ಒಂದು ಸಂಸ್ಥೆಯ ಬೆಳವಣಿಗೆಗೆ ವಿಶ್ವಾಸ, ಪ್ರಾಮಾಣಿಕತೆ ಹಾಗೂ ಸಮನ್ವಯ ಅತ್ಯಗತ್ಯ. ಕುಲಪತಿಯಾಗಿ ಡಾ| ಎಂ ಜಯಕರ ಶೆಟ್ಟಿಯವರು ಈ ಮೂರೂ ಗುಣಗಳನ್ನು ಅಳವಡಿಸಿಕೊಂಡು ವಿಶ್ವವಿದ್ಯಾಲಯವನ್ನು ಮುನ್ನಡೆಸಿದ ಅವರ ವ್ಯಕ್ತಿತ್ವ ಎಲ್ಲರಿಗೂ ಮಾದರಿಯಾಗಿದೆ ಎಂದು ಮಾಜಿ ಸಚಿವ ಡಾ. ಸಿ.ಎನ್ ಅಶ್ವತ್ಥ ನಾರಾಯಣ ತಿಳಿಸಿದರು. ಬೆಂಗಳೂರು ವಿಶ್ವವಿದ್ಯಾಲಯ ಶಿಕ್ಷಕರ ಪರಿಷತ್ ವತಿಯಿಂದ ಜ್ಞಾನಭಾರತಿ ಆವರಣದ ಎಚ್. ನರಸಿಂಹಯ್ಯ ಸಭಾಂಗಣದಲ್ಲಿ ಬೆಂ.ವಿ.ವಿ ಕುಲಪತಿ ಡಾ| ಎಂ ಜಯಕರ ಶೆಟ್ಟಿ ಅವರ ಅವಧಿ ಮುಗಿಯುತ್ತಿರುವ ಹಿನ್ನೆಲೆಯಲ್ಲಿ ಆಯೋಜಿಸಿದ್ದ ಅಭಿನಂದನಾ ಸಮಾರಂಭ ಉದ್ಘಾಟಿಸಿ ಅವರು ಮಾತನಾಡಿದರು. ಡಾ| ಜಯಕರ ಶೆಟ್ಟಿಯವರ ನಾಯಕತ್ವದಲ್ಲಿ ಬೆಂ.ವಿ.ವಿ ನ್ಯಾಕ್ ಎ++ ಮಾನ್ಯತೆ ಹಾಗೂ ಪಿಎಂ ಉಷಾ ಯೋಜನೆ ಸೇರಿ ಮಹತ್ತರ ಸಾಧನೆಗಳ ಮೂಲಕ ದೇಶದ ಪ್ರತಿಷ್ಠಿತ ವಿಶ್ವವಿದ್ಯಾಲಯವಾಗಿದೆ. ಅವರು ಎಂದಿಗೂ ಅಧಿಕಾರದ ಹಿಂದೆ ಹೋಗದೆ ಪ್ರತಿ ಜವಾಬ್ದಾರಿಯನ್ನು ಪ್ರಾಮಾಣಿಕವಾಗಿ ಮತ್ತು ಯಶಸ್ವಿಯಾಗಿ ನಿಭಾಯಿಸಿದ್ದಾರೆ ಎಂದರು.




ಅಭಿನಂದನಾ ಕೃತಿ ಬಿಡುಗಡೆಗೊಳಿಸಿ ಮಾತನಾಡಿದ ವಿಧಾನ ಪರಿಷತ್ ಸದಸ್ಯ ಎಸ್ ರವಿ, ಡಾ| ಜಯಕರ ಶೆಟ್ಟಿಯವರು ಸರಳ, ಸಜ್ಜನರಾಗಿದ್ದು ಸಮಚಿತ್ತವಾಗಿ ವಿಶ್ವವಿದ್ಯಾಲಯವನ್ನು ನಿರ್ವಹಣೆ ಮಾಡಿದ್ದಾರೆ. ಮಾತ್ರವಲ್ಲದೇ, ವಿಶ್ವವಿದ್ಯಾಲಯವನ್ನು ಅಂತಾರಾಷ್ಟ್ರೀಯ ಮಟ್ಟಕ್ಕೆ ಕೊಂಡೊಯ್ದಿರುವುದು ಅಭಿನಂದನೀಯ ಎಂದರು. ಕಾರ್ಯಕ್ರಮದಲ್ಲಿ ಉನ್ನತ ಶಿಕ್ಷಣ ಪರಿಷತ್ತಿನ ಉಪಾಧ್ಯಕ್ಷ ಪ್ರೊ. ಎಸ್.ಆರ್ ನಿರಂಜನ, ವಿಶ್ರಾಂತ ಕುಲಪತಿ ಪ್ರೊ. ರಾಮಚಂದ್ರ ಗೌಡ, ಬೆಂ.ವಿ.ವಿ ಕುಲಸಚಿವೆ ಕೆ.ಟಿ ಶಾಂತಲಾ, ಕುಲಸಚಿವ (ಮೌಲ್ಯಮಾಪನ) ಪ್ರೊ. ಸಿ.ಎಸ್ ಕರಿಗಾರ್ ಸೇರಿ ವಿಶ್ವವಿದ್ಯಾಲಯದ ಬೋಧಕ ಬೋಧಕೇತರ ಸಿಬ್ಬಂದಿಗಳು ಉಪಸ್ಥಿತರಿದ್ದರು.

























































































































