
ಕನ್ನಡ ಹಾಗೂ ತುಳು ಭಾಷೆ, ಸಾಹಿತ್ಯ, ಜಾನಪದ, ಸಂಶೋಧನಾ ಕ್ಷೇತ್ರಗಳಲ್ಲಿ ವಿದ್ವಾಂಸರಲ್ಲೊಬ್ಬರಾದ ಡಾ| ಶಿವರಾಮ ಶೆಟ್ಟಿಯವರು 2026 ನೇ ಸಾಲಿನ ಪೊಳಲಿ ಶೀನಪ್ಪ ಹೆಗ್ಗಡೆ ಮತ್ತು ಎಸ್.ಆರ್ ಹೆಗ್ಡೆ ಇವರ ಜಂಟಿ ಹೆಸರಲ್ಲಿ ನೀಡಲಾಗುವ ಪ್ರಶಸ್ತಿ ಪುರಸ್ಕಾರಕ್ಕೆ ಆಯ್ಕೆಯಾಗಿದ್ದಾರೆ. ಪೊಳಲಿ ಶೀನಪ್ಪ ಹೆಗ್ಗಡೆ ಮತ್ತು ಎಸ್.ಆರ್ ಹೆಗ್ಡೆ ಇವರಿಬ್ಬರ ನೆನಪಿನಲ್ಲಿ ರಾಷ್ಟ್ರಕವಿ ಗೋವಿಂದ ಪೈ ಸಂಶೋಧನಾ ಕೇಂದ್ರದ ಮೂಲಕ ಈ ಪ್ರಶಸ್ತಿಯನ್ನು ನೀಡಲಾಗುವುದು. ಪ್ರಶಸ್ತಿ ಪ್ರದಾನ ಕಾರ್ಯಕ್ರಮವು ಜೂನ್ 20 ರಂದು ನಡೆಯಲಿರುವುದು. ಪ್ರಶಸ್ತಿಯು ರೂ.20,000/- ಹಾಗೂ ಪ್ರಶಸ್ತಿ ಫಲಕವನ್ನೊಳಗೊಂಡಿರುತ್ತದೆ ಎಂದು ರಾಷ್ಟ್ರಕವಿ ಗೋವಿಂದ ಪೈ ಸಂಶೋಧನ ಕೇಂದ್ರದ ಆಡಳಿತಾಧಿಕಾರಿ ಡಾ| ಬಿ. ಜಗದೀಶ್ ಶೆಟ್ಟಿ ತಿಳಿಸಿರುತ್ತಾರೆ.


ಡಾ| ಶಿವರಾಮ ಶೆಟ್ಟಿಯವರು 1957ರ ಅಕ್ಟೋಬರ್ 3ರಂದು ದಕ್ಷಿಣ ಕನ್ನಡ ಜಿಲ್ಲೆಯ ಮಂಗಳೂರು ತಾಲೂಕಿನ ಬೋಳಾರದಲ್ಲಿ ಜನಿಸಿದರು. ತಂದೆ ದಿವಂಗತ ಬೋಳಾರ ಚಂದಪ್ಪ ಶೆಟ್ಟಿ ಹಾಗೂ ತಾಯಿ ದಿವಂಗತ ಸೇಸಮ್ಮ. ಇವರು ಮೈಸೂರು ವಿಶ್ವವಿದ್ಯಾನಿಲಯದಿಂದ ಮಂಗಳಗಂಗೋತ್ರಿಯ ಕನ್ನಡ ಸ್ನಾತಕೋತ್ತರ ಮತ್ತು ಸಂಶೋಧನಾ ಕೇಂದ್ರದ ಮೂಲಕ ಸ್ನಾತಕೋತ್ತರ ಪದವಿ ಹಾಗೂ ಮಂಗಳೂರು ವಿಶ್ವವಿದ್ಯಾಲಯದಿಂದ ‘ತುಳುನಾಡಿನ ಸಸ್ಯ ಜಾನಪದ’ ವಿಷಯದಲ್ಲಿ ಪಿ.ಎಚ್.ಡಿ. ಪದವಿ ಪಡೆದಿದ್ದಾರೆ. 1981 ರಿಂದ ಮಂಗಳೂರು ವಿಶ್ವವಿದ್ಯಾನಿಲಯದ ಎಸ್.ವಿ.ಪಿ ಕನ್ನಡ ಅಧ್ಯಯನ ಸಂಸ್ಥೆಯಲ್ಲಿ ಸಂಶೋಧನಾ ಸಹಾಯಕರಾಗಿ, ಉಪನ್ಯಾಸಕರಾಗಿ, ಪ್ರಾಧ್ಯಾಪಕ ಹಾಗೂ ಸಂಸ್ಥೆಯ ಅಧ್ಯಕ್ಷರಾಗಿ ವಿವಿಧ ಹುದ್ದೆಗಳಲ್ಲಿ ಸೇವೆ ಸಲ್ಲಿಸಿ, 2019 ರಲ್ಲಿ ನಿವೃತ್ತರಾದರು.





























































































































