ಪ್ರಜಾಪ್ರಭುತ್ವದ ನಾಲ್ಕನೇ ಆಧಾರ ಸ್ತಂಭವಾಗಿರುವ ಪತ್ರಿಕೋದ್ಯಮದ ಸ್ವಾತಂತ್ರ್ಯವನ್ನು ಎತ್ತಿ ಹಿಡಿಯಲು ಮತ್ತು ಸಮಾಜಕ್ಕೆ ಮಾಧ್ಯಮಗಳು ನೀಡುವ ಕೊಡುಗೆಯನ್ನು ಗೌರವಿಸಲು ಪತ್ರಿಕಾ ದಿನಾಚರಣೆ ಆಚರಿಸಲಾಗುತ್ತದೆ. ಸಮಾಜದಲ್ಲಿ ನಡೆಯುವ ಒಳಿತು ಹಾಗೂ ಕೆಡುಕುಗಳನ್ನು ಮತ್ತು ತಪ್ಪುಗಳನ್ನು ಎತ್ತಿ ತೋರಿಸುವ ಮೂಲಕ ಸರಿಪಡಿಸಲು ಪತ್ರಿಕೆ ಹಾಗೂ ದೃಶ್ಯ ಮಾಧ್ಯಮಗಳು ಕನ್ನಡಿಯಂತೆ ಕಾರ್ಯ ನಿರ್ವಹಿಸಿ ಮುಂಚೂಣಿಯಲ್ಲಿದೆ ಎಂದು
ದ.ಕ ಕಾರ್ಯನಿರತ ಪತ್ರಕರ್ತರ ಸಂಘದ ಅಧ್ಯಕ್ಷ ಪುಷ್ಪರಾಜ್ ಶೆಟ್ಟಿ ಬಿ.ಎನ್ ಹೇಳಿದರು. ಅವರು ಮೂಲ್ಕಿ ತಾಲೂಕು ಕಾರ್ಯನಿರತ ಪತ್ರಕರ್ತರ ಸಂಘ ಮತ್ತು ಕಿಲ್ಪಾಡಿ ಶ್ರೀ ಶ್ರೀ ಚಂದ್ರಶೇಖರ ಸ್ವಾಮೀಜಿ ಸೇವಾಶ್ರಮದ ಸಹಯೋಗದಲ್ಲಿ ಮೂಲ್ಕಿ ಪುನರೂರು ಟೂರಿಸ್ಟ್ ಹೋಮ್ ಸಭಾಂಗಣದಲ್ಲಿ ನಡೆದ ಪತ್ರಿಕಾ ದಿನಾಚರಣೆಯಲ್ಲಿ ಪತ್ರಿಕೋದ್ಯಮದ ಬೆಳವಣಿಗೆಯ ಬಗ್ಗೆ ದಿಕ್ಸೂಚಿ ಮಾತುಗಳನ್ನಾಡಿದರು. ಸಮಾರಂಭದ ಮುಖ್ಯ ಅತಿಥಿಗಳಾಗಿ ಆಗಮಿಸಿದ್ದ ಕ.ಸಾ.ಪ ಮಾಜಿ ರಾಜ್ಯಾಧ್ಯಕ್ಷ ಧರ್ಮದರ್ಶಿ ಡಾ| ಹರಿಕೃಷ್ಣ ಪುನರೂರು ಮಾತನಾಡಿ, ಸತ್ಯ ಮತ್ತು ಪಾರದರ್ಶಕತೆಯನ್ನು ಕಾಪಾಡಿಕೊಳ್ಳುವುದು ಹಾಗೂ ಪ್ರಜೆಗಳಲ್ಲಿ ಜಾಗೃತಿ ಮೂಡಿಸುವ ಹೊಣೆಗಾರಿಕೆ ಪತ್ರಕರ್ತರದ್ದು. ಮುಕ್ತ ಪತ್ರಿಕಾ ಮಾಧ್ಯಮ ಪ್ರಜಾಪ್ರಭುತ್ವದ ಯಶಸ್ವಿಗೆ ಅತ್ಯಗತ್ಯ ಎಂದು ಹೇಳಿದರು.



ಕರ್ನಾಟಕ ಕಾರ್ಯನಿರತ ಪತ್ರಕರ್ತರ ಸಂಘದ ರಾಜ್ಯ ಸಮಿತಿ ಸದಸ್ಯ ಶ್ರೀನಿವಾಸ ನಾಯಕ್ ಇಂದಾಜೆ ಮಾತನಾಡಿ, ಸಾಮಾಜಿಕ ಕಾರ್ಯಕ್ರಮಗಳ ಮೂಲಕ ಮೂಲ್ಕಿ ತಾಲೂಕು ಪತ್ರಕರ್ತರ ಸಂಘ ಉತ್ತಮ ಕಾರ್ಯ ನಿರ್ವಹಿಸುತ್ತಿದೆ. ಇದಕ್ಕೆ ಪೂರಕವಾಗಿ ಪತ್ರಕರ್ತರಿಗೆ ನೈತಿಕ ಬೆಂಬಲದ ಮೂಲಕ ಕಿಲ್ಪಾಡಿ ಶ್ರೀ ಶ್ರೀ ಚಂದ್ರಶೇಖರ ಸ್ವಾಮೀಜಿ ಸೇವಾಶ್ರಮದ ವತಿಯಿಂದ ವಿವಿಧ ಸಾಮಾಜಿಕ ಶೈಕ್ಷಣಿಕ ಸಹಾಯ ಹಸ್ತಗಳು ಅಭಿನಂದನೀಯ ಎಂದರು. ವೇದಿಕೆಯಲ್ಲಿ ದ.ಕ ಕಾರ್ಯನಿರತ ಪತ್ರಕರ್ತರ ಸಂಘದ ಮಾಜಿ ಅಧ್ಯಕ್ಷ ಜಗನ್ನಾಥ ಶೆಟ್ಟಿ ಬಾಳ ಮಾತನಾಡಿದರು. ಕಾರ್ಯಕ್ರಮದ ಅಧ್ಯಕ್ಷತೆಯನ್ನು ಮೂಲ್ಕಿ ತಾಲೂಕು ಕಾರ್ಯನಿರತ ಪತ್ರಕರ್ತರ ಸಂಘದ ಅಧ್ಯಕ್ಷ ಲೋಕೇಶ್ ಸುರತ್ಕಲ್ ವಹಿಸಿದ್ದರು. ವೇದಿಕೆಯಲ್ಲಿ ವಕೀಲ ಹಾಗೂ ನೋಟರಿ ಡೇನಿಯಲ್ ದೇವರಾಜ್, ಮೂಲ್ಕಿ ರೋಟರಿ ಕ್ಲಬ್ ಅಧ್ಯಕ್ಷೆ ಭಾನುಮತಿ ಶೆಟ್ಟಿ ಕಕ್ವಗುತ್ತು ಮತ್ತು ಮೂಲ್ಕಿ ತಾಲೂಕು ಪತ್ರಕರ್ತರ ಸಂಘದ ಪ್ರಧಾನ ಕಾರ್ಯದರ್ಶಿ ಪುನೀತ್ ಕೃಷ್ಣ ಉಪಸ್ಥಿತರಿದ್ದರು.
ಕಾರ್ಯಕ್ರಮದಲ್ಲಿ ಹಿರಿಯ ಪತ್ರಕರ್ತ ಐಕಳ ಜಯಪಾಲ ಶೆಟ್ಟಿಯವರನ್ನು ಸನ್ಮಾನಿಸಲಾಯಿತು. ಶೈಕ್ಷಣಿಕ ಸಾಧಕ ವಿದ್ಯಾರ್ಥಿಗಳಾದ ಮಾಧವ ಕಾಮತ್ ಕೆಂಚನಕೆರೆ, ಚವನ ಉಡುಪ ಕಿನ್ನಿಗೋಳಿ, ದೇವಾಂಶು ಕೋಟ್ಯಾನ್ ಮೂಲ್ಕಿ ಮತ್ತು ಮನಿಷ್ ಶೆಟ್ಟಿ ಕಿನ್ನಿಗೋಳಿ ಅವರನ್ನು ಗೌರವಿಸಲಾಯಿತು. ಮೂಲ್ಕಿ ತಾಲೂಕು ಕಾರ್ಯನಿರತ ಪತ್ರಕರ್ತರ ಸಂಘದ ಅಧ್ಯಕ್ಷ ಲೋಕೇಶ್ ಸುರತ್ಕಲ್ ಸ್ವಾಗತಿಸಿ, ಪ್ರಧಾನ ಕಾರ್ಯದರ್ಶಿ ಪುನೀತ್ ಕೃಷ್ಣ ಧನ್ಯವಾದ ಅರ್ಪಿಸಿದರು. ಪತ್ರಕರ್ತ ಹರೀಶ್ ಹೆಜಮಾಡಿ ಕಾರ್ಯಕ್ರಮ ನಿರೂಪಿಸಿದರು.




















































































































