ಮುಂಬಯಿಯ ಹಿರಿಯ ಕವಿ, ಸಾಹಿತಿ, ಪತ್ರಕರ್ತ ಕೋಡು ಭೋಜ ಶೆಟ್ಟಿಯವರು ಮುಲುಂಡ್ ಪಶ್ಚಿಮದ ಸಿಟಿ ಆಫ್ ಜೋಯ್ಸ್ ಇದರ ಹುರಾ ಅಪಾರ್ಟ್ಮೆಂಟ್ ನ ಸ್ವಗೃಹದಲ್ಲಿ ವಯೋಸಹಜ ಅಸ್ವಸ್ಥತೆಯಿಂದ ನಿಧನರಾದರು. ಓರ್ವ ಸಾಹಿತಿ, ನಾಟಕಕಾರ, ನಿರ್ದೇಶಕ, ಹೋಟೆಲು ಉದ್ಯಮಿಯಾಗಿ ಜನಾನುರಾಗಿಯಾಗಿದ್ದ ಮೃತರು ಸಾಮಾಜಿಕ ಕಾಳಜಿಯುಳ್ಳವರಾಗಿದ್ದು ಜನಪರ ಸೇವೆಯಲ್ಲಿ ನಿರತರಾಗಿದ್ದರು. ಸುಮಾರು 500 ಕ್ಕೂ ಮಿಕ್ಕಿ ಕತೆ, ಕವಿತೆ, ಲೇಖನಗಳನ್ನು ರಚಿಸಿದ್ದು ಹಾಸ್ಯ ಕವಿ ಎಂದೇ ಪ್ರಸಿದ್ದರಾಗಿದ್ದರು. ಇವರು ಸುಮಾರು 30 ಕ್ಕೂ ಅಧಿಕ ನಾಟಕಗಳನ್ನು ರಚಿಸಿದ್ದು ಅವುಗಳಲ್ಲಿ ಸುಮಾರು 15 ನಾಟಕಗಳು ಪ್ರಕಾಶಿತಗೊಂಡಿದ್ದವು. ಇವರು ರಚಿಸಿದ ಕಪ್ಪು ನೆತ್ತೆರ್ ನಾಟಕಕ್ಕೆ ಕರ್ನಾಟಕ ಸಾಹಿತ್ಯ ಅಕಾಡೆ ಗೌರವ ಪ್ರಾಪ್ತಿಯಾಗಿತ್ತು. ಬಂಟರ ಸಂಘ ಮುಂಬಯಿ ಇದರ ಮುಖವಾಣಿ ಬಂಟರ ವಾಣಿ ಯ ಸಂಪಾದಕರಾಗಿ ಸೇವೆ ಸಲ್ಲಿಸಿದ್ದ ಭೋಜ ಶೆಟ್ಟರು ಪತ್ನಿ, ಎರಡು ಹೆಣ್ಣು ಮಗಳು ಸೇರಿದಂತೆ ಅಪಾರ ಬಂಧು ಬಳಗವನ್ನು ಅಗಲಿದ್ದಾರೆ.
ಭೋಜ ಶೆಟ್ಟಿಯವರ ನಿಧನಕ್ಕೆ ಜಾಗತಿಕ ಬಂಟರ ಒಕ್ಕೂಟದ ಅಧ್ಯಕ್ಷ ಐಕಳ ಹರೀಶ್ ಶೆಟ್ಟಿ, ಉಪಾಧ್ಯಕ್ಷ ಕರ್ನಿರೆ ವಿಶ್ವನಾಥ್ ಶೆಟ್ಟಿ, ಮುಂಬಯಿ ಬಂಟರ ಸಂಘದ ಅಧ್ಯಕ್ಷ ಚಂದ್ರಹಾಸ ಕೆ ಶೆಟ್ಟಿ, ಉಪಾಧ್ಯಕ್ಷ ಮೋಹನ್ ದಾಸ್ ಶೆಟ್ಟಿ, ಕಾರ್ಯದರ್ಶಿ ಡಾ. ಆರ್ ಕೆ ಶೆಟ್ಟಿ, ಕೋಶಾಧಿಕಾರಿ ಸಿ.ಎ ಹರೀಶ್ ಡಿ ಶೆಟ್ಟಿ, ಪೊವಾಯಿ ಕನ್ನಡ ಸಂಘದ ಅಧ್ಯಕ್ಷ ಆರ್ ಜಿ ಶೆಟ್ಟಿ, ಎರ್ಮಾಳ್ ಅರುಣ್ ಶೆಟ್ಟಿ, ಬಂಟ್ಸ್ ನೌ ವ್ಯವಸ್ಥಾಪಕ ರಂಜಿತ್ ಕುಮಾರ್ ಶೆಟ್ಟಿ ಇವರುಗಳು ಸಂತಾಪ ವ್ಯಕ್ತಪಡಿಸಿ ಶ್ರದ್ದಾಂಜಲಿ ಕೋರಿದ್ದಾರೆ.
Previous Articleತುಳು-ಕನ್ನಡಿಗರ ಅಭಿಮಾನದ ಲೋಕಪ್ರಿಯ ಎಂಪಿ ಸಾಮಾಜಿಕ ನ್ಯಾಯ ಒದಗಿಸುತ್ತಿರುವ ಸಂಸದ ಗೋಪಾಲ್ ಸಿ.ಶೆಟ್ಟಿ
Next Article ಬಂಟ ಸಮಾಜದ ಅಪ್ರತಿಮ ಸಾಧಕ ಸಿಎ ಎಸ್. ಬಿ ಶೆಟ್ಟಿ