
ಕತಾರ್ನಲ್ಲಿರುವ ಬಂಟ್ಸ್ ಕತಾರ್ (Bunts Qatar) ಸಂಘಟನೆಯು ಸಮಾಜ ಸೇವಾ ಚಟುವಟಿಕೆಗಳ ಭಾಗವಾಗಿ ರಕ್ತದಾನ ಹಾಗೂ ವೈದ್ಯಕೀಯ ಅರೋಗ್ಯ ತಪಾಸಣಾ ಶಿಬಿರವನ್ನು ಏಪ್ರಿಲ್ 17, 2026 ರಂದು ‘Donate Blood, Save Lives’ (ರಕ್ತದಾನ ಮಾಡಿ, ಜೀವ ಉಳಿಸಿ) ಎಂಬ ಅಭಿಯಾನದಡಿ ರೇಯಧಾ ವೈದ್ಯಕೀಯ ಕೇಂದ್ರದಲ್ಲಿ ದೋಹಾದ ಹಮದ್ ಮೆಡಿಕಲ್ ಕಾರ್ಪೊರೇಶನ್ (HMC) ನ ಕತಾರ್ ರಾಷ್ಟ್ರೀಯ ರಕ್ತದಾನ ಕೇಂದ್ರದ ಸಹಯೋಗದೊಂದಿಗೆ ಅಧ್ಯಕ್ಷ ಸುಖರಾಮ್ ಶೆಟ್ಟಿಯವರ ಸಾರಥ್ಯದಲ್ಲಿ ಆಯೋಜಿಸಲಾಗಿತ್ತು. ಸಂಘಟನೆಯು ಹಿಂದೆ ಕೂಡ ಯಶಸ್ವಿ ರಕ್ತದಾನ ಶಿಬಿರಗಳನ್ನು ಆಯೋಜಿಸಿದ್ದು, 215ಕ್ಕೂ ಹೆಚ್ಚು ನೋಂದಾಯಿತ ಸ್ವಯಂಸೇವಕರಲ್ಲಿ 111 ಮಂದಿ ರಕ್ತದಾನ ಮಾಡಿದ್ದರು.







ಕಾರ್ಯಕ್ರಮದ ಮುಖ್ಯ ಅತಿಥಿಯಾಗಿ ಭಾರತದ ರಾಯಭಾರ ಕಚೇರಿಯ ಚಾನ್ಸೆರಿ ಮತ್ತು ಕಾನ್ಸುಲರ್ ಮುಖ್ಯಸ್ಥರಾದ ಡಾ. ವೈಭವ್ ತಂಡಲೆ, ಗೌರವ ಅತಿಥಿಗಳಾಗಿ ಮನ್ಸೂರ್ ಅಬ್ದುಲ್ಲ ಕೆ.ಎ ಅಲ್ ಕಾಬಿ ಹಾಗೂ ಜಮ್ಮಿರ್ ಹಂಝ ಆಗಮಿಸಿದ್ದರು. ಡಾ. ಅರ್ಜುನ್ ಶೆಟ್ಟಿಯವರು ಮುಖ್ಯ ಅತಿಥಿ ಭಾಷಣಕಾರರಾಗಿ ಆಗಮಿಸಿ ಪ್ರಮುಖ ಆರೋಗ್ಯ ಒಳನೋಟಗಳನ್ನು ಹಂಚಿಕೊಂಡರು. ಕಾರ್ಯಕ್ರಮದಲ್ಲಿ ಪ್ರಧಾನ ಕಾರ್ಯದರ್ಶಿ ನವೀನ್ ಶೆಟ್ಟಿಯವರು ಉದ್ಘಾಟನಾ ಭಾಷಣಗೈದರೆ, ಅಧ್ಯಕ್ಷ ಸುಖರಾಮ್ ಶೆಟ್ಟಿಯವರು ಸ್ವಾಗತಿಸಿ ಸಂಸ್ಥೆಯ ಮಾನವೀಯ ಸೇವೆಯ ಪರಂಪರೆಯನ್ನು ಎತ್ತಿ ತೋರಿಸಿದರು. ಉಪಾಧ್ಯಕ್ಷ ಮನೋಜ್ ಶೆಟ್ಟಿಯವರು ಅತಿಥಿಗಳಿಗೆ ಹೂಗುಚ್ಛ ನೀಡಿ ಗೌರವಿಸಿದರು.
ನಿಕಟಪೂರ್ವ ಅಧ್ಯಕ್ಷ ನವೀನ್ ಶೆಟ್ಟಿ ಇರುವೈಲು, ನವನೀತ್ ಶೆಟ್ಟಿ, ಐಸಿಬಿಎಫ್ ಪ್ರಧಾನ ಕಾರ್ಯದರ್ಶಿ ದೀಪಕ್ ಶೆಟ್ಟಿ ಚುಚ್ಚಿ, ಡಾ ಪದ್ಮಶ್ರೀ ಶೆಟ್ಟಿಯವರ ಉಪಸ್ಥಿತಿಯೊಂದಿಗೆ ನಡೆದ ಈ ಕಾರ್ಯಕ್ರಮದಲ್ಲಿ ದಾನಿಗಳನ್ನು ನಿಜವಾದ ವೀರರು ಎಂದು ಗುರುತಿಸಲಾಯಿತು ಮತ್ತು ಭಾಗವಹಿಸುವಿಕೆಯ ಪ್ರಮಾಣ ಪತ್ರಗಳು ಮತ್ತು ಸ್ಮರಣಾರ್ಥ ಟೀ ಶರ್ಟ್ ಗಳನ್ನು ನೀಡಲಾಯಿತು. ಶ್ರೀಮತಿ ವಿಜೇತ ಪ್ರೀತನ್ ರೈ ಧನ್ಯವಾದಗಳು ಅರ್ಪಿಸಿದರು.

























































































































