರು ಕೋಟಿ ಚೆನ್ನಯ ಜೋಡುಕರೆ ಕಂಬಳ ಸಮಿತಿ ಅಧ್ಯಕ್ಷ ಚಂದ್ರಹಾಸ ಶೆಟ್ಟಿ ಎನ್, ಪುತ್ತೂರು ತಾಲೂಕು ಮಹಿಳಾ ಬಂಟರ ವಿಭಾಗದ ಅಧ್ಯಕ್ಷೆ ಗೀತಾ ಮೋಹನ್ ರೈ ಮಾತನಾಡಿದರು.
ಬೆಳಗ್ಗೆ ಹಿರಿಯ ಯಕ್ಷಗಾನ ಕಲಾವಿದ ವಿಠಲ ಮಾರ್ಲ ರಾಮನಗರ ಇವರ ಪ್ರಾಯೋಜಕತ್ವದಲ್ಲಿ ಶ್ರೀ ಹಿರಣ್ಮಯಿ ಮಹಿಳಾ ಯಕ್ಷಗಾನ ಕಲಾ ಸಂಘ ನೆಲ್ಯಾಡಿ ಇದರ ಸಂಚಾಲಕರಾದ ಲಕ್ಷ್ಮೀನಾರಾಯಣ ಶೆಟ್ಟಿ ಕುಂಡಡ್ಕ ಇದರ ನಿರ್ದೇಶನದಲ್ಲಿ ಪವಿತ್ರ ತುಳಸಿ ಯಕ್ಷಗಾನ ತಾಳಮದ್ದಳೆ ನಡೆಯಿತು. ಜಿಲ್ಲಾ ರಾಜೋತ್ಸವ ಪ್ರಶಸ್ತಿ ಪುರಸ್ಕೃತ ಕಲಾವಿದ ಉಪನ್ಯಾಸಕ ವಿಶ್ವನಾಥ ಶೆಟ್ಟಿ ಕುಂಡಡ್ಕ ನಿವೃತ್ತ ಯೋಧ ಕರುಣಾಕರ ರೈ ಗೋಳಿತ್ತೊಟ್ಟು, ನೆಲ್ಯಾಡಿ ಪ್ರಾಥಮಿಕ ಕೃಷಿ ಪತ್ತಿನ ಸಹಕಾರ ಸಂಘದ ನಿವೃತ್ತ ಮ್ಯಾನೇಜರ್ ರತ್ನಾಕರ ಬಂಟ್ರಿಯಾಲ್ ಪರಾರಿ, ಯುವ ವಾಗ್ಮಿ ಸಂಕೇತ್ ಶೆಟ್ಟಿ ಕೊಲ್ಯೊಟ್ಟು ನೆಲ್ಯಾಡಿ, ಜಿಲ್ಲಾ ರಾಜೋತ್ಸವ ಪ್ರಶಸ್ತಿ ಪುರಸ್ಕೃತ ಮೋಹನ್ ರೈ ಅವರನ್ನು ಈ ಸಂದರ್ಭದಲ್ಲಿ ಸನ್ಮಾನಿಸಿ ಗೌರವಿಸಲಾಯಿತು. ಕಳೆದ ಸಾಲಿನ ಎಸ್.ಎಸ್.ಎಲ್.ಸಿ ಹಾಗೂ ಪಿ.ಯು.ಸಿಯಲ್ಲಿ ಸಾಧನೆ ಮಾಡಿದ ನೆಲ್ಯಾಡಿ ವಲಯದ ಸಮುದಾಯದ ವಿದ್ಯಾರ್ಥಿಗಳಿಗೆ ಪ್ರತಿಭಾ ಪುರಸ್ಕಾರ ನೀಡಿ ಗೌರವಿಸಲಾಯಿತು.
ನೂತನ ಸಮಿತಿಯ ಅಧ್ಯಕ್ಷರಾದ ವಿಶ್ವನಾಥ ಶೆಟ್ಟಿ, ಕಾರ್ಯದರ್ಶಿ ಅನಿಲ್ ರೈ ಹಾರ್ಪಳ, ಕೋಶಾಧಿಕಾರಿ ಪ್ರವೀಣ್ ಭಂಡಾರಿ ಅವರಿಗೆ ಈ ಸಂದರ್ಭದಲ್ಲಿ ಅಧಿಕಾರ ಹಸ್ತಾಂತರ ಮಾಡಲಾಯಿತು. ಅಧ್ಯಕ್ಷ ಪ್ರತಾಪ್ ಚಂದ್ರ ಕುದ್ಮಾರುಗುತ್ತು ನೂತನ ಪದಾಧಿಕಾರಿಗಳಿಗೆ ಶಾಲು ಹಾಕಿ ಗೌರವಿಸಿದರು. ನೆಲ್ಯಾಡಿ ವಲಯ ಬಂಟರ ಸಂಘದ ಅಧ್ಯಕ್ಷ ಪ್ರತಾಪ್ ಚಂದ್ರ ರೈ ಕುದ್ಮಾರುಗುತ್ತು ಅಧ್ಯಕ್ಷತೆ ವಹಿಸಿದ್ದರು. ಪುತ್ತೂರು ತಾಲೂಕು ಬಂಟರ ಸಂಘದ ಕಾರ್ಯದರ್ಶಿ ನಿತ್ಯಾನಂದ ಶೆಟ್ಟಿ ಮನವಳಿಕೆ, ನೆಲ್ಯಾಡಿ ವಲಯ ಬಂಟರ ಸಂಘದ ಗೌರವಾಧ್ಯಕ್ಷ ವಿಶ್ವನಾಥ ಶೆಟ್ಟಿ ಶ್ರೀ ಮಾತಾ, ಕಾರ್ಯದರ್ಶಿ ಮಹಾಬಲ ಶೆಟ್ಟಿ ದೋoತಿಲ ವೇದಿಕೆಯಲ್ಲಿ ಉಪಸ್ಥಿತರಿದ್ದರು. ಪ್ರತಾಪ್ ಚಂದ್ರ ರೈ ಕುದ್ಮಾರುಗುತ್ತು ಸ್ವಾಗತಿಸಿ, ಮಹಾಬಲ ಶೆಟ್ಟಿ ದೋಂತಿಲ ವಂದಿಸಿದರು. ಜಿಲ್ಲಾ ರಾಜೋತ್ಸವ ಪ್ರಶಸ್ತಿ ಪುರಸ್ಕೃತ ಕಲಾವಿದ, ಉಪನ್ಯಾಸಕ ವಿಶ್ವನಾಥ ಶೆಟ್ಟಿ ಕುಂಡಡ್ಕ, ನೆಲ್ಯಾಡಿ ಪ್ರಾಥಮಿಕ ಕೃಷಿ ಪತ್ತಿನ ಸಹಕಾರ ಸಂಘದ ಮುಖ್ಯ ಕಾರ್ಯ ನಿರ್ವಹಣಾಧಿಕಾರಿ ಕೆ.ಎಂ ದಯಾಕರ ರೈ ನಿರೂಪಿಸಿದರು. ಭೂಮಿಕಾ ಪ್ರಾರ್ಥಿಸಿದರು. ಬಂಟ ಸಮಾಜದ ವಿವಿಧ ಮುಖಂಡರು, ನೆಲ್ಯಾಡಿ ವಲಯ ಬಂಟ ಸಮಾಜದ ಸಂಘದ ಪದಾಧಿಕಾರಿಗಳು ಸದಸ್ಯರು ಉಪಸ್ಥಿತರಿದ್ದರು.














































































































